Mandya: ಸಕ್ಕರೆ ನಾಡಲ್ಲಿ ಇಬ್ಬರ ಪಾಲಿಗೂ ಸಿಹಿಯೇ?: ನಿರೀಕ್ಷೆಯಲ್ಲಿ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ
ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಜನತಾದಳ ಸರ್ಕಾರದಲ್ಲಿ ಮಂಡ್ಯಕ್ಕೆ ಮೂರು ಸಚಿವ ಸ್ಥಾನ ದೊರಕಿರುವುದು ಒಂದು ದಾಖಲೆ. ಅದೇ ಮಾದರಿಯಲ್ಲಿ ಈ ಬಾರಿಯ ಕಾಂಗ್ರೆಸ್ ಸರ್ಕಾರದಲ್ಲಿ ಮಂಡ್ಯದಿಂದ ಎರಡು ಸಚಿವ ಸ್ಥಾನ ಸಿಗಬಹುದೆಂಬ ನಿರೀಕ್ಷೆ ಹುಟ್ಟು ಹಾಕಿದೆ.
ಮಂಡ್ಯ ಮಂಜುನಾಥ
ಮಂಡ್ಯ (ಮೇ.20): ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಜನತಾದಳ ಸರ್ಕಾರದಲ್ಲಿ ಮಂಡ್ಯಕ್ಕೆ ಮೂರು ಸಚಿವ ಸ್ಥಾನ ದೊರಕಿರುವುದು ಒಂದು ದಾಖಲೆ. ಅದೇ ಮಾದರಿಯಲ್ಲಿ ಈ ಬಾರಿಯ ಕಾಂಗ್ರೆಸ್ ಸರ್ಕಾರದಲ್ಲಿ ಮಂಡ್ಯದಿಂದ ಎರಡು ಸಚಿವ ಸ್ಥಾನ ಸಿಗಬಹುದೆಂಬ ನಿರೀಕ್ಷೆ ಹುಟ್ಟುಹಾಕಿದೆ. 1994ರಲ್ಲಿ ದೇವೇಗೌಡ ಮತ್ತು ಜೆ.ಎಚ್.ಪಟೇಲ್ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಜನತಾದಳ ಸರ್ಕಾರದಲ್ಲಿ ಮಂಡ್ಯ ಕ್ಷೇತ್ರದಿಂದ ಆಯ್ಕೆಯಾಗಿದ್ದ ಎಸ್.ಡಿ.ಜಯರಾಂ ಅವರಿಗೆ ಗಣಿ ಮತ್ತು ಭೂ ವಿಜ್ಞಾನ ಖಾತೆ, ಮಳವಳ್ಳಿ ಕ್ಷೇತ್ರದಿಂದ ಗೆದ್ದಿದ್ದ ಬಿ.ಸೋಮಶೇಖರ್‌ರವರಿಗೆ ಉನ್ನತ ಶಿಕ್ಷಣ ಖಾತೆ ಹಾಗೂ ಕಿರುಗಾವಲು ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಕೆ.ಎನ್.ನಾಗೇಗೌಡ ಅವರಿಗೆ ಭಾರಿ ನೀರಾವರಿ ಸಚಿವ ಸ್ಥಾನವನ್ನು ನೀಡಲಾಗಿತ್ತು.
ಜಿಲ್ಲೆಯಿಂದ ಗೆದ್ದಿದ್ದ ಈ ಮೂವರು ಪ್ರಭಾವಿ ನಾಯಕರು ಸಂಪುಟ ದರ್ಜೆಯ ಮಂತ್ರಿಗಿರಿಯನ್ನು ಪಡೆದುಕೊಂಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯೊಳಗೆ ಕಾಂಗ್ರೆಸ್ ಅತಿ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುವುದಕ್ಕೆ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಪಿ.ಎಂ.ನರೇಂದ್ರಸ್ವಾಮಿ ಅವರೂ ಸಾಕಷ್ಟುಶ್ರಮಿಸಿದ್ದಾರೆ. ಇವರಿಬ್ಬರ ಪರಿಶ್ರಮದಿಂದ ಜಿಲ್ಲೆಯೊಳಗೆ ಅಸ್ತಿತ್ವವನ್ನೇ ಕಳೆದುಕೊಂಡಿದ್ದ ಕಾಂಗ್ರೆಸ್ ನವಚೈತನ್ಯ ಶಕ್ತಿ ತುಂಬಿಕೊಂಡು ಮೇಲೆದ್ದು ನಿಂತಿದೆ. 2018ರ ಚುನಾವಣೆಯಲ್ಲಿ ಹೇಳ ಹೆಸರಿಲ್ಲದಂತೆ ಜಿಲ್ಲೆಯೊಳಗೆ ಧೂಳಿಪಟವಾಗಿದ್ದ ಕಾಂಗ್ರೆಸ್‌ಗೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಜೀವ ತುಂಬಿದವರು ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ. ದಕ್ಷಿಣ ಪದವೀಧರ ಕ್ಷೇತ್ರದಿಂದ ಮೊದಲ ಬಾರಿಗೆ ಕಾಂಗ್ರೆಸ್‌ಗೆ ಗೆಲುವನ್ನು ತಂದುಕೊಟ್ಟು ಶಕ್ತಿ ನೀಡಿದರು.
Chamarajanagar: ಸಂಘಟನೆ ಮಾಡದವರಿಗೆ ಟಿಕೆಟ್ ನೀಡಿದ್ದೇ ಬಿಜೆಪಿ ಸೋಲಿಗೆ ಕಾರಣ: ಡಾ.ಪ್ರೀತನ್
ಆನಂತರ ಜಿಲ್ಲೆಯಾದ್ಯಂತ ಪಕ್ಷವನ್ನು ಸಂಘಟಿಸಿ ಸಮರ್ಥರಿಗೆ ಟಿಕೆಟ್ ಕೊಟ್ಟು ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಆರು ಕ್ಷೇತ್ರಗಳಲ್ಲಿ ಪಕ್ಷಕ್ಕೆ ಗೆಲುವನ್ನು ತಂದುಕೊಟ್ಟು, 24 ವರ್ಷಗಳ ಬಳಿಕ ಕಾಂಗ್ರೆಸ್‌ಗೆ ಗತವೈಭವ ಮರಳುವಂತೆ ಮಾಡಿದ್ದಾರೆ. 2018ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲೂ ಜಿಲ್ಲೆಗೆ ಎರಡು ಮಂತ್ರಿ ಸ್ಥಾನ ಸಿಕ್ಕಿದ್ದವು. ಮೇಲುಕೋಟೆ ಕ್ಷೇತ್ರದಿಂದ ವಿಜಯಿಯಾಗಿದ್ದ ಸಿ.ಎಸ್.ಪುಟ್ಟರಾಜು ಸಣ್ಣ ನೀರಾವರಿ ಖಾತೆ ನಿಭಾಯಿಸಿದರೆ, ಮದ್ದೂರು ಕ್ಷೇತ್ರದಿಂದ ಗೆದ್ದಿದ್ದ ಡಿ.ಸಿ.ತಮ್ಮಣ್ಣ ಸಾರಿಗೆ ಖಾತೆ ಸಚಿವರಾಗಿದ್ದರು.
ಕಳೆದ ಐದು ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಕಟ್ಟಿಬೆಳೆಸಿರುವ ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ ಹಾಗೂ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮಂತ್ರಿ ಸ್ಥಾನ ಸಿಗಬೇಕೆನ್ನುವುದು ಬೆಂಬಲಿಗರು, ಅಭಿಮಾನಿಗಳ ಆಗ್ರಹವಾಗಿದೆ. ಎನ್.ಚಲುವರಾಯಸ್ವಾಮಿ ಅವರು 2004ರ ಕಾಂಗ್ರೆಸ್-ಜೆಡಿಎಸ್ ಸರ್ಕಾರದಲ್ಲಿ ಆರೋಗ್ಯ ಮಂತ್ರಿಯಾಗಿ, 2006ರ ಜೆಡಿಎಎಸ್-ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಅದೇ ರೀತಿ ಪಿ.ಎಂ.ನರೇಂದ್ರಸ್ವಾಮಿ ಅವರು ಒಮ್ಮೆ ಸಮಾಜಕಲ್ಯಾಣ ಖಾತೆ ಸಚಿವರಾಗಿ, ಇನ್ನೊಮ್ಮೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.
ಎನ್.ಚಲುವರಾಯಸ್ವಾಮಿ ಹಾಗೂ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವವಿದೆ. ಇಬ್ಬರೂ ಪಕ್ಷದ ಉತ್ತಮ ನಾಯಕರೂ ಆಗಿದ್ದಾರೆ. ಅಭಿವೃದ್ಧಿ ಪರವಾದ ಕಾಳಜಿಯುಳ್ಳವರಾಗಿದ್ದಾರೆ. ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಪಿ.ಎಂ.ನರೇಂದ್ರಸ್ವಾಮಿ ಅವರು 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದರು. ನೂತನವಾಗಿ ಅಸ್ತಿತ್ವಕ್ಕೆ ಬರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಎನ್.ಚಲುವರಾಯಸ್ವಾಮಿ ಹಾಗೂ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಸಚಿವ ಸ್ಥಾನ ದೊರಕಿಸಿಕೊಟ್ಟು ಜಿಲ್ಲೆಯ ಅಭಿವೃದ್ಧಿಗೆ ನೆರವಾಗಲೆಂಬುದು ಜಿಲ್ಲೆಯ ಜನರ ಆಗ್ರಹವಾಗಿದೆ.
1999ರ ಬಳಿಕ ಕೈ ತೆಕ್ಕೆಗೆ ಎಲ್ಲಾ ಕ್ಷೇತ್ರ: 1999ರ ನಂತರ ಇದೇ ಮೊದಲ ಬಾರಿಗೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರ ಹಾಗೂ ಒಂದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯನ್ನು ಗೆಲ್ಲಿಸುವುದರೊಂದಿಗೆ ಆರು ಕ್ಷೇತ್ರಗಳನ್ನು ಕಾಂಗ್ರೆಸ್ ವಶಕ್ಕೆ ತೆಗೆದುಕೊಂಡಿದೆ. ಎರಡು ದಶಕಗಳ ಬಳಿಕ ಕಾಂಗ್ರೆಸ್ ಮಂಡ್ಯ ಜಿಲ್ಲೆಯಲ್ಲಿ ಸುಭದ್ರ ಸ್ಥಿತಿಗೆ ಬಂದಿದೆ.
ಮೌಢ್ಯ ತೊರೆದು ಚಾಮರಾಜನಗರ ಜಿಲ್ಲೆ ಉದ್ಘಾಟಿಸಿದ್ದ ಸಿದ್ದರಾಮಯ್ಯ
ಜನತಾದಳ ಸರ್ಕಾರದಲ್ಲಿ ಜಿಲ್ಲೆಯ ಮೂವರಿಗೆ ಸಚಿವ ಗಿರಿ ದೊರಕಿದಂತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇ ಗೌಡರಿಗೆ ಸಚಿವ ಸ್ಥಾನ ಸಿಗಬೇಕು. ಮೂವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇಬ್ಬರಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವವಿದೆ. 1994ರಲ್ಲಿ ಮಂಡ್ಯಕ್ಕೆ ಸಿಕ್ಕ ಅವಕಾಶ ಮತ್ತೆ ಸಿಗುವಂತಾಗಲಿ.
-ಎಲ್.ಸಂದೇಶ್, ಅಧ್ಯಕ್ಷ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ