ಬೆಂಗಳೂರು, (ನ.10) : ತೀವ್ರ ಕುತೂಹಲ ಕೆರಳಿಸಿದ್ದ ಶಿರಾ ಹಾಗೂ ರಾಜರಾಜೇಶ್ವರಿನಗರದ ಉಪ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. 

ಇತ್ತ ರಾಜರಾಜೇಶ್ವರಿ ನಗರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಂತ ಕೃಷ್ಣಮೂರ್ತಿ ಠೇವಣಿ ಕಳೆದುಕೊಂಡಿದ್ದಾರೆ.  ಹೌದು.. ಆರಂಭದಿಂದಲೂ ಎಲ್ಲಾ ಸುತ್ತಿನಲ್ಲೂ ಮೂರನೇ ಸ್ಥಾನದಲ್ಲಿಯೇ ಇದ್ದ ಕೃಷ್ಣಮೂರ್ತಿ ಅವರು ಗಳಿಸಿದ ಮತಗಳು 10,251.

ರಾಜರಾಜೇಶ್ವರಿನಗರದಲ್ಲಿ ಬಿಜೆಪಿಯ ಅಭ್ಯರ್ಥಿ ಮುನಿರತ್ನ ಹ್ಯಾಟ್ರಿಕ್ ಗೆಲುವು ಸಾಧಿಸಿದರು. ಕಾಂಗ್ರೆಸ್‌ನ ಅಭ್ಯರ್ಥಿ ಕುಸುಮಾ ಸ್ಪರ್ಧಿಸಿದ್ದ ಮೊದಲ ಚುನಾವಣೆಯಲ್ಲಿಯೇ ಸೋಲು ಕಂಡರು. ಇನ್ನು ಜೆಡಿಎಸ್‌ನ ಕೃಷ್ಣಮೂರ್ತಿ ಕೇವಲ 10,251 ಮತಗಳನ್ನು ಪಡೆಯುವ ಮೂಲಕ ಠೇವಣಿ ಕಳೆದುಕೊಂಡಿದ್ದಾರೆ. 

RR ನಗರ ಬೈ ಎಲೆಕ್ಷನ್: ಬಿಜೆಪಿ ಗೆಲುವಿಗೆ, ಕಾಂಗ್ರೆಸ್ ಸೋಲಿಗೆ ಕಾರಣಗಳು...!

ಈ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಹಣಾಹಣಿ ನಡೆದಿತ್ತು. ಆದ್ರೇ ಜೆಡಿಎಸ್ ಆಟಕ್ಕುಂಟು, ಲೆಕ್ಕಕ್ಕಿಲ್ಲ ಎನ್ನುವಂತಾಗಿತ್ತು. ಆದರೂ ದಳಪತಿಗಳು ಒಕ್ಕಲಿಗ ಮತಗಳ ಮೇಲೆ ನಂಬಿಕೆ ಇಟ್ಟಿದ್ದರು. ಆದ್ರೆ, ಅದ್ಯಾವುದು ವರ್ಕೌಟ್ ಆಗಿಲ್ಲ.

ಬಿಜೆಪಿಯ ಅಭ್ಯರ್ಥಿ ಮುನಿರತ್ನ 1,25,734 ಮತಗಳನ್ನು ಪಡೆದು 57,936 ಮತಗಳ ಅಂತರದಿಂದ ಜಯಶೀಲರಾಗಿದ್ದರೇ, ಕಾಂಗ್ರೆಸ್ ನ ಅಭ್ಯರ್ಥಿ ಹೆಚ್.ಕುಸುಮಾ ಅವರು 67,798 ಮತ ಗಳಿಸಿ, ಸೋಲು ಕಂಡಿದ್ದಾರೆ.

ಇನ್ನು ಜೆಡಿಎಸ್ ಅಭ್ಯರ್ಥಿ ಠೇವಣಿ ಕಳೆದುಕೊಂಡಿರುವು ಒಂದು ಕಡೆ ಇರಲಿ ಕರ್ನಾಟಕದಲ್ಲಿ ಒಂದು ದಿನಕ್ಕೆ ಬರುವ ಕೊರೋನಾ ಪಾಸಿಟಿವ್ ಕೇಸ್‌ಗಳಷ್ಟು ಮತ ಪಡೆದಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದೆ.