ಬಿಜೆಪಿ ಸೇರ್ತಾರಾ ರವಿ ಚನ್ನಣ್ಣನವರ್? ಸ್ಪಷ್ಟನೆ ಕೊಟ್ಟ ಐಪಿಎಸ್ ಅಧಿಕಾರಿ
* ರವಿ ಡಿ. ಚನ್ನಣ್ಣನವರ್ ಅವರು ರಾಜಕೀಯಕ್ಕೆ ಎಂಟ್ರಿಕೊಡ್ತಾರಾ?
* ಸ್ಪಷ್ಟನೆ ಕೊಟ್ಟ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್
* ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಭೇಟಿ ಫೋಟೋ ವೈರಲ್ ಆಗಿತ್ತು
ಬೆಂಗಳೂರು, (ಆ.06): ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಅವರು ರಾಜಕೀಯಕ್ಕೆ ಎಂಟ್ರಿಕೊಡ್ತಾರಾ ಎನ್ನುವ ಸುದ್ದಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಇನ್ನು ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ರವಿ ಡಿ. ಚನ್ನಣ್ಣನವರ್, ನಾನು ರಾಜಕೀಯಕ್ಕೆ ಸೇರುವ ಕುರಿತಂತೆ ಹಬ್ಬಿರುವ ಸುದ್ದಿಗಳು ಸತ್ಯಕ್ಕೆ ದೂರವಾದವು ಎಂದು ಸ್ಪಷ್ಟಪಡಿಸಿದ್ದಾರೆ.
ರವಿ ಚನ್ನಣ್ಣನವರ್ ಡಿಐಜಿ ಆದರೆ ಮಾಡುವ ಮೊದಲ ಕೆಲಸ!
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ನಾನು 'ಭರವಸೆ' ಎಂಬ ಪುಸ್ತಕ ಬರೆಯುತ್ತಿದ್ದು ಅದರ ನಿಮಿತ್ತ ಇತ್ತೀಚಿಗೆ ನನ್ನ ರಜೆಯ ದಿನದ ಸಮಯದಲ್ಲಿ ನನ್ನ ಹಳೇಯ ಸ್ನೇಹಿತರು, ಮತ್ತು ದೇವಸ್ಥಾನಗಳು, ಹಾಗೂ ಶ್ರೀಮಠಗಳನ್ನು ಭೇಟಿ ಮಾಡಿ ಮಾಹಿತಿ ಕಲೆ ಹಾಕುತ್ತಿದ್ದೆನೆ ಅಷ್ಟೇ.
ಆದರೆ ಕೆಲವು ಮಾಧ್ಯಮಗಳು ಇದಕ್ಕೆ ಅಪಾರ್ಥ ಕಲ್ಪಿಸಿ ರಾಜಕೀಯ ಸೇರುತ್ತಿರುವದಾಗಿ ಸುದ್ದಿ ಬಿತ್ತರಿಸುತ್ತಿವೆ. ಅದಕ್ಕೆ ಯಾವುದೇ ವಿಶೇಷತೆ ಇಲ್ಲ. ನಾನು ರಾಜಕೀಯ ಸೇರುತ್ತಿರುವ ವಿಚಾರ ಸತ್ಯಕ್ಕೆ ದೂರವಾದದ್ದು ಎಂದಿದ್ದಾರೆ.
ಸುದ್ದಿ ಹಬ್ಬಿದ್ಯಾಕೆ..?
ನವದೆಹಲಿಯ ಬಿಜೆಪಿ ನಾಯಕನ ಮನೆಯಲ್ಲಿರುವ ಫೋಟೋ ಹರಿದಾಡುತ್ತಿರುವುದರಿಂದ ಕರ್ನಾಟಕದ ಸಿಂಗಂ ಬಿಜೆಪಿಯತ್ತ ಮುಖ ಮಾಡುತ್ತಿದ್ದಾರಾ ಅನ್ನೋ ಅನುಮಾನ ಶುರುವಾಗಿತ್ತು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನ ಭೇಟಿಯಾಗಿದ್ದಾರೆ. ದೆಹಲಿಯ ಅಶೋಕ ರಸ್ತೆಯಲ್ಲಿರುವ ಬಿ.ಎಲ್ ಸಂತೋಷ್ರ ನಿವಾಸದಲ್ಲಿ ಭೇಟಿಯಾಗಿ ಪಕ್ಷ ಸೇರುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿತ್ತು.
ಅಲ್ಲದೇ ಅವರು ಬಳ್ಳಾರಿಯ ಎಸ್ಟಿ ಮೀಸಲು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸುತ್ತಾರೆ ಅನ್ನೋ ಸಂಗತಿ ಕೂಡ ಚರ್ಚೆಯ ಮುನ್ನಲೆಗೆ ಬಂದಿತ್ತು. ಆದ್ರೆ ಸದ್ಯಕ್ಕೆ ಅವರು ಸ್ಪಷ್ಟನೆಯನ್ನು ನೀಡಿದ್ದಾರೆ. ಈ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.