Asianet Suvarna News Asianet Suvarna News

Mekedatu 'ಕೊಟ್ಟ ಕುದುರೆಯನ್ನೇರಿ ಕೆಲಸ ಮಾಡದವನು ಕಾಂಗ್ರೆಸ್ ನಾಯಕ ಉರುಫ್ ಸುಳ್ಳು ಸಿದ್ದಯ್ಯ'

* ಮೇಕೆದಾಟು ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ
* ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಜೆಡಿಎಸ್
* ಸಿದ್ದರಾಮಯ್ಯನವರನ್ನ ಸುಳ್ಳು ಸಿದ್ದಯ್ಯ ಎಂದು ಟೀಕೆ

JDS Hits out at Sidaramaiah and Congress Over mekedatu padayatra rbj
Author
Bengaluru, First Published Jan 7, 2022, 5:03 PM IST

ಬೆಂಗಳೂರು, (ಜ.07): ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕರ್ನಾಟಕ ಕಾಂಗ್ರೆಸ್ ಪಾದಯಾತ್ರೆ (Congress Mekedatu Padayatra) ಹಮ್ಮಿಕೊಂಡಿದ್ದು, ಭಾರಿ ಸದ್ದು ಮಾಡುತ್ತಿದೆ.

ಈ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಆರೋಪ-ಪ್ರತ್ಯಾರೋಪಗಳು ಜೊರಾಗಿವೆ.  ಕಾಂಗ್ರೆಸ್ ಪಾದಯಾತ್ರೆಗೆ ಬಿಜೆಪಿ(BJP) ಹಾಗೂ ಜೆಡಿಎಸ್(JDS) ಲೇವಡಿ, ವ್ಯಂಗ್ಯ, ವಾಗ್ದಾಳಿ ಮುಂದುವರೆಸಿವೆ. ಇದೀಗ ಜೆಡಿಎಸ್ ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ವಿರುದ್ಧ ಕಿಡಿಕಾರಿದೆ.

ಕಾರಜೋಳ ಹೇಳಿಕೆ ಶುದ್ಧ ಸುಳ್ಳು: ನಮ್ಮ ಅವಧಿಯಲ್ಲೇ ಕೇಂದ್ರಕ್ಕೆ ಡಿಪಿಆರ್‌ ಸಲ್ಲಿಕೆ: ಸಿದ್ದು, ಡಿಕೆಶಿ

ಪಾದಯಾತ್ರೆಯಿಂದ ಮೇಕೆದಾಟು ಯೋಜನೆಗೆ(Mekedatu Project) ಚಿಕ್ಕಾಸೂ ಉಪಯೋಗವಿಲ್ಲ ಪಾದಯಾತ್ರೆಯ ಪೆಟ್ಟು ಜನರ ಮೇಲೆ ಬೀಳಲಿದೆ. ಅದರ ತೀವ್ರತೆ ಗೊತ್ತಾದ ಮೇಲೆ ಮುಂದೆ ಜನರೇ ಕಾಂಗ್ರೆಸ್ ನಾಯಕರ ಮುಖಕ್ಕೆ ಮಂಗಳಾರತಿ ಮಾಡಲಿದ್ದಾರೆ ಎಂದು ಟೀಕಿಸಿದೆ.

"

ಹಿಂದೆ ಒಂದು ಮಾತಿತ್ತು. ಕೈಲಾಗದವನು ಮೈ ಪರಚಿಕೊಂಡ. ಈಗ ಬಂದಿರುವ ಹೊಸ ನುಡಿಗಟ್ಟು ಏನೆಂದರೆ, ಕೈಲಾಗದ ಕಾಂಗ್ರೆಸ್ ನಾಯಕ ಮೈ ಪರಚಿಕೊಂಡ ಎಂದು. ಸುಳ್ಳು ಸಿದ್ದಯ್ಯನ ವರಸೆ ಹಾಗಿದೆ. ಐದು ವರ್ಷ ಅಧಿಕಾರ ಇದ್ದಾಗ ಗಡದ್ದಾಗಿ ನಿದ್ದೆ ಹೊಡೆದು ಈಗ ಇನ್ನೇನು ಮಾಡಬೇಕಿತ್ತು ಎಂದು ಹೊಸ ರಾಗ ಹಾಡುತ್ತಿದ್ದಾರೆ ಎಂದು ಲೇವಡಿ ಮಾಡಿದೆ.

ಕೊಟ್ಟ ಕುದುರೆ ಏರಿ, ಸವಾರಿಯನ್ನೂ ಮಾಡಿ, ಆಮೇಲೆ ನಮ್ಮ ಕೈ ಯಲ್ಲಿ ಏನೂ ಮಾಡಲಾಗಲಿಲ್ಲ ಎಂದರೆ ಹೇಗೆ? ಅಂದರೆ, ಕೊಟ್ಟ ಕುದುರೆಯನ್ನು ಏರಿ ಕೆಲಸ ಮಾಡದವನು ಕಾಂಗ್ರೆಸ್ ನಾಯಕ ಉರುಫ್ ಸುಳ್ಳು ಸಿದ್ದಯ್ಯ ಎಂದು ಟೀಕಿಸಿದೆ. ಮೇಕೆದಾಟು ಕನಸು ಕಂಡವರು 1995ರಲ್ಲಿ ಸಿಎಂ ಆಗಿದ್ದ ಹೆಚ್.ಡಿ.ದೇವೇಗೌಡರು. ಆ ಯೋಜನೆಯ ಸಮಗ್ರ ಯೋಜನಾ ವರದಿಯ ಡಿಪಿಆರ್ ಮಾಡಿ ಕೇಂದ್ರಕ್ಕೆ ಕಳಿಸಿದ್ದು 2018ರಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು.

2017ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕಳಿಸಿದ್ದು ಕೇವಲ ಪಿಎಫ್‍ಆರ್ ಮಾತ್ರ. ಬೆಂಗಳೂರಿನಲ್ಲೇ ಇದ್ದ ಕೇಂದ್ರ ಜಲ ಆಯೋಗದ ಪ್ರಾದೇಶಿಕ ಕಚೇರಿಗೆ ಪಿಎಫ್‍ಆರ್ ಕೊಟ್ಟು ಕೈ ತೊಳೆದುಕೊಂಡ ಅವರ ಸರ್ಕಾರ. ಆ ಪ್ರಾದೇಶಿಕ ಕಚೇರಿ ಕೇಳಿದ ಯಾವ ಪ್ರಶ್ನೆಗೂ ಉತ್ತರ ಕೊಡಲಿಲ್ಲ ಎಂದು ಆರೋಪಿಸಿದೆ.

2018ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಅದ ಮೇಲೆ ಪುನಃ ಪಿಎಫ್‍ಆರ್ ಸಲ್ಲಿಸಿದ ಮೇಲೆ ಡಿಪಿಆರ್ ಸಲ್ಲಿಕೆಗೆ ಅವಕಾಶ ಸಿಕ್ಕಿತು. ಆಗ ಕುಮಾರಸ್ವಾಮಿ ಅವರ ಸರ್ಕಾರ ತಡ ಮಾಡದೆ ಡಿಪಿಆರ್ ಸಿದ್ಧಪಡಿಸಿ ಸಲ್ಲಿಸಿತು. ಮೇಕೆದಾಟು ಯೋಜನೆಗೆ ಡಿಪಿಆರ್ ಮಾಡಿದ್ದು ಹೆಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರ ಎಂದು ನಿನ್ನೆ ಜಲ ಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಅವರೇ ದಾಖಲೆಗಳ ಸಮೇತ ಹೇಳಿದ್ದಾರೆ. ಐದು ವರ್ಷ ಸುಳ್ಳು ಸಿದ್ದಯ್ಯ ಮಾಡಿದ್ದೇನು ಇಲ್ಲ ಎಂದು ಕಡ್ಡಿ ಮುರಿದಂತೆ ತಿಳಿಸಿದೆ.

ಹೀಗಿದ್ದರೂ ಸುಳ್ಳು ಸಿದ್ದಯ್ಯ ನಾವೇ ಡಿಪಿಆರ್ ಮಾಡಿದ್ದು ಎಂದು ಬೂಸಿ ಬಿಡುತ್ತಿದ್ದಾರೆ. ಅವರಿಗೆ ಪಿಎಫ್‍ಆರ್ ಎಂಬುದು ಡಿಪಿಆರ್ ಆಗಿದ್ದು ಹೇಗೆ? ಐದು ವರ್ಷ ಸಿಎಂ ಆಗಿದ್ದ ವ್ಯಕ್ತಿಗೆ ಇವೆರಡಕ್ಕೂ ಇರುವ ವ್ಯತ್ಯಾಸ ತಿಳಿಯದೇ?

ತಮ್ಮ ತಪ್ಪು ಮುಚ್ಚಿಕೊಳ್ಳಲು ಈಗ ದೇವೇಗೌಡರನ್ನು ಸುಳ್ಳು ಸಿದ್ದಯ್ಯ ಟೀಕೆ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ಅವರಿಗೆ ಗೌಡರು ಅಪ್ತರು. ಮೇಕೆದಾಟು ಯೋಜನೆಗೆ ಕೇಂದ್ರದ ಒಪ್ಪಿಗೆಯನ್ನು ಗೌಡರೇ ಕೊಡಿಸಲಿ ಎಂದು ಹೇಳಿದ್ದಾರೆ. ಹಾಗಾದರೆ, ಈ ಕೆಲಸ ಗೌಡರಿಂದ ಮಾತ್ರ ಆಗುವುದು ಎಂದು ಅವರು ಒಪ್ಪಿಕೊಂಡ ಹಾಗಾಯಿತು. ಹಾಗಾದರೆ ಪಾದಯಾತ್ರೆ ಏತಕ್ಕೆ ಎಂದು ಪ್ರಶ್ನಿಸಿದೆ.

ಆಡಳಿತಾತ್ಮಕ, ಕಾನೂನು ಹಾಗೂ ತಾಂತ್ರಿಕ ಅಂಶಗಳ ಆಧಾರದ ಮೇಲೆ ದೇವೇಗೌಡರಿಗೆ ಯಾವಾಗ ಏನು ಹೆಜ್ಜೆ ಇಡಬೇಕು ಎಂಬುದು ಚೆನ್ನಾಗಿ ಗೊತ್ತಿದೆ. ಅದು ಅನೇಕ ಯೋಜನೆಗಳಲ್ಲಿ ಸಾಬೀತಾಗಿದೆ. ಆ ಬಗ್ಗೆ ಸಿದ್ದರಾಮಯ್ಯ ಅವರು ಹೇಳಬೇಕಾದ ಅಗತ್ಯ ಇಲ್ಲ. ಹೀಗಿದ್ದರೂ ರಾಜ್ಯ ನೀರಾವರಿಗೆ ಹೆಚ್.ಡಿ.ದೇವೇಗೌಡರ ಕೊಡುಗೆಯನ್ನು ಉಪೇಕ್ಷಿಸಿ ಸುಳ್ಳುಗಳ ಮೂಲಕ ಜನರಿಗೆ ತಪ್ಪು ಮಾಹಿತಿ ನೀಡುವುದು ರಾಜ್ಯಕ್ಕೆ ಮಾಡುವ ದ್ರೋಹ. ಇನ್ನಾದರೂ ಸುಳ್ಳು ಹೇಳುವುದು ಬಿಟ್ಟರೆ ಒಳಿತು. ಇಲ್ಲವಾದರೆ ಜನರೇ ಸುಳ್ಳಯ್ಶನ ನಾಲಿಗೆಗೆ ಬುದ್ಧಿ ಕಲಿಸಲಿದ್ದಾರೆ ಎಂದಿದೆ.

Follow Us:
Download App:
  • android
  • ios