Asianet Suvarna News Asianet Suvarna News

ಇಂದು ಜೆಡಿಎಸ್‌ 2ನೇ ಪಟ್ಟಿ ಬಿಡುಗಡೆ: ಕುಮಾರಸ್ವಾಮಿ

ಈಗಾಗಲೇ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಎರಡನೇ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗುವುದು. ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎಂದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ. 

JDS Candidates 2nd List Will Be Release on April 1st Says HD Kumaraswamy grg
Author
First Published Apr 1, 2023, 7:26 AM IST | Last Updated Apr 1, 2023, 7:26 AM IST

ಬೆಂಗಳೂರು(ಏ.01):  ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನವೇ ಜೆಡಿಎಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿರುವ ದಳಪತಿಗಳು ಎರಡನೇ ಪಟ್ಟಿಯನ್ನು ಇಂದು(ಶನಿವಾರ) ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೇ ಈ ವಿಷಯ ತಿಳಿಸಿದ್ದಾರೆ.

ನಿನ್ನೆ(ಶುಕ್ರವಾರ) ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿನ ಬಂಡೆ ಮಹಾಕಾಳಿ ಅಮ್ಮನವರಿಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗಾಗಲೇ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಎರಡನೇ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಲಾಗುವುದು. ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎಂದರು.

ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ: ಬರಮಾಡಿಕೊಂಡ ಎಚ್‌ಡಿಕೆ

ಶನಿವಾರದಿಂದ ವಿವಿಧ ಜಿಲ್ಲೆಗಳ ಪ್ರಚಾರ ಕಾರ್ಯ ನಡೆಸಲಾಗುವುದು. ಚಾಮರಾಜನಗರ, ಮೈಸೂರು, ಬಳ್ಳಾರಿ, ಹುಬ್ಬಳ್ಳಿ, ಧಾರವಾಡದಲ್ಲಿ ಏ.12ರವರೆಗೆ ಪ್ರಚಾರ ನಡೆಸಲಾಗುವುದು. ಏ.13ರಿಂದ ಏ.20ರವರೆಗೆ ನಾಮಪತ್ರ ಸಲ್ಲಿಕೆಗೆ ಹಲವು ಕ್ಷೇತ್ರಗಳಿಗೆ ಭೇಟಿ ನೀಡಲಾಗುವುದು. ಏ.21ರಿಂದ ಏ.24ರವರೆಗೆ ರಾಮನಗರ, ಚನ್ನಪಟ್ಟಣ, ಕನಕಪುರದಲ್ಲಿ ಪ್ರಚಾರ ಮಾಡುತ್ತೇನೆ. ಎಲ್ಲಿಯೂ ಸಮಯ ವ್ಯರ್ಥ ಮಾಡುವುದಿಲ್ಲ. ಇನ್ನು, ಸಮೀಕ್ಷೆ ವರದಿಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಗುರಿ ತಲುಪುವುದಕ್ಕೆ ಬೇಕಾದ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಇದೇ ವೇಳೆ ಕುಮಾರಸ್ವಾಮಿ, ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷದ ವಿವಿಧ ನಾಯಕರ ಮನೆಗಳಿಗೆ ಭೇಟಿ ನೀಡಿ ಸಭೆಗಳನ್ನು ನಡೆಸಿದರು. ವಿಧಾನಪರಿಷತ್‌ ಸದಸ್ಯ ಟಿ.ಎ.ಶರವಣ, ಮೇಲ್ಮನೆಯ ಮಾಜಿ ಸದಸ್ಯ ರಮೇಶ್‌ಗೌಡ ಇತರರು ಉಪಸ್ಥಿತರಿದ್ದರು.

ರಾಮಸ್ವಾಮಿ ಅವರನ್ನು ನಾನು ಹೊರಗೆ ಹಾಕಿಲ್ಲ

ಪಕ್ಷ ಬಿಟ್ಟಶಾಸಕ ಎ.ಟಿ.ರಾಮಸ್ವಾಮಿ ಅವರು ನನ್ನ ಮೇಲೆ ಆರೋಪ ಮಾಡುವುದಕ್ಕೆ ಹಾಸನದ ವಿಚಾರದಲ್ಲಿ ನಾನು ಯಾವುದೇ ನಿರ್ಣಯ ಮಾಡಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ನಾನು ಅವರನ್ನು ಹೊರಗೆ ಹಾಕಿಲ್ಲ. ಎರಡು ವರ್ಷದ ರಾಜಕೀಯ ಹೇಗೆ ನಡೆದಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಘಟನೆಗೆ ಏನಾದರೂ ಕಾರಣ ನೀಡಬೇಕಲ್ಲ, ಅದಕ್ಕೆ ಅವರು ಹಾಗೆ ಹೇಳಿದ್ದಾರೆ. ನಾನು ಅದಕ್ಕೆ ಸಮಜಾಯಿಷಿ ನೀಡುವುದಿಲ್ಲ. ಗುಬ್ಬಿ ಶ್ರೀನಿವಾಸ ಸಹ ಅದೇ ರೀತಿ ಹೇಳಿದರು ಅಲ್ಲವೇ ಎಂದರು.

ಬಿಜೆಪಿ, ಕಾಂಗ್ರೆಸ್‌ಗೆ ಬಹುಮತ ಸಿಗದ ಭೀತಿ: ಕುಮಾರಸ್ವಾಮಿ

ಚನ್ನಪಟ್ಟಣ ಬಿಟ್ಟರೆ ಬೇರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಿಲ್ಲ. ಅಲ್ಲಿ ಯಾವ ಪಕ್ಷದಿಂದ ಯಾರು ಅಭ್ಯರ್ಥಿಯಾಗುತ್ತಾರೆ ಎಂಬುದನ್ನು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಅದು ನನಗೆ ಮುಖ್ಯವಲ್ಲ. ನಾನು ಈಗಾಗಲೇ ಚನ್ನಪಟ್ಟಣದಲ್ಲಿ ನಿಲ್ಲಬೇಕು ಎಂದು ಪಕ್ಷ, ಕಾರ್ಯಕರ್ತರು ತೀರ್ಮಾನ ಮಾಡಿದ್ದಾರೆ. ಬೇರೆ ಕ್ಷೇತ್ರದಲ್ಲಿ ಹೋಗಿ ಅರ್ಜಿ ಹಾಕಿಕೊಳ್ಳುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios