ಪಕ್ಷೇತರ ಅಭ್ಯರ್ಥಿ ಸೌಭಾಗ್ಯ ಬಸವರಾಜನ್ ಬಿಜೆಪಿಗೆ ಕರೆ ತಂದ ಕೋಟೆನಾಡಿನ ಚುನಾವಣಾ ಚಾಣಾಕ್ಯ ತಿಪ್ಪಾರೆಡ್ಡಿ, ಮಾಜಿ‌ ಶಾಸಕ ಎಸ್.ಕೆ ಬಸವರಾಜನ್, ಪತ್ನಿ ಸೌಭಾಗ್ಯ ಬಿಜೆಪಿಗೆ ಸಪೋರ್ಟ್, ಸ್ಥಳೀಯ ಅಭ್ಯರ್ಥಿ ಗೆಲ್ಲುವುದು ಮುಖ್ಯ ಎಂದು ತಿಪ್ಪಾರೆಡ್ಡಿಗೆ ಸಪೋರ್ಟ್ ಎಂದ ಎಸ್ ಕೆ ಬಸವರಾಜನ್.

ವರದಿ: ಕಿರಣ್ ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ(ಮೇ.05): ಚುನಾವಣೆಗೂ ಮುನ್ನವೇ ಬಿಜೆಪಿ ಆಪರೇಷನ್ ಕಮಲ ಆರಂಭಿಸಿದೆ. ಚಿತ್ರದುರ್ಗ ಕ್ಷೇತ್ರದಲ್ಲಿ ನಿರ್ಣಾಯಕ ಎನಿಸಿರುವ ಲಿಂಗಾಯತ ಮತಗಳನ್ನು ತಮ್ಮತ್ತ ಸೆಳೆಯಲು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿದ್ದ ಸೌಭಾಗ್ಯ ಬಸವರಾಜನ್‌ಗೆ ಬಿಜೆಪಿ ಗಾಳ ಹಾಕಿದೆ. ಇದು ಕಾಂಗ್ರೆಸ್ ಅಭ್ಯರ್ಥಿಗೆ ನುಂಗಲಾರದ ತುತ್ತಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ..

ನೋಡಿ ಹೀಗೆ ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ. ಮಾಜಿ ಶಾಸಕ ಬಸವರಾಜನ್ ದಂಪತಿಗಳ ಸೇರ್ಪಡೆಯಿಂದ ಹಿರಿಯ ಶಾಸಕ‌ ತಿಪ್ಪಾರೆಡ್ಡಿಗೆ ಆನೆಬಲ. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು, ಕೋಟೆನಾಡು ಚಿತ್ರದುರ್ಗ. ಹೌದು, ರಾಜಕೀಯದಲ್ಲಿ‌ ಯಾರು‌ ಮಿತ್ರರಲ್ಲ, ಯಾರು ಶತ್ರುಗಳಲ್ಲ ಅನ್ನೋದಕ್ಕೆ ಚಿತ್ರದುರ್ಗ ಕ್ಷೇತ್ರ ತಾಜಾ ಉಧಾಹರಣೆ. ಕಳೆದ 25 ವರ್ಷಗಳಿಂದ ಬದ್ಧ ವೈರಿಗಳೆಂದೇ ಬಿಂಬಿತರಾಗಿದ್ದ ಚಿತ್ರದುರ್ಗ ಮಾಜಿ ಶಾಸಕ‌ ಎಸ್.ಕೆ.‌‌ ಬಸವರಾಜನ್ ಹಾಗೂ ಶಾಸಕ ತಿಪ್ಪಾರೆಡ್ಡಿ ಹಾಲುಜೇನಿನಂತೆ ಒಂದಾಗಿದ್ದಾರೆ. 2023ರ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಬಸವರಾಜನ್ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅವರ ಪತ್ನಿ ಸೌಭಾಗ್ಯ ಅವರನ್ನು ಕಾಂಗ್ರೆಸ್ ಬಂಡಾಯ‌ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ರು. ಆದ್ರೆ ಕ್ಷೇತ್ರದಲ್ಲಿನ‌ ಜನರ ನಾಡಿಮಿಡಿ ಅರಿತ ಸೌಭಾಗ್ಯ ತಮ್ಮ ಸ್ಪರ್ಧೆಯಿಂದ ಕಾಂಗ್ರೆಸ್ ಲಾಭವಾಗುವುದೆಂಬ ನಿಟ್ಟಿನಲ್ಲಿ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಬೆಂಬಲಿಸಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. 

Chitradurga Constituencies: ದುರ್ಗದಲ್ಲಿ ಬಿಜೆಪಿ ಕೋಟೆ ಛಿದ್ರಗೊಳಿಸಲು ಕಾಂಗ್ರೆಸ್ ರಣತಂತ್ರ!

ಇನ್ನೂ ಬಿಜೆಪಿ ಸೇರ್ಪಡೆ ಕುರಿತು ಸ್ವತಃ ಎಸ್.ಕೆ. ಬಸವರಾಜನ್ ಹಾಗೂ ಅವರ ಪತ್ನಿ ಹಾಗೂ ಪಕ್ಷೇತರ ಅಭ್ಯರ್ಥಿ ಆಗಿದ್ದ ಸೌಭಾಗ್ಯ ಅವರನ್ನೇ ಕೇಳಿದ್ರೆ, ಚಿತ್ರದುರ್ಗ ಕ್ಷೇತ್ರದಲ್ಲಿ ಸ್ಥಳೀಯ ಅಭ್ಯರ್ಥಿ ಗೆಲ್ಲಬೇಕು ಎಂಬುದೇ ನಮ್ಮ ಮೂಲ ಉದ್ದೇಶ. ಕಳೆದ 20 ವರ್ಷಗಳಿಂದಲೂ ಚಿತ್ರದುರ್ಗ ಕ್ಷೇತ್ರದಲ್ಲಿ ತಿಪ್ಪಾರೆಡ್ಡಿ ಬಿಟ್ರೆ ಬಸವರಾಜನ್ ಇಬ್ಬರ ಮಧ್ಯೆ ಮಾತ್ರ ಟಫ್ ಫೈಟ್ ನಡೆಯುತ್ತಿತ್ತು. ಆದ್ರೆ ಕಳೆದ ಚುನಾವಣೆಯಿಂದ ಹೊರಗಿನಿಂದ ಬಂದವರು ಹಣ ಬಲದಿಂದ ಚುನಾವಣೆ ನಡೆಸುತ್ತಿದ್ದಾರೆ. ಚುನಾವಣೆ ಸೋತ ಬಳಿಕ ಐದು ವರ್ಷ ಕ್ಷೇತ್ರದ ಕಡೆ ತಿರುಗಿ ನೋಡದವರಿಗೆ ಮತ ಹಾಕುವುದು ಬೇಡ ಎನಿಸಿತು. ಕ್ಷೇತ್ರದ ಬಹುತೇಕ ಮಹಿಳೆಯರು ಕಾಂಗ್ರೆಸ್ ಅಭ್ಯರ್ಥಿಯ ಕುರಿತು ಬೇರೆದೆ ಅಭಿಪ್ರಾಯ ಇದೆ. ಇದಲ್ಲದೇ ನಮ್ಮ ಸಮುದಾಯದ ಮುಖಂಡರು ಕೂಡ ಮುಂದಿನ ಸಮಾಜದ ಭವಿಷ್ಯದ ದೃಷ್ಟಿಯಿಂದ ನೀವು ಬಿಜೆಪಿಗೆ ಸಪೋರ್ಟ್ ಮಾಡಿ ಎಂದು ಸಲಹೆ ‌ನೀಡಿದ ಪರಿಣಾಮ ಇಂದು ನಾವು ಬಿಜೆಪಿಗೆ ಬೆಂಬಲ ಸೂಚಿಸಿ ಪಕ್ಷೇತರ ಕಣದಿಂದ‌ ನಿವೃತ್ತಿ ಹೊಂದುತ್ತಿದ್ದೀವಿ. ಪ್ರಾಮಾಣಿಕವಾಗಿ ಪಕ್ಷದಲ್ಲಿ ಕಾರ್ಯ ಪ್ರವೃತ್ತರಾಗಿ ತಿಪ್ಪಾರೆಡ್ಡಿ ಗೆಲುವಿಗೆ ಶ್ರಮಿಸುತ್ತೀವಿ ಎಂದರು.

ಒಟ್ಟಾರೆ ರಾಜಕಾರಣದಲ್ಲಿ ಶತೃಗಳು ಮಿತ್ರ ಆಗೋದು, ಮಿತ್ರರು ಶತೃ ಆಗೋದು ಸರ್ವೇ ಸಾಮಾನ್ಯ. ಒಂದು ಕಾಲದಲ್ಲಿ ಹಾವು, ಮುಂಗುಸಿಯಂತಿದ್ದ ತಿಪ್ಪಾರೆಡ್ಡಿ ಎಸ್.ಕೆ. ಬಸವರಾಜನ್ ಒಂದು ಒಂದಾಗಿರೋದು ಈ ಚುನಾವಣೆಯಲ್ಲಿ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.