ಬೆಂಗಳೂರು[ನ.28]: ಸೋಲಿನ ಭೀತಿಯಿಂದಾಗಿ ಬಿಜೆಪಿ ಅಭ್ಯರ್ಥಿ ತಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿರುವುದಲ್ಲದೇ, ಜಾತಿ ನಿಂದನೆ ಹಾಗೂ ಸಮುದಾಯದ ಅವಹೇಳನ ಮಾಡುತ್ತಿದ್ದಾರೆ ಎಂದು ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ವಿರುದ್ಧ ಜೆಡಿಎಸ್‌ ಅಭ್ಯರ್ಥಿ ಡಾ.ಗಿರೀಶ್‌ ಕೆ.ನಾಶಿ ಆರೋಪಿಸಿದ್ದಾರೆ.

ಬುಧವಾರ ಜೆಡಿಎಸ್‌ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಣದ ಹೊಳೆ ಹರಿಸುತ್ತಿದ್ದಾರೆ. ಅವರಿಗೆ ಸೋಲಿನ ಭೀತಿ ಎದುರಾಗಿದ್ದರಿಂದ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಅಲ್ಲದೇ, ಅವರ ಸಂಬಂಧಿ ಕ್ಷೇತ್ರದಲ್ಲಿ ಜಾತಿ ನಿಂದನೆ ಮಾಡುತ್ತಿದ್ದಾರೆ. ಲಿಂಗಾಯತ ಸಮಾಜಕ್ಕೆ ಸೇರಿದ್ದರಿಂದ ಅದನ್ನೇ ಗುರಿಯಾಗಿಸಿಕೊಂಡು ಅವಹೇಳನ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾನೂ ಸಹ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸಮುದಾಯಕ್ಕೆ ಸೇರಿದವನಾಗಿದ್ದು, ನನಗೆ ಮಾಡಿದ ಅಪಮಾನ ಇಡೀ ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ. ನನ್ನ ಸಮಾಜದ ಮುಖಂಡರಾದ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವ ಸುರೇಶ್‌ ಅಂಗಡಿ, ಸಚಿವ ವಿ.ಸೋಮಣ್ಣ ಅವರು ಈ ಬೆಳವಣಿಗೆಯನ್ನು ಅರ್ಥ ಮಾಡಿಕೊಳ್ಳಬೇಕು. ಜಾತಿ ಆಧಾರದ ಮೇಲೆ ಟೀಕೆ ಮಾಡದಂತೆ ಯಡಿಯೂರಪ್ಪ ಅವರು ತಮ್ಮ ಅಭ್ಯರ್ಥಿಗೆ ಸೂಚನೆ ನೀಡಬೇಕು. ಜಾತಿ ನಿಂದನೆ ಸಂಬಂಧ ಚುನಾವಣಾ ಆಯೋಗಕ್ಕೆ ಪಕ್ಷವು ದೂರು ನೀಡಲಿದೆ ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಿಧಾನ ಪರಿಷತ್‌ ಸದಸ್ಯರಾದ ಟಿ.ಎ.ಶವರಣ, ತಿಪ್ಪೇಸ್ವಾಮಿ, ಮಾಜಿ ಉಪಮೇಯರ್‌ ಭದ್ರೇಗೌಡ, ಪಕ್ಷದ ಬೆಂಗಳೂರು ನಗರ ಘಟಕ ಅಧ್ಯಕ್ಷ ಆರ್‌.ಪ್ರಕಾಶ್‌ ಇತರರಿದ್ದರು.

ವಿಧಾನಪರಿಷತ್‌ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ, ಜೆಡಿಎಸ್‌ ಅಭ್ಯರ್ಥಿ ಗಿರೀಶ್‌ ಕೆ.ನಾಶಿ ಆರ್ಥಿಕ ತಜ್ಞರಾಗಿದ್ದು, ಅವರ ತೇಜೋವಧೆ ಮಾಡಲಾಗುತ್ತಿದೆ. ಕ್ಷೇತ್ರದ ಜನರು ಯಾವುದೇ ವದಂತಿಗಳಗಿಎ ಕಿವಿಗೊಡಬಾರದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಟಿ.ಎ.ಶವರಣ, ಮಾಜಿ ಉಪಮೇಯರ್‌ ಭದ್ರೇಗೌಡ, ಪಕ್ಷದ ಬೆಂಗಳೂರು ನಗರ ಘಟಕ ಅಧ್ಯಕ್ಷ ಆರ್‌.ಪ್ರಕಾಶ್‌ ಇತರರು ಉಪಸ್ಥಿತರಿದ್ದರು.