ಕೊಡಗು: ಪೊನ್ನಣ್ಣಗೆ ಕಾಂಗ್ರೆಸ್ ಟಿಕೆಟ್ ಫಿಕ್ಸ್?
ವಿರಾಜಪೇಟೆಯಲ್ಲಿ ನಡೆದ ಕಾಂಗ್ರೆಸ್ ಜನಸ್ಪಂದನಾ ಸಭೆ ವಿರಾಜಪೇಟೆ ಕ್ಷೇತ್ರದ ಟಿಕೆಟ್ ಬಹುತೇಕ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್ ಪೊನ್ನಣ್ಣಗೆ ಖಚಿತ ಎನ್ನುವುದನ್ನು ಸಾಬೀತು ಪಡಿಸಿದೆ.
ವರದಿ: ರವಿ ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು(ಫೆ.23): ಚುನಾವಣೆಗೆ ಇನ್ನು ಎರಡು ತಿಂಗಳಷ್ಟೇ ಬಾಕಿ ಇದ್ದು ವಿವಿಧ ಪಕ್ಷಗಳ ಹಲವು ಆಕಾಂಕ್ಷಿಗಳು ಈಗಾಗಲೇ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮತ್ತೊಂದೆಡೆ ಎಲ್ಲಾ ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕೆಂಬ ಜಿದ್ದಿಗೆ ಬಿದ್ದು ಕೆಲಸ ಮಾಡುತ್ತಿವೆ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟಿಗಾಗಿ ಮಾಜಿ ಎಂಎಲ್ಸಿ ವೀಣಾ ಅಚ್ಚಯ್ಯ ಮತ್ತು ಕೆಪಿಸಿಸಿ ಕಾನೂನು ಘಟಕ ಅಧ್ಯಕ್ಷ ಎ.ಎಸ್ ಪೊನ್ನಣ್ಣ ಇಬ್ಬರು ಪ್ರಭಲ ಆಕಾಂಕ್ಷಿಗಳಾಗಿದ್ದಾರೆ. ಆದರೆ ಟಿಕೆಟ್ ಯಾರಿಗೆ ಸಿಗುತ್ತೆ ಎನ್ನುವ ವಿಷಯದ ಗುಟ್ಟನ್ನು ಪಕ್ಷದ ನಾಯಕರು ಮಾತ್ರ ಬಿಟ್ಟುಕೊಟ್ಟಿಲ್ಲ. ಈಗಾಗಲೇ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಅವರ ನೇತೃತ್ವದಲ್ಲಿ ಜಿಲ್ಲೆಯ ಎರಡು ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳ ಬಗ್ಗೆ ಜನರಿಗೆ ಇರುವ ಒಲವು ಹೇಗಿದೆ ಎನ್ನುವುದನ್ನು ಗೌಪ್ಯವಾಗಿ ಸಂಗ್ರಹ ಮಾಡಿದ್ದಾರೆ. ಆದರೆ ಬುಧವಾರ ವಿರಾಜಪೇಟೆಯಲ್ಲಿ ನಡೆದ ಕಾಂಗ್ರೆಸ್ ಜನಸ್ಪಂದನಾ ಸಭೆ ವಿರಾಜಪೇಟೆ ಕ್ಷೇತ್ರದ ಟಿಕೆಟ್ ಬಹುತೇಕ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್ ಪೊನ್ನಣ್ಣಗೆ ಖಚಿತ ಎನ್ನುವುದನ್ನು ಸಾಬೀತು ಪಡಿಸಿದೆ.
ಕುಲಶಾಸ್ತ್ರ ಅಧ್ಯಯನಕ್ಕೆ 25 ಲಕ್ಷ ರು.: ಸಚಿವ ಕೋಟ ಶ್ರೀನಿವಾಸ ಪೂಜಾರಿ
ಹೌದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಜನಸ್ಪಂದನಾ ಸಭೆ ಅಂಗವಾಗಿ ಗೋಣಿಕೊಪ್ಪದಿಂದ ವಿರಾಜಪೇಟೆವರೆಗೆ ನೂರಾರು ಕಾರ್ಯಕರ್ತರು ಬೈಕ್ ಜಾಥಾ ನಡೆಸಿದರು. ನಂತರ ಸಿರಿನಿಟಿ ಹಾಲ್ ನಲ್ಲಿ ಸಮಾವೇಶ ನಡೆಯಿತು. ಸಾವಿರಾರು ಜನರು ಸಮಾವೇಶದಲ್ಲಿ ಭಾಗವಹಿಸಿ ಕಾಂಗ್ರೆಸ್ ಗೆಲ್ಲಿಸುವುದಾಗಿ ಘೋಷಣೆ ಕೂಗಿದರು. ಈ ಸಂದರ್ಭ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ ಅವರು ಈ ಕ್ಷೇತ್ರದಲ್ಲಿ ವೀಣ ಅಚ್ಚಯ್ಯ, ಪೊನ್ನಣ್ಣ ಇಬ್ಬರು ಆಕಾಂಕ್ಷಿಗಳಿದ್ದಾರೆ. ಆದರೆ ಯಾರಿಗೆ ಜನರ ಹೆಚ್ಚಿನ ಒಲವು ಇದೆಯೋ ಅವರಿಗೆ ಪಕ್ಷದಿಂದ ಟಿಕೆಟ್ ಸಿಗಲಿದೆ. ವೀಣಾ ಅಚ್ಚಯ್ಯ, ಪೊನ್ನಣ್ಣ ಇಬ್ಬರು ಅಕ್ಕ ತಮ್ಮನ ರೀತಿ ಇದ್ದೀರಿ. ಯಾರಿಗೆ ಟಿಕೆಟ್ ದೊರೆತರೂ ಹೊಂದಾಣಿಕೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು. ಅಷ್ಟೇ ಅಲ್ಲ, ಹಿಂದೆ ವೀಣ ಅಚ್ಚಯ್ಯ ಅವರು ಪಕ್ಷದಿಂದ ಸ್ಪರ್ಧಿಸಿದ್ದವರು, ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದವರು. ಅವರನ್ನು ಪಕ್ಷದಿಂದ ಎಂಎಲ್ಸಿ ಕೂಡ ಮಾಡಲಾಗಿತ್ತು ಎಂದು ಹೇಳುವ ಮೂಲಕ ನಿಮಗೆ ಈಗಾಗಲೇ ಪಕ್ಷದಿಂದ ಎಲ್ಲಾ ಅಧಿಕಾರಗಳನ್ನು ನೀಡಲಾಗಿದೆ. ನೀವು ಹೊಸಬರಿಗೆ ಅವಕಾಶ ಮಾಡಿ ಕೊಡಿ ಎನ್ನುವ ದಾಟಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ ಸಂದೇಶ ರವಾನಿಸಿದರು. ಮತ್ತೊಂದೆಡೆ ಇದೇ ಜನಸ್ಪಂದನಾ ಸಭೆಯಲ್ಲಿ ಕಾರ್ಯಕರ್ತರು, ಮುಖಂಡರು ಪೊನ್ನಣ್ಣ ಅವರನ್ನು ಹಾಡಿ ಹೊಗಳಿದ್ದು, ಪೊನ್ನಣ್ಣಗೆ ಟಿಕೆಟ್ ಫಿಕ್ಸ್ ಎನ್ನುವುದನ್ನು ಸಾಬೀತು ಪಡಿಸಿತು. ಮತ್ತೊಂದೆಡೆ ಜಾತ್ಯತೀತ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂಬ ದೃಷ್ಟಿಯಿಂದ ಜೆಡಿಎಸ್ನ ರಾಜ್ಯ ಘಟಕದ ಕಾರ್ಯದರ್ಶಿ ವಿರಾಜಪೇಟೆ ಸಂಕೇತ್ ಪೂವಯ್ಯ ಜೆಡಿಎಸ್‌ಗೆ ರಾಜೀನಾಮೆ ನೀಡಿ ಕೆಪಿಸಿಸಿ ಕಾರ್ಯಾಧ್ಯಕ್ಷ್ಯ ಆರ್ ಧ್ರುವನಾರಾಯಣ, ಮಾಜಿ ಸಚಿವ ವಿನಯಕುಮಾರ್ ಸೊರಕೆ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.
ಕಾಂಗ್ರೆಸ್ ನಿಂದಿಸುವ ಭರದಲ್ಲಿ ಭಾರತ ಭಿಕ್ಷುಕರ ದೇಶವಾಗಿತ್ತೆಂದು ನಳೀನ್ ಕುಮಾರ್ ಕಟೀಲು ವಿವಾದಾತ್ಮಕ ಹೇಳಿಕೆ
ಕೊಡವ ಮತದಾರರೇ ಹೆಚ್ಚಿರುವ ವಿರಾಜಪೇಟೆ ಕ್ಷೇತ್ರದಲ್ಲಿ ಕೊಡವರೇ ಆಗಿರುವ ಪೊನ್ನಣ್ಣ ಕಾಂಗ್ರೆಸ್ನಿಂದ ಸ್ಪರ್ಧಿಸುತ್ತಿರುವುದರಿಂದ ಕೊಡವರು ಪೊನ್ನಣ್ಣ ಅವರನ್ನು ಬೆಂಬಲಿಸುತ್ತಾರೆ ಎನ್ನಲಾಗುತ್ತಿದೆ. ಈ ಸಂದರ್ಭ ಜ್ಯಾತ್ಯತೀತ ಮತಗಳು ವಿಭಜನೆ ಆಗಬಾರದು ಎನ್ನುವ ದೃಷ್ಟಿಯಿಂದ ಜೆಡಿಎಸ್ ಅನ್ನು ತೊರೆದು ಕಾಂಗ್ರೆಸ್ ಅನ್ನು ಸೇರಿದ್ದೇನೆ ಎಂದು ಸಂಕೇತ್ ಪೂವಯ್ಯ ತಿಳಿಸಿದರು.
ಕಳೆದ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಎಚ್ಡಿಕೆಯ ಆಪ್ತ ಸಂಕೇತ ಪೂವಯ್ಯ ಕೂಡ ಕೊಡವರಾಗಿದ್ದು, ಕಳೆದ ಚುನಾವಣೆಯಲ್ಲಿ 11 ಸಾವಿರ ಮತ ಪಡೆದಿದ್ದರು. ಇದೀಗ ಕಾಂಗ್ರೆಸ್ ಸೇರ್ಪಡೆಗೊಂಡಿರುವುದರಿಂದ ಮುಂದಿನ ಚುನಾವಣೆಯಲ್ಲಿ ಇದೆಲ್ಲವೂ ಕಾಂಗ್ರೆಸ್ಗೆ ವರದಾನವಾಗಲಿದೆ ಎನ್ನಲಾಗುತ್ತಿದೆ.