ವಿಶ್ವ ಆರ್ಥಿಕತೆಯಲ್ಲಿ ಭಾರತಕ್ಕೆ 5ನೇ ಸ್ಥಾನ: ಇದು ಮೋದಿ ಆಡಳಿತದ ಫಲ ಎಂದ ತೇಜಸ್ವಿ ಸೂರ್ಯ
ರಾಜ್ಯದಲ್ಲೊಂದು-ಕೇಂದ್ರದಲ್ಲೊಂದು ಸರ್ಕಾರ ಎಂಬ ಭಾವನೆ ಬೇಡ. ಡಬಲ್ ಇಂಜಿನ್ ಸರ್ಕಾರದಿಂದಾಗಿ ಇಂದು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯಾಗಿದೆ. ರಾಜ್ಯದ ಜನತೆಗೆ ಬಿಜೆಪಿಯೇ ಭರವಸೆಯಾದ್ದರಿಂದ ಈ ಬಾರಿ ಬಹುಮತದ ಬಿಜೆಪಿ ಸರ್ಕಾರ ಬರುವುದು ನಿಶ್ಚಿತ ಎಂದ ತೇಜಸ್ವಿ ಸೂರ್ಯ.
ಮಹಾಲಿಂಗಪುರ(ಮಾ.22): ಜನಪರ ಆಡಳಿತದಿಂದಾಗಿ ಪ್ರಧಾನಿ ಮೋದಿ ವಿಶ್ವವಿಖ್ಯಾತರಾಗಿದ್ದಾರೆ. ಒಂಭತ್ತು ವರ್ಷಗಳ ಪಾರದರ್ಶಕ, ಜನಪರ ಆಡಳಿತದ ಫಲವಾಗಿ ಭಾರತ ಇಂದು ಆರ್ಥಿಕಾಭಿವೃದ್ಧಿಯಲ್ಲಿ ವಿಶ್ವದಲ್ಲೇ 5ನೇ ಸ್ಥಾನದಲ್ಲಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಪಟ್ಟಣದ ಕೆಎಲ್‌ಇ ಕಾಲೇಜ್ ಆವರಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯುವ ಸಂಕಲ್ಪ ಸಮಾವೇಶದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಮಾತನಾಡಿ, ರಾಜ್ಯದಲ್ಲೊಂದು-ಕೇಂದ್ರದಲ್ಲೊಂದು ಸರ್ಕಾರ ಎಂಬ ಭಾವನೆ ಬೇಡ. ಡಬಲ್ ಇಂಜಿನ್ ಸರ್ಕಾರದಿಂದಾಗಿ ಇಂದು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯಾಗಿದೆ. ರಾಜ್ಯದ ಜನತೆಗೆ ಬಿಜೆಪಿಯೇ ಭರವಸೆಯಾದ್ದರಿಂದ ಈ ಬಾರಿ ಬಹುಮತದ ಬಿಜೆಪಿ ಸರ್ಕಾರ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಜಮ್ಮು-ಕಾಶ್ಮೀರದಲ್ಲಿ 371ರ ಕಲಂ ರದ್ದತಿ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ಪ್ರತಿ ಗ್ರಾಮಕ್ಕೂ ಕುಡಿಯುವ ನೀರಿನ ಯೋಜನೆ, ರೈತರಿಗೆ ಕಿಸಾನ್ ಸಮ್ಮಾನ್ ನೆರವು, ಯುವಕರು, ಮಹಿಳೆಯರಿಗೆ ಸ್ವಾವಲಂಬಿ ಉದ್ಯೋಗವಕಾಶ ಹೀಗೆ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ತೊಡಗಿದೆ ಎಂದು ಹೇಳದರು.
ಮುಂದಿನ ಬಾರಿಯೂ ನಾನೇ ಮುಖ್ಯಮಂತ್ರಿ: ಮನದಾಸೆ ವ್ಯಕ್ತಪಡಿಸಿದ ಬೊಮ್ಮಾಯಿ
ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂದೀಪಕುಮಾರ, ಜಿಲ್ಲಾಧ್ಯಕ್ಷ ಆನಂದ ಇಂಗಳಗಾಂವಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲಲು ಯುವಶಕ್ತಿ ಶ್ರಮಿಸಬೇಕು ಎಂದು ಮನವಿ ಮಾಡಿದರು.
ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ, ದೇಶದ ಉಳಿವಿಗಾಗಿ ಕೇಂದ್ರದಲ್ಲಿ ಮೋದಿ ಇರಬೇಕು. ಕಾಂಗ್ರೆಸ್ ಕೇವಲ ಬೋಗಸ್ ಘೋಷಣೆಗಳನ್ನು ಮಾಡುತ್ತ ಜಾತಿ-ಜಾತಿಗಳ ಮಧ್ಯೆ ಜಗಳ ಹಚ್ಚುತ್ತಿದೆ. ಕಾಂಗ್ರೆಸ್‌ನ ಹುಸಿ ಭರವಸೆಗಳಿಗೆ ರಾಜ್ಯದ ಜನತೆ ಮರುಳಾಗುವುದಿಲ್ಲ ಎಂದು ಹೇಳಿದರು. ಯುವಶಕ್ತಿ ಬೂತ್ ಮಟ್ಟದಲ್ಲಿ ಕೆಲಸ ಮಾಡಿ ಕ್ಷೇತ್ರ ಮತ್ತು ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಬಾವುಟ ಹಾರಿಸಲು ಶ್ರಮಿಸಬೇಕು ಎಂದರು.
ಇದೇ ವೇಳೆ ಯಲ್ಲಟ್ಟಿ ಕಾಲೇಜಿನ ಬಸವರಾಜ ಕೊಣ್ಣುರ ಬಿಜೆಪಿ ಸೇರ್ಪಡೆಯಾದರು. ರಾಜ್ಯ ಉಪಾಧ್ಯಕ್ಷ ರಾಜಕುಮಾರ ಸಗರಿ, ಕಾರ್ಯದರ್ಶಿ ಈರಣ್ಣ ಅಂಗಡಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಹಣಮಂತರಾಯ ಬಿರಾದರ, ವಿಠ್ಠಲ ಯತ್ನಟ್ಟಿ, ಶ್ರೀಶೈಲಗೌಡ ಪಾಟೀಲ, ಸುರೇಶ ಅಕ್ಕಿವಾಟ, ಧರೆಪ್ಪ ಉಳ್ಳಾಗಡ್ಡಿ, ಬಸನಗೌಡ ಪಾಟೀಲ, ಮಹಾಂತೇಶ ಹಿಟ್ಟಿನಮಠ, ಶ್ರೀಮಂತ ಹಳ್ಳಿ, ಮಹಾಲಿಂಗಪ್ಪ ಕುಳ್ಳೊಳ್ಳಿ, ವಿದ್ಯಾಧರ ಸವದಿ, ಲಕ್ಕಪ್ಪ ಪಾಟೀಲ, ಪವನ ಮೇಟಿ, ಮುತ್ತು ಉಳ್ಳಾಗಡ್ಡಿ, ಜಿ.ಎಸ್.ಗೊಂಬಿ, ಶಿವನಗೌಡ ಪಾಟೀಲ ಸೇರಿದಂತೆ ತೇರದಾಳ ಮತಕ್ಷೇತ್ರದ ಬಿಜೆಪಿ ಮುಖಂಡರು, ಯುವ ಮೋರ್ಚಾ ಪದಾಧಿಕಾರಿಗಳು ಇದ್ದರು.
ನಾಯಕರಿಲ್ಲದೆ ನಿರಾಶೆ:
ಯುವ ಸಂಕಲ್ಪ ಸಮಾವೇಶಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ತಮಿಳನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರ ನಿರೀಕ್ಷೆಯಲ್ಲಿ ಇದ್ದ ಸ್ಥಳೀಯ ಯುವಕರಿಗೆ ಅವರು ಬಾರದಿದ್ದುದು ನಿರಾಶೆಯಾಯಿತು. ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಸಾವಿರಾರು ಯುವಕರು ತೇಜಸ್ವಿಸೂರ್ಯ ಭಾಷಣ ಕೇಳಲು ನಿರೀಕ್ಷಿತ ಪ್ರಮಾಣದಲ್ಲಿ ಸೇರಲಿಲ್ಲ ಎಂಬ ಮಾತು ಬಿಜೆಪಿ ಯುವ ವಲಯದಲೇ ಕೇಳಿ ಬಂತು.