ನವದೆಹಲಿ[ಫೆ.26]: ಪ್ರಧಾನಿ ನರೇಂದ್ರ ಮೋದಿ ಮೇಲೆ ದಿನವೂ ವಾಗ್ದಾಳಿ ನಡೆಸುವುದಕ್ಕಿಂತ ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಸ್ಥಳೀಯ ಸಂಸದರನ್ನು ಹೆಚ್ಚು ಟಾರ್ಗೆಟ್‌ ಮಾಡಿ ಎಂದು ಕಾಂಗ್ರೆಸ್‌ ಪಕ್ಷ ರಣತಂತ್ರ ಹೆಣೆಯಲು ನೇಮಿಸಿರುವ ಏಜೆನ್ಸಿಗಳು ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿಗೆ ಸಲಹೆ ನೀಡಿವೆ. ಬರೀ ಮೋದಿಯನ್ನು ಟೀಕಿಸುತ್ತಾ ಹೋದರೆ ಪೂರ್ತಿ ಚುನಾವಣೆ ಅಮೆರಿಕದ ಅಧ್ಯಕ್ಷೀಯ ಮಾದರಿಯಲ್ಲಿ ಮೋದಿ ಪರ ಮತ್ತು ವಿರುದ್ಧ ಎಂಬಂತೆ ನಡೆಯುತ್ತದೆ. ಬಿಜೆಪಿ ಮತ್ತು ಮೋದಿಗೂ ಬೇಕಾಗಿರುವುದು ಇದೇ. ದಯವಿಟ್ಟು ಇದರಲ್ಲಿ ಟ್ರ್ಯಾಪ್‌ ಆಗಬೇಡಿ ಎಂದು ಕಾಂಗ್ರೆಸ್‌ಗೆ ರಣತಂತ್ರ ಹೆಣೆಯುವ ಜವಾಬ್ದಾರಿ ಹೊತ್ತಿರುವ ಕಂಪನಿಗಳು ಎಚ್ಚರಿಸಿವೆ. 2019ರ ಚುನಾವಣೆ ದಿಲ್ಲಿ ಕೇಂದ್ರಿತವಾಗಿ ಮೋದಿಮಯವಾದರೆ ವಿಪಕ್ಷಗಳಿಗೆ ಹೆಚ್ಚು ನಷ್ಟ.

ಅದಕ್ಕಿಂತ 543 ಸಣ್ಣ ಸಣ್ಣ ಯುದ್ಧಗಳು ನಡೆಯುವಂತೆ ನೋಡಿಕೊಳ್ಳಬೇಕು. ಸ್ಥಳೀಯ ಸಂಸದರ, ಸ್ಥಳೀಯ ಮುಖ್ಯಮಂತ್ರಿಗಳ ವಿರುದ್ಧ ಹೆಚ್ಚು ಹೆಚ್ಚು ಮಾತನಾಡಿದರೆ ಲಾಭ ಎಂದು ಸಲಹೆ ಬಂದಿದೆ. 2004ರಲ್ಲಿ ವಾಜಪೇಯಿ ಅಲೆ ಇದ್ದರೂ ಕೂಡ ಬಿಜೆಪಿ ಸಂಸದರ ಮೇಲಿನ ಸಿಟ್ಟಿನಿಂದ ಬಿಜೆಪಿ ಮತದಾರರು ಹೇಗೂ ದಿಲ್ಲಿಯಲ್ಲಿ ಅಟಲ್ ಗೆಲ್ಲುತ್ತಾರೆ, ಆದರೆ ಸ್ಥಳೀಯ ಸಂಸದ ಸೋಲಲಿ ಎಂದು ಮತದಾನ ಮಾಡಿದ್ದರಿಂದ ಬಿಜೆಪಿ ಸೋತು, ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟ ಅನಾಯಾಸವಾಗಿ ಗೆದ್ದಿತ್ತು.

ಮೋದಿ ಜಿ ಕ್ಯಾ ಕರೇಂಗೇ?

ಫೆಬ್ರವರಿ 14ರ ಪುಲ್ವಾಮಾ ದಾಳಿ ನಂತರ ಹೋದಲ್ಲಿ ಬಂದಲ್ಲಿ ‘ಹಮ್ ಜವಾಬ್ ದೇಂಗೆ’ ಎಂದು ಹೇಳುತ್ತಿರುವ ಮೋದಿ ಸಾಹೇಬರ ತಲೆಯಲ್ಲಿ ಏನಿದೆ ಏನು ನಡೆಯುತ್ತಿದೆ ಎಂಬುದು ಅವರ ಸರ್ಕಾರದಲ್ಲಿ ಹತ್ತಿರ ಇರುವವರು, ಪಕ್ಷದಲ್ಲಿ ಹತ್ತಿರ ಇರುವವರಿಗೆ ಕೂಡ ಗೊತ್ತಾಗುತ್ತಿಲ್ಲ. ದೊಡ್ಡ ದೊಡ್ಡ ಬಿಜೆಪಿ ನಾಯಕರನ್ನು ಮಾತಿಗೆಳೆದರೆ ಆಫ್‌ ದಿ ರೆಕಾರ್ಡ್‌ ಎನ್ನುತ್ತಾ ‘ಎಲೆಕ್ಷನ್‌ ಹೈ ಕುಚ್‌ ತೊ ಕರನಾ ಪಡೇಗಾ. ಮೋದಿ ಜೀ ಕರೇಂಗೆ’ ಎಂದು ಹೇಳುತ್ತಾರೆ. ಪುಲ್ವಾಮಾ ದಾಳಿ ನಂತರ ಬಿಜೆಪಿ ನಡೆಸಿರುವ ಆಂತರಿಕ ಸಮೀಕ್ಷೆಗಳು ಪಾಕ್‌ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದೇ ಹೋದರೆ ಬಿಜೆಪಿ ನಿಷ್ಠ ಮತದಾರರು ದೂರ ಹೋಗಬಹುದು ಎಂದು ಹೇಳಿವೆಯಂತೆ. ಆದರೆ ವಿಪಕ್ಷದಲ್ಲಿ ಇದ್ದಾಗ ಕಠಿಣವಾಗಿ ಮಾತನಾಡಿದಷ್ಟುಸುಲಭವಾಗಿ ಕಠಿಣ ಕ್ರಮ ತೆಗೆದುಕೊಳ್ಳಲು ಆಗೋದಿಲ್ಲ ಬಿಡಿ.

ಯೋಗೀಜಿಗೆ ಫುಲ್ ಮಾರ್ಕ್ಸ್‌

ಪ್ರಯಾಗರಾಜ್‌ನಲ್ಲಿ ಕುಂಭಮೇಳವನ್ನು ನ ಭೂತೋ ಎನ್ನುವ ರೀತಿಯಲ್ಲಿ ಆಯೋಜಿಸಿದ ರೀತಿಗೆ ಬಿಜೆಪಿ ದಿಲ್ಲಿ ನಾಯಕರು ಮತ್ತು ಮೋಹನ್‌ ಭಾಗವತ್‌ ಸೇರಿದಂತೆ ಸಂಘದ ನಾಯಕರು ಫುಲ್ ಖುಷ್‌ ಆಗಿದ್ದಾರೆ. ಎರಡು ತಿಂಗಳ ಹಿಂದಿನವರೆಗೂ ಕೂಡ ಯೋಗಿಯನ್ನು ಮೋದಿ ಬದಲಾಯಿಸಬೇಕು, ಕೆಲಸ ಆಗುತ್ತಿಲ್ಲ ಎನ್ನುತ್ತಿದ್ದ ನಾಯಕರು ಈಗ ಯೋಗಿ ಕುಂಭಮೇಳವನ್ನು ವ್ಯವಸ್ಥೆ ಮಾಡಿದ ರೀತಿ ಕಂಡು ಯೋಗಿ ಯೋಗಿ ಎನ್ನುತ್ತಿದ್ದಾರೆ. ಕುಂಭ ಮೇಳದಲ್ಲಿ ಸ್ವಚ್ಛತೆ, ವಸತಿ ವ್ಯವಸ್ಥೆ, ಭದ್ರತೆಯಿಂದ ಡೌನ್‌ ಆಗುತ್ತಿದ್ದ ಯೋಗಿ ಜನಪ್ರಿಯತೆ ಮತ್ತೆ ಚಿಗುರಿಕೊಂಡಿದೆ ಎಂಬುದಂತೂ ಸತ್ಯ. ಅಂದ ಹಾಗೆ ಈಗ ನಡೆದಿದ್ದು ಅರ್ಧ ಕುಂಭ. ಆದರೆ ಚುನಾವಣೆ ಹೊಸ್ತಿಲಲ್ಲಿ ಯೋಗಿ ಸಿಕ್ಕ ಅವಕಾಶ ಬಳಸಿಕೊಂಡು ಇದನ್ನು ಪೂರ್ಣಕುಂಭವನ್ನು ಮೀರಿಸುವ ರೀತಿಯಲ್ಲಿ ಆಯೋಜಿಸಿ ವ್ಹಾ ವ್ಹಾ ಗಿಟ್ಟಿಸುತ್ತಿದ್ದಾರೆ.

ಎಲೆಕ್ಷನ್‌ಗೆ ಖಟ್ಟರ್‌ ಕೂಡ ರೆಡಿ

ಲೋಕಸಭಾ ಚುನಾವಣೆ ಜೊತೆಜೊತೆಗೆ ಹರ್ಯಾಣ ವಿಧಾನಸಭೆ ಚುನಾವಣೆ ನಡೆದರೆ ಒಳ್ಳೆಯದು ಎಂದು ಅಲ್ಲಿನ ಮುಖ್ಯಮಂತ್ರಿ ಮನೋಹರ ಲಾಲ… ಖಟ್ಟರ್‌, ಮೋದಿ ಮತ್ತು ಅಮಿತ್‌ ಶಾ ಅವರ ಬೆನ್ನುಹತ್ತಿದ್ದಾರೆ. ಜಾಟ್‌ ಬಿಟ್ಟು ಇತರ ಸಮುದಾಯಗಳು ಬಿಜೆಪಿಯ ಬೆನ್ನಿಗಿದ್ದು, ಮೋದಿ ಹೆಸರಿನ ಜೊತೆಗೆ ಹೋದರೆ ಗೆಲ್ಲುತ್ತೇವೆ. ಕಾಂಗ್ರೆಸ್‌ ಮತ್ತು ಚೌಟಾಲಾ ಕುಟುಂಬದ ಎರಡು ಪಕ್ಷಗಳ ನಡುವೆ ಜಾಟ್‌ ವೋಟ್‌ ಬ್ಯಾಂಕ್‌ ಒಡೆಯುತ್ತದೆ, ನಮಗೆ ಲಾಭ ಆಗುತ್ತದೆ ಎಂದು ಖಟ್ಟರ್‌ ಹೇಳುತ್ತಿದ್ದಾರೆ. ಆದರೆ ಖಟ್ಟರ್‌ ಮೇಲಿರುವ ಸಿಟ್ಟು ಲೋಕಸಭೆ ಮೇಲೆ ತಿರುಗಿದರೆ ಎಂಬ ಆತಂಕ ಮೋದಿ ಸಾಹೇಬರದು. ಹೀಗಾಗಿ ಇನ್ನೂ ಕೂಡ ಖಟ್ಟರ್‌ಗೆ ದಿಲ್ಲಿಯಿಂದ ಹಸಿರು ನಿಶಾನೆ ಸಿಕ್ಕಿಲ್ಲ.

ಮಾಯಾ ಖೆಡ್ಡಾದಲ್ಲಿ ಅಖಿಲೇಶ್‌

ಮಾಯಾವತಿ ಮತ್ತು ಅಖಿಲೇಶ್‌ ತರಾತುರಿಯಲ್ಲಿ ಉತ್ತರ ಪ್ರದೇಶದ ಸೀಟು ಕೂಡ ಹಂಚಿಕೊಂಡಿದ್ದಾರೆ. ಆದರೆ ಇದಾದ ಮೇಲೆ ಸಮಾಜವಾದಿ ಪಕ್ಷದಲ್ಲಿ ಕಲಹ ಶುರುವಾಗಿದ್ದು, ಮಾಯಾವತಿ ಸೇಫ್‌ ಸೀಟು ಇಟ್ಟುಕೊಂಡು, ಬಿಜೆಪಿ ಗೆಲ್ಲುವುದು ಪಕ್ಕಾ ಇರುವ ಸೀಟ್‌ಗಳನ್ನು ಅಖಿಲೇಶ್‌ಗೆ ಬಿಟ್ಟು ಕೊಟ್ಟಿದ್ದಾರೆ ಎನ್ನುವುದು ಪಕ್ಷದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಎಲ್ಲೆಲ್ಲಿ ಮಾಯಾಗೆ ಸೀಟ್‌ ಸಿಕ್ಕಿದೆಯೋ ಅಲ್ಲಿ ಯಾದವ ನಾಯಕರು ಶಿವಪಾಲ್ ಯಾದವ್‌ ಜೊತೆಗೆ ಹೋಗುವ ಬೆದರಿಕೆ ಹಾಕುತ್ತಿದ್ದಾರೆ.

ಮಿತ್ರರಿಗೆ ಇರುವ ಇನ್ನೊಂದು ಆತಂಕ ಕಾಂಗ್ರೆಸ್‌ ಮುಸ್ಲಿಂ ವೋಟ್‌ ತಿಂದರೆ ಏನು ಮಾಡುವುದು ಎನ್ನುವುದು. ಮುಸ್ಲಿಮರು ಮಾಯಾವತಿಯನ್ನು ನಂಬದೇ ಕಾಂಗ್ರೆಸ್‌ಗೆ ಶಿಫ್ಟ್‌ ಆದರೆ ಆನೆಯ ಭಾರಕ್ಕೆ ಸೈಕಲ್ ಠುಸ್‌ ಆಗೋದು ಪಕ್ಕಾ. ಹೇಗಾದರೂ ಮಾಡಿ ಕಾಂಗ್ರೆಸ್‌ಗೆ ಹತ್ತು ಸೀಟು ಬಿಟ್ಟುಕೊಟ್ಟು ಮೈತ್ರಿಯ ಒಳಗೆ ಇಟ್ಟುಕೊಳ್ಳಿ, ಇಲ್ಲವಾದಲ್ಲಿ ನೇರ ಬಿಜೆಪಿಗೆ ಲಾಭ ಎಂದು ದಿಲ್ಲಿಯ ಕಾಂಗ್ರೆಸ್‌ ಮಿತ್ರರು ಅಖಿಲೇಶ್‌ ಮತ್ತು ಮಾಯಾವತಿಗೆ ತಿಳಿಸಿ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ಲಖನೌದಿಂದ ಬರುತ್ತಿರುವ ಸುದ್ದಿಗಳ ಪ್ರಕಾರ ಕಾಂಗ್ರೆಸ್‌ ಜೊತೆಗೆ ಮಾತುಕತೆಗೆ ಅಖಿಲೇಶ್‌ ತಯಾರಿದ್ದಾರೆ. ಆದರೆ ಮಾಯಾವತಿ ರೆಡಿ ಇಲ್ಲ.

[ದೆಹಲಿ ಪ್ರತಿನಿಧಿ ಪ್ರಶಾಂತ್ ನಾತುರವರ 'ಇಂಡಿಯಾ ಗೇಟ್' ಅಂಕಣದ ಆಯ್ದ ಭಾಗ]