ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ವಿಧಾನಪರಿಷತ್ ಸದಸ್ಯತ್ವ ಸಿಗಲಿದೆಯೇ? ಇಂತಹದೊಂದು ಪ್ರಶ್ನೆಯೀಗ ಜಿಲ್ಲಾ ರಾಜಕೀಯದಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಜೂ. 30ಕ್ಕೆ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಚುನಾವಣೆ ನಡೆಯಲಿದೆ.
ಹುಬ್ಬಳ್ಳಿ (ಜೂ.10): ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ವಿಧಾನಪರಿಷತ್ ಸದಸ್ಯತ್ವ ಸಿಗಲಿದೆಯೇ? ಇಂತಹದೊಂದು ಪ್ರಶ್ನೆಯೀಗ ಜಿಲ್ಲಾ ರಾಜಕೀಯದಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಜೂ. 30ಕ್ಕೆ ವಿಧಾನಸಭೆಯಿಂದ ವಿಧಾನಪರಿಷತ್‌ಗೆ ಚುನಾವಣೆ ನಡೆಯಲಿದೆ. ಈ ಮೊದಲು ಬಿಜೆಪಿಯಲ್ಲಿದ್ದ ಜಗದೀಶ ಶೆಟ್ಟರ್ ವಿಧಾನಸಭೆ ಚುನಾವಣೆ ವೇಳೆಯಷ್ಟೇ ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸ್ಸಿನಿಂದ ಸೆಂಟ್ರಲ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಶೆಟ್ಟರ್, ಈ ಸಲ ಸೋಲನುಭವಿಸಿದರು.
ಆದರೆ ಶೆಟ್ಟರ್ ಕಾಂಗ್ರೆಸ್‌ಗೆ ಸೇರಿರುವುದು ಆ ಪಕ್ಷಕ್ಕೆ ದೊಡ್ಡ ಲಾಭವಾಗಿದೆ. ಸುತ್ತಮುತ್ತಲಿನ ಜಿಲ್ಲೆಗಳಲ್ಲಿನ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶೆಟ್ಟರ್ ಕೊಡುಗೆಯೂ ಇದೆ. ಜತೆಗೆ ಲಿಂಗಾಯತ ಸಮುದಾಯವೂ ಈ ಸಲ ಕಾಂಗ್ರೆಸ್ಸಿಗೆ ಬೆಂಬಲಿಸಲು ಶೆಟ್ಟರ್ ಕೂಡ ಕಾರಣ ಎಂಬುದು ಬೆಂಬಲಿಗರ ಮಾತು. ಇದನ್ನು ಕಾಂಗ್ರೆಸ್ ಕೂಡ ಅಲ್ಲಗೆಳೆದಿಲ್ಲ. ಶೆಟ್ಟರ್ ಪಕ್ಷಕ್ಕೆ ಬಂದಿರುವುದು ದೊಡ್ಡ ಶಕ್ತಿ ಬಂದಂತಾಗಿದೆ. ಅವರನ್ನು ಪಕ್ಷ ಬಳಸಿಕೊಳ್ಳಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ ಇತ್ತೀಚಿಗೆ ಹೇಳಿದ್ದುಂಟು.
ಮೇಕೆದಾಟು ಪಾದಯಾತ್ರೆ: ಡಿ.ಕೆ.ಶಿವಕುಮಾರ್ ಮೇಲಿನ 1 ಕೇಸ್ ರದ್ದು, 2ಕ್ಕೆ ತಡೆ
ಇದೆಲ್ಲ ಕಾರಣದಿಂದ ಇದೀಗ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಶೆಟ್ಟರ್ ಅವರನ್ನು ವಿಪ ಸದಸ್ಯರನ್ನಾಗಿ ಮಾಡಬೇಕು. ಜತೆಗೆ ಪಕ್ಷದಲ್ಲಿ ದೊಡ್ಡ ಹುದ್ದೆ ನೀಡಬೇಕು. ಇದರಿಂದ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಹೆಚ್ಚು ಅನುಕೂಲವಾಗುತ್ತದೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಮತ್ತಷ್ಟುಬಲ ಬರಲಿದೆ ಎಂಬುದು ಅವರ ಬೆಂಬಲಿಗರ ಮಾತು. ಈ ನಡುವೆ ಶೆಟ್ಟರ್‌ಗೆ ಈ ಸಲ ವಿಧಾನಪರಿಷತ್ ಸದಸ್ಯರಾಗುವುದು ಖಚಿತ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಖಂಡಿತ ಕ್ರಮ ಕೈಗೊಳ್ಳಲಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ.
ಚುನಾವಣೆ ತಯಾರಿ, ಪಕ್ಷ ಸಂಘಟನೆ ಚರ್ಚೆ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ತಮ್ಮೊಂದಿಗೆ ಮುಂಬರುವ ಚುನಾವಣೆ ತಯಾರಿ, ಪಕ್ಷದ ಸಂಘಟನೆ ಕುರಿತು ಚರ್ಚೆ ನಡೆಸಿದರು. ಇದೊಂದು ಔಪಚಾರಿಕ ಭೇಟಿಯಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು. ಡಿಕೆಶಿ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷವನ್ನು ಉತ್ತರ ಕರ್ನಾಟಕದಲ್ಲಿ ಸಂಘಟಿಸುವ ಬಗ್ಗೆ ಚರ್ಚೆ ನಡೆಸಿದರು. ಈಗ ಸಂಘಟಿಸುತ್ತಿರುವ ಬಗ್ಗೆಯೂ ಸಂತೋಷ ವ್ಯಕ್ತಪಡಿಸಿದರು.
ಮುಂಬರುವ ಚುನಾವಣೆ, ಪಕ್ಷವನ್ನು ಇನ್ನಷ್ಟುಬಲಪಡಿಸುವ ನಿಟ್ಟಿನಲ್ಲಿ ಚರ್ಚೆ ಮಾಡಿದ್ದೇವೆ. ಸೌಹಾರ್ದದಿಂದ ಚರ್ಚೆ ಮಾಡಿದ್ದೇವೆ. ಚುನಾವಣೆ ಸಂಬಂಧಪಟ್ಟಂತೆ ನಾನು ಕೆಲವೊಂದಿಷ್ಟುಸಲಹೆ ನೀಡಿದೆ. ಅವರು ಕೆಲವೊಂದಿಷ್ಟು ಸಲಹೆಯನ್ನು ನೀಡಿದ್ದಾರೆ. ಜಿಲ್ಲಾ ಪಂಚಾಯತಿ, ತಾಪಂ ಚುನಾವಣೆ ತಯಾರಿ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಪಕ್ಷ ನನ್ನೊಂದಿಗೆ ಇದೆ ಎನ್ನುವ ಭರವಸೆ ನೀಡಿದ್ದಾರೆ ಎಂದರು.
ಪಠ್ಯಪುಸ್ತಕ ಪರಿಷ್ಕರಣೆ: ಕಾಂಗ್ರೆಸ್ ವಿರುದ್ಧ ರಾಜೀವ್ ಚಂದ್ರಶೇಖರ್ ತೀವ್ರ ಆಕ್ರೋಶ
ಲೋಕಸಭೆ ಚುನಾವಣೆಯಲ್ಲಿ ನಾನು ಅಭ್ಯರ್ಥಿ ಎಂಬ ಬಗ್ಗೆ ಯಾವುದೂ ಚರ್ಚೆಯಾಗಿಲ್ಲ. ಅದಕ್ಕೆ ಇನ್ನೂ ಒಂದು ವರ್ಷವಿದೆ ಎಂದರು. ಹೈಕಮಾಂಡ್ ನೀಡಿರುವ ಸಂದೇಶವೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷ ಸಂಘಟನೆ ಕುರಿತಂತೆ ಅಷ್ಟೇ ಎಂದರು. ಸ್ಥಾನಮಾನದ ಕುರಿತು ನೀವು ಬೇಡಿಕೆ ಏನಾದರೂ ಇಟ್ಟಿದ್ದೀರಾ? ಎಂಬ ಪ್ರಶ್ನೆಗೆ, ನಾನು ಯಾವ ಬೇಡಿಕೆಯನ್ನೂ ಇಟ್ಟಿಲ್ಲ. ಆದರೆ ಪಕ್ಷ ನನ್ನೊಂದಿಗೆ ಇದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ ಎಂದರು.
