ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಜನ್‌ಕಿ ಬಾತ್ ಸಮೀಕ್ಷಾ ವರದಿ ಪ್ರಕಟಗೊಂಡಿದೆ. ಬಿಜೆಪಿ 98 ರಿಂದ 107 ಸ್ಥಾನ ಗೆಲ್ಲುವ ಮೂಲಕ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಸಮೀಕ್ಷೆ ಹೇಳುತ್ತಿದೆ. ಆದರೆ ಮತ ಹಂಚಿಕೆ ಶೇಕಡವಾರು ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ.

ಬೆಂಗಳೂರು(ಏ.14) ಈ ಬಾರಿಯ ವಿಧಾನಸಭಾ ಚುನಾವಣೆ ಜಿದ್ದಾಜಿದ್ದಿನ ಕದನವಾಗಿದೆ. ಅಧಿಕಾರ ಹಿಡಿಯಲು ಮೂರು ಪಕ್ಷಗಳ ಪೈಪೋಟಿ ಜೋರಾಗಿದೆ. ಹಿಂದೆಂದು ಕಾಣದಂತ ಸ್ಪರ್ಧೆ ಏರ್ಪಟ್ಟಿದೆ. ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಜನ್‌ಕಿ ಬಾತ್ ನಡೆಸಿದ ಅತೀ ದೊಡ್ಡ ಸಮೀಕ್ಷಾ ವರದಿ ಪ್ರಕಟಗೊಂಡಿದೆ. ವರದಿ ಪ್ರಕಾರ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಆದರೆ ವಿಧಾಸಭೆ ಅತಂತ್ರ ಅನ್ನೋ ತೀರ್ಪನ್ನು ಮತದಾರರು ನೀಡಿದ್ದಾರೆ. ಸ್ಥಾನಗಳ ಪೈಕಿ ಬಿಜೆಪಿ ಅತೀ ದೊಡ್ಡ ಪಕ್ಷವಾದರೆ, ವೋಟ್ ಶೇರಿಂಗ್‌ನಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿದೆ. ಈ ಬಾರಿ ಕಾಂಗ್ರೆಸ್ ಶೇಕಡಾ 38 ರಿಂದ 40 ರಷ್ಟು ವೋಟ್ ಶೇರಿಂಗ್ ಪಡೆದುಕೊಳ್ಳಲಿದೆ ಎಂದು ಜನ್‌ಕಿ ಬಾತ್ ಸುವರ್ಣನ್ಯೂಸ್ ಸಮೀಕ್ಷೆ ಹೇಳಿದೆ.

ಬರೋಬ್ಬರಿ 20,000 ಮತದಾರರಿಂದ ಅಭಿಪ್ರಾಯ ಸಂಗ್ರಹಿಸಿ ಸಮೀಕ್ಷಾ ವರದಿ ಪ್ರಕಟಿಸಲಾಗಿದೆ. ಮಾರ್ಚ್ 15 ರಿಂದ ಎಪ್ರಿಲ್ 11ರ ವರೆಗೆ ಜನರ ಅಭಿಪ್ರಾಯ ಸಂಗ್ರಹಿಸಿ ಈ ವರದಿ ನೀಡಲಾಗಿದೆ. ವೋಟ್‌ಶೇರಿಂಗ್‌ನಲ್ಲಿ ಕಾಂಗ್ರೆಸ್ ಮೊದಲ ಸ್ಥಾನ ಪಡೆದುಕೊಂಡಿದೆ. ಇನ್ನು ಬಿಜೆಪಿ ಎರಡನೇ ಸ್ಥಾನದಲ್ಲಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವೋಟ್‌ಶೇರಿಂಗ್ ಶೇಕಡಾ 37 ರಿಂದ 39. ಇನ್ನು ಗೆದ್ದೇಗೆಲ್ಲುತ್ತೇವೆ ಎಂಬ ಉತ್ಸಾಹದಲ್ಲಿರುವ ಜೆಡಿಎಸ್ ಈ ಬಾರಿ ಶೇಕಡಾ 16 ರಿಂದ 18 ರಷ್ಟು ವೋಟ್‌ಶೇರಿಂಗ್ ಪಡೆದುಕೊಳ್ಳಲಿದೆ. ಇತರರ ಶೇಕಡಾ 5 ರಿಂದ 7 ರಷ್ಟು ವೋಟ್ ಶೇರ್ ಪಡೆದುಕೊಳ್ಳಲಿದ್ದಾರೆ.

Jan Ki Baat Suvarna News Survey: ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿಗೆ ಕಾಂಗ್ರೆಸ್ ಠಕ್ಕರ್, ಯಾರಿಗೆ ಎಷ್ಟು ಸ್ಥಾನ?

ಜನ್‌ ಕಿ ಬಾತ್ ಸುವರ್ಣ ಸಮೀಕ್ಷೆ(ವೋಟ್ ಶೇರಿಂಗ್)
ಕಾಂಗ್ರೆಸ್: 38 ರಿಂದ 40 %
ಬಿಜೆಪಿ: 37 ರಿಂದ 39 %
ಜೆಡಿಎಸ್: 16 ರಿಂದ 18%
ಇತರರು: 5 ರಿಂದ 7 %

ಚುನಾವಣೆಯಲ್ಲಿ ಪಕ್ಷ ಪಡೆದುಕೊಳ್ಳುವ ವೋಟ್ ಶೇರಿಂಗ್ ಅತ್ಯಂತ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಮತ ಹಂಚಿಕೆ ಶೇಕಡಾವಾರು ಉತ್ತಮಪಡಿಸಿಕೊಂಡಿದೆ. ಕಾಂಗ್ರೆಸ್ ಒಳ ಜಗಳ, ಕೆಲ ಕ್ಷೇತ್ರದಲ್ಲಿ ಆಡಳಿತವಿರೋಧಿ ಅಲೆ, ಇತ್ತ ಜೆಡಿಎಸ್ ಪ್ರಯತ್ನಗಳಿಂದ ಅತಂತ್ರ ವಿಧಾನಸಭಾ ಚುನಾವಣೆ ಸೃಷ್ಟಿಯಾಗಲಿದೆ ಅನ್ನೋದು ಸಮೀಕ್ಷೆ ಹೇಳುತ್ತಿದೆ. ಸ್ಥಾನಗಳ ಪೈಕಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿರುವ ಬಿಜೆಪಿ 98 ರಿಂದ 109 ಸ್ಥಾನ ಗೆಲ್ಲಲಿದೆ ಎಂದಿದೆ. ಕಾಂಗ್ರೆಸ್ 89 ರಿಂದ 97 ಸ್ಥಾನ ಗೆಲ್ಲಲಿದೆ ಎಂದು ವರದಿ ಹೇಳುತ್ತಿದೆ. ಇತ್ತ ಜೆಡಿಎಸ್ 25 ರಿಂದ 29 ಹಾಗೂ ಇತರರ ಗರಿಷ್ಠ 1 ಸ್ಥಾನ ಗೆಲ್ಲಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಅತಂತ್ರ ವಿಧಾನಸಭೆ ಎಂದಿರುವ ಸಮೀಕ್ಷೆ, ಜಾತಿ ಲೆಕ್ಕಾಚರದ ಕುರಿತೂ ಬೆಳಕು ಚೆಲ್ಲಿದೆ. ಬಿಜೆಪಿ ಸರ್ಕಾರದ ಮೀಸಲಾತಿ ಒಂದಿಷ್ಟು ಮತಗಳಾಗಿ ಕ್ರೋಢಿಕರಣಗೊಂಡಿರುವುದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಶೇಕಡಾ 70 ರಷ್ಟು ಲಿಂಗಾಯತ ಸಮುದಾಯ ಬಿಜೆಪಿ ಕೈಹಿಡಿದರೆ, ಶೇಕಡಾ 20 ರಷ್ಟು ಕಾಂಗ್ರೆಸ್ ಹಾಗೂ ಶೇಕಜಾ 10 ರಷ್ಟು ಜೆಡಿಎಸ್ ಪರ ಮತ ಚಲಾಯಿಸಿದ್ದಾರೆ. ಎಂದಿನಂತೆ ಶೇಕಡಾ 85ರಷ್ಟು ಮುಸ್ಲಿಮರು ಕಾಂಗ್ರೆಸ್‌ಗೆ ಮತ ಹಾಕಿದ್ದರೆ, ಶೇಕಡಾ 5 ರಷ್ಟು ಬಿಜೆಪಿ ಹಾಗೂ ಶೇಕಡಾ 10 ರಷ್ಟು ಜೆಡಿಎಸ್‌ಗೆ ಮತ ಹಾಕಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

Jan Ki Baat Suvarna News Survey: ಹಳೇ ಮೈಸೂರು ಕುತೂಹಲಕ್ಕೆ ಉತ್ತರ, ಯಾವ ಪಕ್ಷಕ್ಕೆ ಎಷ್ಟು ಸೀಟು?

ಒಕ್ಕಲಿಗರ ಮತಗಳನ್ನು ಈ ಬಾರಿಯೂ ಹಿಡಿದಿಟ್ಟುಕೊಳ್ಳುವಲ್ಲಿ ಜೆಡಿಎಸ್ ಯಶಸ್ವಿಯಾಗಿದೆ. ಶೇಕಡಾ 70 ರಷ್ಟು ಒಕ್ಕಲಿಗರು ಜೆಡಿಎಸ್‌ಗೆ ಮತಹಾಕಿದರೆ, ಶೇಕಡಾ 20 ರಷ್ಟು ಬಿಜೆಪಿ ಹಾಗೂ ಶೇಕಡಾ 10 ರಷ್ಟು ಒಕ್ಕಲಿಗರು ಕಾಂಗ್ರೆಸ್ ಕೈಹಿಡಿಯಲಿದ್ದಾರೆ ಅನ್ನೋ ಸಮೀಕ್ಷಾ ವರದಿ.

ಜನ್‌ಕಿ ಬಾತ್ ಸುವರ್ಣನ್ಯೂಸ್ ನಡೆಸಿದ ಸಮೀಕ್ಷೆ ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್ ಮೊದಲ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿತ್ತು. ಆದರೆ ಬಿಜೆಪಿ ಯಾವುದೇ ಟಿಕೆಟ್ ಘೋಷಣೆ ಮಾಡಿರಲಿಲ್ಲ. ಟಿಕೆಟ್ ಘೋಷಣೆ ಬಳಿಕ ರಾಜ್ಯದ ಚಿತ್ರಣ ಬದಲಾಗಿದೆ. ಹೀಗಾಗಿ ಈ ಸಮೀಕ್ಷಾ ಸಂಖ್ಯೆಯಲ್ಲಿ ವ್ಯತ್ಯಾಸಗಳಾಗುವ ಸಾಧ್ಯತೆಗಳಿವೆ.