Asianet Suvarna News Asianet Suvarna News

ಜಗದೀಶ್ ಶೆಟ್ಟರ್ ಬಿಜೆಪಿಗೆ ಹೋಗಿದ್ದು ಬಹಳ ನೋವಾಗಿದೆ: ಸಚಿವ ಜಮೀರ್ ಅಹಮದ್ ಖಾನ್

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಹೋಗಿದ್ದು ಬಹಳ ನೋವಾಗಿದೆ. ಸೋತರೂ ಕಾಂಗ್ರೆಸ್‌ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿಸಿ ಗೌರವಯುತವಾಗಿ ನಡೆಸಿಕೊಂಡಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದರು. 

Jagadish Shettar going to BJP is very painful Says Minister Zameer Ahmed Khan gvd
Author
First Published Jan 28, 2024, 2:00 AM IST | Last Updated Jan 28, 2024, 2:00 AM IST

ಹೊಸಪೇಟೆ (ಜ.28): ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಹೋಗಿದ್ದು ಬಹಳ ನೋವಾಗಿದೆ. ಸೋತರೂ ಕಾಂಗ್ರೆಸ್‌ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿಸಿ ಗೌರವಯುತವಾಗಿ ನಡೆಸಿಕೊಂಡಿದೆ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಶೆಟ್ಟರ್ ಅವರಿಗೆ ಏನೂ ಕಡಿಮೆ ಮಾಡಿಲ್ಲ. ವಿಧಾನಸಭಾ ಚುನಾವಣೆ ವೇಳೆ ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಬೈದಷ್ಟು ಕಾಂಗ್ರೆಸ್‌ನವರೇ ಬೈದಿಲ್ಲ. ಕೆಟ್ಟ ಪದಗಳಲ್ಲಿ ಬಿಜೆಪಿಯನ್ನು ಜಗದೀಶ್ ಶೆಟ್ಟರ್ ಬೈದಿದ್ದಾರೆ. 

ವಿಧಾನಸಭಾ ಎಲೆಕ್ಷನ್‌ನಲ್ಲಿ ಬಿಜೆಪಿಯವರು ಟಿಕೆಟ್ ಕೊಡಲಿಲ್ಲ. ಕಾಂಗ್ರೆಸ್ ಟಿಕೆಟ್ ಕೊಟ್ಟಿತು. ಶೆಟ್ಟರ್ ಸ್ಪರ್ಧೆ ಮಾಡಿದರು. ರಾಜ್ಯದಲ್ಲಿ ಯಾರೂ ಸೋತಿಲ್ಲ ಅಷ್ಟು ಹೀನಾಯವಾಗಿ ಸೋತರು. ಶೆಟ್ಟರ್ ಸೋತ ಬಳಿಕವೂ ಪಕ್ಷ ಅವರನ್ನು ಎಂಎಲ್‌ಸಿ ಮಾಡಿತು. ಎಂಎಲ್‌ಸಿ ಮಾಡಿ ಮೂರು ತಿಂಗಳು ಕಳೆದಿಲ್ಲ, ರಾಜೀನಾಮೆ ಕೊಟ್ಟಿದ್ದಾರೆ. ಅವರು ಪಕ್ಷ ಬಿಟ್ಟಿದ್ದು, ವೈಯಕ್ತಿಕವಾಗಿ ನನಗೆ ನೋವು ತಂದಿದೆ ಎಂದರು. ಬಿಜೆಪಿಯವರು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬಾರದಿತ್ತು. ಪಕ್ಷ ಬಿಟ್ಟು ಹೋದವರನ್ನು ಮತ್ತೆ ಸೇರಿಸಿಕೊಳ್ಳುವುದು ಸರಿಯಲ್ಲ. 

ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಆಗಲ್ಲ: ಸಚಿವ ರಾಮಲಿಂಗಾರೆಡ್ಡಿ

ಅವರು ವಿಧಾನಸಭಾ ಚುನಾವಣೆ ವೇಳೆ ಭಾರೀ ಕೆಟ್ಟದಾಗಿ ವಾಗ್ದಾಳಿ ಮಾಡಿದ್ದಾರೆ ಎಂದು ದೂರಿದರು. ಜಗದೀಶ್ ಶೆಟ್ಟರ್ ಅವರ ರೀತಿಯೇ ಲಕ್ಷ್ಮಣ ಸವದಿ ಅವರು ಬಿಜೆಪಿ ಸೇರ್ಪಡೆ ಮಾಡಲಿದ್ದಾರೆಯೇ? ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಶೆಟ್ಟರ್ ಬಿಜೆಪಿಗೆ ಹೋಗಿದ್ದಾರೆ, ಆದರೆ ಸವದಿ ಹೋಗಲ್ಲ. ಸವದಿ ಬಹಳ ಲೀಡ್‌ನಲ್ಲಿ ಗೆದ್ದು ಶಾಸಕರಾಗಿದ್ದಾರೆ ಎಂದರು. ಜನಾರ್ದನ ರೆಡ್ಡಿ ಅವರು ಬಿಜೆಪಿಗೆ ಹೋಗಲ್ಲ. ಆ ವಿಶ್ವಾಸ ನನಗೆ ಇದೆ. ಅವರು ಪಕ್ಷೇತರರಾಗಿಯೇ ಉಳಿಯಲಿದ್ದಾರೆ. ಅವರ ಮೇಲೆ ನನಗೆ ವಿಶ್ವಾಸ ಇದೆ ಎಂದರು.

ಗತವೈಭವ ಮರುಕಳಿಸುವಂತೆ ಹಂಪಿ ಉತ್ಸವ ಆಚರಣೆ: ವಿಜಯನಗರ ಸಾಮ್ರಾಜ್ಯದ ಗತವೈಭವ ಮರುಕಳಿಸುವ ಮಾದರಿಯಲ್ಲಿ ಹಂಪಿ ಉತ್ಸವ ಆಚರಿಸಲಾಗುವುದು. ಫೆ. ೨ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ಸವಕ್ಕೆ ಚಾಲನೆ ನೀಡಲಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್, ನಟ ರವಿಚಂದ್ರನ್ ಸೇರಿದಂತೆ ಚಿತ್ರನಟರು ಆಗಮಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದರು. ಹಂಪಿಯಲ್ಲಿ ಉತ್ಸವದ ವೇದಿಕೆ ನಿರ್ಮಾಣ ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಉತ್ಸವದಲ್ಲಿ ನಾಲ್ಕು ವೇದಿಕೆಗಳನ್ನು ನಿರ್ಮಿಸಲಾಗುತ್ತಿದೆ. ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯಲಿದೆ. ಸ್ಥಳೀಯ ಕಲಾವಿದರಿಗೂ ಆದ್ಯತೆ ನೀಡಲಾಗಿದೆ. 

ಮುಂದಿನ ಬಜೆಟ್‌ನಲ್ಲಿ ಕೋಲಾರ ನಗರಕ್ಕೆ ರಿಂಗ್ ರೋಡ್, ಮೆಡಿಕಲ್ ಕಾಲೇಜ್: ಸಚಿವ ಭೈರತಿ ಸುರೇಶ್

ಈ ಉತ್ಸವವನ್ನು ಜನೋತ್ಸವವನ್ನಾಗಿಸಲು ಎಲ್ಲ ಕ್ರಮ ವಹಿಸಲಾಗಿದೆ ಎಂದರು. ಈ ವರ್ಷ ಬರಗಾಲದ ಹಿನ್ನೆಲೆ ಹಂಪಿ ಉತ್ಸವ ಫೆಬ್ರವರಿ ೨,೩,೪ರಂದು ನಡೆಸಲಾಗುತ್ತಿದೆ. ಮುಂದಿನ ವರ್ಷದಿಂದ ಎಂ.ಪಿ. ಪ್ರಕಾಶ ಅವರ ಆಶಯದಂತೆ ನ. ೩,೪,೫ರಂದು ಆಚರಿಸಲಾಗುವುದು. ಬಜೆಟ್‌ನಲ್ಲೂ ಹಂಪಿ ಉತ್ಸವಕ್ಕೆ ಅನುದಾನ ಒದಗಿಸಲು ಕ್ರಮ ವಹಿಸಲಾಗುವುದು. ಈ ಬಾರಿ ₹೧೫ ಕೋಟಿಗೂ ಅಧಿಕ ವೆಚ್ಚದಲ್ಲಿ ಉತ್ಸವ ನಡೆಸಲಾಗುವುದು ಎಂದರು. ಶಾಸಕರಾದ ಎಚ್.ಆರ್. ಗವಿಯಪ್ಪ, ಕೆ. ನೇಮರಾಜ್ ನಾಯ್ಕ, ಎಂ.ಪಿ. ಲತಾ, ಡಾ. ಎನ್.ಟಿ. ಶ್ರೀನಿವಾಸ್, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಎಸ್ಪಿ ಶ್ರೀಹರಿಬಾಬು, ಜಿಪಂ ಸಿಇಒ ಸದಾಶಿವಪ್ರಭು ಮತ್ತಿತರರಿದ್ದರು.

Latest Videos
Follow Us:
Download App:
  • android
  • ios