ಯಾರು ಏನೇ ಅಪಪ್ರಚಾರ ಮಾಡಿದರೂ ಜೆಡಿಎಸ್ ಅಧಿಕಾರಕ್ಕೆ ಬರುವುದು ತಪ್ಪಿಸಲಾಗದು: ಎಚ್‌ಡಿಕೆ
ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ದೊರೆತ ಬೆಂಬಲ ಕಂಡು ವಿಪಕ್ಷಗಳು ವಿಚಲಿತವಾಗಿ ಅಪಪ್ರಚಾರ ಮಾಡುತ್ತಿದ್ದು, ಅವುಗಳಿಗೆ ಕಿವಿಗೊಡಬೇಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಹಾರೋಹಳ್ಳಿ (ಮೇ.01): ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ದೊರೆತ ಬೆಂಬಲ ಕಂಡು ವಿಪಕ್ಷಗಳು ವಿಚಲಿತವಾಗಿ ಅಪಪ್ರಚಾರ ಮಾಡುತ್ತಿದ್ದು, ಅವುಗಳಿಗೆ ಕಿವಿಗೊಡಬೇಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಹಾರೋಹಳ್ಳಿಯ ಬಸ್ ಸ್ಟಾಂಡ್ ವೃತ್ತ ಹಾಗೂ ಮರಳವಾಡಿಯ ಬಸ್ ಸ್ಟಾಂಡ್ ವೃತ್ತದಲ್ಲಿ ರಾಮನಗರ ವಿಧಾನಭಾ ಕ್ಷೇತ್ರದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಮತಯಾಚಿಸಿ ಮಾತನಾಡಿದ ಅವರು, ಜಿಲ್ಲೆಯ ಜನತೆ ನನ್ನನ್ನ ಪ್ರೀತಿ ವಿಶ್ವಾಸದಿಂದ ಕಾಣ್ತಾ ಇದ್ದಾರೆ. ನಿಮ್ಮ ಪ್ರೀತಿ ಅಭಿಮಾನಕ್ಕೆ ನಾವೆಂದೂ ಚಿರಋುಣಿಗಳು, ನಿಮ್ಮ ಆಶೀರ್ವಾದ, ಪ್ರೀತಿಯಿಂದ ರಾಜಕೀಯವಾಗಿ ನಮ್ಮ ಕುಟುಂಬ ಎತ್ತರಕ್ಕೆ ಬೆಳೆದಿದೆ. ಕಾರ್ಯಕರ್ತರು, ಮತದಾರರ ಜೊತೆಗೆ ನಾನು ನಿಲ್ಲುತ್ತೇನೆ. ಜನರ ಕಷ್ಟಸುಖಗಳಿಗೆ ಎಂದಿಗೂ ಜೊತೆಗಿರ್ತೇನೆ.
ಯಾರೂ ಏನೇ ಅಪಪ್ರಚಾರ ನಡೆಸಿದರೂ ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ದೇವೇಗೌಡರು ಮತ್ತು ನನ್ನನ್ನು ಪ್ರೀತಿ ವಿಶ್ವಾಸದಿಂದ ಕಂಡಿದ್ದೀರಿ. ಅದೇ ರೀತಿಯ ಪ್ರೀತಿ ಅಭಿಮಾನವನ್ನು ನಿಖಿಲ್ ಕುಮಾರಸ್ವಾಮಿ ಮೇಲೆ ಇಟ್ಟಿದ್ದೀರಿ. ನಮ್ಮನ್ನು ಬೆಳೆಸಿದ್ದು ರಾಮನಗರ ಜಿಲ್ಲೆಯ ಜನತೆ ಅದರಲ್ಲೂ ಹಾರೋಹಳ್ಳಿ, ಮರಳವಾಡಿ ಜನರು ಶಕ್ತಿ ನೀಡಿದ್ದೀರಿ. ನಾವಿಂದು ಹೆಮ್ಮರವಾಗಿ ಬೆಳೆದು ಹಲವರಿಗೆ ನೆರಳಾಗಿದ್ದೇವೆ ಎಂದರೆ ಅದಕ್ಕೆ ಜಿಲ್ಲೆಯ ಜನತೆಯೇ ಕಾರಣ. ನೀವು ನನ್ನನ್ನ ಮನೆ ಮಗನಂತೆ ಕಂಡಿದ್ದೀರಿ. ನೀವು ಕೊಟ್ಟಶಕ್ತಿಯಿಂದ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಲು ಸಾಧ್ಯವಾಗಿದೆ ಎಂದರು.
ಭ್ರಷ್ಟಾಚಾರ ಕಾಂಗ್ರೆಸ್‌ನವರ ಮನೆ ಮಾತು: ಸಚಿವ ಅಶೋಕ್
ಉತ್ತರ ಭಾರತದ ನಾಯಕರು: ಉತ್ತರ ಭಾರತದಿಂದ ಪ್ರಧಾನಿ ಸೇರಿದಂತೆ ಹಲವು ನಾಯಕರು ದಂಡೆತ್ತಿ ಬರುತ್ತಿದ್ದಾರೆ. ಯಾರೇ ಬಂದರೂ ರಾಜ್ಯದ ಜನತೆ ನಮಗೆ ಬಹುಮತ ನೀಡುವ ವಿಶ್ವಾಸವಿದೆ. ಬಿಜೆಪಿಯವರು ಮಾಜಿ ಪ್ರಧಾನಿ ದೇವೇಗೌಡರು ನೀಡಿದ್ದ ಅಲ್ಪಸಂಖ್ಯಾತ ಮೀಸಲಾತಿ ರದ್ದು ಮಾಡಿದ್ದಾರೆ. ಅದಕ್ಕೆಲ್ಲಾ 10 ದಿನಗಳ ನಂತರ ಉತ್ತರ ನೀಡಲಾಗುವುದು. ನಮ್ಮ ಸರ್ಕಾರದಲ್ಲಿ ಎಲ್ಲಾ ವರ್ಗಗಳಿಗೂ ನ್ಯಾಯ ಕೊಡಿಸಲಾಗುವುದು. ರೈತರು, ಯುವಕರು ಸೇರಿದಂತೆ ಮಹಿಳೆಯರು ಸ್ವಾಭಿಮಾನದಿಂದ ಬದುಕು ನಡೆಸಲು ಯೋಜನೆ ರೂಪಿಸಲಾಗುವುದು. ಕಳೆದ ಬಾರಿ ಅಪಪ್ರಚಾರ ನಡೆಸಿ ನನ್ನ ವಿರುದ್ಧ ಷಡ್ಯಂತ್ರ ಹೂಡಲಾಗಿತ್ತು. ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಹಾಲಿಗೆ ಪ್ರೋತ್ಸಾಹ ಧನ ನೀಡುವ ಜೊತೆಗೆ ಪಶು ಆಹಾರವನ್ನು ನೀಡಲಾಗುತ್ತದೆ ಎಂದರು.
ನಿಖಿಲ್ ಕುಮಾರಸ್ವಾಮಿಯನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಹಲವು ಯುವಕರ ಒತ್ತಾಯದ ಮೇರೆಗೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗಿಳಿದಿದ್ದಾರೆ. ಮಂಡ್ಯದಲ್ಲಾದ ರೀತಿ ಇಲ್ಲಾಗುವುದಿಲ್ಲ. ಜನರು ಹಾಲನ್ನಾದರೂ ನೀಡಿ, ನೀರನ್ನಾದರೂ, ಇನ್ನೇನಾದರೂ ನೀಡಿದರೂ ಅದನ್ನು ಸ್ವೀಕರಿಸಲಾಗುವುದು. ನಾನು ಯಾವುದೇ ರೀತಿಯ ಬಂಡೆ ಗ್ರಾನೈಟ್ ಲೂಟಿ ಮಾಡಿ ಹಣ ಸಂಪಾದಿಸಿಲ್ಲ. ನಾನು ಸಂಪಾದಿಸಿರುವುದು ಜಿಲ್ಲೆಯ ಜನತೆಯ ಪ್ರೀತಿ ಮಾತ್ರ. ನನ್ನಂತೆಯೇ ನಿಖಿಲ್ ಕೂಡ ನಿಮ್ಮ ಪ್ರೀತಿ ವಿಶ್ವಾಸವನ್ನು ಸಂಪಾದಿಸುತ್ತಾನೆ. ನಿಮ್ಮ ಮಡಿಲಿಗೆ ನನ್ನ ಮಗನನ್ನು ಹಾಕಿದ್ದೇನೆ ನೀವೇ ಸಾಕಿ ಸಲುಹಬೇಕು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸಾಲಮನ್ನಾ: ನಿಖಿಲ್ ಕುಮಾರಸ್ವಾಮಿ
ಹಾರೋಹಳ್ಳಿಯಲ್ಲಿ ನಿಖಿಲ್ ಭಾಷಣದ ಮಧ್ಯದಲ್ಲಿ ಬಂದ ಅನಿತಾ ಕುಮಾರಸ್ವಾಮಿಯವರನ್ನು ಕಂಡು ಕಾರ್ಯಕರ್ತರು ಜಯದ ಘೋಷ ಮೊಳಗಿಸಿದರು. ಇದೇ ವೇಳೆ ಮಾಜಿ ಜಿಪಂ ಅಧ್ಯಕ್ಷ ಎಂ.ಎನ್ ನಾಗರಾಜು ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಗೊಂಡರು. ಶಾಸಕಿ ಅನಿತಾ ಕುಮಾರಸ್ವಾಮಿ, ಸಮಾಜ ಸೇವಕ ಅನಿಲ್ ಕುಮಾರ್, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ರಾಮಕೃಷ್ಣ, ಹಾರೋಹಳ್ಳಿಯ ಪುರೊಷೋತ್ತಮ್, ಅನಂತು, ಮೇಡಮಾರನಹಳ್ಳಿ ಕುಮಾರ್, ರಾಮು ಲಕ್ಷ್ಮಣ್, ಮಲ್ಲಯ್ಯ, ಪ್ರವೀಣ್,ನಾಗೇಶ್, ಮಹದೇವ್ ಸೇರಿದಂತೆ ಹಾರೋಹಳ್ಳಿ, ಮರಳವಾಡಿ ಹೋಬಳಿಯ ಕಾರ್ಯಕರ್ತರು ಹಾಜರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.