Asianet Suvarna News Asianet Suvarna News

Karnataka Politics: ಯಾವ ಪುರುಷಾರ್ಥಕ್ಕಾಗಿ ಜನಸ್ಪಂದನ: ಈಶ್ವರ್‌ ಖಂಡ್ರೆ ಅಸಮಾಧಾನ

  • ಯಾವ ಪುರುಷಾರ್ಥಕ್ಕಾಗಿ ಜನಸ್ಪಂದನ: ಈಶ್ವರ್‌ ಖಂಡ್ರೆ
  • ನೆರೆ ಹಾವಳಿಯಿಂದ ತತ್ತರಿಸಿದ ಜನರಿಗೆ ಪರಿಹಾರ ನೀಡಿ
  • ಸಿಎಂ ಬಸವರಾಜ ಬೊಮ್ಮಾಯಿ ಬಗ್ಗೆ ಖಂಡ್ರೆ ಅಸಮಾಧಾನ
Ishwar Khandre displeasure against Janaspandan programme bjp rav
Author
First Published Sep 12, 2022, 7:50 AM IST

ತುಮಕೂರು (ಸೆ.12) : ರಾಜ್ಯದ ಜನ ಸಂಕಷ್ಟದಲ್ಲಿರುವಾಗ ಬಿಜೆಪಿಯವರು ಯಾವ ಪುರುಷಾರ್ಥಕ್ಕಾಗಿ ಜನಸ್ಪಂದನ, ಜನೋತ್ಸವ ಕಾರ್ಯಕ್ರಮ ಮಾಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಪ್ರಶ್ನಿಸಿದ್ದಾರೆ. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ನೆರೆ ಹಾವಳಿಯಿಂದಾಗಿ ಲಕ್ಷಾಂತರ ಭೂಮಿಯಲ್ಲಿ ರೈತರು ಬೆಳೆದಿದ್ದ ಬೆಳೆ ನಾಶವಾಗಿದೆ. ಸಾವಿರಾರು ಮನೆಗಳು ನೆಲಸಮವಾಗಿವೆ. ರಸ್ತೆಗಳು ಕೊಚ್ಚಿ ಹೋಗಿವೆ. ಇಂತಹ ಸಂಕಷ್ಟದ ಸಮಯದಲ್ಲಿ ಜನೋತ್ಸವ ಅಗತ್ಯ ಇತ್ತೆ ಎಂದು ಅವರು ಹರಿಹಾಯ್ದಿದ್ದಾರೆ.

ಕಾಂಗ್ರೆಸ್‌ನಿಂದ ಭಾರತ್ ಜೋಡೋ ಯಾತ್ರೆ, ರಾಜ್ಯ ಬಿಜೆಪಿಯಿಂದ ಜನಸ್ಪಂದನ ಕಾರ್ಯಕ್ರಮ!

ರಾಜ್ಯದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು, ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಯುವಕರೆಲ್ಲರೂ ದಾರಿ ತಪ್ಪಿ ಹೋಗುತ್ತಿದ್ದಾರೆ. ಜತೆಗೆ ಸರ್ಕಾರವೂ ದಾರಿ ತಪ್ಪಿದೆ. ಈ ಸರ್ಕಾರದ ದುರಾಡಳಿತಕ್ಕೆ ಜನ ಬೇಸತ್ತು ಛೀಮಾರಿ ಹಾಕುತ್ತಿದ್ದಾರೆ. ನೆರೆ ಹಾವಳಿಯಿಂದ ಮನೆ, ಬೆಳೆ ಕಳೆದುಕೊಂಡಿರುವವರಿಗೆ ಇದುವರೆಗೂ ಪರಿಹಾರ ಕೊಟ್ಟಿಲ್ಲ, ಮಳೆಯಿಂದ ಆಗಿರುವ ಅನಾಹುತಗಳನ್ನು ಸರಿಪಡಿಸಲು ಪರಿಹಾರ ಕಾರ್ಯಗಳನ್ನು ಕೈಗೊಂಡಿಲ್ಲ. ಅನಾಹುತ ಉಂಟಾಗಿರುವ ಸ್ಥಳಗಳಿಗೆ ಇದುವರೆಗೂ ಸಚಿವರು ಭೇಟಿ ನೀಡಿಲ್ಲ ಎಂದು ಆರೋಪಿಸಿದರು.

ಕೇಂದ್ರದವರು ರಾಜ್ಯದವರ ಮೇಲೆ ಪ್ರಹಾರದ ಮೇಲೆ ಪ್ರಹಾರ ಮಾಡುತ್ತಿದ್ದಾರೆ. ನೀರಾವರಿಯಲ್ಲಿ ಅನ್ಯಾಯ, ಪ್ರವಾಹ ಪರಿಹಾರದಲ್ಲಿ ಅನ್ಯಾಯ, ಜಿಎಸ್‌ಟಿಯಲ್ಲಿ ಅನ್ಯಾಯ, ಕೊರೋನಾ ಸಂದರ್ಭದಲ್ಲಿ ಆಕ್ಸಿಜನ್‌ ಒದಗಿಸುವಲ್ಲೂ ಅನ್ಯಾಯವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಬಗ್ಗೆ ಬಿಜೆಪಿಯವರಿಗೆ ಹೆದರಿಕೆ ಇದೆ. ಹಾಗಾಗಿ ವಿನಾಕಾರಣ ಟೀಕೆ ಮಾಡುತ್ತಾರೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದೊಡ್ಡ ಸ್ಥಾನದಲ್ಲಿದ್ದುಕೊಂಡು ತಾಕತ್ತು ಮತ್ತು ಧಮ್‌ ಬಗ್ಗೆ ಮಾತನಾಡುವುದು ಎಷ್ಟುಸರಿ ಎಂದು ಜನಸ್ಪಂದನ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿಯವರು ಜನರ ಸಮಸ್ಯೆಗೆ ಸ್ಪಂದಿಸುವ ಕಳಕಳಿ ಮನೋಭಾವವನ್ನು ಕಲಿಯಲಿ. ರಾಜ್ಯದ ಜನ ನೋಡುತ್ತಿದ್ದಾರೆ. ಬಿಜೆಪಿಯವರಿಗೆ ಸರಿಯಾದ ಸಮಯದಲ್ಲಿ ತಕ್ಕ ಶಾಸ್ತಿ ಮಾಡುತ್ತಾರೆ ಎಂದು ಅವರು ಹೇಳಿದರು.

ಪಂಡಿತ್‌ ಜವಹಾರ್‌ಲಾಲ್‌ ನೆಹರುರವರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗಿಲ್ಲ. ದೇಶದಲ್ಲಿ ಜಾತೀಯತೆ, ಧರ್ಮಾಂಧತೆ, ಒಡೆದಾಳುವ ನೀತಿ ಅನುಸರಿಸಲಾಗುತ್ತಿದೆ. ಪೆಟ್ರೋಲ್‌, ಡೀಸೆಲ್‌ ಬೆಲೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಜನಸಾಮಾನ್ಯರು ಕಷ್ಟಪಡುತ್ತಿದ್ದರೆ ಇವರಿಗೆ ಖುಷಿ. ಬಿಜೆಪಿಯವರ ಜನವಿರೋಧಿ ನೀತಿಯಿಂದಾಗಿ ಬರೀ ಅಂಬಾನಿ, ಅದಾನಿಗಳ ಶ್ರೀಮಂತಿಕೆ ಹೆಚ್ಚಾಗುತ್ತಿದೆ.

ಸರ್ಕಾರದ ಜನೋತ್ಸವ ಸಮಾವೇಶಕ್ಕೆ 7 ಮಂದಿ ಸಚಿವರ ಗೈರು ಹಾಜರಿ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅದು ಅವರ ಪಕ್ಷದ ಆಂತರಿಕ ವಿಚಾರ. ನಾನು ಆ ಬಗ್ಗೆ ಮಾತನಾಡುವುದಿಲ್ಲ. ಆದರೆ ಅನೇಕ ಜನ ಬಿಜೆಪಿ ತೊರೆಯಲು ತುದಿಗಾಲಲ್ಲಿ ನಿಂತಿದ್ದಾರೆ ಎಂದರು.

ತೊಲಗಲೇಬೇಕು ಅಸ್ಪೃಶ್ಯತೆ: ಸುವರ್ಣ ನ್ಯೂಸ್ ಅಭಿಯಾನಕ್ಕೆ ಸಾಥ್ ನೀಡಿದ ಜನತೆ!

ರಾಜ್ಯದ ಆರ್ಥಿಕತೆ ಸಂಪೂರ್ಣ ಕುಸಿದು ಹೋಗಿದೆ:

ದಾರಿಯಲ್ಲಿ ನಡೆಯುತ್ತಿದ್ದಾಗ ಏನಾದರೂ ಎಡವಿದರೆ ಅದಕ್ಕೆ ಕಾಂಗ್ರೆಸ್‌ನವರು ಕಲ್ಲಿಕ್ಕಿದ್ದಾರೆ ಎಂದು ದೂರುವ ಚಾಳಿ ಬಿಜೆಪಿಯವರದ್ದಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 8 ವರ್ಷ ಹಾಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು 4 ವರ್ಷ ಆಗಿದೆ. ಆದರೂ ಉದ್ಯೋಗ ಸೃಷ್ಟಿಮಾಡಲು ಸಾಧ್ಯವಾಗಿಲ್ಲ. ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ 1 ಲಕ್ಷದವರೆಗೆ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಆದರೆ ಈವರೆಗೆ ಯಾವುದೇ ರೀತಿಯ ರೈತರ ಸಾಲ ಮನ್ನಾ ಮಾಡಲಾಗಿಲ್ಲ. ನೀರಾವರಿ ಯೋಜನೆಗೆ ಒಂದೂವರೆ ಲಕ್ಷ ಕೋಟಿ ಕೊಡುವುದಾಗಿ ಹೇಳಿದ್ದರು. ಈಗ ನೀರಾವರಿ ಯೋಜನೆಗೆ ಎಷ್ಟುಕೋಟಿ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದ ಈಶ್ವರ್‌ ಖಂಡ್ರೆ ಅವರು, ಆಪರೇಷನ್‌ ಕಮಲದಿಂದ ದುರಾಡಳಿತ ಮಾಡಿ ದೇಶ ಮತ್ತು ರಾಜ್ಯದ ಆರ್ಥಿಕತೆ ಸಂಪೂರ್ಣ ಕುಸಿದು ಹೋಗಿದೆ ಎಂದರು.

Follow Us:
Download App:
  • android
  • ios