ದೇಶದಲ್ಲಿ ಬಿಜೆಪಿಯವರು ಮತೀಯ ವಿಚಾರ ಇಟ್ಟುಕೊಂಡು ಧರ್ಮ ರಾಜಕಾರಣದಲ್ಲಿ ತಲ್ಲೀನರಾಗಿದ್ದಾರೆ. ನಾವು ಪಕ್ಷ ನಂಬಿರುವ ಸರ್ವ ಧರ್ಮ ಸಹಬಾಳ್ವೆ ಸಿದ್ಧಾಂತ ಮುಂದಿಟ್ಟುಕೊಂಡೇ ‘ಭಾರತ ಐಕ್ಯತಾ ಯಾತ್ರೆ’ ನಡೆಸುತ್ತೇವೆ.
ಬೆಂಗಳೂರು (ಸೆ.02): ದೇಶದಲ್ಲಿ ಬಿಜೆಪಿಯವರು ಮತೀಯ ವಿಚಾರ ಇಟ್ಟುಕೊಂಡು ಧರ್ಮ ರಾಜಕಾರಣದಲ್ಲಿ ತಲ್ಲೀನರಾಗಿದ್ದಾರೆ. ನಾವು ಪಕ್ಷ ನಂಬಿರುವ ಸರ್ವ ಧರ್ಮ ಸಹಬಾಳ್ವೆ ಸಿದ್ಧಾಂತ ಮುಂದಿಟ್ಟುಕೊಂಡೇ ‘ಭಾರತ ಐಕ್ಯತಾ ಯಾತ್ರೆ’ ನಡೆಸುತ್ತೇವೆ. ತನ್ಮೂಲಕ ಕೇಂದ್ರದ ಅನಾಚಾರಗಳ ವಿರುದ್ಧ ಜನರನ್ನು ಒಂದುಗೂಡಿಸುತ್ತೇವೆ ಎಂದು ಕಾಂಗ್ರೆಸ್ ಹಿರಿಯ ನಾಯಕರ ಹಾಗೂ ಯಾತ್ರೆಯ ಸಂಚಾಲಕ ದಿಗ್ವಿಜಯ್‌ಸಿಂಗ್ ಹೇಳಿದ್ದಾರೆ. ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ‘ಭಾರತ ಐಕ್ಯತಾ ಯಾತ್ರೆ’ ಕುರಿತು ಕೆಪಿಸಿಸಿ ಪದಾಧಿಕಾರಿಗಳು, ಮುಂಚೂಣಿ ಘಟಕಗಳ ಪದಾಧಿಕಾರಿಗಳು ಹಾಗೂ ಸಮನ್ವಯಕಾರರನ್ನು ಉದ್ದೇಶಿಸಿ ಹಮ್ಮಿಕೊಂಡಿದ್ದ ಹಿರಿಯ ನಾಯಕರ ಸಭೆಯಲ್ಲಿ ಅವರು ಮಾತನಾಡಿದರು.
ದೇಶ ಬದಲಿಸುವ ಯಾತ್ರೆ: ಬಿಜೆಪಿಯದ್ದು ಕೋಮುವಾದ ಸಿದ್ಧಾಂತವಾದರೆ, ನಮ್ಮದು ಸರ್ವರನ್ನು ಒಳಗೊಂಡ ಅಭಿವೃದ್ಧಿ ಸಿದ್ಧಾಂತ. ಇದೇ ತತ್ವದಡಿ ಜನರನ್ನು ಒಗ್ಗೂಡಿಸಲು ರಾಹುಲ್‌ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಸಲಿದ್ದಾರೆ. ರಾಜ್ಯದಲ್ಲೂ 21 ದಿನಗಳ ಕಾಲ ಯಾತ್ರೆ ನಡೆಯಲಿದೆ. ಐಕ್ಯತೆ ಪ್ರತಿಪಾದಿಸುವ ಜತೆಗೆ ದೇಶದಲ್ಲಿನ ಭ್ರಷ್ಟಾಚಾರ, ಜಿಎಸ್‌ಟಿ ಅನ್ಯಾಯ, ನಿರುದೋಗ, ಬಡತನ ವಿರುದ್ಧ ಜಾಗೃತಿ ಮೂಡಿಸಲಾಗುವುದು. ತನ್ಮೂಲಕ ಯಾತ್ರೆಯನ್ನು ದೇಶ ಬದಲಿಸುವ ಬಹುದೊಡ್ಡ ರಾಜಕೀಯ ಯಾತ್ರೆ ಮಾಡಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.
ಮತ್ತೋರ್ವ ಹಿರಿಯ ನಾಯಕ ಕಾಂಗ್ರೆಸ್‌ಗೆ ಗುಡ್ ಬೈ: ಸಿದ್ದು, ಡಿಕೆಶಿ ಭೇಟಿಯಾಗಿ ರಾಜೀನಾಮೆ ಘೋಷಣೆ
ದೇಶಕ್ಕೆ ಲಾಭ: ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಈ ಪಾದಯಾತ್ರೆಯಿಂದ ಪಕ್ಷಕ್ಕೆ ಲಾಭವಿಲ್ಲ. ದೇಶಕ್ಕೆ ಲಾಭವಾಗಲಿದೆ. ಬ್ರಿಟೀಷರ ಪರ ಇದ್ದವರನ್ನ ಹೊಗಳುತ್ತಾ ಬಿಜೆಪಿ ನೀಚ ರಾಜಕೀಯ ಮಾಡುತ್ತಿದೆ. ನಾವು ದೇಶ ಕಟ್ಟಿದವರ ನೆನಯಲು ನಡೆಯಲಿದ್ದೇವೆ ಎಂದು ಹೇಳಿದರು. ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟಿಲ್, ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ರಾಮಲಿಂಗಾರೆಡ್ಡಿ ಸೇರಿ ಹಲವರು ಹಾಜರಿದ್ದರು.
‘ಕೈ’ ಕಾರ್ಯಕರ್ತರಿಂದಲೇ ಜೈರಾಮ್ ರಮೇಶ್‌ಗೆ ಮುಜುಗರ: ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಕನ್ನಡ ಮಾತನಾಡದ ರಾಜ್ಯಸಭೆ ಸದಸ್ಯ ಜೈರಾಂ ರಮೇಶ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರೇ ಅಸಮಾಧಾನ ವ್ಯಕ್ತಪಡಿಸಿ ಕನ್ನಡದಲ್ಲಿ ಮಾತನಾಡುವಂತೆ ಒತ್ತಾಯಿಸಿದ ಘಟನೆ ಗುರುವಾರ ಕಾರ್ಯಕ್ರಮದಲ್ಲಿ ನಡೆಯಿತು. ಇಂಗ್ಲೀಷ್ ಭಾಷಣ ಮಾಡುತ್ತಿದ್ದ ಜೈರಾಮ್ ರಮೇಶ್ ಅವರನ್ನು ತಮ್ಮ ಘೋಷಣೆಗಳ ಮೂಲಕ ತಡೆದ ಕಾರ್ಯಕರ್ತರು, ಕನ್ನಡದಲ್ಲಿ ಭಾಷಣ ಮಾಡುವಂತೆ ಒತ್ತಾಯಿಸಿದರು. ಇದರಿಂದ ಜೈರಾಮ್ ರಮೇಶ್ ಮುಜುಗರ ಅನುಭವಿಸುವಂತಾಯಿತು. ಒತ್ತಾಯಕ್ಕೆ ಮಣಿದು ಕನ್ನಡದಲ್ಲೇ ಮಾತನಾಡಿದ ಅವರು, ‘ಇದು ಮನ್ ಕಿ ಬಾತ್ ಅಲ್ಲ. ಇದು ಜನತೆಯ ಚಿಂತನ ಯಾತ್ರೆ. ಭಾರತ್ ಐಕ್ಯತಾ ಯಾತ್ರೆಯಲ್ಲಿ ಯಾವುದೇ ಭಾಷಣ ಇರುವುದಿಲ್ಲ. ಪ್ರಧಾನಿಗಳ ವಿರುದ್ಧ ಘೋಷಣೆ ಇರುವುದಿಲ್ಲ. ಇದು ಜನರ ಸಮಸ್ಯೆ ಅರಿಯುವ ಕಾರ್ಯಕ್ರಮ’ ಎಂದರು.
ಅಧಿಕಾರದ ಹಗಲುಗನಸು ಕಾಣುತ್ತಿರುವ ಕಾಂಗ್ರೆಸ್ಸಿಗರು: ಸಚಿವ ಹಾಲಪ್ಪ ಆಚಾರ್
ಆತಂಕದ ವಾತಾವರಣವಿದೆ: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ದೇಶದಲ್ಲಿ ಆತಂಕದ ವಾತಾವರಣವಿದೆ. ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕಿದೆ. ವಾಜಪೇಯಿಯವರು ಪ್ರಧಾನಿಯಾದಾಗ ಸಂವಿಧಾನ ಪುನಾರಚನೆಗೆ ಹೊರಟಿದ್ದರು. ಆದರೆ, ಆಗ ನಾರಾಯಣನ್ ರಾಷ್ಟ್ರಪತಿಗಳಾಗಿದ್ದರು. ಹಾಗಾಗಿ ಪುನಾರಚನೆಗೆ ಅವಕಾಶ ಸಿಗಲಿಲ್ಲ. ಸಂವಿಧಾನ ಬದಲಾವಣೆ ಮಾಡಬೇಕೆಂಬುದು ಬಿಜೆಪಿಯವರ ಮನಸ್ಥಿತಿ. ಅದು ಬಿಜೆಪಿ ಸಂಸದ ಅನಂತ್ ಕುಮಾರ ಹೆಗಡೆ ಬಾಯಲ್ಲಿ ಬಂದಿದೆ. ಪ್ರಜಾಪ್ರಭುತ್ವ ಉಳಿಸುವ ಕೆಲಸ ಈಗ ಆಗಬೇಕಿದೆ ಎಂದು ಕರೆ ನೀಡಿದರು.
