ಮೇ ಮೊದಲ ವಾರದಲ್ಲಿ ಮುಂಡಗೋಡಕ್ಕೆ ಜನಾರ್ದನ ರೆಡ್ಡಿ; ಪ್ರಚಾರಕ್ಕೆ ಭರ್ಜರಿ ಸಿದ್ಧತೆ!
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೇ ಮೊದಲ ವಾರದಲ್ಲಿ ಗಾಲಿ ಜನಾರ್ದನ ರೆಡ್ಡಿ ಮುಂಡಗೋಡ ತಾಲೂಕಿಗೆ ಪ್ರಚಾರಕ್ಕೆ ಆಗಮಿಸಲಿದ್ದಾರೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಯಲ್ಲಾಪುರ ಕ್ಷೇತ್ರದ ಅಭ್ಯರ್ಥಿ ಸಂತೋಷ ರಾಯ್ಕರ ತಿಳಿಸಿದರು.
ಕಾರವಾರ (ಏ.26) : ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೇ ಮೊದಲ ವಾರದಲ್ಲಿ ಗಾಲಿ ಜನಾರ್ದನ ರೆಡ್ಡಿ ಮುಂಡಗೋಡ ತಾಲೂಕಿಗೆ ಪ್ರಚಾರಕ್ಕೆ ಆಗಮಿಸಲಿದ್ದಾರೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಯಲ್ಲಾಪುರ ಕ್ಷೇತ್ರದ ಅಭ್ಯರ್ಥಿ ಸಂತೋಷ ರಾಯ್ಕರ ತಿಳಿಸಿದರು.
ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2-3ದಿನದಲ್ಲಿ ರೆಡ್ಡಿ ಬರುವ ದಿನಾಂಕ ನಿಗದಿಯಾಗಲಿದೆ. ಯಲ್ಲಾಪುರ ಹಾಗೂ ಮುಂಡಗೋಡ ಎರಡೂ ಕಡೆ ಕಾರ್ಯಕ್ರಮ ಆಯೋಜಿಸುವ ಉದ್ದೇಶವಿತ್ತು. ಆದರೆ ಸಮಯಾವಕಾಶ ಕಡಿಮೆ ಇರುವ ಕಾರಣ ಮುಂಡಗೋಡಿನಲ್ಲಿ ಮಾತ್ರ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.
ಅಭಿವೃದ್ಧಿಗೆ ಒತ್ತು ಕೊಟ್ಟು ರಾಜಕೀಯಕ್ಕೆ ಬಂದಿದ್ದೇನೆ: ಕಾಂಗ್ರೆಸ್ ವಿರುದ್ಧ ರೆಡ್ಡಿ ವಾಗ್ದಾಳಿ
ಜನಾರ್ದನ ರೆಡ್ಡಿ ಹೊಸದಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿದ್ದಾರೆ. ಹೀಗಾಗಿ ರಾಜ್ಯದಲ್ಲಿ 50 ಜನರಿಗೆ ಟಿಕೆಟ್ ನೀಡಿದ್ದು, ಜಿಲ್ಲೆಯಲ್ಲಿ ಸಮೀಕ್ಷೆ ವೇಳೆ ಈ ಕ್ಷೇತ್ರಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಯಲ್ಲಾಪುರ ಕ್ಷೇತ್ರಕ್ಕೆ ಮಾತ್ರ ಟಿಕೆಟ್ ನೀಡಲಾಗಿದೆ. ಮುಂದಿನ ಚುನಾವಣೆ ವೇಳೆಗೆ ಪಕ್ಷ ಸಂಘಟನೆ ಮಾಡಿಕೊಂಡು ಆರೂ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಪಕ್ಷ ಬೆಳಸುತ್ತೇವೆ ಎಂದು ಹೇಳಿದರು.
ಮುಂಡಗೋಡ ತಾಲೂಕು ಅಧ್ಯಕ್ಷ ತುಕಾರಾಮ ಗುಡ್ಕರ ಮಾತನಾಡಿ, ಜೆಡಿಎಸ್‌ನಿಂದ ಸಂತೋಷ ರಾಯ್ಕರ ಅವರಿಗೆ ಟಿಕೆಟ್ ನೀಡುತ್ತೇವೆ ಎಂದು ಭರವಸೆ ನೀಡಿ ಕೊನೆಯ ಕ್ಷಣದಲ್ಲಿ ಅನ್ಯಾಯ ಮಾಡಲಾಗಿದೆ. ಪ್ರತಿ ಚುನಾವಣೆಯಲ್ಲೂ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ ಹೊರಗಿನ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುತ್ತಿದೆ. ಇದರಿಂದ ಬೇಸರಗೊಂಡು ಜನಾರ್ದನ ರೆಡ್ಡಿ ಪಕ್ಷ ಸೇರ್ಪಡೆಗೊಂಡಿದ್ದು, ಸಂತೋಷ ಈ ಬಾರಿ ಗೆಲವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜನಾರ್ದನರೆಡ್ಡಿ ಪತ್ನಿ ₹200 ಕೋಟಿ ಒಡತಿ, ರೆಡ್ಡಿ ಆಸ್ತಿ ₹44 ಕೋಟಿ!
ಸುದ್ದಿಗೋಷ್ಠಿಯಲ್ಲಿ ಸಂದೇಶ ರಾಯ್ಕರ, ಅಝರ್ ಶೇಖ್, ಅಬ್ದುಲ್ ಹಿಸಾಕ್, ದೀಪಾ ರೇವಣಕರ, ಬಸವರಾಜ ಮೊದಲಾದವರು ಇದ್ದರು. ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.