Asianet Suvarna News Asianet Suvarna News

Karnataka Politics| ಸಂತೋಷ್‌ ಲಾಡ್‌ ಬಳ್ಳಾರಿಯಿಂದ ಸ್ಪರ್ಧೆ?

*  ಕಾಂಗ್ರೆಸ್‌ ವಲಯದಲ್ಲೂ ಲಾಡ್‌ ನಡೆಯ ಬಗ್ಗೆ ಕುತೂಹಲ
*  ಬಳ್ಳಾರಿಯಿಂದಲೇ ಸ್ಪರ್ಧಿಸುವಂತೆ ಲಾಡ್‌ ಬೆಂಬಲಿಗರ ಒತ್ತಾಯ
*  ಚರ್ಚೆಗಳು ನಡೆಯುತ್ತಿರಬಹುದು, ಬಳ್ಳಾರಿಯಿಂದ ಸ್ಪರ್ಧಿಸುವ ಇಚ್ಛೆ ನನಗಿಲ್ಲ: ಲಾಡ್‌ 
 

Is it Congress Leader Santosh Lad Contest From Ballari in Karnataka Assembly Election grg
Author
Bengaluru, First Published Nov 13, 2021, 12:15 PM IST

ಕೆ.ಎಂ. ಮಂಜುನಾಥ್‌

ಬಳ್ಳಾರಿ(ನ.13):  ಮಾಜಿ ಸಚಿವ ಸಂತೋಷ್‌ ಲಾಡ್‌(Santosh Lad) ಬರುವ ವಿಧಾನಸಭಾ ಚುನಾವಣೆಯಲ್ಲಿ(Assembly Election)ಬಳ್ಳಾರಿ(Ballari) ನಗರದಿಂದ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆಯೇ? ರಾಜಕೀಯ(Politics) ವಲಯದಲ್ಲಿ ಇಂಥದ್ದೊಂದು ಗುಮಾನಿ ಮೂಡಿಸಿದೆ. ಅಷ್ಟೇ ಅಲ್ಲ; ಕಾಂಗ್ರೆಸ್‌ ವಲಯದಲ್ಲೂ ಲಾಡ್‌ ನಡೆಯ ಬಗ್ಗೆ ಕುತೂಹಲವಿದ್ದು, ಬಳ್ಳಾರಿಯಿಂದಲೇ ಸ್ಪರ್ಧಿಸಲು ತಯಾರಿ ಮಾಡಿಕೊಳ್ಳುತ್ತಿರುವ ಕುರಿತು ಚರ್ಚೆಯಾಗುತ್ತಿದೆ.

ಧಾರವಾಡ(Dharwad) ಜಿಲ್ಲೆಯ ಕಲಘಟಗಿಯಿಂದಲೇ(Kalaghatagi)  ನಾನು ಸ್ಪರ್ಧೆ ಮಾಡುವೆ ಎಂದು ಈ ಹಿಂದೆ ಲಾಡ್‌ ಹೇಳಿಕೆ ನೀಡಿದ್ದರು. ಆದರೆ, ಮೂಲಗಳ ಪ್ರಕಾರ ಕಲಘಟಗಿಯಿಂದ ಟಿಕೆಟ್‌ ಸಿಗುವುದು ಅನುಮಾನ ಎಂಬುದು ಕೈ ಪಕ್ಷದಲ್ಲಿಯೇ ಕೇಳಿಬರುತ್ತಿರುವ ಮಾತು. ಹೀಗಾಗಿಯೇ ಬಳ್ಳಾರಿಯಿಂದ ಸ್ಪರ್ಧೆಗೆ ಅಣಿಯಾಗುತ್ತಿದ್ದಾರೆ. ಹೀಗಾಗಿ ವಿವಿಧ ಸೇವಾ ಕೈಂಕರ್ಯಗಳನ್ನು ಶುರು ಮಾಡಿದ್ದಾರೆ.

ನಾನು ಕಲಘಟಗಿಯಿಂದಲೇ ಸ್ಪರ್ಧಿಸುತ್ತೇನೆ: ಸಂತೋಷ್‌ ಲಾಡ್‌

ಬಳ್ಳಾರಿ ನಗರದಲ್ಲಿ ಎರಡು ಕಡೆ ನಿತ್ಯ ನೂರಾರು ಜನರಿಗೆ ಉಚಿತ ಊಟ ನೀಡುವ ಯೋಜನೆಗೆ ಚಾಲನೆ ನೀಡಿರುವ ಸಂತೋಷ್‌ ಲಾಡ್‌, ಈಚೆಗೆ ನಗರದ ಬಸವಭವನದಲ್ಲಿ ನೂರಾರು ಆಶಾ ಕಾರ್ಯಕರ್ತೆಯರಿಗೆ ಸನ್ಮಾನಿಸಿ, ಕಿಟ್‌ ವಿತರಣೆ ಮಾಡಿದರು. ಲಾಡ್‌ ಬಳ್ಳಾರಿಗೆ ಪ್ರತಿ ಬಾರಿ ಬಂದಾಗಲೂ ಅಭಿಮಾನಿಗಳು(Fans) ರೋಡ್‌ಶೋ(Roadshow) ನಡೆಸುತ್ತಿದ್ದು, ನೂರಾರು ಯುವಕರು ಬೈಕ್‌ ರಾರ‍ಯಲಿಯಲ್ಲಿ(Bike Rally) ಭಾಗವಹಿಸುತ್ತಿದ್ದಾರೆ. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ನಗರದಲ್ಲಿ ಅಭಿಮಾನಿ ಬಳಗ ಹಾಗೂ ಬೆಂಬಲಿಗರ ಪಡೆಯನ್ನು ಕಟ್ಟಿಕೊಂಡಿರುವ ಸಂತೋಷ್‌ ಲಾಡ್‌, ಕಾಂಗ್ರೆಸ್‌(Congress) ಭದ್ರಕೋಟೆಯಾಗಿರುವ ಬಳ್ಳಾರಿ ನಗರದಿಂದ ಸ್ಪರ್ಧಿಸುವುದರಿಂದ ಗೆಲುವು ಸುಲಭ ಎಂಬ ನಿರ್ಧಾರಕ್ಕೆ ಬಂದಿದ್ದು ಹೀಗಾಗಿಯೇ ಅನೇಕ ಜನಪರ ಸೇವಾ ಕಾರ್ಯಗಳತ್ತ ದೃಷ್ಟಿಹರಿಸಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಕಲಘಟಗಿಯಿಂದಲೇ ಸ್ಪರ್ಧೆ?:

ಕಲಘಟಗಿ ಕ್ಷೇತ್ರದಿಂದ ಈ ಬಾರಿ ಸಂತೋಷ್‌ ಲಾಡ್‌ರಿಗೆ ಕಾಂಗ್ರೆಸ್‌ ಟಿಕೆಟ್‌ ಸಿಗುವುದು ಅನುಮಾನ. ಲಾಡ್‌ ಸಿದ್ದರಾಮಯ್ಯ(Siddaramaiah) ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವುದರಿಂದ ಕೆಪಿಸಿಸಿ(KPCC) ಅಧ್ಯಕ್ಷ ಡಿ.ಕೆ. ಶಿವಕುಮಾರ್‌(DK Shivakumar) ಅವರು ಕಲಘಟಗಿಯಲ್ಲಿ ಲಿಂಗಾಯತ ಸಮುದಾಯದ(Lingayat Community) ಪ್ರಭಾವಿ ನಾಯಕ ನಾಗರಾಜ ಛಬ್ಬಿ(Nagaraj Chabbi) ಅವರಿಗೆ ಟಿಕೆಟ್‌ ನೀಡುವುದು ಖಚಿತ ಎಂಬ ಸುಳಿವು ಸಿಕ್ಕಿದ್ದು, ಸುರಕ್ಷತೆ ದೃಷ್ಟಿಯಿಂದ ಬಳ್ಳಾರಿಯನ್ನು ಮತ್ತೊಂದು ಆಯ್ಕೆಯಾಗಿ ಇಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಅತಿವೃಷ್ಟಿಗೆ ನಲುಗಿದ ಧಾರವಾಡ: ಪ್ರವಾಹ ಸಂತ್ರಸ್ತರ ಪರ ಸಂತೋಷ್ ಲಾಡ್ ಹೋರಾಟ

ಏತನ್ಮಧ್ಯೆ ಲಾಡ್‌ ಬೆಂಬಲಿಗರು ಬಳ್ಳಾರಿಯಿಂದಲೇ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಉತ್ತಮ ಕೆಲಸ ಮಾಡಿರುವುದು ಸಹ ಅನುಕೂಲವಾಗುತ್ತದೆ. ರಾಜ್ಯದಲ್ಲಿ(Karnataka) ಆಡಳಿತ ವಿರೋಧ ಅಲೆ ಇರುವುದರಿಂದ ಕಮಲ ಅಭ್ಯರ್ಥಿಯನ್ನು ಸುಲಭವಾಗಿ ಮಣಿಸಬಹುದು ಎಂಬುದು ಬೆಂಬಲಿಗರ ಲೆಕ್ಕಾಚಾರ. ಆದರೆ, ಲಾಡ್‌ ಇದಕ್ಕೆ ಸಮ್ಮತಿ ನೀಡಿಲ್ಲ. ಕಲಘಟಗಿಯಿಂದ ಸ್ಪರ್ಧಿಸುವ ಕುರಿತು ಯೋಚನೆಯಲ್ಲಿದ್ದು, ಬಳ್ಳಾರಿ ಜನರ ಪ್ರೀತಿ ವಿಶ್ವಾಸಕ್ಕೆ ವಿವಿಧ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿರುವುದಾಗಿ ಹೇಳುತ್ತಾರೆ.

ಬಳ್ಳಾರಿಯಿಂದ ಸ್ಪರ್ಧಿಸುವ ಇಚ್ಛೆ ನನಗಿಲ್ಲ. ಚರ್ಚೆಗಳು ನಡೆಯುತ್ತಿರಬಹುದು. ಆದರೆ, ಶೇ. 1ರಷ್ಟು ಸಹ ನಾನು ಸ್ಪರ್ಧಿಸುವೆ ಎಂಬ ಸಂಗತಿ ನಿಜವಲ್ಲ. ನಿತ್ಯ ನೂರಾರು ಜನರಿಗೆ ಊಟ ವಿತರಣೆ, ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಮಾಡಿರುವುದು ಬಳ್ಳಾರಿ ಜನರ ಪ್ರೀತಿ ವಿಶ್ವಾಸಕ್ಕೆ. ಅದು ನಿರಂತರವಾಗಿ ಮುಂದುವರಿಯುತ್ತದೆ. ನನ್ನನ್ನು ಪ್ರೀತಿಸುವ, ಬೆಂಬಲಿಸುವ ನೂರಾರು ಜನರು ಬಳ್ಳಾರಿಯಲ್ಲಿದ್ದಾರೆ. ಅವರ ಪ್ರೀತಿ- ವಿಶ್ವಾಸ ಉಳಿಸಿಕೊಳ್ಳುವುದು ನನ್ನ ಕರ್ತವ್ಯ. ಹೀಗಾಗಿ ಅನೇಕ ಸೇವಾ ಕಾರ್ಯ ನಡೆಸುತ್ತಿರುವೆ ಎಂದು ಮಾಜಿ ಸಚಿವ ಸಂತೋಷ್‌ ಲಾಡ್‌ ತಿಳಿಸಿದ್ದಾರೆ.  
 

Follow Us:
Download App:
  • android
  • ios