ಬಳ್ಳಾರಿಗೆ ಪ್ರವೇಶ ಇಲ್ಲದ್ದಕ್ಕೆ ಎಲ್‌ಇಡಿ ಮೋದಿ ಜನಾರ್ದನ ರೆಡ್ಡಿ..!

ವಾಹನದಲ್ಲಿ ಬೃಹತ್‌ ಎಲ್‌ಇಡಿ ಪರದೆ ಅಳವಡಿಸಿ ಪ್ರಚಾರ ಆರಂಭಿಸಿದ್ದು, ಬೃಹತ್‌ ಪರದೆಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಲಕ್ಷ್ಮೇಅರುಣಾ ಅವರಿಗೆ ಮತ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. 

Janardhana Reddy Election Campaign Through LED in Ballari grg

ಬಳ್ಳಾರಿ(ಏ.30):  ರಾಜ್ಯ ವಿಧಾನಸಭಾ ಚುನಾವಣೆ ಕಾವು ಪಡೆದುಕೊಳ್ಳುತ್ತಿದ್ದು, ಹೈವೋಲ್ಟೇಜ್‌ ಕ್ಷೇತ್ರ ಎನಿಸಿರುವ ಬಳ್ಳಾರಿ ನಗರದಲ್ಲಿ ವಿವಿಧ ಪಕ್ಷಗಳು ಬಿರುಸಿನ ಪ್ರಚಾರ ನಡೆಸಿವೆ.

ಕಾಂಗ್ರೆಸ್‌ ರಾಹುಲ್‌ ಗಾಂಧಿ ಅವರನ್ನು ಕರೆಸಿ ಪ್ರಚಾರ ನಡೆಸಿದರೆ, ಬಿಜೆಪಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ರಾಷ್ಟ್ರೀಯ ನಾಯಕರನ್ನು ಕರೆಸಿ ತಮ್ಮ ಅಭ್ಯರ್ಥಿ ಪರ ಮತಯಾಚನೆ ಮಾಡುತ್ತಿವೆ. ಆದರೆ, ಬಳ್ಳಾರಿ ಮೂಲದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಸಂಸ್ಥಾಪಕ, ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿ ಪ್ರವೇಶಕ್ಕೆ ನಿರ್ಬಂಧ ಹಿನ್ನೆಲೆಯಲ್ಲಿ ಪಕ್ಷ ಹೊಸದೊಂದು ಪ್ಲಾನ್‌ ಮಾಡಿದೆ. ವಾಹನದಲ್ಲಿ ಬೃಹತ್‌ ಎಲ್‌ಇಡಿ ಪರದೆ ಅಳವಡಿಸಿ ಪ್ರಚಾರ ಆರಂಭಿಸಿದ್ದು, ಬೃಹತ್‌ ಪರದೆಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಲಕ್ಷ್ಮೇಅರುಣಾ ಅವರಿಗೆ ಮತ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಬಹುದಿನಗಳ ಬಳಿಕ ರೆಡ್ಡಿ ಧ್ವನಿ ಆಲಿಸುತ್ತಿರುವ ಬಳ್ಳಾರಿಗರು ಕುತೂಹಲದಿಂದ ರೆಡ್ಡಿ ಭಾಷಣ ಆಲಿಸುತ್ತಿದ್ದಾರೆ. ಇಲ್‌ಇಡಿ ಪರದೆ ಅಳವಡಿಕೆಯ ನಾಲ್ಕು ವಾಹನಗಳು ಬೆಳಗ್ಗೆಯಿಂದಲೇ ನಗರದಲ್ಲಿ ಸಂಚಾರ ಮಾಡುತ್ತಿದ್ದು, ಜನಸಂದಣಿ ಪ್ರದೇಶಗಳಲ್ಲಿ ನಿಲ್ಲಿಸಲಾಗುತ್ತಿದೆ.

ದೇಶ, ರಾಜ್ಯದಲ್ಲಿ ಬಿಜೆಪಿ-ಕಾಂಗ್ರೆಸ್‌ ಪಕ್ಷಗಳ ಹೊಂದಾಣಿಕೆ ರಾಜಕಾರಣ: ಜನಾರ್ದನ ರೆಡ್ಡಿ

ಜನಾರ್ದನ ರೆಡ್ಡಿ ಅವರ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಕೇಳಿದ ಬಳಿಕ ವಾಹನ ಮುಂದಿನ ಪ್ರದೇಶಕ್ಕೆ ತೆರಳಲಿದೆ. ಬಳ್ಳಾರಿ ನೆಲದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ನಮ್ಮ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿಯೇ ಹೈಕಮಾಂಡ್‌. ಅವರೇ ನಮಗೆ ಸ್ಟಾರ್‌ ಪ್ರಚಾರಕರೂ ಆಗಿದ್ದಾರೆ. ಆದರೆ, ಬಳ್ಳಾರಿಗೆ ಬರಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಎಲ್‌ಇಡಿ ಪರದೆ ಅಳವಡಿಕೆಯ ವಾಹನಗಳಲ್ಲಿ ನಿತ್ಯ ಪ್ರಚಾರ ಕೈಗೊಳ್ಳಲಾಗುತ್ತಿದೆ. ನಗರದ ಎಲ್ಲ ಕಡೆ ಪ್ರಚಾರದ ವಾಹನಗಳು ಸಂಚರಿಸುತ್ತಿದ್ದು, ಮತದಾರರಿಗೆ ಪಕ್ಷದ ಪ್ರಣಾಳಿಕೆ, ಬಳ್ಳಾರಿಯ ಅಭಿವೃದ್ಧಿ ಕುರಿತಾದ ಕನಸುಗಳು, ಭವಿಷ್ಯದ ಬಳ್ಳಾರಿ ಬಗೆಗಿನ ಯೋಚನೆ ಹಾಗೂ ಯೋಜನೆಗಳ ಕುರಿತು ಖುದ್ದು ಜನಾರ್ದನ ರೆಡ್ಡಿ ಅವರೇ ತಿಳಿಸುತ್ತಾರೆ. ವಿಶೇಷ ಪ್ರಚಾರ ಕಾರ್ಯಕ್ಕೆ ಉತ್ತಮ ಸ್ಪಂದನೆ ಬಂದಿದೆ ಎನ್ನುತ್ತಾರೆ ಪಕ್ಷದ ಮುಖಂಡ ಬಸವರಾಜ್‌.

ಅಕ್ರಮ ಗಣಿಗಾರಿಕೆ ಆರೋಪ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಚ್‌ ಜನಾರ್ದನ ರೆಡ್ಡಿ ಅವರು ಬಳ್ಳಾರಿಗೆ ಬರಲು ನಿರ್ಬಂಧ ಹೇರಿದೆ. ಹೀಗಾಗಿ ಸ್ವಂತ ಊರಿನಿಂದ ದೂರ ಉಳಿಯಬೇಕಾದ ಸ್ಥಿತಿಯಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿಯೇ ಇದ್ದು ಬಳ್ಳಾರಿ ಹೊರತುಪಡಿಸಿ, ಉಳಿದ ಕಡೆ ಪ್ರಚಾರಕ್ಕೆ ತೆರಳುತ್ತಿದ್ದಾರೆ. ಇತ್ತ ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೇಅರುಣಾ ಅವರು ಪಕ್ಷದ ಕಾರ್ಯಕರ್ತರೊಂದಿಗೆ ನಗರದಲ್ಲಿ ಸುತ್ತಾಡಿ ಮತದಾನಕ್ಕೆ ಮನವಿ ಮಾಡಿಕೊಳ್ಳುತ್ತಿದ್ದು, ಎಲ್‌ಇಡಿ ಪರದೆ ಮೂಲಕ ಜನಾರ್ದನ ರೆಡ್ಡಿ ಅವರ ಭಾಷಣವನ್ನು ಜನರಿಗೆ ಕೇಳಿಸುವುದರಿಂದ ಪಕ್ಷಕ್ಕೆ ಅನುಕೂಲವಾಗಲಿದೆ. ಪಕ್ಷದ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಲಿದೆ ಎಂಬುದು ಪಕ್ಷದ ಮುಖಂಡರ ಲೆಕ್ಕಾಚಾರ.

Latest Videos
Follow Us:
Download App:
  • android
  • ios