ಕರ್ನಾಟಕಕ್ಕೆ ಪ್ರಧಾನಿ ಮೋದಿಯಿಂದ ಪದೇ ಪದೇ ಅನ್ಯಾಯ: ಪ್ರಿಯಾಂಕಾ ಗಾಂಧಿ

ಮೋದಿ ದೇಶದ ಕೆಲ ಬಂಡವಾಳಶಾಹಿಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿದ್ದಾರೆ. ಬಂಡವಾಳಶಾಹಿಗಳ 16 ಲಕ್ಷ ಕೋಟಿ ರು. ಸಾಲ ಮನ್ನಾ ಮಾಡಿದ್ದಾರೆ. ದೇಶದ ಆಸ್ತಿಗಳನ್ನು ತಮ್ಮ ಸ್ನೇಹಿತರಿಗೆ ಮಾರಾಟ ಮಾಡುತ್ತಿದ್ದಾರೆ. ರೈತರು ಸಾಲದಲ್ಲಿ ಮುಳುಗಿದ್ದರೆ ಅವರತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ, ಆದರೆ, ಉದ್ಯೋಗಪತಿಗಳ ಸಾಲ‌‌‌ ಮಾತ್ರ ಮನ್ನಾ ಆಗುತ್ತಿದೆ ಎಂದು ಆರೋಪಗಳ ಸುರಿಮಳೆಗೈದ ಪ್ರಿಯಾಂಕಾ.

Injustice to Karnataka by PM Narendra Modi Says Priyanka Gandhi grg

ಚಿತ್ರದುರ್ಗ(ಏ.24):  ದೇಶದ ಸಮಗ್ರ ಅಭಿವೃದ್ಧಿಗಾಗಿ ಹಗಲು, ರಾತ್ರಿ ದುಡಿಯುತ್ತೇನೆ ಎಂದು ಹೇಳಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಜನತೆಗೆ ಅನ್ಯಾಯ ಮಾಡಿದ್ದಾರೆ. ರಾಜ್ಯದ ಜನರು ಕಟ್ಟುವ ತೆರಿಗೆ ಹಣವನ್ನು ಮರಳಿ ನೀಡದೆ ರಾಜ್ಯಕ್ಕೆ ನಷ್ಟ ಮಾಡಿದ್ದಾರೆ. ಮೋದಿ ಅವರಿಂದ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯವಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಟೀಕಾಪ್ರಹಾರ ನಡೆಸಿದ್ದಾರೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಚಿತ್ರದುರ್ಗದಲ್ಲಿ ಆಯೋಜಿಸಲಾದ ಪ್ರಚಾರ ಸಭೆಯಲ್ಲಿ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಪರ ಮತಯಾಚಿಸಿ ಅವರು ಮಾತನಾಡಿದರು. ನಿಯತ್ತು ಹಾಗೂ ಶುದ್ಧ ಹೃದಯದಿಂದ ಮೋದಿ ಕಾರ್ಯ ನಿರ್ವಹಿಸುತ್ತಿಲ್ಲ. ಅವರಿಗೆ ಎಲ್ಲಿ ರಾಜಕೀಯವಾಗಿ ಲಾಭ ಆಗಿದೆಯೋ ಅಲ್ಲಿಗೆ ಅನುದಾನ ಕೊಡುತ್ತಾರೆ ಎಂದು ದೂರಿದರು.

ಕಾಂಗ್ರೆಸ್‌ನಿಂದ ದೇಶ ಒಡೆಯುವ ತಂತ್ರ: ಮೋದಿ ತೀವ್ರ ವಾಗ್ದಾಳಿ

ಬರ ಹಿನ್ನೆಲೆಯಲ್ಲಿ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನೇಕ ಬಾರಿ ಕೇಂದ್ರದ ಮುಂದೆ ಪ್ರಸ್ತಾವ ಸಲ್ಲಿಸಿ ಅನುದಾನ ಕೋರಿದರು. ಈವರೆಗೂ ಒಂದು ಪೈಸೆ ನೀಡಲಿಲ್ಲ. ಭದ್ರಾ ಮೇಲ್ದಂಡೆಗೆ ಬಜೆಟ್ ನಲ್ಲಿ ಹಣ ಕಾಯ್ದಿರಿಸಿದರೂ ಅನುದಾನ ಬಿಡುಗಡೆ ಮಾಡಲಿಲ್ಲ. ಮೋದಿ ದೇಶದ ಕೆಲ ಬಂಡವಾಳಶಾಹಿಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿದ್ದಾರೆ. ಬಂಡವಾಳಶಾಹಿಗಳ 16 ಲಕ್ಷ ಕೋಟಿ ರು. ಸಾಲ ಮನ್ನಾ ಮಾಡಿದ್ದಾರೆ. ದೇಶದ ಆಸ್ತಿಗಳನ್ನು ತಮ್ಮ ಸ್ನೇಹಿತರಿಗೆ ಮಾರಾಟ ಮಾಡುತ್ತಿದ್ದಾರೆ. ರೈತರು ಸಾಲದಲ್ಲಿ ಮುಳುಗಿದ್ದರೆ ಅವರತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ, ಆದರೆ, ಉದ್ಯೋಗಪತಿಗಳ ಸಾಲ‌‌‌ ಮಾತ್ರ ಮನ್ನಾ ಆಗುತ್ತಿದೆ ಎಂದು ಪ್ರಿಯಾಂಕಾ ಆರೋಪಗಳ ಸುರಿಮಳೆಗೈದರು.

ಯಾರು ಜನಪರವಾಗಿ ಮಾತಾಡುತ್ತಾರೋ ಅವರ ಬಾಯಿ‌ ಮುಚ್ಚಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಇಬ್ಬರು ಸಿಎಂಗಳನ್ನು ಬಂಧಿಸಿ ಜೈಲಲ್ಲಿ ಇಡಲಾಗಿದೆ. ವಿಪಕ್ಷ ನಾಯಕರ ಮೇಲೆ ದಾಳಿ‌ ಮಾಡಿಸಿ ಅವರ ಧ್ವನಿ ಅಡಗಿಸುವ ಕೆಲಸ ಮಾಡಲಾಗುತ್ತಿದೆ. ಎಲೆಕ್ಟೋರಲ್ ಬಾಂಡ್ ಮೂಲಕ ಮೋದಿ ಹಣ ಲೂಟಿ ಮಾಡಿದ್ದಾರೆ. ದಾನ ಮಾಡಿದವರ ಹೆಸರನ್ನು ಯಾರಿಗೂ ತಿಳಿಯದಂತೆ ಮುಚ್ಚಿಡಲಾಗಿತ್ತು. ಆದರೆ, ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ದುಡ್ಡು ಕೊಟ್ಟವರ ಹೆಸರು ಬಹಿರಂಗವಾಗಿದೆ. ಯಾವ ಕಂಪನಿಗಳ ಮೇಲೆ ಕೇಸು ಮಾಡಲಾಗಿತ್ತೋ ಅವೆಲ್ಲ ಕಂಪನಿಗಳು ಚಂದಾ ನೀಡಿವೆ. ಭ್ರಷ್ಟ ಕಂಪನಿಗಳಿಂದ ಹಣ ಪಡೆದು ಪ್ರಕರಣವನ್ನು ಮುಚ್ಚಿ ಹಾಕುವ ಕೆಲಸ ನಡೆದಿದೆ. ವಿಪಕ್ಷ ನಾಯಕರಿಗೆ ಭ್ರಷ್ಟರು ಎಂದು ದೂರುವ ಮೋದಿಯೇ ಖುದ್ದು ತಾವೇ ಭ್ರಷ್ಟರಾಗಿದ್ದಾರೆ ಎಂದು ಪ್ರಿಯಾಂಕಾ ಕಿಡಿಕಾರಿದರು.

ಮತಕ್ಕಾಗಿ ಮಾಂಗಲ್ಯವನ್ನು ಮಧ್ಯೆ ತಂದ ಮೋದಿ ಅಪಾಯಕಾರಿ: ಮಧು ಬಂಗಾರಪ್ಪ

ಚುನಾವಣೆ ಬಂದಾಗಲೆಲ್ಲಾ ಹಣ, ಜಾತಿ, ಧರ್ಮದ ಬಗ್ಗೆ ಮಾತಾಡುವ ಮೋದಿ, ಎಂದಾದರೂ ಜನರ ಕಷ್ಟದ ಬಗ್ಗೆ ಮಾತಾಡಿದ್ದನ್ನು ನೋಡಿದಿರಾ? ಈಗ ಮತ್ತೆ 400 ಸೀಟು ಕೊಡಿ ಎಂದು ಜನರಿಗೆ ಮನವಿ ಮಾಡುತ್ತಿದ್ದಾರೆ. ನಮ್ಮ ಅಜ್ಜಿ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ಗ್ರಾಮಗಳ ನಡುವೆ ಸಂಬಂಧ ಇಟ್ಟುಕೊಂಡಿದ್ದರು. ಜನರ ಸಮಸ್ಯೆ ಅರಿಯುವ ಕೆಲಸ ಮಾಡುತ್ತಿದ್ದರು. ಹುದ್ದೆಗಳಿಗೆ ನೈತಿಕತೆ ಇರುವವರನ್ನು ಆಯ್ಕೆ ಮಾಡುತ್ತಿದ್ದೆವು. ಈಗ ದೇಶದ ದೊಡ್ಡ ನಾಯಕರು ನೈತಿಕತೆ ಬಿಟ್ಟು ನಾಟಕ ಆಡುತ್ತಾರೆ. ದೇಶದ ದೊಡ್ಡ ನಾಯಕರು ಸತ್ಯದ ದಾರಿಯಲ್ಲಿ ನಡೆಯುತ್ತಿಲ್ಲ. ವೈಭೋಗ ತೋರಿಸಿ ಓಡಾಡುತ್ತಿದ್ದಾರೆ ಎಂದು ಆರೋಪಿಸಿದರು.

ಜನರ ಒಳಿತಿಗಾಗಿ ಗ್ಯಾರಂಟಿ ಜಾರಿ:

ರಾಜ್ಯದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಜಾರಿಗೊಳಿಸಿದೆ. ಇದು ಜನರ ಜೀವನದ ಮೇಲೆ ಪರಿಣಾಮ ಬೀರಿಲ್ಲವೇ? ಗೃಹಲಕ್ಷ್ಮೀ ಯೋಜನೆಯಿಂದ ಪ್ರತಿ‌ ಮಹಿಳೆಗೆ 2 ಸಾವಿರ ರು. ಹಣ ಬರುತ್ತಿದೆ. ಉಚಿತ ವಿದ್ಯುತ್, ಅನ್ನಭಾಗ್ಯ, ಶಕ್ತಿ ಯೋಜನೆಯಿಂದ ಉಚಿತ ಪ್ರಯಾಣ, ಯುವನಿಧಿ ಯೋಜನೆಗಳು ಗ್ರಾಮೀಣರಿಗೆ ಪೂರಕವಾಗಿವೆ. ಗ್ಯಾರಂಟಿಗಳು ಇಂದು ಕರ್ನಾಟಕದಿಂದ ಆರಂಭವಾಗಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಪೂರ್ಣ ದೇಶದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿಗೆ ಬರಲಿವೆ. ಪ್ರತಿ ಕುಟುಂಬದ ಮಹಿಳೆಗೆ 1 ಲಕ್ಷ ಸೇರಿ ಹಲವು ಗ್ಯಾರಂಟಿಗಳನ್ನು ನೀಡಲಾಗುವುದು ಎಂದು ಪ್ರಿಯಾಂಕಾ ಭರವಸೆ ನೀಡಿದರು.

Latest Videos
Follow Us:
Download App:
  • android
  • ios