ಬೆಂಗಳೂರು, (ಆ.13): ರಾಜ್ಯ ಸರ್ಕಾರ ಭೂ ಸುಧಾಕರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಮತ್ತು ಕೈಗಾರಿಕಾ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿಗಳನ್ನು ವಿರೋಧಿಸಿ ನಾವು ನಾಳೆಯಿಂದ ರಾಜ್ಯಾದ್ಯಂತ ಹೋರಾಟ ಮುಂದಾಗಿದ್ದೇವೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ, ರಾಜ್ಯಸಭಾ ಸದಸ್ಯ ಎಚ್‌.ಡಿ ದೇವೇಗೌಡ್ರು ತಿಳಿಸಿದ್ದಾರೆ.

 ಇಂದು (ಗುರುವಾರ) ಪಕ್ಷದ ಕಚೇರಿ ಜೆ.ಪಿ. ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ನಾವು ನಾಳೆಯಿಂದಲೇ ರಾಜ್ಯಾದ್ಯಂತ ಹೋರಾಟ ಮಾಡಲು ಸಿದ್ಧತೆ ಮಾಡಿಕೊಂಡಿದ್ದು, . ನಾಳೆ (ಶುಕ್ರವಾರ) ಹಾಸನದಲ್ಲಿ ಸಾಂಕೇತಿಕವಾಗಿ ಹೋರಾಟಕ್ಕೆ ಚಾಲನೆ ನೀಡಲಿದ್ದೇವೆ. 200 ಜನ ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಬೆಂಗ್ಳೂರು ಗಲಭೆಯಲ್ಲಿದೆ ಟ್ವಿಸ್ಟ್, ಧೋನಿಗೂ ಕೊರೋನಾ ಟೆಸ್ಟ್ : ಆ.13ರ ಟಾಪ್ 10 ಸುದ್ದಿ!

 ಕೊರೋನಾ ಮಾರ್ಗಸೂಚಿ ನಿಯಮದ ಅನ್ವಯವೇ ಹೋರಾಟ ಮಾಡುತ್ತೇವೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌​.ಕೆ.ಕುಮಾರಸ್ವಾಮಿ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಸೇರಿದಂತೆ ಬೆರಳೆಣಿಕೆ ಮಂದಿ ಮಾತ್ರ ಶಾಂತಿಯುತ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತೇವೆ. ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕುಗಳಲ್ಲಿ ಶಾಸಕರು, ಮಾಜಿ ಶಾಸಕರು, ಮೇಲ್ಮನೆ ಸದಸ್ಯರು ಸೇರಿದಂತೆ ಪಕ್ಷದ ಮುಖಂಡರು ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿಸಿದರು. 

ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆಗಳು ರೈತರಿಗೆ ಮಾರಕ. ಸಣ್ಣ, ಮಧ್ಯಮ ವರ್ಗದ ರೈತರಿಗೆ ಅನ್ಯಾಯವಾಗುತ್ತಿದೆ. ಕೈಗಾರಿಕೆ ಕಾಯ್ದೆಯೂ ಅತ್ಯಂತ ಅಪಾಯಕಾರಿ. ಜಮೀನು ಪಡೆದು ಮುಂದೆ ಮಾರಾಟ ಮಾಡಬಹುದು. ಈ ಕಾಯ್ದೆಯಿಂದ ಅನಾನುಕೂಲವೇ ಹೆಚ್ಚು ಎಂದರು.

ಸರ್ಕಾರ ತಂದಿರುವ ಮೂರು ಕಾಯ್ದೆಗಳಿಗೆ ನಮ್ಮ ಸಮ್ಮತಿ ಇಲ್ಲ.‌ ಈ ಕಾಯಿದೆಗಳನ್ನು ಸುಗ್ರಿವಾಜ್ಞೆ ಮೂಲಕ ಅನುಷ್ಠಾನಕ್ಕೆ ತಂದಿದ್ದಾರೆ. ಇದನ್ನನು ನಾವು ವಿರೋಧಿಸುತ್ತೇವೆ. ಈ ವಿಚಾರವಾಗಿ ರಾಜ್ಯಾದ್ಯಂತ ಹೋರಾಟ ಮಾಡಲು ನಾವು ಸಿದ್ಧವಾಗಿದ್ದೇವೆ ಎಂದು ದೇವೇಗೌಡ ಹೇಳಿದರು.