ರಾಂಚಿ[ಮಾ.12]: ಕಮಲ್‌ನಾಥ್‌ ನೇತೃತ್ವದ ಮಧ್ಯಪ್ರದೇಶದ ಕಾಂಗ್ರೆಸ್‌ ಸರ್ಕಾರ ಪತನಗೊಳ್ಳುತ್ತಿದ್ದಂತೆ ಬಿಜೆಪಿ ತನ್ನ ದೃಷ್ಟಿಯನ್ನು ಜೆಎಂಎಂ- ಕಾಂಗ್ರೆಸ್‌ ಆಳ್ವಿಕೆಯ ಜಾರ್ಖಂಡ್‌ನತ್ತ ಹರಿಸುವ ಸಾಧ್ಯತೆ ಇದೆ ಎಂಬ ವಾದಗಳು ಕೇಳಿಬಂದಿವೆ.

ಕಾಂಗ್ರೆಸ್‌ ಮಿತ್ರಕೂಟದಿಂದ ಮುಖ್ಯಮಂತ್ರಿ ಹೇಮಂತ ಸೊರೇನ್‌ ಅವರನ್ನು ಸೆಳೆದು, ಕಾಂಗ್ರೆಸ್ಸಿಗೆ ಮತ್ತೊಂದು ಆಘಾತ ನೀಡುವ ಸಂಭವವಿದೆ ಎಂದು ಹೇಳಲಾಗಿದೆ. ಇದಕ್ಕೆ ಪೂರಕವಾಗಿಯೇ ಜೆವಿಎಂ ನಾಯಕ ಬಾಬುಲಾಲ್‌ ಮರಾಂಡಿ ಅವರನ್ನು ಪಕ್ಷಕ್ಕೆ ಕರೆತರಲಾಗಿದೆ ಎಂದು ಮರಾಂಡಿ ಅವರ ಆಪ್ತರೊಬ್ಬರು ತಿಳಿಸಿದ್ದಾರೆ.

ಜೆಎಂಎಂ- ಕಾಂಗ್ರೆಸ್‌ ಸರ್ಕಾರ ಜಾರ್ಖಂಡ್‌ನಲ್ಲಿ ಕಳೆದ ಡಿಸೆಂಬರ್‌ನಲ್ಲಿ ಅಧಿಕಾರಕ್ಕೆ ಬಂದಿದೆ. ಆದರೆ ಎರಡೂ ಪಕ್ಷಗಳ ನಡುವೆ ತಾಳಮೇಳ ಇಲ್ಲ. ಕ್ರೈಸ್ತರೊಬ್ಬರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್‌ ಒತ್ತಡ ಹೇರುತ್ತಿದ್ದರೂ ಸೊರೇನ್‌ ಕೇಳುತ್ತಿಲ್ಲ. ಅಲ್ಲದೆ ಲಘು ಹಿಂದುತ್ವ ನೀತಿಯನ್ನು ಅವರು ಅನುಸರಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

81 ಸ್ಥಾನ ಬಲದ ರಾಜ್ಯ ವಿಧಾನಸಭೆಯಲ್ಲಿ ಜೆಎಎಂ 29, ಕಾಂಗ್ರೆಸ್‌ 18, ಬಿಜೆಪಿ 26, ಇತರರು 7 ಸ್ಥಾನ ಹೊಂದಿದ್ದಾರೆ. 1 ಸ್ಥಾನ ಖಾಲಿ ಇದೆ.