ರಾಯಚೂರು ಕದನ: ಬಿಜೆಪಿ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಹಾಕುತ್ತಾ ಕಾಂಗ್ರೆಸ್?
ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರೋ ಬಿಜೆಪಿ ಅಭ್ಯರ್ಥಿ ಪಾಟೀಲ್, ಸದಾ ಮುಸ್ಲಿಂ ಅಭ್ಯರ್ಥಿಗೆ ಮಣೆ ಹಾಕುತ್ತಿರುವ ಕಾಂಗ್ರೆಸ್, ಸೈಯದ್ ಯಾಸೀನ್‌ಗೆ ಈ ಬಾರಿಯೂ ‘ಕೈ’ ಟಿಕೆಟ್ ಸಿಗುತ್ತಾ?.
ರಾಮಕೃಷ್ಣ ದಾಸರಿ
ರಾಯಚೂರು(ಏ.14): ಜಿಲ್ಲೆಯ ಶಕ್ತಿ ಕೇಂದ್ರ ಎನಿಸಿಕೊಂಡಿರುವ ರಾಯಚೂರು ನಗರ ವಿಧಾನಸಭಾ ಕ್ಷೇತ್ರ ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರ ಕೋಟೆ. ಆದರೆ, ಕಳೆದ ಎರಡೂ ಅವಧಿಯಲ್ಲಿ ಸೋಲು ಕಂಡಿದ್ದು, ಅದರ ಸೇಡನ್ನು ಪ್ರಸಕ್ತ ಚುನಾವಣೆಯಲ್ಲಿ ತೀರಿಸಿಕೊಳ್ಳುವ ತವಕದಲ್ಲಿದೆ. ಕ್ಷೇತ್ರದ ಇತಿಹಾಸದಲ್ಲಿ ಎರಡು ಸಲ ಗೆಲುವು ಕಂಡಿರುವ ಬಿಜೆಪಿ ಮೂರನೇ ಬಾರಿ ಗೆಲ್ಲಬೇಕು ಎನ್ನುವ ಛಲ ಹೊಂದಿದೆ. ಅದೇ ರೀತಿ ಹಾಲಿ ಶಾಸಕ ಡಾ.ಶಿವರಾಜ ಪಾಟೀಲ್ ಕೂಡ ಸತತ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ, ಪಕ್ಷದ ಟಿಕೆಟ್ ಪಡೆದಿರುವ ಡಾ.ಶಿವರಾಜ ಪಾಟೀಲ್ ಹ್ಯಾಟ್ರಿಕ್ ಗೆಲುವು ಸಾಧಿಸಲು ರಣತಂತ್ರ ರೂಪಿಸುತ್ತಿದ್ದಾರೆ. ಬಿಜೆಪಿಯ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಹಾಕಲು ಕಾಂಗ್ರೆಸ್ ಕೂಡ ತೀವ್ರ ಕಸರತ್ತು ನಡೆಸುತ್ತಿದೆ.
ಕಾಂಗ್ರೆಸ್ನಿಂದ 17 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಇವರಲ್ಲಿ ಮಾಜಿ ಶಾಸಕರಾದ ಸೈಯದ್ ಯಾಸೀನ್ ಹಾಗೂ ಎನ್.ಎಸ್.ಬೋಸರಾಜು ಹೆಸರು ಅಂತಿಮ ಪಟ್ಟಿಯಲ್ಲಿದೆ. ಹಿಂದಿನಿಂದಲೂ ಕಾಂಗ್ರೆಸ್ ಮುಸ್ಲಿಂ ಸಮುದಾಯದವರಿಗೆ ಟಿಕೆಟ್ ನೀಡುತ್ತಾ ಬಂದಿದೆ. ಈ ಬಾರಿಯೂ ಮುಸ್ಲಿಂ ಸಮಾಜಕ್ಕೆ ಟಿಕೆಟ್ ನೀಡಬೇಕು ಎನ್ನುವ ಕೂಗು ಕ್ಷೇತ್ರದಲ್ಲಿ ಬಲವಾಗಿ ಕೇಳಿ ಬರುತ್ತಿದೆ. ಕಳೆದೆರಡು ಚುನಾವಣೆಯಲ್ಲಿ ಸೋಲುಂಡಿರುವ ಮಾಜಿ ಶಾಸಕ ಸೈಯದ್ ಯಾಸೀನ್‌ಗೆ ಟಿಕೆಟ್ ತಪ್ಪಿದರೆ ಅದೇ ಸಮುದಾಯದವರಿಗೆ ಟಿಕೆಟ್ ಕೊಡಬೇಕು ಎನ್ನುವ ಒತ್ತಡವನ್ನು ಹೈಕಮಾಂಡ್ ಮೇಲೆ ಹೇರಲಾಗಿದೆ. ಇನ್ನು, ಜೆಡಿಎಸ್ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ. ಜೆಡಿಎಸ್ನಿಂದ ಅಧಿಕೃತವಾಗಿ ಟಿಕೆಟ್ ಘೋಷಣೆಯಾಗದೆ ಇದ್ದರೂ, ಇ.ವಿನಯ್ ಕುಮಾರ್ ಅವರು ಕ್ಷೇತ್ರದಲ್ಲಿ ಜೆಡಿಎಸ್ ಪರ ಪ್ರಚಾರ ಕೈಗೊಂಡಿದ್ದಾರೆ. ಕಾಂಗ್ರೆಸ್, ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುತ್ತದೋ, ಇಲ್ವೋ ಎನ್ನುವುದನ್ನಾಧರಿಸಿ ಜೆಡಿಎಸ್ ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆಯಿದೆ.
ಟಿಕೆಟ್ ಘೋಷಣೆ ವಿಳಂಬ: ರಾಯಚೂರಲ್ಲಿ ರಂಗೇರದ ಚುನಾವಣಾ ಅಖಾಡ..!
ಈಗಾಗಲೇ ಎರಡು ಸಲ ಶಾಸಕರಾಗಿರುವ ಡಾ.ಶಿವರಾಜ ಪಾಟೀಲ್ ಅವರು ಮತ್ತೊಮ್ಮೆ ಬಿಜೆಪಿಯಿಂದ ಕಣಕ್ಕಿಳಿದು ಮೂರನೇ ಬಾರಿಯೂ ಶಾಸಕರಾಗಲು ಪ್ರಯತ್ನ ನಡೆಸಿದ್ದಾರೆ. 2013ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ನಿಂದ ಮೊದಲ ಬಾರಿಗೆ ಶಾಸಕರಾಗಿದ್ದ ಡಾ.ಶಿವರಾಜ ಪಾಟೀಲ್, 2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆದು ಗೆದ್ದು, 2ನೇ ಸಲ ಶಾಸಕರಾದರು. ಡಾ.ಶಿವರಾಜ ಪಾಟೀಲ್ ಅವರು ತಾವು ಎದುರಿಸಿದ ಎರಡೂ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಸೈಯದ್ ಯಾಸೀನ್ ಅವರನ್ನೇ ಸೋಲಿಸಿದ್ದು, ಮೂರನೇ ಬಾರಿಯೂ ಕಾಂಗ್ರೆಸ್ಗೆ ಸೋಲಿನ ರುಚಿ ತೋರಿಸಲು ಸಜ್ಜಾಗಿದ್ದಾರೆ.
ಕ್ಷೇತ್ರದಲ್ಲಿ ಈವರೆಗೆ 14 ವಿಧಾನಸಭಾ ಚುನಾವಣೆಗಳು ನಡೆದಿವೆ. ಆ ಪೈಕಿ, ಕೇವಲ 2 ಬಾರಿ (2004 ರಲ್ಲಿ ಎ.ಪಾಪಾರೆಡ್ಡಿ, 2018ರಲ್ಲಿ ಡಾ.ಶಿವರಾಜ ಪಾಟೀಲ್) ಮಾತ್ರ ಬಿಜೆಪಿ ಗೆದ್ದಿದ್ದು, ಈ ಸಲ ಹ್ಯಾಟ್ರಿಕ್ ಬಾರಿಸುವ ಮೂಲಕ ಕ್ಷೇತ್ರವನ್ನು ತನ್ನ ಹಿಡಿತದಲ್ಲೇ ಇಟ್ಟುಕೊಳ್ಳುವುದಕ್ಕೆ ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಕಾಂಗ್ರೆಸ್ನಿಂದ 5 ಸಲ ನಿರಂತರವಾಗಿ ಸ್ಪರ್ಧಿಸಿದ್ದ ಸೈಯದ್ ಯಾಸೀನ್ 1999, 2008ರಲ್ಲಿ ಗೆದ್ದು ಶಾಸಕರಾಗಿದ್ದರು. 2004, 2013 ಮತ್ತು 2018ರಲ್ಲಿ ಸೋತಿದ್ದಾರೆ.
ಕ್ಷೇತ್ರದ ಹಿನ್ನೆಲೆ:
ಇಲ್ಲಿಯ ತನಕ ನಡೆದ 14 ವಿಧಾನಸಭಾ ಚುನಾವಣೆಗಳಲ್ಲಿ 7 ಬಾರಿ ಕಾಂಗ್ರೆಸ್, ತಲಾ ಎರಡು ಬಾರಿ ಬಿಜೆಪಿ-ಜನತಾದಳ, ತಲಾ ಒಂದು ಬಾರಿ ಎಸ್ಎಸ್ಪಿ - ಜನತಾ ಪಕ್ಷ ಹಾಗೂ ಜೆಡಿಎಸ್ಗಳು ಗೆದ್ದಿವೆ. ಪ್ರಸ್ತುತ ಶಾಸಕರಾಗಿರುವ ಡಾ.ಶಿವರಾಜ ಪಾಟೀಲ್ ಅವರು ಸತತ ಎರಡು ಸಲ ಗೆಲುವು ಕಂಡಿದ್ದು, ಮೂರನೇ ಬಾರಿ ಕಣಕ್ಕಿಳಿಯಲು ಯತ್ನ ನಡೆಸಿದ್ದಾರೆ.
ರಾಯಚೂರಲ್ಲಿ ಮತ್ತೊಮ್ಮೆ ಬಿಜೆಪಿ ಬಾವುಟ ಹಾರಿಸುತ್ತೇನೆ: ಡಾ.ಶಿವರಾಜ್ ಪಾಟೀಲ್
ಜಾತಿ ಲೆಕ್ಕಾಚಾರ:
ರಾಯಚೂರು ನಗರ ಕ್ಷೇತ್ರದಲ್ಲಿ ಒಟ್ಟು 2,29,475 ಮತದಾರರಿದ್ದಾರೆ. ಇವರಲ್ಲಿ ಮುಸ್ಲಿಂ ಮತ್ತು ಎಸ್ಸಿ,ಎಸ್ಟಿವರ್ಗದವರೇ ನಿರ್ಣಾಯಕರು. ಕ್ಷೇತ್ರದಲ್ಲಿ 63,000 ಮುಸ್ಲಿಮರು, 55,000 ಪರಿಶಿಷ್ಟಜಾತಿ-ಪರಿಶಿಷ್ಟಪಂಗಡದವರು, 30,000 ಒಬಿಸಿ ಹಾಗೂ 25,000 ಲಿಂಗಾಯತರಿದ್ದಾರೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.