ಬಳ್ಳಾರಿ :  ಮಾಜಿ ಸಚಿವ ಜನಾರ್ದನ ರೆಡ್ಡಿ ಇದೀಗ ಆಂಧ್ರಪ್ರದೇಶದ ಚುನಾವಣೆಯತ್ತ ದೃಷ್ಟಿನೆಟ್ಟಿದ್ದಾರೆ ಎನ್ನಲಾಗುತ್ತಿದ್ದು, ತಮ್ಮ ಮಾವ ಪರಮೇಶ್ವರ ರೆಡ್ಡಿ (ಪತ್ನಿ ತಂದೆ) ಅವರನ್ನು ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಗೆ ಸ್ಪರ್ಧೆಗಿಳಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ದಿವಂಗತ ವೈ.ಎಸ್‌. ರಾಜಶೇಖರ ರೆಡ್ಡಿ ಜತೆ ಜನಾರ್ದನ ರೆಡ್ಡಿಗೆ ಆತ್ಮೀಯ ಒಡನಾಟವಿತ್ತು. ವೈಎಸ್ಸಾರ್‌ ವಿಮಾನ ಅಪಘಾತದಲ್ಲಿ ಮೃತಪಟ್ಟಬಳಿಕ, ಅವರ ಪುತ್ರ ವೈ.ಎಸ್‌.ಜಗನ್‌ ಜತೆ ಈ ಒಡನಾಟ ಮುಂದುವರೆದಿತ್ತು. 

ಈ ಹಿನ್ನೆಲೆಯಲ್ಲಿ ವೈಸ್ಸಾರ್‌ ಪಕ್ಷದಿಂದ ಅವರ ಮಾವನನ್ನು ಕಣಕ್ಕಳಿಸುವುದು ಬಹುತೇಕ ಖಚಿತವಾಗಿದೆ. ಮುಂಬರುವ ಲೋಕಸಭಾ ಚುನಾವಣೆಯ ಅಧಿಸೂಚನೆ ಹೊರಬೀಳುವ ವೇಳೆ, ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆ ಘೋಷಣೆಯಾಗಲಿದ್ದು, ಮಾವನ ಮುಖಾಂತರ ಆಂಧ್ರ ರಾಜಕೀಯಕ್ಕೆ ಎಂಟ್ರಿ ಕೊಡಲು ಜನಾರ್ದನ ರೆಡ್ಡಿ ಸಿದ್ಧರಾಗುತ್ತಿದ್ದಾರೆ ಎನ್ನಲಾಗಿದೆ.

ರೆಡ್ಡಿ ಮಾವ ಹಾಗೂ ಅತ್ತೆ ಬಳ್ಳಾರಿಯ ಇನ್ನಾರೆಡ್ಡಿ ಕಾಲೋನಿಯಲ್ಲಿ ವಾಸವಾಗಿದ್ದು, ಮೂಲತಃ ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ನಂದ್ಯಾಲದವರು. ಜನಾರ್ದನ ರೆಡ್ಡಿ ಗಣಿ ಹಾಗೂ ರಾಜಕೀಯದಲ್ಲಿ ಮುನ್ನಲೆಗೆ ಬಂದ ಬಳಿಕ ಬಳ್ಳಾರಿಗೆ ಬಂದು ನೆಲೆಸಿದ್ದಾರೆ.