ಬೈ ಎಲೆಕ್ಷನ್ ರಿಸಲ್ಟ್: 5ರಲ್ಲಿ 4 ಕ್ಷೇತ್ರಗಳಲ್ಲಿ ಗೆಲುವಿನತ್ತ ದಾಪುಗಾಲು ಇಟ್ಟ ಮೈತ್ರಿ
ಉಪಸಮರದ ಆರಂಭದ ಫಲಿತಾಂಶವನ್ನ ನೋಡಿದರೆ ಒಟ್ಟು 5 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲುವಿನತ್ತ ದಾಪುಗಾಲು ಇಟ್ಟಿದ್ದಾರೆ.
ಬೆಂಗಳೂರು, [ನ.06]: ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಇನ್ನೇನು ಕೆಲವೇ ಕ್ಷಗಳಲ್ಲಿ ಇಂದು [ಮಂಗಳವಾರ] ಹೊರಬೀಳಲಿದೆ.
ಲೋಕಸಭೆ ಕ್ಷೇತ್ರಗಳಾದ ಬಳ್ಳಾರಿ, ಶಿವಮೊಗ್ಗ, ಮಂಡ್ಯ ಮತ್ತು ವಿಧಾನ ಸಭೆ ಕ್ಷೇತ್ರಗಳಾದ ಜಮಖಂಡಿ, ರಾಮನಗರ ಕ್ಷೇತ್ರಕ್ಕೆ ನಡೆದ ಚುನಾವಣೆಯ ಫಲಿತಾಂಶದ ಮೇಲೆ ಇಡೀ ರಾಜ್ಯ ಕುತೂಹಲದಿಂದ ನೋಡುತ್ತಿದೆ.
ಆದ್ರೆ, ಆರಂಭದ ಫಲಿತಾಂಶವನ್ನ ನೋಡಿದರೆ ಒಟ್ಟು 5 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲುವಿನತ್ತ ದಾಪುಗಾಲು ಇಟ್ಟಿದ್ದಾರೆ. ಇನ್ನು ಬಿಜೆಪಿ ಕೇವಲ ಒಂದು ಕ್ಷೇತ್ರದಲ್ಲಿ ಗೆಲುವಿನತ್ತ ದಾಪುಗಾಲು ಇಟ್ಟಿದೆ.
ರಾಮನಗರದಲ್ಲಿ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಭಾರೀ ಮುನ್ನಡೆ ಸಾಧಿಸಿದ್ದು, ಗೆಲ್ಲುವುದು ಬಹುತೇಕ ಖಚಿತವಾಗಿದೆ. ಇನ್ನು ಬಳ್ಳಾರಿಯಲ್ಲಿ ಕಾಂಗ್ರೆಸ್ ನ ವಿ ಎಸ್ ಉಗ್ರಪ್ಪ ರೆಡ್ಡಿ ಕೋಟೆ ಛಿದ್ರಗೊಳಿಸುವತ್ತ ಹೆಜ್ಜೆ ಹಾಕಿದ್ದಾರೆ.
ಸಧ್ಯದ ಮಾಹಿತಿ ಪ್ರಕಾರ ಉಗ್ರಪ್ಪ ಸುಮಾರು ಒಂದು ಲಕ್ಷ ಮತಗಳಿಂದ ಮುನ್ನಡೆ ಸಾಧಿಸಿದ್ದು, ಗೆಲುನಿತ್ತ ಹೆಜ್ಜೆ ಹಾಕಿದ್ದಾರೆ. ಇನ್ನು ಜಮಖಂಡಿಯಲ್ಲಿ ಅನುಕಂಪದ ಅಲೆ ಕೈ ಹಿಡಿದಿದ್ದು, ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮೆಗೌಡ ಮುನ್ನಡೆ ಸಾಧಿಸಿದ್ದಾರೆ.
ಇನ್ನು ಸಕ್ಕರೆ ನಾಡು ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಶಿವರಾಮೇಗೌಡ ಅವರು ಡಾ. ಸಿದ್ದರಾಮಯ್ಯ ವಿರುದ್ಧ ಭಾರಿ ಅಂತರದಲ್ಲಿ ಮುನ್ನಡೆ ಸಾಧಿಸಿದ್ದು, ಗೆಲುವಿನ ಸನ್ನಿಹದಲ್ಲಿದ್ದಾರೆ.
ಈ ನಾಲ್ಕು ಕ್ಷೇತ್ರಗಳಲ್ಲಿ ದೋಸ್ತಿಗೆ ಬಹುತೇಕ ಗೆಲುವಾಗಲಿದ್ದು, ಬಿಜೆಪಿ ಶಿವಮೊಗ್ಗದಲ್ಲಿ ಮಾತ್ರ ಗೆಲುವಿನ ಕನಸು ಕಂಡಿದೆ.