ಬಿಜೆಪಿ ಪಾದಯಾತ್ರೆಗೆ ಜನಾಂದೋಲನ ತಕ್ಕ ಉತ್ತರ: ಸಚಿವ ಎಂ.ಬಿ.ಪಾಟೀಲ್‌

ಬಿಜೆಪಿಯವರು ಪಾದಯಾತ್ರೆಯಲ್ಲಿ ಸುಳ್ಳು ಪ್ರಚಾರ ಮಾಡಿದ್ದರು. ಜನಾಂದೋಲನ ಮೂಲಕ ಅದಕ್ಕೆ ತಕ್ಕ ಉತ್ತರ ನೀಡಿದ್ದೇವೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಸಚಿವ ಎಂ.ಬಿ.ಪಾಟೀಲ ಹೇಳಿದರು. 

Janandolana is the right answer to BJPs Padayatre Says Minister MB Patil gvd

ವಿಜಯಪುರ (ಆ.12): ಬಿಜೆಪಿಯವರು ಪಾದಯಾತ್ರೆಯಲ್ಲಿ ಸುಳ್ಳು ಪ್ರಚಾರ ಮಾಡಿದ್ದರು. ಜನಾಂದೋಲನ ಮೂಲಕ ಅದಕ್ಕೆ ತಕ್ಕ ಉತ್ತರ ನೀಡಿದ್ದೇವೆ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಸಚಿವ ಎಂ.ಬಿ.ಪಾಟೀಲ ಹೇಳಿದರು. ನಗರದಲ್ಲಿ ಕಾಂಗ್ರೆಸ್‌ ಸರ್ಕಾರ ಹಾಗೂ ಸಿಎಂ ವಿರುದ್ಧ ಬಿಜೆಪಿ ಪಾದಯಾತ್ರೆ ಮಾಡಿರೋ ವಿಚಾರಕ್ಕೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ವಿರುದ್ಧವಾಗಿ ನಾವು ಜನಾಂದೋಲನ ಕಾರ್ಯಕ್ರಮ ಮಾಡಿದ್ದೇವೆ. ಐತಿಹಾಸಿಕ ಜನಾಂದೋಲನ‌ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಸಾಕ್ಷಿಯಾಗಿದ್ದರು ಎಂದರು. ಬಿಜೆಪಿಯಲ್ಲಿ 20 ಬಣಗಳಿವೆ. ಆರ್.ಅಶೋಕ ಬಣ, ವಿಜಯೇಂದ್ರ ಬಣ, ಪ್ರಹ್ಲಾದ ಜೋಶಿ ಬಣ, ಸಂತೋಷ‌ ಬಣ, ಅಶ್ವಥನಾರಾಯಣ ಬಣ, ಯತ್ನಾಳ-ಜಾರಕಿಹೋಳಿ ಬಣ, ಸಿ.ಟಿ.ರವಿ ಬಣ ಹೀಗೆ ಸಾಕಷ್ಟು ಬಣಗಳಿವೆ. 

ಒಂದೊಂದು ಬಣ ಪಾದಯಾತ್ರೆ ಮಾಡಲಿ ಎಂದು ವ್ಯಂಗ್ಯವಾಡಿದರು. ಮುಡಾ ಹಾಗೂ ವಾಲ್ಮೀಕಿ‌ ನಿಗಮದಲ್ಲಿ ಹಣ ದುರುಪಯೋಗ ಆಗಿದೆಂದು ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಬಿಜೆಪಿ-ಜೆಡಿಎಸ್ ಆರೋಪ‌ ವಿಚಾರವಾಗಿ ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ಕೊರೋನಾದ ₹2 ಸಾವಿರ ಕೋಟಿ ಹಣ ದುರುಪಯೋಗ, ಮಾರಿಷಸ್‌ನಲ್ಲಿ ₹10,000 ಕೋಟಿ ಇಟ್ಟಿರೋ ಹಗರಣ, ಭೋವಿ ನಿಗಮದ ಹಗರಣ, ತಾಂಡಾ ನಿಗಮದ ಹಗರಣ, ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ಹಗರಣ, ಇಂತಹ 20 ಹಗರಣಗಳ ಕುರಿತು ಬಿಜೆಪಿಯವರು ಪಾದಯಾತ್ರೆ ಮಾಡಲಿ ಎಂದು ಸವಾಲ ಹಾಕಿದರು.

ದೇವರಾಜು ಅರಸು ನಂತರದ ಮೇಧಾವಿ ರಾಜಕಾರಣಿ ಸಿದ್ದರಾಮಯ್ಯ: ಸಚಿವ ಎಂ.ಬಿ.ಪಾಟೀಲ್

ಜೈನ್, ಸಿಖ್ ಧರ್ಮದಂತೆ ಮೀಸಲಾತಿ ಸಿಗಬೇಕು: ಹಿಂದು ಧರ್ಮ‌ ಬೇರೆ, ಲಿಂಗಾಯತ ಧರ್ಮ ಬೇರೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವೀರಶೈವ ಮಹಾಸಭಾದವರು ಈ ಕುರಿತು ದಾವಣಗೆರೆಯಲ್ಲಿ ನಿರ್ಣಯ ತೆಗೆದುಕೊಂಡಿದ್ದಾರೆ. ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಯಿಸಲು ಹಾಗೂ ಜಾತಿ ಕಾಲಂನಲ್ಲಿ ಜಾತಿಯ ಹೆಸರು ಬರೆಸಲು ತೀರ್ಮಾನಿಸಿದ್ದಾರೆ. ಈ‌ ಕುರಿತು ನಾನು ಮಾತನಾಡಲ್ಲ ಎಂದರು. ಜೈನ್, ಸಿಖ್ ಧರ್ಮದ ಪ್ರಕಾರ ನಮಗೂ ಎಲ್ಲ ಸೂಕ್ತ ಸ್ಥಾನಮಾನಗಳು, ಮೀಸಲಾತಿಗಳು ಸಿಗಬೇಕು. ನಾನು ಈ ಹಿಂದೆ ಲಿಂಗಾಯತ ಧರ್ಮದ ವಿಚಾರ ಮಾಡಿದಾಗ ಮಹಾಸಭಾದವರೇ ಟೀಕೆ ಮಾಡಿದ್ದರು. 

ಈಗ ಧರ್ಮದ ಕುರಿತು ಮಹಾಸಭಾದವರು, ಧಾರ್ಮಿಕ ಮುಖಂಡರು, ಇತರರು ನಿರ್ಧಾರ ಮಾಡುತ್ತಾರೆ. ಈ ಕುರಿತು ನಾನು ಹೆಚ್ಚು ಮಾತನಾಡಲ್ಲ. ಕಾರಣ ಇದಕ್ಕೆ ರಾಜಕೀಯ ಬಣ್ಣ ಕೊಡುತ್ತಾರೆ. ಲಿಂಗಾಯತ ಎಲ್ಲ ಉಪ‌ಪಂಗಡಗಳಿಗೆ ರಾಜ್ಯ ಹಾಗೂ ಕೇಂದ್ರದಲ್ಲಿ ಮೀಸಲಾತಿ ಸಿಗಬೇಕು ಎಂದು ತಿಳಿಸಿದರು. ಒಕ್ಕಲಿಗರಿಗೆ ಸಿಕ್ಕ‌ ಮಾದರಿಯಲ್ಲಿ ಒಂದೇ ಸೂರಿನಡಿ ನಮಗೂ ಸಿಗಬೇಕು. ಒಕ್ಕಲಿಗರಿಗೆ ಸಿಕ್ಕಿದ್ದು ತಪ್ಪಲ್ಲ. ಅದಕ್ಕೆ ನಮ್ಮ‌ ವಿರೋಧವಿಲ್ಲ. ಸಿಖ್ ಹಾಗೂ ಜೈನ್ ಸಮುದಾಯದ ಮಾದರಿಯಲ್ಲಿ ರಾಜ್ಯ ಹಾಗೂ ಕೇಂದ್ರ ಎರಡರಲ್ಲೂ ಸಿಗಬೇಕು. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಅವಕಾಶಗಳು ಸಿಗುತ್ತಿದ್ದವು. ಕೆಪಿಎಸ್ಸಿ, ಯುಪಿಎಸ್ಸಿ,‌ ಮೆಡಿಕಲ್ ಹಾಗೂ ಇತರೆಡೆ ಅವಕಾಶ ಸಿಗುತ್ತಿದ್ದವು. ಆದರೆ, ಎಲ್ಲೊಂದು ಕಡೆ ಲಿಂಗಾಯತ ಧರ್ಮದ ಕುರಿತು ಜನರು ಅರ್ಥೈಸಿಕೊಳ್ಳಲಿಲ್ಲ ಎಂದು ತಿಳಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ 3 ಕುಟುಂಬಗಳ ಆಸ್ತಿ ಎಂಬ ಯತ್ನಾಳ ಆರೋಪಕ್ಕೆ ನಾನು ಉತ್ತರಿಸಲ್ಲ ಎಂದು ಸ್ಪಷ್ಟಪಡಿಸಿದರು. ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಆ ಕುರಿತು ಮಾತನಾಡಲ್ಲ. ನಮ್ಮ‌ ಅಜ್ಜ ಶಿರಸಂಗಿ ಲಿಂಗರಾಜ ಪ್ರಥಮ‌ ಅಧ್ಯಕ್ಷರಾಗಿದ್ದರು. ಫೌಂಡಿಂಗ್ ಪ್ರೆಸಿಡೆಂಟ್ ಆಗಿದ್ದರು. 2ನೇ ಬಾರಿಯೂ ಶಿರಸಂಗಿ ಲಿಂಗರಾಜರೇ ಅಧ್ಯಕ್ಷರಾಗಿದ್ದರು. ಆದರೂ ಸಹ ಅದರ ಕಡೆ ನಾವು ತಿರುಗಿ ನೋಡಿಲ್ಲ. ಅವರು ಮಾಡಿಕೊಂಡು‌ ಹೋಗುತ್ತಿದ್ದಾರೆ. ಎಲ್ಲರ ಹೊಂದಾಣಿಕೆ ಮಾಡಿಕೊಂಡು ಹೋಗಲಿ, ಒಳ್ಳೆಯದಾಗಲಿ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ವಿಚಾರದಲ್ಲಿ ಹಸ್ತಕ್ಷೇಪ ಮಾಡಲ್ಲ ಎಂದರು.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮೇಲಿನ ಪೋಕ್ಸೋ ಪ್ರಕರಣದಲ್ಲಿ ತಡೆಯಾಜ್ಞೆ ತೆರವು ಮಾಡಲು ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂಬ ವಿಚಾರ ಕುರಿತು ಮಾತನಾಡಲು ಇಚ್ಚಿಸದ ಅವರು, ನಾನು‌ ವೈಯುಕ್ತಿಕವಾಗಿ ಮಾತನಾಡಲ್ಲ. ತನಿಖೆಯಲ್ಲಿ ನಿರ್ಣಯವಾಗುತ್ತದೆ. ಈ‌ ವಿಚಾರದಲ್ಲಿ‌ ಗೃಹ ಸಚಿವರು ಸೂಚನೆ ನೀಡಿದ್ದಾರೆಂಬ ವಿಚಾರಕ್ಕೆ ಉತ್ತರಿಸಿದ ಅವರು ಈ ವಿಚಾರ ನನಗೆ ಗೊತ್ತಿಲ್ಲ. ಕಾನೂನು ಪ್ರಕಾರ ಕ್ರಮ ಹಾಗೂ ನಿರ್ಧಾರ ಆಗುತ್ತದೆ. ಪೋಕ್ಸೋ‌ ಕಠಿಣ ಕಾನೂನು ಎಂದು ತಿಳಿಸಿದರು.

ಮರುಬಳಕೆ ಇಂಧನ ಉತ್ಪಾದನೆಗೆ ಆದ್ಯತೆ: ಸಚಿವ ಎಂ‌.ಬಿ.ಪಾಟೀಲ್

ಜೈನ್, ಸಿಖ್ ಧರ್ಮದ ಪ್ರಕಾರ ನಮಗೂ ಎಲ್ಲ ಸೂಕ್ತ ಸ್ಥಾನಮಾನಗಳು, ಮೀಸಲಾತಿಗಳು ಸಿಗಬೇಕು. ನಾನು ಈ ಹಿಂದೆ ಲಿಂಗಾಯತ ಧರ್ಮದ ವಿಚಾರ ಮಾಡಿದಾಗ ಮಹಾಸಭಾದವರೇ ಟೀಕೆ ಮಾಡಿದ್ದರು. ಈಗ ಧರ್ಮದ ಕುರಿತು ಮಹಾಸಭಾದವರು, ಧಾರ್ಮಿಕ ಮುಖಂಡರು, ಇತರರು ನಿರ್ಧಾರ ಮಾಡುತ್ತಾರೆ. ಈ ಕುರಿತು ನಾನು ಹೆಚ್ಚು ಮಾತನಾಡಲ್ಲ. ಕಾರಣ ಇದಕ್ಕೆ ರಾಜಕೀಯ ಬಣ್ಣ ಕೊಡುತ್ತಾರೆ. ಲಿಂಗಾಯತ ಎಲ್ಲ ಉಪ‌ಪಂಗಡಗಳಿಗೆ ರಾಜ್ಯ ಹಾಗೂ ಕೇಂದ್ರದಲ್ಲಿ ಮೀಸಲಾತಿ ಸಿಗಬೇಕು.
-ಎಂ.ಬಿ.ಪಾಟೀಲ, ಸಚಿವರು.

Latest Videos
Follow Us:
Download App:
  • android
  • ios