ಈ ಬಾರಿಯ ಇನ್ವೆಸ್ಟ್ ಕರ್ನಾಟಕದ ವಿಶೇಷತೆ, ನೂತನ ಕೈಗಾರಿಕಾ ನೀತಿ, ಏಕಗವಾಕ್ಷಿ ಪದ್ಧತಿಯಲ್ಲಿ ತರಲಾಗುತ್ತಿರುವ ಬದಲಾವಣೆ ಸೇರಿ ಹಲವು ವಿಚಾರಗಳ ಕುರಿತು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಇದೀಗ ಕನ್ನಡಪ್ರಭದೊಂದಿಗೆ ಮಾತನಾಡಿದ್ದಾರೆ. 

ಗಿರೀಶ್‌ ಗರಗ

ರಾಜ್ಯದ ಆರ್ಥಿಕತೆಗೆ ವೇಗ ನೀಡುವ, ಉತ್ಪಾದನಾ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರುವ ಉದ್ದೇಶದೊಂದಿಗೆ ಫೆ.12ರಿಂದ 14ರವರೆಗೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಲಾಗುತ್ತಿದೆ. ‘ಪ್ರಗತಿಯ ಮರುಕಲ್ಪನೆ’ ಘೋಷವಾಕ್ಯದೊಂದಿಗೆ ಈ ಬಾರಿಯ ಇನ್ವೆಸ್ಟ್‌ ಕರ್ನಾಟಕ ಆಯೋಜನೆಗೊಳ್ಳುತ್ತಿದೆ. ರಾಜ್ಯದ ಅಭಿವೃದ್ಧಿಯ ದಿಕ್ಕನ್ನು ಬದಲಿಸಬಲ್ಲ ಹಲವು ಒಡಂಬಡಿಕೆಗಳು, ಕ್ರಮಗಳು ಇನ್ವೆಸ್ಟ್‌ ಕರ್ನಾಟಕದಲ್ಲಾಗುವ ನಿರೀಕ್ಷೆ ಹೊಂದಲಾಗಿದೆ. ಇದರ ಬೆನ್ನೆಲುಬಾಗಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಹಲವು ತಿಂಗಳಿನಿಂದ ಕೆಲಸ ಮಾಡುತ್ತಿದ್ದಾರೆ. ದೇಶದ ಹಲವು ರಾಜ್ಯಗಳು, ವಿವಿಧ ದೇಶಗಳಲ್ಲಿ ರೋಡ್‌ ಶೋಗಳನ್ನು ನಡೆಸಿ ಹೂಡಿಕೆದಾರರನ್ನು ಇನ್ವೆಸ್ಟ್‌ ಕರ್ನಾಟಕಕ್ಕೆ ಆಕರ್ಷಿಸುವ ಕೆಲಸವನ್ನು ಎಂ.ಬಿ. ಪಾಟೀಲ್‌ ಮಾಡಿದ್ದಾರೆ. ಅಧಿಕಾರಿಗಳ ಜತೆಗೂಡಿ ಇನ್ವೆಸ್ಟ್ ಕರ್ನಾಟಕದ ಯಶಸ್ಸಿಗೆ ಮಾಡಿಕೊಂಡಿರುವ ಸಿದ್ಧತೆ, ಈ ಬಾರಿಯ ಇನ್ವೆಸ್ಟ್ ಕರ್ನಾಟಕದ ವಿಶೇಷತೆ, ನೂತನ ಕೈಗಾರಿಕಾ ನೀತಿ, ಏಕಗವಾಕ್ಷಿ ಪದ್ಧತಿಯಲ್ಲಿ ತರಲಾಗುತ್ತಿರುವ ಬದಲಾವಣೆ ಸೇರಿ ಹಲವು ವಿಚಾರಗಳ ಕುರಿತು ಅವರು ಇದೀಗ ಕನ್ನಡಪ್ರಭದೊಂದಿಗೆ ಮಾತನಾಡಿದ್ದಾರೆ.

* ಇನ್ವೆಸ್ಟ್‌ ಕರ್ನಾಟಕದ ಸಿದ್ಧತೆ ಹೇಗಿದೆ?
ಈ ಹಿಂದೆ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‌ ಸೇರಿ ಕೆಲ ರಾಜ್ಯಗಳು ಮಾತ್ರ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸುತ್ತಿದ್ದವು. ಈಗ ಬಹುತೇಕ ರಾಜ್ಯಗಳು ಹೂಡಿಕೆದಾರರ ಸಮಾವೇಶ ಮಾಡುತ್ತಿವೆ. ಇದು ತಪ್ಪಲ್ಲ. ಹೀಗಾಗಿ ಹೂಡಿಕೆ ಆಕರ್ಷಣೆಗೆ ಸ್ಪರ್ಧೆ ಹೆಚ್ಚಾಗಿದೆ. ಅದರ ನಡುವೆಯೇ ರಷ್ಯಾ-ಉಕ್ರೇನ್‌ ಯುದ್ಧ, ಇಸ್ರೇಲ್‌-ಹಮಾಸ್‌ ಯುದ್ಧ, ಕೊರೋನಾ, ಹವಾಮಾನ ವೈಪರೀತ್ಯ, ಕೃತಕ ಬುದ್ಧಿಮತ್ತೆಯ ಬೆಳವಣಿಗೆ ಹೀಗೆ ಹಲವು ಸವಾಲುಗಳು ನಮ್ಮ ಮುಂದಿವೆ. ಅವೆಲ್ಲವನ್ನು ಎದುರಿಸಲು ‘ಪ್ರಗತಿಯ ಮರುಕಲ್ಪನೆ’ ಘೋಷವಾಕ್ಯದೊಂದಿಗೆ ಇನ್ವೆಸ್ಟ್‌ ಕರ್ನಾಟಕ ಮಾಡುತ್ತಿದ್ದೇವೆ. ನಮ್ಮೆದುರಿನ ಮತ್ತು ಮುಂದೆ ಬರುವ ಸವಾಲುಗಳನ್ನು ಎದುರಿಸಲು ಇನ್ವೆಸ್ಟ್‌ ಕರ್ನಾಟಕದ ಮೂಲಕ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.

ಜಿಮ್‌ನಲ್ಲಿ 75 ಸಾಧಕ ಉದ್ಯಮಿಗಳು: ಸಚಿವ ಎಂ.ಬಿ.ಪಾಟೀಲ್

* ಈ ಬಾರಿಯ ಇನ್ವೆಸ್ಟ್‌ ಕರ್ನಾಟಕದ ವೈಶಿಷ್ಟ್ಯತೆಗಳೇನು?
ಈ ಬಾರಿ ವಿಭಿನ್ನವಾಗಿ ಮಾಡುತ್ತಿದ್ದೇವೆ. ದಾವೋಸ್‌ನ ವಿಶ್ವ ಆರ್ಥಿಕ ವೇದಿಕೆಯ ಸಮ್ಮೇಳನದ ಅಂಶಗಳನ್ನು ಇನ್ವೆಸ್ಟ್ ಕರ್ನಾಟಕದಲ್ಲಿ ಸೇರಿಸಲಾಗಿದೆ. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 19 ದೇಶಗಳ ಪ್ರತಿನಿಧಿಗಳು ಭಾಗವಹಿಸುತ್ತಿದ್ದು, 9 ದೇಶಗಳ ಪೆವಿಲಿಯನ್‌ಗಳು ಕಾಣಬಹುದು. 60ಕ್ಕೂ ಹೆಚ್ಚಿನ ವಿಷಯ ತಜ್ಞರು ಪಾಲ್ಗೊಳ್ಳುತ್ತಿದ್ದಾರೆ. ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಎಸ್‌ಎಂಇ ಕನೆಕ್ಟ್‌ ಆಯೋಜಿಸಲಾಗುತ್ತಿದ್ದು, ಅದರಲ್ಲಿ 2 ಸಾವಿರಕ್ಕೂ ಹೆಚ್ಚಿನ ಸಣ್ಣ, ಮಧ್ಯಮ ಕೈಗಾರಿಕೆಗಳು ಪಾಲ್ಗೊಳ್ಳಲಿವೆ. ಜತೆಗೆ ರಾಜ್ಯದ ಎಲೆಕ್ಟ್ರಿಕ್‌ ವಾಹನ, ಎಲೆಕ್ಟ್ರಾನಿಕ್ಸ್‌ ಮತ್ತು ಏರೋ ಸ್ಪೇಸ್‌ ಕ್ಷೇತ್ರಗಳಿಗೆ ಸಂಬಂಧಿಸಿ 3 ಲಕ್ಷ ಡಾಲರ್‌ ಪ್ರಾಯೋಜಕತ್ವ ಬರುವಂತೆ ಮಾಡಲಾಗುತ್ತಿದೆ. 25ಕ್ಕೂ ಹೆಚ್ಚಿನ ದುಂಡು ಮೇಜಿನ ಸಭೆಗಳು ನಡೆಯಲಿವೆ. ಹೀಗೆ ಹಲವು ವಿಶೇಷತೆಗಳನ್ನು ಈ ಬಾರಿಯ ಇನ್ವೆಸ್ಟ್‌ ಕರ್ನಾಟಕ ಹೊಂದಿರಲಿದೆ.

* ಹಿಂದಿನ ಇನ್ವೆಸ್ಟ್ ಕರ್ನಾಟಕಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ? ಒಡಂಬಡಿಕೆಗಳು ಅನುಷ್ಠಾನಕ್ಕೆ ಬಂದಿವೆಯೇ?
ಹಿಂದಿನ ಇನ್ವೆಸ್ಟ್‌ ಕರ್ನಾಟಕದ ಒಡಂಬಡಿಕೆ, ಅನುಷ್ಠಾನದ ಬಗ್ಗೆ ನಾನು ಪರಾಮರ್ಶಿಸುವುದಿಲ್ಲ. ಆದರೆ, ಕಳೆದ ಇನ್ವೆಸ್ಟ್ ಕರ್ನಾಟಕದಲ್ಲಿ ಹಸಿರು ಇಂಧನ ಉತ್ಪಾದನೆ ಕ್ಷೇತ್ರದಲ್ಲಿ 2.40 ಲಕ್ಷ ಕೋಟಿ ರು. ಬಂಡವಾಳ ಹೂಡಿಕೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಆದರೆ, ಅಷ್ಟು ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಲು ರಾಜ್ಯದಲ್ಲಿ ಸೂಕ್ತ ಮೂಲಸೌಕರ್ಯ ಮತ್ತು ಅವಕಾಶವಿಲ್ಲ. 20ರಿಂದ 30 ಸಾವಿರ ಕೋಟಿ ರು.ನಷ್ಟು ಹೂಡಿಕೆಯ ಸಾಮರ್ಥ್ಯ ನಮ್ಮದಾಗಿದೆ. ಆದರೂ, 2.40 ಲಕ್ಷ ಕೋಟಿ ರು. ಹೂಡಿಕೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಒಟ್ಟಾರೆ ಹಿಂದಿನ ಇನ್ವೆಸ್ಟ್ ಕರ್ನಾಟಕಗಳ ಒಡಂಬಡಿಕೆಯಲ್ಲಿ ಶೇ. 40ರಿಂದ 50ರಷ್ಟು ಮಾತ್ರ ಅನುಷ್ಠಾನಗೊಂಡಿವೆ.

* ಈ ಬಾರಿ ಮಾಡಿಕೊಳ್ಳಲಾಗುವ ಒಡಂಬಡಿಕೆಗಳ ಸಮರ್ಪಕ ಅನುಷ್ಠಾನಕ್ಕೆ ನಿಮ್ಮ ಸಿದ್ಧತೆಯೇನು?
ಹಿಂದಿನ ಇನ್ವೆಸ್ಟ್‌ ಕರ್ನಾಟಕಗಳಲ್ಲಾದ ಲೋಪಗಳು ಮರುಕಳಿಸದಂತೆ ಮಾಡಲು ನಿರ್ಧರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 10 ಲಕ್ಷ ಕೋಟಿ ರು. ಬಂಡವಾಳ ಹೂಡಿಕೆ ಒಪ್ಪಂದ ಮಾಡಿಕೊಳ್ಳುವ ಗುರಿ ಹೊಂದಲಾಗಿದೆ. ಅದರಲ್ಲಿ ಕನಿಷ್ಠ ಶೇ.70ರಷ್ಟಾದರೂ ಹೂಡಿಕೆ ರಾಜ್ಯಕ್ಕೆ ಬರುವಂತೆ ಮಾಡುವುದು ನಮ್ಮ ಗುರಿ. ಅದಕ್ಕಾಗಿ ಸುಮ್ಮನೆ ಒಪ್ಪಂದ ಮಾಡಿಕೊಳ್ಳದೆ, ಹೂಡಿಕೆದಾರರಿಂದ ಅನುಷ್ಠಾನಕ್ಕೆ ಸಂಬಂಧಿಸಿದ ಖಚಿತ ಒಡಂಬಡಿಕೆಗೆ ಸಹಿ ಮಾಡಿಸಿಕೊಳ್ಳಲಾಗುತ್ತದೆ.

* ರಾಜ್ಯದ ಏಕಗವಾಕ್ಷಿ ವ್ಯವಸ್ಥೆ ಸರಿಯಿಲ್ಲ. ಅದಕ್ಕಾಗಿಯೇ ಕೈಗಾರಿಕೆ ಸ್ಥಾಪನೆಗೆ ಉದ್ಯಮಿಗಳು ಮನಸ್ಸು ಮಾಡುತ್ತಿಲ್ಲ ಎಂಬ ಆರೋಪವಿದೆಯಲ್ಲ?
ಹೌದು, ಅದು ನಿಜ. ಅದಕ್ಕಾಗಿಯೇ ಏಕಗವಾಕ್ಷಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಿಸಲಾಗುತ್ತಿದೆ. ಕೈಗಾರಿಕೋದ್ಯಮಿಗಳಿಗೆ ಸಮಯವೇ ದೊಡ್ಡ ಬಂಡವಾಳ. ಕೈಗಾರಿಕೆ ಸ್ಥಾಪನೆ ಗುರಿ ಒಂದು ವರ್ಷವಿದ್ದು, ಅದು 2 ವರ್ಷಕ್ಕೆ ವಿಸ್ತರಣೆಯಾದರೆ ಅದರಿಂದ ಉತ್ಪಾದನೆ ನಷ್ಟವುಂಟಾಗುತ್ತದೆ. ಹೀಗಾಗಿ ಅದನ್ನು ತಪ್ಪಿಸಲು ಮೈಕ್ರೋಸಾಫ್ಟ್‌ ಸಂಸ್ಥೆ ಜತೆಗೂಡಿ ಹೊಸದಾಗಿ ಏಕಗವಾಕ್ಷಿ ವ್ಯವಸ್ಥೆ ಮತ್ತು ತಂತ್ರಾಂಶ ತರಲಾಗುತ್ತಿದೆ. ಅದರ ಅಡಿ ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ, ಕಂದಾಯ, ಕೆಐಎಡಿಬಿ ಸೇರಿ ಇನ್ನಿತರ ಸಂಬಂಧಪಟ್ಟ ಇಲಾಖೆಗಳನ್ನು ತರಲಾಗುತ್ತಿದೆ. ಭೂಮಿ, ನೀರು, ವಿದ್ಯುತ್‌ ಲಭ್ಯತೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಯಮಗಳು ಮತ್ತು ರಿಯಾಯಿತಿ, ಪ್ರೋತ್ಸಾಹ (ಇನ್ಸೆಂಟಿವ್‌)ಗಳ ವಿವರ ಹೀಗೆ ಎಲ್ಲ ಅಂಶಗಳು ನೂತನ ತಂತ್ರಾಂಶದಲ್ಲಿ ದೊರೆಯುವಂತೆ ಮಾಡಲಾಗುವುದು. ಅದರಲ್ಲೂ ಭೂಮಿ ಲಭ್ಯತೆ ಮತ್ತು ಎಷ್ಟು ದಿನಗಳಲ್ಲಿ ಭೂಮಿ ದೊರೆಯುತ್ತದೆ ಎಂಬ ಅಂಶವನ್ನು ಸೇರಿಸಲಾಗುತ್ತಿದೆ.

* ಇನ್ವೆಸ್ಟ್‌ ಕರ್ನಾಟಕದಲ್ಲಿ ನೂತನ ಕೈಗಾರಿಕಾ ನೀತಿ ಪ್ರಕಟಿಸಲಾಗುತ್ತದೆಯೇ? ಹಾಗಿದ್ದರೆ, ನೂತನ ನೀತಿಯಲ್ಲಿ ಏನೆಲ್ಲ ಅಂಶಗಳಿರಲಿವೆ?
ಹೂಡಿಕೆದಾರರಿಗೆ ಹಲವು ಅಂಶಗಳಲ್ಲಿ ಇನ್ಸೆಂಟಿವ್‌ ನೀಡುವಂಥ ಕೈಗಾರಿಕಾ ನೀತಿಯನ್ನು ಪ್ರಕಟಿಸಲಾಗುತ್ತಿದೆ. ಪ್ರಮುಖವಾಗಿ ಹೂಡಿಕೆದಾರರ ಅಥವಾ ಕೈಗಾರಿಕೆಗಳ ವಟಿವಾಟು ಮತ್ತು ಕೆಟಲ್‌ ಆಧಾರದಲ್ಲಿ ಹೂಡಿಕೆ ಮಾಡಿ ಇನ್ಸೆಂಟಿವ್‌ ಪಡೆಯಬಹುದಾದಂತಹ ವ್ಯವಸ್ಥೆ ನೂತನ ನೀತಿಯಲ್ಲಿರಲಿದೆ. ಉದ್ಯೋಗ ಸೃಷ್ಟಿ, ಮಹಿಳಾ ಉದ್ಯೋಗಿಗಳಿಗೆ ಹೆಚ್ಚಿನ ಅವಕಾಶ, ಮಾಲಿನ್ಯರಹಿತ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ವಿಶ್ವದಲ್ಲಿನ 500ಕ್ಕೂ ಹೆಚ್ಚಿನ ಫಾರ್ಚುನ್‌ ಸಂಸ್ಥೆಗಳಲ್ಲಿ 400ಕ್ಕೂ ಹೆಚ್ಚು ಬೆಂಗಳೂರಿನಲ್ಲಿವೆ. ಆ ಸಂಸ್ಥೆಗಳು ನಮ್ಮಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಮಾಡಿ ಉತ್ಪಾದನೆಯನ್ನು ಮಾತ್ರ ಬೇರೆ ದೇಶ ಅಥವಾ ರಾಜ್ಯಗಳಲ್ಲಿನ ಘಟಕಗಳಲ್ಲಿ ಮಾಡಿಸುತ್ತಿವೆ. ಅದನ್ನು ತಪ್ಪಿಸಿ ಬೆಂಗಳೂರು ಅಥವಾ ರಾಜ್ಯದಲ್ಲೇ ಸಂಶೋಧನೆ ಮತ್ತು ಅಭಿವೃದ್ಧಿ ಮಾಡಿ ನಂತರ ಉತ್ಪಾದನೆ ಮಾಡಿದರೆ ಹೆಚ್ಚುವರಿಯಾಗಿ ಶೇ.10 ವಿಶೇಷ ಇನ್ಸೆಂಟಿವ್‌ ನೀಡುವ ವ್ಯವಸ್ಥೆ ಜಾರಿಗೊಳಿಸಲಾಗುವುದು.

* ಬೆಂಗಳೂರು ಬಿಟ್ಟು 2 ಮತ್ತು 3ನೇ ಹಂತದ ನಗರಗಳತ್ತ ಹೂಡಿಕೆದಾರರನ್ನು ಆಕರ್ಷಿಸಲು ಏನು ಕ್ರಮಗಳಿವೆ?
ಬಿಯಾಂಡ್‌ ಬೆಂಗಳೂರಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸೆಮಿ ಕಂಡಕ್ಟರ್‌, ಮೆಡಿಕಲ್‌, ಟೆಕ್‌, ಎಲೆಕ್ಟ್ರಾನಿಕ್ಸ್‌ ಉಪಕರಣಗಳ ಉತ್ಪಾದನಾ ಕೈಗಾರಿಕೆಗಳು ಬೆಂಗಳೂರು ಹೊರತುಪಡಿಸಿ ಬೇರೆ ನಗರಗಳತ್ತ ಆಕರ್ಷಿತವಾಗುವಂತೆ ಮಾಡಲಾಗುತ್ತಿದೆ. ಈಗಾಗಲೇ ತುಮಕೂರಿನಲ್ಲಿ ಮಷಿನ್‌ ಟೂಲ್‌ ಪಾರ್ಕ್‌, ಕೊಪ್ಪಳ, ಬಳ್ಳಾರಿಯಲ್ಲಿ ಕಬ್ಬಿಣದ ಅದಿರು, ಉಕ್ಕು ಕಾರ್ಖಾನೆ ಸ್ಥಾಪನೆ, ಹುಬ್ಬಳ್ಳಿಯಲ್ಲಿ ಎಫ್‌ಎಂಸಿಜಿ ಪಾರ್ಕ್‌, ವಿಜಯಪುರದಲ್ಲಿ ಸೆಲ್‌ ಮ್ಯಾನುಫ್ಯಾಕ್ಚರಿಂಗ್‌ ಘಟಕ ಸ್ಥಾಪನೆಗೆ ಒತ್ತು ನೀಡಲಾಗಿದೆ. ಮಂಗಳೂರು, ಹುಬ್ಬಳಿ, ಮೈಸೂರು ಮತ್ತು ಬೆಳಗಾವಿಯಲ್ಲಿ ಹೆಚ್ಚಿನ ಹೂಡಿಕೆಯಾಗುವಂತೆ ಮಾಡಲು ಹಲವು ಕ್ರಮ ಕೈಗೊಳ್ಳುತ್ತಿದ್ದೇವೆ.

* ಬೆಂಗಳೂರು ನಗರ ಸಮೀಪ 2ನೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಿರ್ಮಾಣಕ್ಕೆ ಜಾಗ ಗುರುತು ಅಂತಿಮವಾಗಿದೆಯೇ?
ಎಲ್ಲ ಪ್ರಕ್ರಿಯೆಗಳೂ ಅಂತಿಮ ಹಂತದಲ್ಲಿವೆ. ಈ ಕುರಿತು ಮುಖ್ಯಮಂತ್ರಿಗಳ ಜತೆಗೆ ಚರ್ಚೆ ನಡೆಸಬೇಕಿದೆ. ಶೀಘ್ರ ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರಕ್ಕೆ ವಿಮಾನನಿಲ್ದಾಣ ನಿರ್ಮಾಣ ಜಾಗ ಹಾಗೂ ವಿಮಾನನಿಲ್ದಾಣ ನಿರ್ಮಾಣಕ್ಕೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗುವುದು.

* ವಿಮಾನ ನಿಲ್ದಾಣ ನಿರ್ಮಾಣದ ಜಾಗ ಆಯ್ಕೆ ಕುರಿತು ವಿವಾದಕ್ಕೆ ಕಾರಣವೇನು?
ವಿವಾದವೇನಿಲ್ಲ, ಆದರೆ ವಾದವಿದೆಯಷ್ಟೇ. ಕೆಲವರು ಉತ್ತರ ಕರ್ನಾಟಕದಲ್ಲಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣವಾಗಬೇಕು ಎಂಬ ವಾದ ಮುಂದಿಡುತ್ತಿದ್ದಾರೆ. ಆದರೆ, ವಿಮಾನನಿಲ್ದಾಣ ನಿರ್ಮಾಣಕ್ಕೆ ಹೂಡಿಕೆ ಮಾಡುವವರು ಎಲ್ಲ ಅಂಶಗಳನ್ನೂ ಗಮನಿಸುತ್ತಾರೆ. ಪ್ರಯಾಣಿಕರ ಒತ್ತಡ, ಸರಕು ಸಾಗಣೆ ಪ್ರಮಾಣ ಎಷ್ಟಿರಲಿದೆ ಎಂಬ ಅಂಶದ ಮೇಲೆ ಅವರು ಹೂಡಿಕೆ ಮಾಡುತ್ತಾರೆ. ವಿಮಾನನಿಲ್ದಾಣ ನಿರ್ಮಾಣಕ್ಕೆ ನಾವು ಭೂಮಿ ನೀಡಿದರೂ ಮತ್ತು ವಿಮಾನನಿಲ್ದಾಣ ನಿರ್ಮಾಣವಾದರೂ ಅಲ್ಲಿಗೆ ಪ್ರಯಾಣಿಕರು ಬಾರದಿದ್ದರೆ ಅದರಿಂದ ಯಾವುದೇ ಪ್ರಯೋಜನವೂ ಆಗದು. ಹೀಗಾಗಿ ಎಲ್ಲವನ್ನೂ ಗಮನಿಸಿ ವಿಮಾನನಿಲ್ದಾಣದ ಜಾಗ ಗುರುತಿಸಬೇಕಾಗುತ್ತದೆ.

ವಿಜಯಪುರ: 25 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ, ಸಚಿವ ಎಂ.ಬಿ.ಪಾಟೀಲ

* ಕೇಂದ್ರ ಬೃಹತ್‌ ಕೈಗಾರಿಕಾ ಸಚಿವರು ರಾಜ್ಯದವರೇ ಆಗಿದ್ದು, ಅದರಿಂದ ಏನಾದರೂ ಲಾಭವಾಗುತ್ತಿದೆಯೇ?
ರಾಜ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಸಂಬಂಧಿಸಿ ಹೂಡಿಕೆದಾರರ ಬಳಿ ಲಾಬಿ ಮಾಡಿ ಎಂದು ಕೇಂದ್ರ ಸಚಿವರಲ್ಲಿ ಕೇಳಿದ್ದೇವೆ. ಸೆಮಿ ಕಂಡಕ್ಟರ್‌ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಬರುವವರನ್ನು ರಾಜ್ಯದತ್ತ ಕಳುಹಿಸುವಂತೆ ಕೇಳಿದ್ದೇವೆ. ಹಿಂದೆ ಇಬ್ಬರು ಹೂಡಿಕೆದಾರರು ಬಂದಿದ್ದರು. ಅವರೊಂದಿಗೆ ಮಾತುಕತೆಯೂ ಆಗಿತ್ತು. ಕೊನೆಗೆ ಕೇಂದ್ರ ಸರ್ಕಾರದ ಬಳಿ ಚರ್ಚೆಗೆ ಹೋದ ನಂತರ ಹೂಡಿಕೆದಾರರು ಬೇರೆ ರಾಜ್ಯಗಳಲ್ಲಿ ಹೂಡಿಕೆಗೆ ಮುಂದಾದರು. ಈ ರೀತಿ ಮುಂದೆ ಆಗದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಸಚಿವರಿಗೆ ಕೇಳಿದ್ದೇವೆ. ಹೂಡಿಕೆದಾರರನ್ನು ಕಳುಹಿಸದಿದ್ದರೂ, ನಮ್ಮಲ್ಲಿಗೆ ಬರುವವರನ್ನು ಬೇರೆ ರಾಜ್ಯಕ್ಕೆ ಹೋಗದಂತೆ ತಡೆಯಬೇಕು ಎಂದು ಕೇಳಿದ್ದೇವಷ್ಟೇ.