ಹೆಚ್ಚುತ್ತಿರುವ ಕಾಂಗ್ರೆಸ್ ಶಾಸಕರ ದಬ್ಬಾಳಿಕೆ: ಬಿಜೆಪಿ ನಾಯಕರ ಆರೋಪ
10 ವರ್ಷಗಳಿಂದ ಶಾಸಕರಾಗಿರುವವರು ಒಬ್ಬ ತಹಸೀಲ್ದಾರ್‌ರನ್ನು ತನ್ನ ವೈಯುಕ್ತಿಕ ಕೆಲಸಗಳಿಗೆಬಳಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆಂದು ಲೇವಡಿ ಮಾಡಿದ ವೆಂಕಟಮುನಿಯಪ್ಪ
ಬಂಗಾರಪೇಟೆ(ಅ.09): ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಜನವಿರೋಧಿ ನೀತಿ ಹಾಗೂ ಹಿಟ್ಲರ್ ಧೋರಣೆಯ ವಿರುದ್ಧ ಜನರು ಬೇಸತ್ತಿದ್ದಾರೆ. ಸೋಲಿನ ಭೀತಿಯ ಹತಾಶೆಯಲ್ಲಿ ಪ್ರಾಮಾಣಿಕ ತಹಸೀಲ್ದಾರ್ ಎಂ.ದಯಾನಂದ್ ವಿರುದ್ಧ ಆಧಾರ ರಹಿತವಾಗಿ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಕುವೆಂಪು ವೃತ್ತದಲ್ಲಿ ತಾಲೂಕು ಬಿಜೆಪಿ ವತಿಯಿಂದ ಎಸ್‌ಸಿ ಎಸ್ಟಿ ಮೀಸಲಾತಿ ಹೆಚ್ಚಳ ಪರ ಹಮ್ಮಿಕೊಂಡಿದ್ದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಸಿಹಿ ಹಂಚಿ ಮಾತನಾಡಿದ ಅವರು, ತಹಸೀಲ್ದಾರ್ ಎಂ.ದಯಾನಂದ್ ಶಾಸಕರು ಹೇಳಿದಂತೆ ಸರ್ಕಾರಿ ಕೆಲವನ್ನು ಮಾಡದೇ ಇರುವುದಕ್ಕೆ ಅವರ ವಿರುದ್ಧ ಪ್ರತಿ ದಿನ ಆರೋಪಗಳನ್ನು ಮಾಡುತ್ತಿದ್ದಾರೆ. 10 ವರ್ಷಗಳಿಂದ ಶಾಸಕರಾಗಿರುವವರು ಒಬ್ಬ ತಹಸೀಲ್ದಾರ್‌ರನ್ನು ತನ್ನ ವೈಯುಕ್ತಿಕ ಕೆಲಸಗಳಿಗೆಬಳಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆಂದು ಲೇವಡಿ ಮಾಡಿದರು.
KOLARA; ಬಂಗಾರಪೇಟೆ ಶಾಸಕರ ವಿರುದ್ಧ ಪ್ರಾಣ ಬೆದರಿಕೆ ಆರೋಪ
ಭಾರತ ಜೋಡೋ ಯಾತ್ರೆ ಹಾಸ್ಯಾಸ್ಪದ
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹೊಸರಾಯಪ್ಪ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು ಜನ ಮನ ಮಾನಸದಲ್ಲಿ ನಿಂತಿದೆ. ಸರ್ವರಿಗೂ ಸಮಪಾಲು ಸಮಬಾಳು ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಿದ್ದಾರೆ. ಭಾರತವನ್ನು ವಿಭಜಿಸಿದ ಕಾಂಗ್ರೆಸ್ ಪಕ್ಷ ಭಾರತ್ ಜೋಡೋ ಯಾತ್ರೆ ಮಾಡುತ್ತಿರುವುದು ಅತ್ಯಂತ ಹಾಸ್ಯಸ್ಪದವಾಗಿದೆ, 1947ರಲ್ಲಿ ಕಾಶ್ಮೀರ ಭಾರತದ ಅಧಿಕೃತ ಭಾಗವಾಗಿತ್ತು ಅದನ್ನು ಬೇರ್ಪಡಿಸಿದರು. ಚೀನಾ ದೇಶಕ್ಕೆ 40,000 ಚದರ ಅಡಿ ಸ್ಥಳವನ್ನು ಬಿಟ್ಟುಕೊಟ್ಟರು, ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನಾಂದಿ ಹಾಡಿದವರೆ ಕಾಂಗ್ರೆಸ್, ಹೀಗೆ ಭಾರತವನ್ನು ಹಂತ ಹಂತವಾಗಿ ವಿಭಜಿಸಿದ ಪಕ್ಷ ಭಾರತ ಜೋಡೋ ಯಾತ್ರೆ ಮಾಡುತ್ತಿರುವುದು ವಿಪರ್ಯಾಸವಾಗಿದೆ ಎಂದು ದೂರಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ವಿ.ಮಹೇಶ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಪಿ.ಅಮರೇಶ್, ತಾಲೂಕು ಬಿಜೆಪಿ ಅಧ್ಯಕ್ಷ ಎಂ.ನಾಗೇಶ್, ಮಾಜಿ ಅಧ್ಯಕ್ಷ ಎ.ಹನುಮಪ್ಪ, ಪ್ರದಾನ ಕಾರ‍್ಯದರ್ಶಿಗಳಾದ ಚೌಡಪ್ಪ, ಪಾರ್ಥಸಾರಥಿ, ಉಪಾಧ್ಯಕ್ಷ ರಾಮಚಂದ್ರಪ್ಪ, ಎಸ್ಸಿ ಮೋರ್ಚಾ ಅಧ್ಯಕ್ಷ ವೆಂಕಟೇಶ್, ಹುಣಸನಹಳ್ಳಿ ಶ್ರೀನಿವಾಸ್, ಪುರಸಭೆ ಸದಸ್ಯ ಕಪಾಲಿ ಶಂಕರ್, ಬಿ.ಪಿ.ಮಹೇಶ್, ಬಿಂದು ಮಾಧವ, ಮೆಹಬೂಬ್, ಟಿಎಪಿಸಿಎಂಎಸ್ ನಿರ್ದೇಶಕ ಎಂ.ಸಂಪಂಗಿರೆಡ್ಡಿ, ಶಿವಣ್ಣ, ಸುರೇಂದ್ರ, ಕುಮಾರಗೌಡ, ರಾಣಿ ಗೋವಿಂದರಾಜು, ಸುಶೀಲಮ್ಮ, ಶೋಭಾ, ಅಬಕಾರಿ ಸುಬ್ಬರಾಯಪ್ಪ, ಕರವೇ ಚಲಪತಿ, ಹುಲಿಬೆಲೆ ಪ್ರಸನ್ನ, ಸುರೇಶ್ ಮುಂತಾದವರಿದ್ದರು.