ರಾಜ್ಯ ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ಏಷ್ಯಾನೆಟ್‌ ನ್ಯೂಸ್‌ ಡಿಜಿಟಲ್‌ ಸರ್ವೇ ಮೂಲಕ ಜನರ ಮನದಾಳವನ್ನು ತಿಳಿಯುವ ಪ್ರಯತ್ನ ಮಾಡಿದೆ. ವಿವಿಧ ವಿಚಾರಗಳು, ಮುಂಬರುವ ಚುನಾವಣೆಯಲ್ಲಿ ಯಾವೆಲ್ಲಾ ವಿಚಾರಗಳು ಪ್ರಮುಖವಾಗಲಿವೆ ಎನ್ನುವ ಕುರಿತು ಜನರ ಮನದಾಳವನ್ನು ತಿಳಿಯುವ ಪ್ರಯತ್ನ ಮಾಡಿದೆ. 

ಬೆಂಗಳೂರು (ಏ.21): ರಾಜ್ಯ ವಿಧಾನಸಭೆ ಚುನಾವಣೆಗೆ ಹೆಚ್ಚಿನ ದಿನ ಉಳಿದಿಲ್ಲ. ಈಗಾಗಲೇ ಎಲ್ಲಾ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಫೈನಲ್‌ ಮಾಡಿ ನಾಮಪತ್ರವನ್ನೂ ಸಲ್ಲಿಸಿವೆ. ಇನ್ನೇನು ನಾಮಪತ್ರ ಪರಿಶೀಲನೆಯಾಗಿ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳು ಅಂತಿಮವಾಗಲಿದ್ದಾರೆ. ಇದರ ನಡುವೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಇತ್ತೀಚೆಗೆ ಜನ್‌ ಕೀ ಬಾತ್‌ ಸಮೀಕ್ಷೆಯ ಮೂಲಕ ರಾಜ್ಯದ ಜನರ ನಾಡಿಮಿಡಿತವನ್ನು ಚುನಾವಣಾ ಲೆಕ್ಕಾಚಾರದಲ್ಲಿ ತಿಳಿಯುವ ಪ್ರಯತ್ನ ಮಾಡಿತ್ತು. ಅದರಂತೆ ಈ ಬಾರಿಯೂ ಅತಂತ್ರ ವಿಧಾನಸಭೆ ನಿರ್ಮಾಣವಾಗುವುದು ಖಚಿತವಾಗಿದೆ. ಇನ್ನೊಂದೆಡೆ ಏಷ್ಯಾನೆಟ್‌ ನ್ಯೂಸ್‌ ಡಿಜಿಟಲ್‌ ಸರ್ವೇ ಕೂಡ ನಡೆಸಿದ್ದು, ವಿವಿಧ ವಿಚಾರಗಳಲ್ಲಿ ರಾಜ್ಯದ ಜನರ ಆಲೋಚನೆಗಳನ್ನು ತಿಳಿಯುವ ಪ್ರಯತ್ನ ಮಾಡಿದೆ. ಮಾರ್ಚ್‌ 29 ರಿಂದ ಏಪ್ರಿಲ್‌ 20ರವರೆಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಕನ್ನಡ ಹಾಗೂ ಏಷ್ಯಾನೆಟ್‌ ನ್ಯೂಸ್‌ ಇಂಗ್ಲೀಷ್ ವೆಬ್‌ಸೈಟ್‌ನಲ್ಲಿ ನಡೆಸಿದ ಆನ್‌ಲೈನ್‌ ಸಮೀಕ್ಷೆಯಲ್ಲಿ ಚುನಾವಣೆಗೆ ಸಂಬಂಧಪಟ್ಟ 10 ಪ್ರಶ್ನೆಗಳನ್ನು ಕೇಳಲಾಗಿತ್ತು. ಪ್ರಸ್ತುತ ಕರ್ನಾಟಕ ಸರ್ಕಾರದ ಬಗ್ಗೆ ನೀವೆಷ್ಟು ಖುಷಿಯಾಗಿದ್ದೀರಿ? ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೇ ಇದ್ದಲ್ಲಿ ಕರ್ನಾಟಕಕ್ಕೆ ಯಾವ ಪಕ್ಷಗಳ ಮೈತ್ರಿ ಸರ್ಕಾರ ಒಳ್ಳೆಯದು ಎನ್ನುವ ವಿಚಾರದಲ್ಲಿ ಜನ ತಮ್ಮ ಸ್ಪಷ್ಟ ಮನಸ್ಸಿನ ಅಭಿಪ್ರಾಯ ನೀಡಿದ್ದಾರೆ.

ಕಾಂಗ್ರೆಸ್‌ ಚುನಾವಣೆಗೆ ಈಗಾಗಲೇ ಸ್ಟಾರ್‌ ಪ್ರಚಾರಕರ ಪಟ್ಟಿಯನ್ನು ಪ್ರಕಟಿಸಿದೆ. ಮಾಜಿ ಸಂಸದ ರಾಹುಲ್‌ ಗಾಂಧಿ ಕೂಡ ಇದರಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ, ಜನಮತ ಸಮೀಕ್ಷೆಯಲ್ಲಿ ಇದೇ ವಿಚಾರ ಕಾಂಗ್ರೆಸ್‌ಗೆ ಹಿನ್ನಡೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಬಾರಿಯ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ಪ್ರಚಾರ ನಡೆಸಿದ್ದಲ್ಲಿ ಕಾಂಗ್ರೆಸ್‌ಗೆ ಅನುಕೂಲವಾಗಲಿದೆಯೇ ಎನ್ನುವ ಪ್ರಶ್ನೆಯನ್ನು ವೆಬ್‌ಸೈಟ್‌ನಲ್ಲಿ ಕೇಳಲಾಗಿತ್ತು. ಇದರಲ್ಲಿ ಶೇ.10ರಷ್ಟು ಮಂದಿ ಕಾಂಗ್ರೆಸ್‌ಗೆ ಅನುಕೂಲವಾಗಲಿದೆ ಎಂದಿದ್ದರೆ, ಬರೋಬ್ಬರಿ ಶೇ.69ರಷ್ಟು ಮಂದಿ ರಾಹುಲ್‌ ಗಾಂಧಿ ಕಾಂಗ್ರೆಸ್‌ ಪರವಾಗಿ ಪ್ರಚಾರಕ್ಕೆ ಬಂದರೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಹೇಳಿದ್ದಾರೆ. ಇನ್ನು ಶೇ.13ರಷ್ಟು ಮಂದಿ ಸ್ವಲ್ಪ ಪ್ರಮಾಣದಲ್ಲಿ ಇದು ಕಾಂಗ್ರೆಸ್ ಪಕ್ಷಕ್ಕೆ ಹೊಡೆತ ನೀಡಲಿದೆ ಎಂದಿದ್ದರೆ, ಶೇ.8ರಷ್ಟು ಮಂದಿ ಈ ವಿಚಾರದಲ್ಲಿ ಏನೂ ಹೇಳಲು ನಿರಾಕರಿಸಿದ್ದಾರೆ.

ಇನ್ನು ಇಂಗ್ಲೀಷ್‌ ವೆಬ್‌ಸೈಟ್‌ನಲ್ಲಿ ಈ ಪ್ರಶ್ನೆಗೆ ಇದೇ ರೀತಿಯ ಅಭಿಪ್ರಾಯ ವ್ಯಕ್ತವಾಗಿದೆ. ಶೇ. 50 ರಷ್ಟು ಮಂದಿ ರಾಹುಲ್‌ ಗಾಂಧಿ ಕಾಂಗ್ರೆಸ್‌ ಪರ ಪ್ರಚಾರಕ್ಕೆ ಹೋಗದೇ ಇದ್ದರೆ ಒಳ್ಳೆಯದು ಎಂದಿದ್ದಾರೆ. ಶೇ.31ರಷ್ಟು ಮಂದಿ ರಾಹುಲ್‌ ಗಾಂಧಿ ಕರ್ನಾಟಕದಲ್ಲಿ ಪ್ರಚಾರಕ್ಕೆ ಹೋದರೆ ಕಾಂಗ್ರೆಸ್‌ಗೆ ಅನುಕೂಲವಾಗಲಿದೆ ಎಂದಿದ್ದರೆ, ಶೇ. 12ರಷ್ಟು ಮಂದಿ ಇದು ಕಾಂಗ್ರೆಸ್‌ ಪಕ್ಷಕ್ಕೆ ಸ್ವಲ್ಪ ಪ್ರಮಾಣದಲ್ಲಿ ಅನುಕೂಲ ನೀಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ. 6 ರಷ್ಟು ಮಂದಿ ಈ ವಿಚಾರದಲ್ಲಿ ಏನನ್ನೂ ಹೇಳೋಕೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

;ಯಾವ ಪಕ್ಷಕ್ಕೂ ಬಹುಮತ ಬಾರದಿದ್ದಲ್ಲಿ, ಯಾವ ಮೈತ್ರಿಕೂಟದ ಸರ್ಕಾರ ರಚನೆಯಾಗಬೇಕು..?' ಎನ್ನುವ ಪ್ರಶ್ನೆಯನ್ನೂ ವೆಬ್‌ಸೈಟ್‌ನಲ್ಲಿ ಕೇಳಲಾಗಿತ್ತು. ಕನ್ನಡ ವೆಬ್‌ಸೈಟ್‌ನಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಗೆ ಶೇ. 44ರಷ್ಟು ಒಲವು ತೋರಿದ್ದಾರೆ. ಅದರರ್ಥ ಹಾಗೇನಾದರೂ ಅತಂತ್ರ ವಿಧಾನಸಭೆ ರಚನೆಯಾದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಶೇ. 20ರಷ್ಟು ಮಾತ್ರವೇ ಒಲವು ಬಂದಿದೆ. ಶೇ. 35ರಷ್ಟು ಮಂದಿ ಈ ವಿಚಾರದಲ್ಲಿ ತಮ್ಮ ಅಭಿಪ್ರಾಯ ನೀಡಿಲ್ಲ.

JanaMata: ಮೋದಿಯಿದ್ರೆ ಮಾತ್ರ ಬಿಜೆಪಿಗೆ ಬಹುಪರಾಕ್‌, ಇಲ್ದಿದ್ರೆ ಫುಲ್‌ ವೀಕ್‌!

ಆದರೆ, ಇಂಗ್ಲೀಷ್‌ ವೆಬ್‌ಸೈಟ್‌ನಲ್ಲಿ ಕೊಂಚ ಭಿನ್ನವಾದ ಅಭಿಪ್ರಾಯ ವ್ಯಕ್ತವಾಗಿದೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಪರವಾಗಿ ಶೇ. 41ರಷ್ಟು ಒಲವು ತೋರಿದ್ದರೆ, ಬಿಜೆಪಿ-ಜೆಡಿಎಸ್‌ ಮೈತ್ರಿಗೆ ಶೇ.37ರಷ್ಟು ಒಲವು ತೋರಿದ್ದಾರೆ. ಶೇ. 22ರಷ್ಟು ಮಂದಿ ಈ ವಿಚಾರದಲ್ಲಿ ಏನನ್ನೂ ಹೇಳಲಾಗದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

JanaMata: ಬಿಜೆಪಿಗೆ ಮೀಸಲಾತಿ ನಿರ್ಧಾರವೇ ಇಂಜಿನ್‌, ಉಳಿದವು ಬರೀ ಕರಪ್ಷನ್‌!

ಕರ್ನಾಟಕದ ಅಭಿವೃದ್ಧಿಗೆ ಡಬಲ್ ಎಂಜಿನ್ ಸರ್ಕಾರ ಕೆಲಸ ಮಾಡಿದೆಯೇ..? ಎನ್ನುವ ಪ್ರಶ್ನೆಗೆ ಕನ್ನಡ ವೆಬ್‌ಸೈಟ್‌ನಲ್ಲಿ ಶೇ. 52ರಷ್ಟು ಮಂದಿ ಹೌದು ಎಂದು ಹೇಳಿದ್ದರೆ, ಶೇ. 29ರಷ್ಟು ಮಂದಿ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ. 14 ರಂದು ಮಂದಿ ಆಗಿರಬಹುದು ಅದು ಕಾಣುತ್ತಿಲ್ಲ ಎಂದಿದ್ದಾರೆ. ಶೇ. 5ರಷ್ಟು ಮಂದಿ ಇದನ್ನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಇದೇ ಪ್ರಶ್ನೆಗೆ ಇಂಗ್ಲೀಷ್‌ ವೆಬ್‌ ಸೈಟ್‌ನಲ್ಲಿ ಶೇ. 44 ಮಂದಿ ಹೌದು ಎಂದು ಹೇಳಿದ್ದರೆ. ಶೇ. 39ರಷ್ಟು ಮಂದಿ ಇಲ್ಲ ಎಂದಿದ್ದಾರೆ. ಇನ್ನು ಶೇ. 10ರಷ್ಟು ಮಂದಿ ಕೆಲಸ ಮಾಡಿರಬಹುದು ಆದರೆ ಅದು ಕಾಣುತ್ತಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ. 7ರಷ್ಟು ಮಂದಿ ಇದು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.


ಗಮನಕ್ಕೆ: ಇದು ವೈಜ್ಞಾನಿಕವಾಗಿ ಮಾಡಿರುವ ಸಮೀಕ್ಷೆಯಲ್ಲ. ಇಲ್ಲಿ ಪ್ರತಿಕ್ರಿಯಿಸಿದ ಶೇಕಡಾ 48 ರಷ್ಟು ಜನರು ಕರ್ನಾಟಕದವರಲ್ಲ. ಹಾಗಾಗಿ ಹೆಚ್ಚಿನವರು ಇಲ್ಲಿ ಮತದಾರರಲ್ಲ. ಇಂಗ್ಲೀಷ್‌ನಲ್ಲಿ ಬಂದಿರುವ ಉತ್ತರಗಳು ಹಾಗೂ ಕನ್ನಡದಲ್ಲಿ ಬಂದಿರುವ ಉತ್ತರಗಳಿಗಿಂದ ಭಿನ್ನವಾಗಿರುತ್ತದೆ. ಕನ್ನಡದಲ್ಲಿ ಉತ್ತರಗಳು ರಾಜ್ಯದಲ್ಲಿನ ನೈಜ ಪರಿಸ್ಥಿತಿಗೆ ಹತ್ತಿರವಾಗಬಹುದು.