ತುಮಕೂರು, (ಫೆ.13): ಪಕ್ಷ ವಿರೋಧಿ ಹೇಳಿಕೆ ಹಿನ್ನೆಲೆಯಲ್ಲಿ ವಿಜಯಪುರ ಶಾಸಕ ಬಸನಗವಡ ಪಾಟೀಲ್ ಯತ್ನಾಳ್​ಗೆ ಕೇಂದ್ರ ಬಿಜೆಪಿ ಶಿಸ್ತು ಸಮಿತಿ ನೋಟಿಸ್ ನೀಡಿದೆ. ಇದರಿಂದ ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಗರಂ ಆಗಿದ್ದಾರೆ.

"

ಈ ಬಗ್ಗೆ ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು,  ಯತ್ನಾಳ್ ಅವರಿಗೆ ನಿಡಲಾದ ನೋಟಿಸ್ ವಾಪಸ್ ಪಡೆಯದಿದ್ರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ಶಾಸಕ ಬಸನಗೌಡ ಯತ್ನಾಳ್​ಗೆ ನೀಡಿರುವ ಶೋಕಾಸ್ ನೋಟಿಸ್​ನ ಹಿಂದೆ ಬಿಜೆಪಿ ಮುಖಂಡರ ಸುಪುತ್ರನ ಕೈವಾಡ ಇದೆ. ನಮ್ಮ ಪಾದಯಾತ್ರೆಯಲ್ಲಿ ಭಾಗವಹಿಸಿದ ಜನಪ್ರತಿನಿಧಿಗಳನ್ನ ಹತ್ತಿಕ್ಕುವ ಪ್ರಯತ್ನ ಆಗ್ತಿದೆ. ಈ ವಿಚಾರದಲ್ಲಿ ಯತ್ನಾಳ್​ಗೆ ಮೊದಲ ಬಾರಿಗೆ ನೋಟಿಸ್ ಕೊಟ್ಟಿದ್ದಾರೆ. ಕೇಂದ್ರದ ವರಿಷ್ಠರಿಗೆ ಮನವಿ ಮಾಡ್ತೇನೆ, ಕೊಟ್ಟಿರುವ ನೋಟಿಸ್ ಪರಿಶೀಲನೆ ಮಾಡಿ ವಾಪಸ್ ಪಡೀಬೇಕು ಎಂದು ಆಗ್ರಹಿಸಿದರು.

ಬಸನಗೌಡ ಪಾಟೀಲ್‌ ಯತ್ನಾಳ್‌ಗೆ ಬಿಗ್ ಶಾಕ್ ಕೊಟ್ಟ ಹೈಕಮಾಂಡ್

ರಾಜ್ಯದಲ್ಲಿ ಬಿಜೆಪಿ ಮುಖಂಡರ ಒಳ ಪಿತೂರಿಯಿಂದಾಗಿ ಹೀಗಾಗ್ತಿದೆ. ಇದರಲ್ಲಿ ಮುಖ್ಯ ಬೇಟೆಗಳೆಂದರೆ ಕಾಶಪ್ಪನವರು, ಯತ್ನಾಳ್ ರವರು. ಯಾರೇ ಏನು ಮಾಡಿದ್ರು ಹೋರಾಟ ನಿಲ್ಲಿಸೋಕೆ ಸಾಧ್ಯವಿಲ್ಲ. ಬೇರೆ ಸಮುದಾಯಗಳಿಗೆ ಪ್ರಚೋದನೆ ಮಾಡ್ತಿದ್ದಾರೆ. ಹೋರಾಟದಲ್ಲಿ ಕ್ಯಾಬಿನೇಟ್ ಮಿನಿಸ್ಟ್ರುಗಳೇ ಭಾಗವಹಿಸ್ತಾರೆ, ಅವರ ಬಗ್ಗೆ ಕ್ರಮವಿಲ್ಲ ಎಂದರು.

ಯತ್ನಾಳ್ ಗೌಡರು ವೈಯಕ್ತಿಕವಾಗಿ ಏನೂ ಹೇಳಿಲ್ಲ. ಹಾಲುಮತ, ವಾಲ್ಮೀಕಿ ಹಾಗೂ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೇಳಿದ್ರು. ಯತ್ನಾಳ್ ವಿಧಾನಸೌಧದಲ್ಲಿ ಗುಡುಗಿದ್ದು ತಪ್ಪಾ? ಇಲ್ಲಿ ಬಿಜೆಪಿ ಮುಖಂಡರ ಸುಪುತ್ರನ ಕೈವಾಡವಿದೆ ಎಂದು ನೇರವಾಗಿ ಹೇಳಲು ಇಚ್ಛಿಸುತ್ತೇನೆ. ನಿಮ್ಮೆಲ್ಲರ ಮಾತಿಗೆ ಬೆಲೆಕೊಟ್ಟು ವಿಧಾನಸೌಧಕ್ಕೆ ಮುತ್ತಿಗೆ ಹಾಕಲ್ಲ ಅಂತ ಹೇಳಿದ್ದೇನೆ. ನೋಟಿಸ್ ವಾಪಸ್ ಪಡೆಯದಿದ್ದರೆ ವಿಧಾನಸೌದ ಮುತ್ತಿಗೆ ಶತಸಿದ್ಧ ಎಂದು ಸ್ಪಷ್ಟಪಡಿಸಿದರು.