ಮಂಡ್ಯ[ಡಿ.15]: ಹುಣಸೂರು ಹಾಗೂ ಕೆ.ಆರ್‌.ಪೇಟೆಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಒಳ ಏಟಿನಿಂದಾಗಿ ಜೆಡಿಎಸ್‌ ಸೋತಿದ್ದು, ನಾವು ಮತ್ತೆ ಫೀನಿಕ್ಸ್‌ ಹಕ್ಕಿಯಂತೆ ರಾಜ್ಯಾದ್ಯಂತ ಎದ್ದು ಬರುವುದಾಗಿ ಮಾಜಿ ಸಚಿವ, ಜೆಡಿಎಸ್‌ ಮುಖಂಡ ಎಚ್‌.ಡಿ.ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2023ರಲ್ಲಿ ಮತ್ತೆ ಅಧಿಕಾರಕ್ಕೆ ಮರಳುವುದಾಗಿ ಈಗಾಗಲೇ ಭವಿಷ್ಯ ನುಡಿದಿರುವ ಅವರು ಪಕ್ಷದ ಕಾರ್ಯಕರ್ತರಲ್ಲಿ ಧೈರ್ಯ ತುಂಬುವ ಮಾತುಗಳನ್ನಾಡಿದ್ದಾರೆ.

ಶನಿವಾರ ಕೆ.ಆರ್‌.ಪೇಟೆಯಲ್ಲಿ ಜೆಡಿಎಸ್‌ ಸೋಲಿನ ಪರಾಮರ್ಶೆ ಮತ್ತದು ಕೃತಜ್ಞತೆ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇವೇಗೌಡರನ್ನು ರಾಜಕೀಯವಾಗಿ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಸೋತ ತಕ್ಷಣ ಗಾಬರಿಯಾಗುವುದು ಮತ್ತು ಧÜೃತಿಗೆಡುವುದು ನಮ್ಮ ಜಾಯಮಾನವಲ್ಲ. ಜೆಡಿಎಸ್‌ ಆಟ ಶುರುವಾಗಿರೋದೇ ಈಗ ಎಂದು ಹೇಳಿದರು.

ಒಳ ಏಟೇ ಕಾರಣ:

2004ರಲ್ಲಿ ಸೋತ ಅರಸಿಕೆರೆ ಶಿವಲಿಂಗೇಗೌಡರನ್ನ 2008ರಲ್ಲಿ ಗೆಲ್ಲಿಸಿಕೊಂಡು ಬಂದೆ. ಕುಮಾರಸ್ವಾಮಿ ಮಗನನ್ನು ಹೇಗೆ ಸೋಲಿಸಿದರೋ ಅದೇ ರೀತಿ ದೇವರಾಜು ಅವರನ್ನೂ ಸೋಲಿಸಿದ್ದಾರೆ. ನಮ್ಮ ಸೋಲಿಗೆ ಒಳ ಏಟು ಹಾಗೂ ಒಂದು ಸಾವಿರ ಜನ ಹೊರಗಡೆಯಿಂದ ಬಂದು ಹಣ ಹಂಚಿರುವುದು ಕಾರಣ. ಆಡಳಿತ ಯಂತ್ರವನ್ನು ಬಿಜೆಪಿ ದುರುಪಯೋಗಪಡಿಸಿಕೊಂಡಿಸಿದ್ದಾರೆ ಎಂದರು.

ಇದೇವೇಳೆ ಕ್ಷೇತ್ರದಲ್ಲಿ ಜಯಗಳಿಸಿದ ನಾರಾಯಣಗೌಡರನ್ನು ಲೇವಡಿ ಮಾಡಿದ ರೇವಣ್ಣ, ಈ ನಾರಾಯಣಗೌಡ 2023ಕ್ಕೆ ಮತ್ತೆ ಬಾಂಬೆಗೆ ಹೋಗುತ್ತಾನೆ. ಜನತೆ ಆಶೀರ್ವಾದ ಇರುವವರೆಗೂ ಜೆಡಿಎಸ್‌ ಪಕ್ಷವನ್ನ ಯಾರು ಏನು ಮಾಡಕ್ಕೆ ಆಗಲ್ಲ ಎಂದರು.

ದೇವೇಗೌಡರ ಮಾತು ಕೇಳದೆ ಕುಮಾರಣ್ಣ ಬಿಜೆಪಿ ಜೊತೆ ಸರ್ಕಾರ ಮಾಡಿದ್ದು, ರಾಜ್ಯದಲ್ಲಿ ಬಿಜೆಪಿ ಉಳಿದುಕೊಳ್ಳುವಂತೆ ಮಾಡಿದೆ. ಈ ಕುಮಾರಸ್ವಾಮಿ ಎಲ್ಲರನ್ನು ನಂಬುತ್ತಾರೆ. ಅದೇ ಅವರಿಗೆ ಮುಳುವಾಗಿದೆ ಎಂದರು. ಭಾರತದಿಂದ ಮುಸ್ಲಿಮರನ್ನು ಓಡಿಸಿ ಎಂದು ಮೋದಿ ಕಾನೂನು ತರಬಹುದು. ಆದರೆ ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದ್ದು ದೇವೇಗೌಡರು. ಮುಸ್ಲಿಮರು ಇದನ್ನ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಮಂಡ್ಯ ಅಭಿವೃದ್ಧಿ ಕುರಿತು ಚರ್ಚೆಗೆ ಬರಲಿ:ಮಂಡ್ಯ ಅಭಿವೃದ್ದಿ ವಿಚಾರದಲ್ಲಿ ಬಹಿರಂಗ ಚರ್ಚೆ ಆಹ್ವಾನಿಸಿದ ಮಾಜಿ ಸಚಿವ ರೇವಣ್ಣ, ನಾನು ಮಾಡಿದ ಅಭಿವೃದ್ಧಿ ಕೆಲಸ ಬೇರೆ ಯಾರಾದರೂ ಮಾಡಿದ್ದರೆ ಬಹಿರಂಗ ಚರ್ಚೆಗೆ ಬರಲಿ. ಅವರೇನಾದರೂ ನಾನು ಮಂಡ್ಯ ಅಭಿವೃದ್ಧಿಗೆ ಹಣ ನೀಡಿಲ್ಲ ಎಂದು ಸಾಬೀತು ಮಾಡಿದರೆ ನಾನು ರಾಜಕೀಯ ಬಿಟ್ಟು ಬಿಡುತ್ತೇನೆ ಎಂದು ಸವಾಲು ಹಾಕಿದರು.

ನಮ್ಮವರೇ ನನಗೆ ಕೈ ಕೊಟ್ಟಿದ್ದಾರೆ:

ಈ ಸಭೆಯಲ್ಲಿ ಮಾತನಾಡಿದ ಪರಾಜಿತ ಅಭ್ಯರ್ಥಿ ದೇವರಾಜು, ಯಡಿಯೂರಪ್ಪ ಹೇಳಿದ ಹಾಗೇ ವೀರಶೈವ ಸಮುದಾಯದವರು 10 ಬೂತ್‌ಗಳಲ್ಲೂ ಬಿಜೆಪಿಗೆ 500-500 ಲೀಡ್‌ ಕೊಟ್ಟಿದ್ದಾರೆ. ನನಗೆ ನನ್ನೂರು ಸೇರಿ ಕೇವಲ 10 ಬೂತ್‌ಗಳಲ್ಲಿ ಲೀಡ್‌ ಬಂದಿದೆ ಎನ್ನುವ ಮೂಲಕ ಒಕ್ಕಲಿಗರು ನನಗೆ ಮತ ನೀಡಲಿಲ್ಲ ಎಂದು ಪರೋಕ್ಷವಾಗಿ ಹೇಳಿದರು. ಮಾಜಿ ಸಚಿವ ಪುಟ್ಟರಾಜು ಮಾತನಾಡಿ, ಸೋಲಿನಿಂದ ಯಾವ ಕಾರ್ಯಕರ್ತರು ದೃತಿಗೆಡುವುದು ಬೇಡ. ನಾವು ಸೋತಿದ್ದೇವೆ. ನಿಮ್ಮೊಂದಿಗೆ ನಾವೆಲ್ಲರೂ ಇದ್ದೇವೆ. ಮಾಜಿ ಪ್ರಧಾನಿ ಮಗನಾದ ಎಚ್‌.ಡಿ.ರೇವಣ್ಣಗಿಂತ ಶಕ್ತಿ ಬೇಕಾ ನಿಮಗೆ. ಸದಾ ಇರುತ್ತೇವೆ. ನಮಗಿಂತ ಇನ್ಯಾರು ಬೇಕು ಹೇಳಿ ಎಂದು ಪ್ರಶ್ನೆ ಮಾಡಿದರು.