ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವಿಗಾಗಿ ಪೈಪೋಟಿ, ಬಿಜೆಪಿ ಸೋಲಿಸಲು ಜೆಡಿಎಸ್ - ಕಾಂಗ್ರೆಸ್ ರಣತಂತ್ರ

ರಾಯಚೂರು ಜಿಲ್ಲೆ ದೇವದುರ್ಗ ವಿಧಾನಸಭಾ ಕ್ಷೇತ್ರವೂ ಇಡೀ ಜಿಲ್ಲೆಯಲ್ಲಿ ಅತೀ ಹೆಚ್ಚು ವಿಭಿನ್ನವಾದ ಕ್ಷೇತ್ರವಾಗಿದೆ. ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಮಧ್ಯೆ ಈ ಸಲ ಶ್ರೀಕೋನ ಸ್ಪರ್ಧೆ ಮೇಲ್ನೋಟಕ್ಕೆ ಕಂಡು ಬಂದರೂ ಸಹ ಜೆಡಿಎಸ್ ಹಾಗೂ ಬಿಜೆಪಿ ಮಧ್ಯೆ ನೇರ ಹಣಾಹಣಿ ನಡೆಯಲಿದೆ.

JDS-Congress strategy to defeat BJP in Devadurga assembly constituency gow

ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್

ರಾಯಚೂರು (ಫೆ.18): ರಾಯಚೂರು ಜಿಲ್ಲೆ ದೇವದುರ್ಗ ವಿಧಾನಸಭಾ ಕ್ಷೇತ್ರವೂ ಇಡೀ ಜಿಲ್ಲೆಯಲ್ಲಿ ಅತೀ ಹೆಚ್ಚು ವಿಭಿನ್ನವಾದ ಕ್ಷೇತ್ರವಾಗಿದೆ. ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಮಧ್ಯೆ ಈ ಸಲ ಶ್ರೀಕೋನ ಸ್ಪರ್ಧೆ ಮೇಲ್ನೋಟಕ್ಕೆ ಕಂಡು ಬಂದರೂ ಸಹ ಜೆಡಿಎಸ್ ಹಾಗೂ ಬಿಜೆಪಿ ಮಧ್ಯೆ ನೇರ ಹಣಾಹಣಿ ನಡೆಯಲಿದೆ. ಬಿಜೆಪಿಗೆ ಬಹುತೇಕ ಶಾಸಕ ಕೆ.ಶಿವನಗೌಡ ನಾಯಕರೇ ಅಭ್ಯರ್ಥಿ ಆಗಲಿದ್ದು, ಜೆಡಿಎಸ್ ಈಗಾಗಲೇ ತನ್ನ ಅಧಿಕೃತ ಅಭ್ಯರ್ಥಿ ಕೆ. ಕರೆಮ್ಮ ಜಿ. ನಾಯಕ ಹೆಸರನ್ನ ಘೋಷಣೆ ಮಾಡಿದೆ. ಕಾಂಗ್ರೆಸ್‌ನಲ್ಲಿ ಇನ್ನೂ ಅಭ್ಯರ್ಥಿಯ ಘೋಷಣೆ ಆಗಿಲ್ಲ. ಆದ್ರೂ ಸಹ ಮಾಜಿ ಸಂಸದ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ನಾಯಕರೇ ಅಭ್ಯರ್ಥಿ ಎಂದು ಹೇಳಲಾಗುತ್ತಿದ್ದರೂ, ಅವರಿಗಿಂತ ಬಿ.ವಿ‌.ನಾಯಕ ಅವರ ತಮ್ಮ ನ ಹೆಂಡತಿ ಶ್ರೀದೇವಿ ಆರ್.ರಾಜಶೇಖರ ನಾಯಕರೇ ಅಬ್ಬರದ ಪ್ರಚಾರ ನಡೆಸಿದ್ದಾರೆ. ಇಡೀ ಕ್ಷೇತ್ರದ ವಿವಿಧೆಡೆ ಬೃಹತ್ ಬ್ಯಾನರ್, ಕಟೌಟ್ ರಾರಾಜಿಸುತ್ತಿದ್ದು ಕಾಂಗ್ರೆಸ್ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ. ಈ ಗೊಂದಲದ ನಡುವೆಯೇ ಶ್ರೀದೇವಿ ನಾಯಕ ಕ್ಷೇತ್ರದಲ್ಲಿ ಸುತ್ತಾಟ ನಡೆಸುತ್ತಾ ಮತಬೇಟೆ ಶುರು ಮಾಡಿದ್ದಾರೆ. 

ದೇವದುರ್ಗ ವಿಧಾನಸಭಾ ಕ್ಷೇತ್ರದ ಪರಿಚಯ:
ದೇವದುರ್ಗ ವಿಧಾನಸಭಾ ಕ್ಷೇತ್ರವೂ ಎಸ್ ಟಿ ಮೀಸಲು ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು ಮತದಾರರು 2,27,826 ಜನರು ಇದ್ದು, ಅದರಲ್ಲಿ 1,15,696 ಮಹಿಳಾ ಮತದಾರರು ಇದ್ರೆ, 1, 12, 101 ಪುರುಷ ಮತದಾರರು ಇದ್ದಾರೆ, ಇನ್ನುಳಿದ 26 ಇತರೆ ಮತದಾರರು ಇದ್ದು, ಈ ಕ್ಷೇತ್ರವೂ ಮೊದಲಿನಿಂದ ಕಾಂಗ್ರೆಸ್ ನ ಭದ್ರಕೋಟೆ ಆಗಿತ್ತು. ಆದ್ರೆ ಬದಲಾದ ರಾಜಕೀಯ ಬೆಳವಣಿಗೆಯಿಂದ ಇಡೀ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ಇಡೀ ಏಷ್ಯಾದಲ್ಲಿ ಅತೀ ಹಿಂದುಳಿದ ತಾಲೂಕಾ ಎಂಬ ಹಣೆಪಟ್ಟಿ ಹೊತ್ತಿರುವ ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಬಡತನ, ಅನಕ್ಷರತೆ, ಅಪೌಷ್ಟಿಕತೆ, ಬಾಲ ಕಾರ್ಮಿಕ ಪದ್ಧತಿ, ಗೂಳೆ ಹೋಗುವುದು ಕಾಮಾನ್ ಸಮಸ್ಯೆ ಆಗಿದೆ.

ಇದರ ಮಧ್ಯೆ ಕಳೆದ 10-15 ವರ್ಷಗಳಿಂದ ಕಾಲುವೆ ನೀರು ಬಂದಾಗಿನಿಂದ ‌ನೀರಾವರಿ ಹೆಚ್ಚಾಗಿ ರೈತರ ಬದುಕು ಹಸನಾಗಿದೆ. ಆದ್ರೆ ದೇವದುರ್ಗ ಕ್ಷೇತ್ರದಲ್ಲಿ ಅಕ್ರಮ ದಂಧೆಗಳು ರಾಜಾರೋಷವಾಗಿ ನಡೆಯುವುದರಿಂದ ರೈತರು ದುಡಿದ ಹಣವನ್ನ ದುಷ್ಟ ಚಟಗಳಿಗೆ ಹಾಕಿ ದಿವಾಳಿ ಆಗುತ್ತಿದ್ದಾರೆ. ಇದರ ಮಧ್ಯೆ ಈಗ ಚುನಾವಣೆ ಬಂದಿದ್ದು ಜನ ನಾಯಕರ ಹಿಂದೆ ಜೈ ಎನ್ನುತ್ತಾ ಕಾರ್ಯಕರ್ತರು ಓಡಾಟ ಶುರು ಮಾಡಿದ್ದಾರೆ.

ಅಭಿವೃದ್ಧಿ ಕಾರ್ಯಗಳೇ ನನ್ನ ಗೆಲುವಿಗೆ ಶ್ರೀರಕ್ಷೆ:
2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡ ‌ನಾಯಕ ಶೇ. 43ರಷ್ಟು ಮತಗಳು ಅಂದ್ರೆ 67,003 ಮತಗಳು ಪಡೆದು ಶಾಸಕರಾದ ಕೆ. ಶಿವನಗೌಡ ‌ನಾಯಕ ಆಯ್ಕೆ ಆಗಿದ್ರು. ದೇವದುರ್ಗ ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕ ಕೆ.ಶಿವನಗೌಡ ನಾಯಕ ನೂರಾರು ಕೋಟಿ ರೂಪಾಯಿ ಅನುದಾನ ತಂದಿದ್ದಾರೆ. ಅದರಲ್ಲೂ ಶೈಕ್ಷಣಿಕವಾಗಿ ಹಿಂದೂಳಿದ ದೇವದುರ್ಗ ಕ್ಷೇತ್ರದಲ್ಲಿ ಶಿಕ್ಷಣ ಕ್ರಾಂತಿ ಮಾಡಬೇಕೆಂದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಕ್ಷೇತ್ರದಲ್ಲಿ ಬೃಹತ್ ಶಾಲಾ ಕಟ್ಟಡಗಳನ್ನು ನಿರ್ಮಿಸಿದ ಕೀರ್ತಿ ಶಾಸಕ ಕೆ.ಶಿವನಗೌಡ ನಾಯಕಗೆ ಸಲ್ಲುತ್ತದೆ.

ಇದರ ಜೊತೆಗೆ ಅಕ್ರಮ ಚಟುವಟಿಕೆಗಳ ತಾಣ ದೇವದುರ್ಗವಾಗಿ ಮಾರ್ಪಟ್ಟಿದೆ ಎಂಬ ಮಾತುಗಳು ಸಹ ಜೋರಾಗಿ ಕೇಳಿಬರುತ್ತಿವೆ. ಇದರ ಮಧ್ಯೆ ಈಗ ಚುನಾವಣೆ ಬಂದಿದ್ದು ಕ್ಷೇತ್ರದಲ್ಲಿ ಶಾಸಕ ಕೆ.ಶಿವನಗೌಡ ನಾಯಕ ಓಡಾಟ ‌ನಡೆಸಿದ್ದಾರೆ. ಅದರ ಜೊತೆಗೆ 2023ರ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲುವು ಸಾಧಿಸಬೇಕು ಎಂದ ಪಣ ತೊಟ್ಟು ಶಾಸಕ ಕೆ.ಶಿವನಗೌಡ ನಾಯಕ ತಾನು ಮಾಡಿದ ಅಭಿವೃದ್ಧಿ ಕೆಲಸಗಳು ಜನರಿಗೆ ತಿಳಿಸುತ್ತಾ ಓಡಾಟ ಶುರು ಮಾಡಿದ್ದಾರೆ. 

ಕಾಂಗ್ರೆಸ್ ಜನರ ಭಾವನೆ ಅರಿತು ಅಭ್ಯರ್ಥಿ ಆಯ್ಕೆ:
ದೇವದುರ್ಗ ಕಾಂಗ್ರೆಸ್ ನ ಭದ್ರಕೋಟೆ ಆಗಿತ್ತು. ಆದ್ರೆ ಬದಲಾದ ರಾಜಕೀಯ ಬರವಣಿಗೆಯಿಂದಾಗಿ ದೇವದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮೌನವಹಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಆಗಿ ಬಿ.ವಿ.ನಾಯಕ ದೇವದುರ್ಗ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೆಂದು ಕೈ ಕಾರ್ಯಕರ್ತರ ಬೇಡಿಕೆ ಆಗಿದೆ. ಆದ್ರೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ನಾಯಕ ರಾಯಚೂರು ಜಿಲ್ಲೆಯ ಮೂರು ಕಡೆ ಅರ್ಜಿ ಸಲ್ಲಿಕೆ ಮಾಡಿ ಮಾನವಿ ವಿಧಾನಸಭಾ ಕ್ಷೇತ್ರ ಇಲ್ಲವೇ ದೇವದುರ್ಗದಿಂದ ಸ್ಪರ್ಧೆ ಮಾಡುವುದಾಗಿ ಹೇಳಿಕೊಂಡು ‌ಓಡಾಟ ನಡೆಸಿದ್ದಾರೆ. ಬಿ.ವಿ.ನಾಯಕ ಅವರ ಗೊಂದಲದ ನಿರ್ಧಾರದಿಂದ ಕೆಲ ಕಾಂಗ್ರೆಸ್ ಕಾರ್ಯಕರ್ತರು   ಕಾಂಗ್ರೆಸ್ ಬಿಟ್ಟು ಜೆಡಿಎಸ್ ಮತ್ತು ಬಿಜೆಪಿ ಕಡೆ ಮುಖ ಮಾಡಿದ್ದಾರೆ. ಕೆಲ ಕಾಂಗ್ರೆಸ್ ಕಾರ್ಯಕರ್ತರು ಶ್ರೀದೇವಿ ನಾಯಕ ಅವರ ಜೊತೆಗೆ ಪ್ರಚಾರ ನಡೆಸುತ್ತಾ ಕೈ ಕಟ್ಟಿಗೊಳಿಸಲು ಕಸರತ್ತು ನಡೆಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಮಾತ್ರ ಸಮೀಕ್ಷೆ ನಡೆಸಿದ್ದೇವೆ. ಸಮೀಕ್ಷೆಯಲ್ಲಿ ಮತದಾರರ ಭಾವನೆ ಅರಿತು ಅಭ್ಯರ್ಥಿಗಳನ್ನ ಆಯ್ಕೆ ಮಾಡುತ್ತೇ ಎಂದು ಹೇಳುತ್ತಾ ಕಾಲಹರಣ ಮಾಡುತ್ತಿದೆ.

ಅರಕೇರಾ ಕುಟುಂಬ ರಾಜಕಾರಣಕ್ಕೆ ಟಕ್ಕರ್ ನೀಡುತ್ತಾಳಾ ಕರೆಮ್ಮ:
ದೇವದುರ್ಗ ರಾಜಕೀಯ ಅಂದ್ರೆ ಅರಕೇರಾ ಕುಟುಂಬಕ್ಕೆ ‌ಮೀಸಲಾದ ಕ್ಷೇತ್ರವಾಗಿತ್ತು‌.‌ ಕಳೆದ 2008ರಿಂದ ಎಸ್ ಟಿ ಮೀಸಲು ಕ್ಷೇತ್ರವಾಗಿದ್ದ ಬಳಿಕ ಈವರೆಗೆ ಅರಕೇರಾ ಕುಟುಂಬದವರೇ ರಾಜಕೀಯ ಮಾಡಿದ್ರು. ಆದ್ರೆ 2023ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ‌ಕರೆಮ್ಮ ಜಿ.‌ನಾಯಕ ಅರಕೇರಾ ಕುಟುಂಬ ರಾಜಕೀಯಕ್ಕೆ ಟಕ್ಕರ್ ನೀಡಲು ಸಜ್ಜಾದಂತೆ ಕ್ಷೇತ್ರದಲ್ಲಿ ಗೋಚರಿಸುತ್ತಿದೆ.‌ ಮೊನ್ನೆ ನಡೆದ ಕುಮಾರಸ್ವಾಮಿ ನೇತೃತ್ವದ ಪಂಚರತ್ನ ಯಾತ್ರೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕರೆಮ್ಮ ಜಿ. ನಾಯಕ ತನ್ನ ಬಲ ಪ್ರದರ್ಶನ ಮಾಡಿದ್ರು. ಕ್ಷೇತ್ರದ ಜನರು ಸಹ ಕರೆಮ್ಮ ಪರವು ಒಲವು ತೋರಿಸಲು ಶುರು ಮಾಡಿದ್ದಾರೆ.

ಜೆಡಿಎಸ್ ಪಕ್ಷವೂ ದೇವದುರ್ಗ ವಿಧಾನಸಭಾ ಕ್ಷೇತ್ರದ ಟಿಕೆಟ್ ಕರಮ್ಮಗೆ ಘೋಷಣೆ ಮಾಡಿದ ಬಳಿಕ ಕರೆಮ್ಮ ತನ್ನ ಗೆಲುವಿಗಾಗಿ ದೇವದುರ್ಗ ಕ್ಷೇತ್ರದಲ್ಲಿ ಭರ್ಜರಿ ಓಡಾಟ ನಡೆಸಿದ್ದಾರೆ. ಈಗಾಗಲೇ ಕ್ಷೇತ್ರದ 198 ಹಳ್ಳಿಯಲ್ಲಿ ಪಾದಯಾತ್ರೆ ನಡೆಸಿ ಗ್ರಾಮೀಣ ಜನರ ಮನಸೆಳೆಯುವ ಮುಂದಾಗಿದ್ದು, ಈ ಹಿಂದೆ ಎರಡು ಬಾರಿ ಚುನಾವಣೆ ಸ್ಪರ್ಧೆ ಮಾಡಿ ಸೋತಿರುವ ಜೆಡಿಎಸ್ ಅಭ್ಯರ್ಥಿ ಕರೆಮ್ಮ ಬಗ್ಗೆ ಕ್ಷೇತ್ರದ ಜನರಲ್ಲಿ ಅನುಕಂಪದ ಅಲೆಯೂ ಇದೆ. ಇನ್ನೂ ದೇವದುರ್ಗ ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ಕಾಂಗ್ರೆಸ್, ಜೆಡಿ ಎಸ್ ಮತ್ತು ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಕಂಡು ಬರುತ್ತಿದೆ. ಆದ್ರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುವುದು ತಿಳಿಯದೇ ಇರುವುದರಿಂದ ಬಿಜೆಪಿ ಮತ್ತು ಜೆಡಿಎಸ್ ಮಧ್ಯೆ ನೇರ ಹಣಾಹಣಿ ನಡೆಯಲಿದೆ.

ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ, ಮಂಡ್ಯ ಉಸ್ತುವಾರಿ ಕೊಟ್ರು ಬೇಡ: ಸಚಿವ ಕೆ.ಸಿ. ನಾರಾಯಣಗೌಡ

ಶಾಸಕ ಶಿವನಗೌಡ ನಾಯಕ ವಿರುದ್ಧ ಗೆಲುವು ಸುಲಭದ ಮಾತಲ್ಲ:
ದೇವದುರ್ಗದ ಬಿಜೆಪಿ ‌ಶಾಸಕ ಕೆ. ಶಿವನಗೌಡ ನಾಯಕ, ಈವರೆಗೆ ಎರಡು ಸಾರ್ವಜನಿಕ ಚುನಾವಣೆ ಹಾಗೂ ಎರಡು ಉಪ ಚುನಾವಣೆ ಸೇರಿ ಒಟ್ಟು ನಾಲ್ಕು ಬಾರಿ ಗೆದ್ದು ಶಾಸಕರಾಗಿ ಆಯ್ಕೆ ಆಗಿದ್ದಾರೆ. ದೇವದುರ್ಗ ಕ್ಷೇತ್ರದ ಮತದಾರರ ನಾಡಿ ಮಿಡಿತ ಶಾಸಕ ಕೆ.ಶಿವನಗೌಡ ನಾಯಕ ಅರಿತಿದ್ದಾರೆ. ಇತ್ತೀಚಿನ ದಿನಗಳಲ್ಲಿ ದೇವದುರ್ಗ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕರೆಮ್ಮ. ಜಿ.ನಾಯಕರಿಗೆ ಹೋದೆಲ್ಲೆಲ್ಲಾ ಅನುಕಂಪದ ಅಲೆ ಜೊತೆಗೆ ಉತ್ತಮ ಸ್ಪಂದನೆ ಸಿಗುತ್ತಿದೆ. ಆದ್ರೆ ಇದನ್ನೇ ಗೆಲುವಿನ ಹಾದಿ ಎಂದು ಪರಿಗಣಿಸಲು ಸಾಧ್ಯವಿಲ್ಲ.

ಮಾಜಿ ಸಚಿವ ಮೇಟಿಗೆ ತಪ್ಪಿದರೆ ನನಗೆ ಕಾಂಗ್ರೆಸ್ ಟಿಕೆಟ್ ನೀಡಿ, ಕೊನೆ ಅವಕಾಶ ಕೊಡಿ: ಡಾ.ದೇವರಾಜ್ ಪಾಟೀಲ

ಏಕೆಂದರೆ ಹಾಲಿ ಶಾಸಕ ಕೆ. ಶಿವನಗೌಡ ‌ನಾಯಕ   ವಿರುದ್ಧ ದೇವದುರ್ಗದಲ್ಲಿ ಗೆಲುವು ಸಾಧಿಸುವುದು ಸುಲಭವಲ್ಲ. ಶಾಸಕ ಕೆ.ಶಿವನಗೌಡ ನಾಯಕ ಚುನಾವಣೆ ರಣತಂತ್ರ ಕರಗತ ಮಾಡಿರುವ ಶಿವನಗೌಡ ಕೊನೆಯ ಗಳಿಗೆಯಲ್ಲಿ ಚಾಣಕ್ಷತೆ ತೋರಿ ಗೆಲುವು ಸಾಧಿಸಿದ್ದು ಇದೆ. ಹೀಗಾಗಿ ಕೆ.ಶಿವನಗೌಡ ನಾಯಕ ವಿರುದ್ಧ ಜೆಡಿಎಸ್ ಅಭ್ಯರ್ಥಿ ಗೆಲುವುದು ಸುಲಭವಲ್ಲ. ಆದ್ರೂ ಕ್ಷೇತ್ರದ ಜನರು ಕೈ ಹಿಡಿದರೇ ಗೆಲುವು ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ. ಮತ್ತೊಂದು ‌ಕಡೆ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುವುದರ ಮೇಲೆ ದೇವದುರ್ಗ ಕ್ಷೇತ್ರದ ಮುಖಂಡರ ಗೆಲುವಿನ ಲೆಕ್ಕಾಚಾರ ನಿಂತಿದೆ.

Latest Videos
Follow Us:
Download App:
  • android
  • ios