ಸಿದ್ದು ಬೋಟ್‌ ಸಂಚಾರದ ಸ್ವಾರಸ್ಯಕರ ಚರ್ಚೆ ಒಂದೂವರೆ ಅಡಿ ನೀರಿರುವ ಕಡೆ ನಮ್ಮ ನಾಯಕರನ್ನು ಬೋಟ್‌ನಲ್ಲಿ ಕರೆದೊಯ್ದಿದ್ದಾರೆ: ಸಿಎಂ ಒಂದೂವರೆ ಅಡಿ ಅಲ್ಲ, 4 ಅಡಿ ಇತ್ತು. ಕೆಲವರಿಗೆ ಕಣ್ಣಿನ ಆಳ ಗೊತ್ತಾಗಲ್ಲ: ಸಿದ್ದು ತಿರುಗೇಟು

ವಿಧಾನಸಭೆ (ಸೆ.14) : ಬೆಂಗಳೂರಿನಲ್ಲಿ ಸುರಿದ ಮಳೆಯಿಂದಾದ ನೆರೆ ಪೀಡಿತ ಪ್ರದೇಶದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೋಟ್‌ನಲ್ಲಿ ಸಂಚಾರ ಮಾಡಿದ ವಿಚಾರವು ಸದನದಲ್ಲಿ ಸ್ವಾರಸ್ಯಕರ ಚರ್ಚೆಗೆ ಗ್ರಾಸವಾಯಿತು. ಮಂಗಳವಾರ ಅತಿವೃಷ್ಟಿಕುರಿತು ಚರ್ಚೆ ವೇಳೆ ಬೆಂಗಳೂರಿನಲ್ಲಿ ನೆರೆಯ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಮಹದೇವಪುರದಲ್ಲಿ ಬೋಟ್‌ನಲ್ಲಿ ತಿರುಗಾಡಬೇಕಾಯಿತು ಎಂಬ ವಿಷಯವನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಕಾಲೆಳೆದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ, ರಸ್ತೆ ಇದ್ದರೂ ನೀರಿರುವ ಕಡೆ ಕರೆದುಕೊಂಡು ಹೋಗಿದ್ದಾರೆ. ನಿಮ್ಮನ್ನು ದಾರಿತಪ್ಪಿಸುವ ಕೆಲಸ ಮಾಡಿದ್ದಾರೆ. ನಿಮ್ಮ ಸುತ್ತ ಮಿಸ್‌ಗೈಡ್‌ ಮಾಡುವವರು ತುಂಬಾ ಜನ ಇದ್ದಾರೆ ಎಂದು ಹೇಳಿದರು.

Bagalkote Floods: ಮಳೆ ಹಾನಿ ಪರಿಶೀಲನೆ ನಡೆಸಿದ ಸಿದ್ದರಾಮಯ್ಯ

ಸಿದ್ದರಾಮಯ್ಯ ಮಾತನಾಡಿ, ಇಲ್ಲ ನಮಗೆ ಯಾವುದೇ ಮಿಸ್‌ಗೈಡ್‌ ಆಗಿಲ್ಲ. ಮನೆಯ ಬಾಗಿಲ ಮುಂದೆಯೇ ಹೋಗಿದ್ದೆ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಒಂದೂವರೆ ಅಡಿ ಇರುವ ನೀರಿನಲ್ಲಿ ನಮ್ಮ ನಾಯಕರನ್ನು ಬೋಟ್‌ನಲ್ಲಿ ಕರೆದುಕೊಂಡು ಹೋಗಿರುವ ಪುಣ್ಯಾತ್ಮರು ಯಾರಪ್ಪಾ ಎಂದು ಕಿಚಾಯಿಸಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಸಿದ್ದರಾಮಯ್ಯ, ಒಂದೂವರೆ ಅಡಿ ಅಲ್ಲ, 3-4 ಅಡಿ ನೀರು ಇತ್ತು. ಒಂದೂವರೆ ಅಡಿ ನೀರು ಇದ್ದರೆ ಹೋಗಲು ಸಾಧ್ಯವೇ ಇಲ್ಲ ಎಂದರು.

ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿ, ನಾನು ಮೂರು ಅಡಿ ನೀರು ಇದ್ದಾಗ ನಡೆದುಕೊಂಡು ಹೋಗಿದ್ದೇನೆ. ನಿಮಗೆ ಯಾರೋ ದಾರಿತಪ್ಪಿಸಿರಬಹುದು ಎಂದರು. ಇದಕ್ಕೆ ಸಿದ್ದರಾಮಯ್ಯ, ನಾನು ನನ್ನ ಸ್ವಂತ ಬೋಟ್‌ನಲ್ಲಿ ಹೋಗಿಲ್ಲ. ಎನ್‌ಡಿಆರ್‌ಎಫ್‌ ಬೋಟ್‌ನಲ್ಲಿ ಹೋಗಿದ್ದೆ. ಮೋಟಾರು ಎಳೆದೇ ಓಡಿಸಿದರು. ಕೆಲವರಿಗೆ ಕಣ್ಣಿಗೆ ಅಳ ಗೊತ್ತಾಗಲ್ಲ ಎಂದು ತಿರುಗೇಟು ನೀಡಿದರು. ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ ಸದಸ್ಯ ರಾಮಲಿಂಗಾ ರೆಡ್ಡಿ ಸಾಥ್‌ ನೀಡಿದರು.

ಮಳೆ ಪ್ರವಾಹ ವಿಚಾರವು ಗಂಭೀರವಾಗಿದೆ ಎಂಬ ಅರವಿಂದ ಲಿಂಬಾವಳಿ ಮಾತಿಗೆ ಸಿದ್ದರಾಮಯ್ಯ, ನನ್ನ ಪರವಾಗಿ ಸಾಕ್ಷಿ ನುಡಿದಿದ್ದಾರೆ ಎಂದು ಹೇಳಿ ಪ್ರವಾಹ ಕುರಿತು ಮಾತು ಮುಂದುವರಿಸಿದರು. Bengaluru Flood: ಬೆಂಗಳೂರಿನ ನೆರೆಪೀಡಿತ ಪ್ರದೇಶಗಳಲ್ಲಿ ಸಿದ್ದು ಸಂಚಾರ, ಸಮೀಕ್ಷೆ