ಡೆಲ್ಲಿಮಂಜು

ನವದೆಹಲಿ( ಡಿ. 21) ಸಚಿವಾಕಾಂಕ್ಷಿಗಳಿಗೆ ಸಿಹಿ ಸುದ್ದಿ. ಸಂಕ್ರಾಂತಿಗೆ ಸಿಗುತ್ತಾ ಮಿನಿಸ್ಟರ್ ಶಿಪ್..! ಬಿಎಸ್‍ವೈ ಆಡಳಿತಕ್ಕೂ ಕೊಟ್ರು ಫುಲ್ ಮಾಕ್ರ್ಸ್. ಮಿನಿಸ್ಟರ್‍ಗಳ ಮೇಲೆ ದೂರೇ ಇಲ್ಲ ಅಂದರು ಸಿಂಗ್. ಸಿಎಂ ಬದಲಾವಣೆ ಪ್ರಸ್ತಾವನೇ ಹೈಕಮಾಂಡ್ ಮುಂದೆ ಇಲ್ಲವೇ ಇಲ್ಲ ಅಂದರು ಕರ್ನಾಟಕದ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್. ಸಂದರ್ಶನದ ಪೂರ್ಣ ವಿವರ ಇಲ್ಲಿದೆ ನೋಡಿ.....

1. ಕರ್ನಾಟಕದಲ್ಲಿ ಎರಡು ಪದ ಬಹಳ ಸದ್ದು ಮಾಡುತ್ತಿವೆ. ಒಂದು `ಲೀಡರ್ ಶಿಪ್', ಮತ್ತೊಂದು ಪದ `ಬದಲಾವಣೆ'. ಇದು ನಿಜವಾ ?

ಅರುಣ್ ಸಿಂಗ್.:  ಬದಲಾವಣೆ ಇಲ್ಲವೇ ಇಲ್ಲ. ಬಿಎಸ್‍ವೈ ನಮ್ಮ ಹಿರಿಯ ನಾಯಕರು. ಜನಪ್ರಿಯ ನಾಯಕರು. ಅವರು ಸಿಎಂ ಆಗಿಯೇ ಇರ್ತಾರೆ. ಕರ್ನಾಟಕದ ಬಿಜೆಪಿಯಲ್ಲಿ ಅವರು ಬಹುದೊಡ್ಡ ನಾಯಕರು.

2. ಸಿಎಂಗೆ ಫುಲ್ ಅಂಕ ಕೊಟ್ರಿ, ಆದರೆ ಅವರ ಮಂತ್ರಿಮಂಡಲ ವಿರುದ್ಧ ಹಲವು ದೂರುಗಳು, ಸರಿಯಾಗಿ ಕೆಲಸ ಮಾಡುತ್ತಿಲ್ಲ ಅನ್ನೋ ಮಾತು ಇದೆಯಲ್ಲಾ ?

ಅರುಣ್ ಸಿಂಗ್; ಎಲ್ಲಾ ಸಚಿವರು ಚನ್ನಾಗಿ ಕೆಲಸ ಮಾಡುತ್ತಿದ್ದಾರೆ. ಸಚಿವರ ಕಾರ್ಯವೈಖರಿ ನಾನು ನೋಡಿದ್ದೇನೆ. ಬಡವರು, ರೈತರಪರ ಕೆಲಸ ಮಾಡುತ್ತಿದ್ದಾರೆ. ಯಾವ ಸಚಿವರ ವಿರುದ್ಧವೂ ದೂರು ಇಲ್ಲ.

ಕೊನೆಗೂ ಸಚಿವ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ ಸಿಕ್ತು

3. ಕರ್ನಾಟಕದ ಸಚಿವ ಸಂಪುಟ ವಿಸ್ತರಣೆ ಯಾವಾಗ ಆಗಬಹುದು ? ಕಳೆದ ಬಾರಿ ಬಿಎಸ್‍ವೈ ಬಂದು ನಡ್ಡಾ ಅವರನ್ನು ಭೇಟಿಯಾಗಿದ್ದರು. ಮೂರು ದಿನ ಅಂತ ಹೇಳಿದ್ದರು ? ಆದರೆ...

ಅರುಣ್ ಸಿಂಗ್; ಸಚಿವ ಸಂಪುಟ ವಿಸ್ತರಣೆ, ಸಚಿವರ ಸೇರ್ಪಡೆ ಅದೆಲ್ಲಾ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಬಿಎಸ್‍ವೈ ಇದರ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. ಯಾವಾಗ ಸಂಪುಟ ವಿಸ್ತರಣೆ ಮಾಡಬೇಕು ಅಂತ ಅವರೇ ನಿರ್ಣಯ ಮಾಡುತ್ತಾರೆ.

4. ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಈ ತನಕ ಅನುಮತಿ ನೀಡುತ್ತಿಲ್ಲ ಅಲ್ವಾ ? 

ಅರುಣ್ ಸಿಂಗ್; ಕೇಂದ್ರದ ಮಾರ್ಗದರ್ಶನ ಅವರು (ಸಿಎಂ ಬಿಎಸ್‍ವೈ) ಪಡೆಯುತ್ತಾರೆ. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಇದೀಗ ಅವರು ಗುಣಮುಖರಾಗುತ್ತಿದ್ದಾರೆ. ನಂತರ ತೀರ್ಮಾನವಾಗುತ್ತೆ. ಆದರೆ ಸಚಿವ ಸಂಪುಟ ವಿಸ್ತರಣೆ ಬಿಎಸ್‍ವೈ ಅವರೇ ಅಂತಿಮ ತೀರ್ಮಾನ ಮಾಡುತ್ತಾರೆ.

5. ಮುಂದಿನ ಜನವರಿಯಲ್ಲಿ ಸಚಿವ ಸಂಪಟ ವಿಸ್ತರಣೆಯನ್ನು ಕರ್ನಾಟಕ ಬಿಜೆಪಿ ನಿರೀಕ್ಷೆ ಮಾಡಬಹುದಾ ?

ಅರುಣ್ ಸಿಂಗ್; ನಾನು ಆಗಲೇ ಹೇಳಿದಂತೆ ಅದು ಸಿಎಂ ನಿರ್ಧಾರ, ಆದರೆ ಅತಿ ಶೀಘ್ರದಲ್ಲಿ ಆಗಲಿದೆ. ಇದರ ಬಗ್ಗೆ ಅಷ್ಟೊಂದು ಹೈಪ್ ಮಾಡುವ ಜರೂರತ್ತು ಇಲ್ಲ. ಕೇಂದ್ರದ ಜೊತೆ ಮಾತಾಡಿ ಬಿಎಸ್‍ವೈ ನಿರ್ಧಾರ ಮಾಡ್ತಾರೆ.

6. ಕರ್ನಾಟಕದಲ್ಲಿ ಜೆಡಿಎಸ್ ಬಿಜೆಪಿ ಜೊತೆ ಮರ್ಜ್ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ ಅಲ್ವಾ ?

ಅರುಣ್ ಸಿಂಗ್;  ಮೊದಲು ಕಾಂಗ್ರೆಸ್ ಮತ್ತು ಜೆಡಿಎಸ್ ಜೊತೆಯಾಗಿಯೇ ಸರ್ಕಾರ ನಡೆಸಿದ್ದವು. ವಿಧಾನ ಪರಿಷತ್‍ನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ಕೆಲಸ ಮಾಡುತ್ತಿದ್ದವು. ಅದರೂ ಉಪ ಸಭಾಪತಿಗಳ ಎಳೆದಾಡಿದರು. ದೇಶದಲ್ಲಿ ಇಂಥ ಘಟನೆ ನಡೆದಿಲ್ಲ. ಈ ಘಟನೆಯನ್ನು ನಾನು ಖಂಡಿಸುತ್ತೇನೆ.

ಆದರೆ ಯಾರು ಬರುತ್ತಾರೆ, ಯಾರ ಜೊತೆ ಬರುತ್ತಾರೆ ಅನ್ನೋ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ಇದರ ಬಗ್ಗೆ ನಾನು ಏನು ಹೇಳೋಕೆ ಆಗಲ್ಲ. ಹೈಕಮಾಂಡ್ ಜೊತೆ ಅಥವಾ ನನ್ನ ಜೊತೆ ಮಾತುಕತೆ ನಡೆದಿಲ್ಲ. ಬಿಜೆಪಿ ವಿಶ್ವದ ಅತಿದೊಡ್ಡ ಪಕ್ಷ. ಕರ್ನಾಟಕದಲ್ಲೂ ಬಿಜೆಪಿ ದೊಡ್ಡ ಪಕ್ಷ. ಚುನಾವಣೆಯನ್ನು ನಾವು ಏಕಾಂಗಿಯಾಗಿ ಎದುರಿಸುತ್ತೇವೆ.

7. ಕರ್ನಾಟಕದಲ್ಲಿ `ಅರುಣ್ ಸಿಂಗ್' ಅವರ ಮುಂದಿನ ಟಾರ್ಗೆಟ್ ಏನು ?

ಅರುಣ್ ಸಿಂಗ್;  ನನ್ನ ಟಾರ್ಗೆಟ್ ಎಂದರೆ ಯಾವ ಭಾಗದಲ್ಲಿ ಬಿಜೆಪಿಗೆ ಶಕ್ತಿ ಇಲ್ಲವೋ ಅಂಥ ಪ್ರದೇಶದಲ್ಲಿ ಪಕ್ಷದ ಕಾರ್ಯಕರ್ತರ ಜೊತೆ ಕರ್ನಾಟಕದಲ್ಲಿ ಕೆಲಸ ಮಾಡುವುದು. ಉದಾಹರಣೆಗೆ ಮೈಸೂರು ಪ್ರಾಂತ್ಯ. ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಕ್ರಿಯಾಶೀಲರಾಗಿ ಮಾಡುವುದು. ಕರ್ನಾಟಕದ ಮೂಲೆ ಮೂಲೆಯಲ್ಲೂ ಪಕ್ಷದ ಸಂಘಟನೆ ಮಾಡುವುದೇ ನಮ್ಮ ಆದ್ಯತೆ.

8. ಕಳೆದ ಬಾರಿ ಕರ್ನಾಟಕದ ಪ್ರವಾಸ ಏಕಾಏಕಿ ರದ್ದಾಗಿತ್ತು ಏಕೆ ?

ಅರುಣ್ ಸಿಂಗ್;  ಅದು ರದ್ದು ಮಾಡಿದ್ದು ಅಲ್ಲ. ನಮ್ಮ ಪಕ್ಷದ ಅಧ್ಯಕ್ಷರಿಗೆ ಅನಾರೋಗ್ಯ. ಹಾಗಾಗಿ ನನ್ನ ಪ್ರವಾಸ ರದ್ದು ಮಾಡಲಾಯಿತು. ಆದರೆ ಶೀಘ್ರದಲ್ಲಿ ನಾನು ಕರ್ನಾಟಕಕ್ಕೆ ಭೇಟಿ ಕೊಡುತ್ತೇನೆ. 

9. ಸಂಪುಟ ಪುನರ್ ರಚನೆಯ ಬಗ್ಗೆ ಕೇಂದ್ರ ಬಿಜೆಪಿಯಿಂದ ಮುಂದಿನ ತಿಂಗಳು ಸಿಹಿ ಸುದ್ದಿ ನಿರೀಕ್ಷಿಸಬಹುದಾ ?

ಅರುಣ್ ಸಿಂಗ್;  ಈ ಬಗ್ಗೆ ಭರವಸೆ ಇಡೋಣ.