ಪ್ರಧಾನಿ ಅಭ್ಯರ್ಥಿ ಆಯ್ಕೆ ಬಗ್ಗೆ ‘ಇಂಡಿಯಾ’ದಲ್ಲೀಗ ಭಿನ್ನ ರಾಗ. 1977ರಲ್ಲೂ ಪ್ರಧಾನಿ ಅಭ್ಯರ್ಥಿ ಘೋಷಣೆ ಆಗಿರಲಿಲ್ಲ ಎಂದ ಶರದ್‌ ಪವಾರ್. ಖರ್ಗೆ ಹೆಸರು ಘೋಷಣೆಗೆ ಅಪಸ್ವರ? ಇಂಡಿಯಾದಲ್ಲಿ ಒಡಕು ಎಂದ ಬಿಜೆಪಿ

ನವದೆಹಲಿ (ಡಿ.27): ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ವಿರುದ್ಧ ಹೋರಾಡಲು ವಿಪಕ್ಷಗಳು ಮಾಡಿಕೊಂಡಿರುವ ‘ಇಂಡಿಯಾ’ ಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ವಿಚಾರವಾಗಿ ಭಿನ್ನರಾಗ ಆರಂಭವಾಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೆ ಸೂಚಿಸಿದ ಬೆನ್ನಲ್ಲೇ, ಪ್ರಧಾನಿ ಅಭ್ಯರ್ಥಿ ಇಲ್ಲದೆಯೇ ಚುನಾವಣೆಗೆ ಹೋಗೋಣ ಎಂಬರ್ಥದಲ್ಲಿ ಎನ್‌ಸಿಪಿ ಪರಮೋಚ್ಚ ನಾಯಕ ಶರದ್‌ ಪವಾರ್‌ ಬಹಿರಂಗವಾಗಿಯೇ ಹೇಳಿದ್ದಾರೆ.

1977ರಲ್ಲೂ ಪ್ರಧಾನಿ ಅಭ್ಯರ್ಥಿ ಘೋಷಣೆಯಾಗಿರಲಿಲ್ಲ. ಚುನಾವಣೆಯ ಬಳಿಕ ಮೊರಾರ್ಜಿ ದೇಸಾಯಿ ಅವರನ್ನು ಪ್ರಧಾನಿ ಮಾಡಲಾಗಿತ್ತು. ಪ್ರಧಾನಿ ಅಭ್ಯರ್ಥಿಯನ್ನು ಬಿಂಬಿಸದೇ ಹೋದರೆ ಏನೂ ಪರಿಣಾಮವಾಗುವುದಿಲ್ಲ. ಜನರು ಬದಲಾವಣೆಯ ಪರವಿದ್ದರೆ, ಅವರು ಬದಲಾವಣೆ ಮಾಡಿಯೇ ಮಾಡುತ್ತಾರೆ ಎಂದು ಪವಾರ್‌ ತಿಳಿಸಿದ್ದಾರೆ.

ಪಿಎಸ್‌ಐ ನೇಮಕಾತಿ ಅಕ್ರಮ: ಅಶ್ವತ್ಥ್‌, ಎಚ್ಡಿಕೆಗೆ ಆಯೋಗದ ನೋಟಿಸ್‌

ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುತ್ತಿರುವುದಕ್ಕೆ ಬಿಹಾರ ಸಿಎಂ ನಿತೀಶ್‌ ಕುಮಾರ್ ಅಸಮಾಧಾನಗೊಂಡಿದ್ದಾರೆ ಎಂಬ ವರದಿಗಳು ಬಂದಿದ್ದವು. ಅವರು ಖರ್ಗೆ ಹೆಸರಿಗೆ ತಕರಾರಿಲ್ಲ ಎಂದು ಹೇಳಿದ ಬೆನ್ನಲ್ಲೇ ಪವಾರ್‌ ಈ ಮಾತುಗಳನ್ನು ಆಡಿದ್ದಾರೆ.

ಪವಾರ್‌ ಹೇಳಿಕೆಯನ್ನು ಇಟ್ಟುಕೊಂಡು ಮೂದಲಿಸಿರುವ ಬಿಜೆಪಿ ವಕ್ತಾರ ಶೆಹಜಾದ್‌ ಪೂನಾವಾಲಾ, ಸಿಎಂ ಮಮತಾ ಸೂಚಿಸಿರುವ ಖರ್ಗೆ ಹೆಸರಿನ ಬಗ್ಗೆ ಕಾಂಗ್ರೆಸ್ಸಿಗೂ ಸಂತೋಷವಿಲ್ಲ. ಇದೀಗ ಮತ್ತೊಮ್ಮೆ ಆ ಕೂಟದಲ್ಲಿನ ಒಡಕು ಬಹಿರಂಗವಾಗಿದೆ ಎಂದು ಲೇವಡಿ ಮಾಡಿದ್ದಾರೆ.

ರೈತರ ಬಗ್ಗೆ ಹಗುರವಾಗಿ ಮಾತನಾಡಿದವರಿಗೆ ಖಡಕ್‌ ವಾರ್ನಿಂಗ್ ಕೊಟ್ಟ ಸಿಎಂ ಸಿದ್ದರಾಮಯ್ಯ!