Karnataka election 2023: ಮಾದಿಗರಿಗೆ ಕಾಂಗ್ರೆಸ್ ಟಿಕೆಟ್ ಅನ್ಯಾಯ: ಮಾಜಿ ಸಚಿವ ಆಲ್ಕೋಡ್
ಮಾದಿಗ ಸಮುದಾಯಕ್ಕೆ ಟಿಕೆಟ್ ಕೈ ತಪ್ಪಲು ಕಾಂಗ್ರೆಸ್‌ನಲ್ಲಿರುವ ಕೆಲ ಕುಂಟಲಗಿತ್ತಿಯರೇ ಸುಳ್ಳು, ಬಣ್ಣದ ಮತುಗಳೇ ಕಾರಣ ಎಂದು ಹರಿಹಾಯ್ದ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ ಹೆಸರು ಬಹಿರಂಗ ಪಡಿಸದೇ ತಮ್ಮದೇ ದಾಟಿಯಲ್ಲಿ ವ್ಯಂಗ್ಯವಾಡಿದರು.
ಲಿಂಗಸುಗೂರು (ಏ.23) : ಕಲ್ಯಾಣ ಕರ್ನಾಟಕದಲ್ಲಿ 40ಕ್ಕೂ ಅಧಿಕ ವಿಧಾನಸಭಾ ಕ್ಷೇತ್ರಗಳಿವೆ. ಪ್ರತಿ ಕ್ಷೇತ್ರದಲ್ಲಿ ಮಾದಿಗ ಸಮುದಾಯದ 30 ರಿಂದ 40 ಸಾವಿರ ಮತದಾರರು ಇದ್ದಾರೆ. ಈ ಪೈಕಿ 08 ಕ್ಷೇತ್ರಗಳು ಪರಿಶಿಷ್ಟಜಾತಿಗೆ ಮೀಸಲಾಗಿವೆ. ಇಲ್ಲಿ ಕಾಂಗ್ರೆಸ್ ಟಿಕೆಟ್ ನೀಡದೆ ಮಾದಿಗ ಸಮುದಾಯಕ್ಕೆ ಘೋರ ಅನ್ಯಾಯ ಮಾಡಿದೆ ಎಂದು ಕೆಪಿಸಿಸಿ ವಕ್ತಾರ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ(Hanamantappa alkod) ಗಂಭೀರ ಆರೋಪ ಮಾಡಿದ್ದು ಟಿಕೆಟ್ ಹಂಚಿಕೆ ಬಳಿಕ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಮತದಾನ ಪದ್ಧತಿ ಜಾರಿಯಾದಾಗಿನಿಂದ ಮಾದಿಗ ಸಮುದಾಯದ ಜನರು ಕಾಂಗ್ರೆಸ್‌ಗೆ ನಿಷ್ಠೆ ತೋರುತ್ತಾ ಚುನಾವಣೆಗಳಲ್ಲಿ ಮತ ನೀಡುತ್ತಾ ಬಂದಿದ್ದೇವೆ. ಕಾಂಗ್ರೆಸ್ ಮೇಲೆ ಮಾದಿಗ ಸಮುದಾಯದ ಹೊಂದಿದ ಅಭಿಮಾನಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಕಲ್ಯಾಣ ಕರ್ನಾಟಕದಲ್ಲಿ ಪರಿಶಿಷ್ಟಜಾತಿಗೆ ಮೀಸಲಾದ ವಿಧಾನಸಭಾ ಕ್ಷೇತ್ರಗಳಲ್ಲಿ ಟಿಕೆಟ್ ನೀಡದೆ ತುಳಿತಕ್ಕೊಳಗಾದ ಸಮುದಾಯವನ್ನು ರಾಜಕೀಯ ಅಧಿಕಾರದಿಂದ ದೂರ ಇಡುವ ಮೂಲಕ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾದಿಗ ಸಮುದಾಯದ ಜೊತೆ ಪರಂ ಉತ್ತಮ ಬಾಂಧವ್ಯ
ಕುಂಟಲಗಿತ್ತಿಯರ ಕರಾಮತ್ತು:
ಮಾದಿಗ ಸಮುದಾಯ(Madiga community)ಕ್ಕೆ ಟಿಕೆಟ್ ಕೈ ತಪ್ಪಲು ಕಾಂಗ್ರೆಸ್‌ನಲ್ಲಿರುವ ಕೆಲ ಕುಂಟಲಗಿತ್ತಿಯರೇ ಸುಳ್ಳು, ಬಣ್ಣದ ಮತುಗಳೇ ಕಾರಣ ಎಂದು ಹರಿಹಾಯ್ದ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ ಹೆಸರು ಬಹಿರಂಗ ಪಡಿಸದೇ ತಮ್ಮದೇ ದಾಟಿಯಲ್ಲಿ ವ್ಯಂಗ್ಯವಾಡಿದರು.
ಸಾಮಾಜಿಕವಾಗಿ ತುಳಿತಕ್ಕೊಳಗಾದ ಸಮುದಾಯಕ್ಕೆ ಮೀಸಲಾತಿ ನೀಡುವ ಮೂಲಕ ರಾಜಕೀಯ ಅಧಿಕಾರದ ನೀಡಬೇಕು. ಆದರೆ, ಕಾಂಗ್ರೆಸ್ ತನ್ನ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿ ಪಕ್ಷದ ತತ್ವ ಸಿದ್ಧಾಂತ ನಂಬಿ ಕಾಂಗ್ರೆಸ್ ಬೆಂಬಲಿಸಿದ ದಮನಿತ ಸಮುದಾಯಕ್ಕೆ ಟಿಕೆಟ್ ನೀಡದೆ ಅಧಿಕಾರದಿಂದ ದೂರ ಇಟ್ಟಿದೆ. ಟಿಕೆಟ್‌ನಿಂದ ವಂಚಿತಗೊಂಡ ಮಾದಿಗ ಸಮುದಾಯವು ಸಭೆ ನಡೆಸಿ ಪರ್ಯಾಯ ರಾಜಕೀಯ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಚ್.ಬಿ ಮುರಾರಿ, ನಾಗರಾಜ ತಿಪ್ಪಣ್ನ ಅಸ್ಕಿಹಾಳ ಇದ್ದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಮಾದಿಗ ಸಮುದಾಯಕ್ಕೆ ಕಾಂಗ್ರೆಸ್ ರಾಜಕೀಯ ಬಹಿಷ್ಕಾರ:
ಸಾಮಾಜಿಕ, ಆರ್ಥಿಕವಾಗಿ ತುಳಿತಕ್ಕೊಳಗಾದ ದಮನಿತ ಮಾದಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯ, ಜನಸಂಖ್ಯೆಗೆ ಅನುಗುಣವಾಗಿ ಟಿಕೆಟ್ ನೀಡದೆ ಕಾಂಗ್ರೆಸ್ ಮಾದಿಗ ಸಮುದಾಯಕ್ಕೆ ರಾಜಕೀಯ ಬಹಿಷ್ಕಾರ ಹಾಕಿದೆ. ಇದಕ್ಕೆಲ್ಲ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೆ ಕಾರಣ ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಎಚ್.ಬಿ ಮುರಾರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪರಿಶಿಷ್ಟಜಾತಿಗೆ ಮೀಸಲಾದ ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ 35 ರಿಂದ 40 ಸಾವಿರ ಅಸ್ಪೃಶ್ಯ ಸಮುದಾಯದ ಮತದಾರರು ಇದ್ದಾರೆ. ಅದರಂತೆ ಕಾಂಗ್ರೆಸ್ ಟಿಕೆಟ್‌ಗೆ ಬೇಡಿಕೆ ಇಟ್ಟಾಗ, ಕಾಂಗ್ರೆಸ್ ಹೈಕಮಾಂಡ್ ಟಿಕೇಟ್ ನೀಡುವ ಭರವಸೆ ನೀಡಿತ್ತು. ದಮನಿತ ಮಾದಿಗ ಸಮುದಾಯಕ್ಕೆ ಟಿಕೇಟ್ ನೀಡಬೇಕೆಂದು ರಾಹುಲ್ ಗಾಂಧಿ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದರು. ಆದರೆ, ರಾಜ್ಯ ನಾಯಕರು ಅವರ ಸೂಚನೆ ಕಿವಿ ಹಾಕಿಕೊಳ್ಳದೆ ಟಿಕೆಟ್ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದಮನಿತ, ತುಳಿತಕ್ಕೊಳಗಾದ ಸಮುದಾಯದ ಪರವಾಗಿ ಕಾಂಗ್ರೆಸ್ ಕಾರ್ಯ ಮಾಡುತ್ತದೆ ಎಂಬ ನಂಬಿಕೆ ಇಟ್ಟು ಮಾದಿಗ ಸಮುದಾಯ ಕಾಂಗ್ರೆಸ್ ಬೆಂಬಲಿಸುತ್ತಾ ಬಂದಿದೆ. ಆದರೆ, ಮಾದಿಗ ಸಮುದಾಯಕ್ಕೆ ಟಿಕೆಟ್ ವಂಚನೆ ಮಾಡಿ ರಾಜಕೀಯ ದೌರ್ಜನ್ಯ ಎಸಗಿದೆ. ಇದು ಮಾದಿಗ ಸಮುದಾಯ ಕೆರಳಲು ಕಾರಣವಾಗಿದ್ದು, ಇದರ ಪರಿಣಾಮ ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲೆ ಬೀಳಲಿದೆ ಎಂದು ಎಚ್ಚರಿಸಿದರು.
ಮಾದಿಗ ಸಮುದಾಯಕ್ಕೆ ಟಿಕೆಟ್ ನಿಡಬೇಕೆಂದು ಜಿಲ್ಲೆಯ ಎನ್.ಎಸ್ ಬೋಸರಾಜು, ಕೆ.ಎಚ್.ಮುನಿಯಪ್ಪ, ಡಾ.ಜಿ.ಪರಮೇಶ್ವರ ಮುಂತಾದವರು ಬೆಂಬಲ ನೀಡಿದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ತುಳಿತಕ್ಕೊಳಗಾದ ದಲಿತ ಸಮುದಾಯಕ್ಕೆ ಟಿಕೆಟ್ ನೀಡದೆ ವಂಚನೆ ಎಸಗಿದೆ ಎಂದು ಆಪಾದಿಸಿದರು.
'ಒಳಮಿಸಲಾತಿಯನ್ನು ಸಿದ್ದರಾಮಯ್ಯ ವಿರೋಧಿಸಿಲ್ಲ'
ಈ ವೇಳೆ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ, ನಾಗರಾಜ ತಿಪ್ಪಣ್ಣ ಅಸ್ಕಿಹಾಲ ಇದ್ದರು.