ಬೆಂಗಳೂರು, (ಜ.19): ಮುಂಬರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್‌ ಈಗಿನಿಂದಲೇ ಪಕ್ಷವನ್ನು ತಳಮಟ್ಟದಿಂದಲೇ ಬಲಪಡಿಸುವ ಕಾರ್ಯಕ್ಕೆ ಕೈ ಹಾಕಿದೆ. 

ಈ ಹಿನ್ನೆಲೆಯಲ್ಲಿಯೇ ಪಕ್ಷ ಸಂಘಟನೆಗೆ 7 ವಲಯಗಳನ್ನು ಮಾಡಲಾಗಿದ್ದು, ಅದಕ್ಕೆ ವೀಕ್ಷಕರ ನೇಮಕವಾಗಿದೆ.  ವೀಕ್ಷಕರನ್ನು ನೇಮಕ ಮಾಡಿ ಅಧಿಕೃತ  ಆದೇಶ ಹೊರಡಿಸಲಾಗಿದೆ. ಜೆಡಿಎಸ್ ಕೋರ್ ಕಮಿಟಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 

ಜೆಡಿಎಸ್‌ನಿಂದ ದೂರ ಸರಿದ ಜಿಟಿಡಿ : ಸ್ಥಾನ ನೀಡದ ಮುಖಂಡರು

ವೀಕ್ಷಕರ ತಂಡಗಳು ಪಕ್ಷದ ಸಂಘಟನೆ ಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಲಿವೆ. ಜನವರಿ ಅಂತ್ಯದ ವೇಳೆಗೆ ಆಯಾ ವಿಭಾಗಗಳ ವೀಕ್ಷಕರ ತಂಡಗಳು ಪ್ರವಾಸ ಕೈಗೊಂಡು ಪ್ರತಿದಿನ ಎರಡು ಜಿಲ್ಲೆಯಲ್ಲಿ ಹಳೆಯ ಸಮಿತಿ ಹಾಗೂ ಪಕ್ಷದ ಮುಖಂಡರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಿವೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಇಬ್ಬರು ಪ್ರಮುಖ ನಾಯಕರನ್ನು ಕೈಬಿಟ್ಟ ಜೆಡಿಎಸ್ 
ಹೌದು...ಇದರಲ್ಲಿ ಗಮನಿಸಬೇಕಾದ ಇನ್ನೊಂದು ಬೆಳವಣಿಗೆಯೆಂದರೆ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ ಹಾಗೂ ಮಾಜಿ ಶಾಸಕ ಮಧುಬಂಗಾರಪ್ಪನವರನ್ನ ವೀಕ್ಷಕರ ಪಟ್ಟಿಯಿಂದ ಕೈ ಬಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ. 

ಹೊಸ ಪ್ಲಾನ್ : ಜೆಡಿಎಸ್ ಪಕ್ಷ ವಿಸರ್ಜನೆ ಬಗ್ಗೆ ಮಾತಾಡಿದ ಎಚ್‌ಡಿಕೆ

ಈ ಇಬ್ಬರು ನಾಯಕರು ಪಕ್ಷದಲ್ಲಿ ಇರುವ ಸಾಧ್ಯತೆಗಳು ಕಡಿಮೆ ಎನ್ನುವುದು ಜೆಡಿಎಸ್ ಅರಿತುಕೊಂಡಿದೆ. ಈ ಹಿನ್ನೆಯಲ್ಲಿ ಇವರಿಬ್ಬರ ಹೆಸರನ್ನು ಪಕ್ಷದ ಸಂಘಟನೆ ತಂಡದಲ್ಲಿ ಪರಿಗಣಿಸಿಲ್ಲ ಎನ್ನಲಾಗುತ್ತಿದೆ. ಹಾಗಾದ್ರೆ, ದಳಪತಿಗಳ ಈ ನಡೆ ನೋಡಿದ್ರೆ ಇವರಿಬ್ಬರು ಜೆಡಿಎಸ್ ತೊರೆಯುವುದು ಪಕ್ಕಾ ಎನ್ನುವಂತಿದೆ. ಇನ್ನು ನೇಮಕಗೊಂಡ ವಲಯವಾರು ವೀಕ್ಷಕರ ಹೆಸರುಗಳು ಈ ಕೆಳಗಿನಂತಿವೆ. 

ಕಲ್ಯಾಣ ಕರ್ನಾಟಕ ವೀಕ್ಷಕರ ತಂಡ
ಕಲ್ಯಾಣ ಕರ್ನಾಟಕ ಭಾಗಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮೇಲುಸ್ತುವಾರಿಯಲ್ಲಿ ಶಾಸಕರಾದ ಬಂಡೆಪ್ಪ ಕಾಶಂಪೂರ್, ನಾಗನಗೌಡ ಕಂದಕೂರ್, ವೆಂಕಟರಾವ್ ನಾಡಗೌಡ, ರಾಜ ವೆಂಕಟಪ್ಪ ನಾಯಕ್ ದೊರೆ, ಮಾಜಿ ಸಚಿವ ಎನ್.ಎಂ.ನಬಿ ಅವರನ್ನು ವೀಕ್ಷಕರಾಗಿ ನೇಮಿಸಲಾಗಿದೆ.

ಬೆಳಗಾವಿ ವಿಭಾಗದ ವೀಕ್ಷಕರ ಟೀಮ್
ಬೆಳಗಾವಿ ವಿಭಾಗಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮೇಲುಸ್ತುವಾರಿಯಲ್ಲಿ ವಿಧಾನಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ, ಶಾಸಕ ದೇವಾನಂದ ಚೌಹಾಣ್, ಮಾಜಿ ಸಚಿವ ಆನಂದ್ ಅಸ್ನೋಟಿಕರ್,ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ, ಬೀಮಪ್ಪ ಗುಂಡಪ್ಪ ಗಡದ, ಅಶೋಕ ನಿಂಗಯ್ಯ ಪೂಜಾರಿ, ನಾಸೀರ್ ಭಗವಾನ್, ಮಂಗಳಾದೇವಿ ಆರ್.ಬಿರಾದಾರ್, ಮಲ್ಲಿಕಾರ್ಜುನ ಯೆಂಡಿಗೆರಿ, ಹನುಮಂತಪ್ಪ ಮಾವಿನಮರದ.

ಮೈಸೂರು ವಿಭಾಗ
ಮೈಸೂರು ವಿಭಾಗಕ್ಕೆ ಮಾಜಿ ಸಚಿವರಾದ ಎಚ್.ಡಿ.ರೇವಣ್ಣ, ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು, ಶಾಸಕರಾದ ಎಂ.ಅಶ್ವಿನ್‍ಕುಮಾರ್, ಡಾ.ಕೆ.ಅನ್ನದಾನಿ, ಮಾಜಿ ಶಾಸಕ ಚಿಕ್ಕಣ್ಣ, ಪಕ್ಷದ ಮುಖಂಡರಾದ ಮೊಹಮ್ಮದ್ ಜಫ್ರುಲ್ಲಾ ಖಾನ್, ಅಬ್ದುಲ್ ಅಜೀಜ್ ಅಬ್ದುಲ್ಲಾ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ.

ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಕೊಡಗು
ಮಲೆನಾಡು ಅರೆ ಮಲೆನಾಡು ಮತ್ತು ಬಯಲು ಸೀಮೆಯ ಹೊಣೆಗಾರಿಕೆ  ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಶಾಸಕರಾದ ವೈ.ಎಸ್.ವಿ.ದತ್ತ, ಎಚ್.ಎಸ್.ಶಿವಶಂಕರ್, ಶಾರದ ಪೂರ್ಯಾ ನಾಯಕ್, ಡಿ.ಯಶೋಧರ ಅವರನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ.