MLC Election: ವಾಯವ್ಯದಲ್ಲಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುತ್ತಾ ಕಾಂಗ್ರೆಸ್?
* ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈ ಕ್ಷೇತ್ರ
* ಪರ್ಯಾಯ ಮತ್ತು ಪ್ರಯೋಗಕ್ಕೆ ಹೆಚ್ಚು ಒತ್ತು ನೀಡಿರುವ ಬಿಜೆಪಿ
* ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಸುನೀಲ ಸಂಕ ಅವರನ್ನು ಅಖಾಡಕ್ಕೆ ಇಳಿಸಿದೆ
ಬ್ರಹ್ಮಾನಂದ ಎನ್. ಹಡಗಲಿ
ಬೆಳಗಾವಿ(ಜೂ.11): ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ 33 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವುದೇ ವಾಯವ್ಯ ಪದವೀಧರರ ಕ್ಷೇತ್ರ. ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈ ಕ್ಷೇತ್ರ ಹಾಲಿ ಬಿಜೆಪಿ ತೆಕ್ಕೆಯಲ್ಲಿದೆ. ಈಗ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿಯಿಂದ ಹಾಲಿ ವಿಪ ಸದಸ್ಯ ಹಣಮಂತ ನಿರಾಣಿ ಮತ್ತು ಕಾಂಗ್ರೆಸ್‌ನಿಂದ ಅಥಣಿ ಮೂಲಕ ವಕೀಲರೂ ಆಗಿರುವ ಸುನೀಲ ಸಂಕ ಅಖಾಡದಲ್ಲಿದ್ದಾರೆ.
ಪರ್ಯಾಯ ಮತ್ತು ಪ್ರಯೋಗಕ್ಕೆ ಹೆಚ್ಚು ಒತ್ತು ನೀಡಿರುವ ಬಿಜೆಪಿ. ಪ್ರಾಥಮಿಕ ಪದರು ನಾಯಕರನ್ನು ಹೊರತುಪಡಿಸಿ ಎರಡನೇ ಪದರು ನಾಯಕರನ್ನು ಮುನ್ನೆಲೆಗೆ ತರಬೇಕು ಎಂಬ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಕರ್ನಾಟಕ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಪ್ರಯೋಗ ಮಾಡಿದೆ. ಅದರಲ್ಲಿ ಬಹುತೇಕ ಕಡೆ ಯಶಸ್ವಿ ಕೂಡ ಆಗಿದೆ. ಇದೇ ನಿಟ್ಟಿನಲ್ಲಿ ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ಸುನೀಲ ಸಂಕ ಅವರನ್ನು ಅಖಾಡಕ್ಕೆ ಇಳಿಸಿದೆ. ಇನ್ನು ಬಿಜೆಪಿಯಿಂದ ಹಾಲಿ ಪರಿಷತ್ ಸದಸ್ಯ ಹಣಮಂತ ನಿರಾಣಿಗೆ ಟಿಕೆಟ್ ನೀಡಲು ಪಕ್ಷದ ಹೈಕಮಾಂಡ್ ತೀರ್ಮಾನಿಸಿತು.
MLC Election: ಕಾಂಗ್ರೆಸ್‌ಗೆ ಮೊದಲ ಬಾರಿಗೆ ‘ದಕ್ಷಿಣ ಪದವಿ’ ಸಿಗುವುದೇ?
ನೇರ ಪೈಪೋಟಿ:
ಅಖಾಡದಲ್ಲಿ 11 ಅಭ್ಯರ್ಥಿಗಳಿದ್ದರೂ ಬಿಜೆಪಿ ಹಣಮಂತ ನಿರಾಣಿ ಮತ್ತು ಕಾಂಗ್ರೆಸ್‌ನ ಸುನೀಲ ಸಂಕ ಅವರ ನೇರ ಕಾದಾಟ ಏರ್ಪಟ್ಟಿದೆ. ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಸೇರಿದಂತೆ ಒಟ್ಟು 33 ಕ್ಷೇತ್ರಗಳಲ್ಲಿ 22 ಕ್ಷೇತ್ರಗಳಲ್ಲಿ ಬಿಜೆಪಿ, 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಉಳಿದ ಒಂದು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಅಲ್ಲದೆ, ನಾಲ್ಕು ಲೋಕಸಭಾ ಸದಸ್ಯರೂ ಇದ್ದಾರೆ. ಹೀಗಾಗಿ ಕಮಲ ಪಡೆಗೆ ಹೆಚ್ಚು ಶಕ್ತಿ ತಂದುಕೊಡಬಹುದು ಎನ್ನಲಾಗಿದೆ. ಜತೆಗೆ ಸಚಿವ ಮುರುಗೇಶ ನಿರಾಣಿ ಕೂಡ ಸಚಿವರಾಗಿರುವುದರಿಂದ ಸಹಜವಾಗಿ ಅವರ ಕುಟುಂಬ ಈ ಮೂರು ಜಿಲ್ಲೆಗಳಲ್ಲಿ ಚಿರಪರಿಚಿತ. ಇದು ಕೂಡ ಪಕ್ಷಕ್ಕೆ ಹೆಚ್ಚು ಅನುಕೂಲ ಕೊಟ್ಟಿದೆ.
ಇನ್ನು ಕಾಂಗ್ರೆಸ್ ಅಭ್ಯರ್ಥಿ ಸುನೀಲ ಸಂಕ ಕ್ಷೇತ್ರಕ್ಕೆ ಹೊಸಬರು. ಯುವಮುಖ. ರಾಜಕೀಯ ಹಿನ್ನೆಲೆ ಇರದಿದ್ದರೂ ಅವರ ಕುಟುಂಬ ಕಾಂಗ್ರೆಸ್‌ಗೆ ಸೀಮಿತವಾಗಿತ್ತು. ಹೀಗಾಗಿ ಮೂರು ಜಿಲ್ಲೆಗಳಲ್ಲಿ ಕಾಂಗ್ರೆಸ್ ಇಮೇಜ್‌ವೊಂದನ್ನೇ ಮತದಾರರ ಮುಂದಿಟ್ಟುಕೊಂಡು ಆಯಾ ಕ್ಷೇತ್ರದ ನಾಯಕರು ಪ್ರಚಾರ ನಡೆಸುತ್ತಿದ್ದಾರೆ.
ಪ್ರಚಾರದಲ್ಲಿಯೂ ಪೈಪೋಟಿ:
ಕಾಂಗ್ರೆಸ್ ಪರ ಆರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕೇವಲ ಸಭೆಗೆ ಸೀಮಿತರಾಗಿ ಪ್ರಚಾರ ನಡೆಸಿದರು. ನಂತರ ಜವಾಬ್ದಾರಿಯನ್ನು ಸ್ಥಳೀಯ ನಾಯಕರ ಹೆಗಲಿಗೆ ಹೊರಿಸಿದರು. ಅದಾದ ಬಳಿಕ ಕ್ಷೇತ್ರದಲ್ಲಿ ಅವರ ಸುಳಿವೇ ಕಾಣಲಿಲ್ಲ. ಕೊನೆಯ ಹಂತದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ ಎಳೆಯುವ ಪ್ರಯತ್ನ ನಡೆಸಿ ಹೋಗಿದ್ದಾರೆ.
ಇನ್ನು ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೇರಿದಂತೆ ಘಟಾನುಘಟಿಗಳೇ ಪ್ರಚಾರ ನಡೆಸಿರುವುದು ಬಿಜೆಪಿ ಅಭ್ಯರ್ಥಿಗೆ ಬಲತುಂಬಿದೆ. ಇದರ ಜತೆಗೆ ಯಡಿಯೂರಪ್ಪ ಬಂದು ಪ್ರಚಾರ ನಡೆಸಿರುವುದು ಲಿಂಗಾಯತ ಮತಗಳು, ಅದೇ ಸಮುದಾಯವಿರುವ ಶಾಲಾ ಕಾಲೇಜುಗಳ ಮತಗಳು ಎಲ್ಲಿಯೂ ಹೋಗದಂತೆ ಬೇಲಿ ಹಾಕಿದಂತಾಗಿದೆ. ಇದರ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಪಕ್ಷೇತರ ವಿಪ ಸದಸ್ಯ ಲಖನ್ ಜಾರಕಿಹೊಳಿ ಬೆಂಬಲ ಪಡೆದು ಜಾರಕಿಹೊಳಿ ಸಹೋದರರ ಮನವೊಲಿಸುವಲ್ಲಿ ಯಶಸ್ವಿಯಾಗಿರುವುದು ಕೂಡ ಪಕ್ಷಕ್ಕೆ ಬಲಬಂದಿದೆ.
Rajya Sabha Election: ಕಾಂಗ್ರೆಸ್ಸಿಗರ ಮೇಲೆ ಸಿದ್ದು, ಡಿಕೆಶಿ ಕಣ್ಣು
ವಾಯವ್ಯ ಪದವೀಧರ ಕ್ಷೇತ್ರದ ಪರಿಚಯ:
1976ರಲ್ಲಿ ರೂಪುಗೊಂಡಿದ್ದ ವಾಯವ್ಯ ಪದವೀಧರ ಕ್ಷೇತ್ರ ಇಂದಿಗೆ 46 ವರ್ಷವಾಯಿತು. ಕ್ಷೇತ್ರ ಆರಂಭಗೊಂಡಾಗ ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಬಿ.ಕೆ.ಗುಡದಿನ್ನಿ ಸ್ಪರ್ಧೆ ಮಾಡಿ, ಗೆಲವು ಕಂಡವರು. 1986ರವರೆಗೆ ಎರಡು ಬಾರಿ ಆಯ್ಕೆಯಾದವರು ಬಿ.ಕೆ.ಗುಡದಿನ್ನಿ. 1992ರಲ್ಲಿ ಬಿ.ಕೆ.ಗುಡದಿನ್ನಿ ಅವರನ್ನು ಜನತಾ ಪಕ್ಷದ ಅಭ್ಯರ್ಥಿಯಾಗಿದ್ದ ಡಾ.ಎಂ.ಪಿ.ನಾಡಗೌಡ ಸೋಲಿಸಿದರು. ಆಗ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದರು. ನಂತರದ ಅವಧಿಯಲ್ಲೂ ನಾಡಗೌಡ ಜನತಾ ಪರಿವಾರದ ಅಭ್ಯರ್ಥಿಯಾಗಿ ದಿ.ಜೆ.ಎಚ್.ಪಟೇಲ್ ನೇತೃತ್ವದ ಸರ್ಕಾರದ ಅವಧಿಯಲ್ಲಿ 2ನೇ ಬಾರಿಗೆ ಮೇಲ್ಮನೆ ಪ್ರವೇಶಿಸಿದ್ದರು. ನಂತರ ರಾಜಕೀಯ ಸ್ಥಿತ್ಯಂತರದ ಹಿನ್ನೆಲೆಯಲ್ಲಿ ಜನತಾದಳ ಇಬ್ಭಾಗವಾಯಿತು. ಜೆಡಿಯು ಮತ್ತು ಬಿಜೆಪಿಯ ಸಂಯುಕ್ತ ಅಭ್ಯರ್ಥಿಯಾಗಿ ಎರಡು ಬಾರಿ ನಾಡಗೌಡ ಜಯಸಾಧಿಸಿ ಸತತವಾಗಿ ನಾಲ್ಕು ಬಾರಿ ಮೇಲ್ಮನೆ ಸದಸ್ಯರಾಗಿ ಆಯ್ಕೆಯಾಗಿರುವುದು ದಾಖಲೆಯಾಗಿದೆ.
2010ರಲ್ಲಿ ಕಾಂಗ್ರೆಸ್‌ನಿಂದ ಮಹಾಂತೇಶ ಕೌಜಲಗಿ ಗೆಲವು ಸಾಧಿಸಿದರು. ಜೆಡಿಯುವಿಂದ ಸ್ಪರ್ಧೆ ಮಾಡಿದ್ದ ಎಂ.ಪಿ.ನಾಡಗೌಡ ಸೋಲನುಭವಿಸಿದರು. 2016ರಲ್ಲಿ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಹಣಮಂತ ನಿರಾಣಿ ಅವರು ಗೆಲವು ಸಾಧಿಸಿದರು.
ಮತದಾರರ ವಿವರ:
ಪುರುಷರು - 71040
ಮಹಿಳೆಯರು - 28554
ಒಟ್ಟು ಮತದಾರರು- 99598
ಅಭ್ಯರ್ಥಿಗಳ ವಿವರ
ಸುನೀಲ ಸಂಕ - ಕಾಂಗ್ರೆಸ್
ಹಣಮಂತ ನಿರಾಣಿ- ಬಿಜೆಪಿ
ಜಿ.ಸಿ.ಪಾಟೀಲ- ಸರ್ವ ಜನತಾ ಪಾರ್ಟಿ
ಯಲ್ಲಪ್ಪ ಮಹಾದೇವಪ್ಪ ಕಲಕುಟ್ರಿ- ಕರ್ನಾಟಕ ರಾಷ್ಟ್ರ ಸಮಿತಿ ಪಾರ್ಟಿ
ಆದರ್ಶಕುಮಾರ ಪೂಜಾರಿ- ಪಕ್ಷೇತರ
ಘಟಿಗೆಪ್ಪ ಮಗದುಮ್ಮ- ಪಕ್ಷೇತರ
ದೀಪಿಕಾ ಎಸ್- ಪಕ್ಷೇತರ
ನಿಂಗಪ್ಪ ಮಾರುತಿ ಭಜಂತ್ರಿ- ಪಕ್ಷೇತರ
ಭೀಮಸೇನ ಬಾಗಿ- ಪಕ್ಷೇತರ
ರಾಜನಗೌಡ ಪಾಟೀಲ- ಪಕ್ಷೇತರ
ಸುಭಾಷ ಕೋಟೇಕಲ- ಪಕ್ಷೇತರ
ಕಳೆದ ಬಾರಿಯ ಫಲಿತಾಂಶ(2016)
ಹಣಮಂತ ನಿರಾಣಿ(ಬಿಜೆಪಿ)- 43,605
ಮಹಾಂತೇಶ ಕೌಜಲಗಿ(ಕಾಂಗ್ರೆಸ್) - 20,087
ಡಾ.ಎಂ.ಪಿ.ನಾಡಗೌಡ(ಜೆಡಿಯು)-3536