ಕಾಂಗ್ರೆಸ್‌ನಲ್ಲಿ ಅಧ್ಯಕ್ಷರ ಕುರ್ಚಿಗಾಗಿ ಹೆಚ್ಚಿದ ಪೈಪೋಟಿ..!
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಸಮಿತಿಯ ಮುಂದಿನ ಅಧ್ಯಕ್ಷರಾಗಲು ಸಮರ್ಥ ನಾಯಕರಿದ್ದು ಸಚಿವರಾದ ಕೃಷ್ಣ ಬೈರೇಗೌಡ, ಡಾ.ಎಂ.ಸಿ.ಸುಧಾಕರ್, ಮಾಜಿ ಸಚಿವರಾದ ವಿ.ಮುನಿಯಪ್ಪ, ಎನ್.ಎಚ್.ಶಿವಶಂಕರ ರೆಡ್ಡಿ, ಹಾಲಿ ಶಾಸಕರಾದ ಪ್ರದೀಪ್ ಈಶ್ವರ್ ಮತ್ತು ಎಸ್.ಎನ್.ಸುಬ್ಬಾರೆಡ್ಡಿ ಅವರ ಜೊತೆ ಗುರುತಿಸಿಕೊಂಡಿರುವ ಅಡ್ಡಗಲ್ ಶ್ರೀಧರ್ ಹೆಸರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕೇಳಿಬರುತ್ತಿದೆ.
ಚಿಕ್ಕಬಳ್ಳಾಪುರ(ಅ.24): ಜಿಲ್ಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರ ಆಯ್ಕೆ ಕುರಿತು ಚರ್ಚೆ ಮುನ್ನೆಲೆಗೆ ಬಂದಿದ್ದು, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ಪೈಪೋಟಿಯೊಂದಿಗೆ ಲಾಬಿಯೂ ಹೆಚ್ಚಾಗಿದೆ. ಇದರ ನಡುವೆ ಡಿಸಿಸಿ ಅಧ್ಯಕ್ಷರು ಯಾರಾಗಲಿದ್ದಾರೆ ಎಂಬ ಲೆಕ್ಕಾಚಾರಗಳು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ನಡೆದಿವೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಾಲಿ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಕೆ. ಎನ್. ಕೇಶವರೆಡ್ಡಿ ಅಧಿಕಾರಾವಧಿ 6 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆಗಾಗಿ ವಿವಿಧ ಸಮುದಾಯಗಳ ಮುಖಂಡರು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ: ರಕ್ಷಾ ರಾಮಯ್ಯ
ಒಕ್ಕಲಿಗರ ಪ್ರಾಬಲ್ಯ:
ಅವಿಭಜಿತ ಕೋಲಾರ ಜಿಲ್ಲೆಯಿಂದ ಚಿಕ್ಕಬಳ್ಳಾಪುರ ವಿಭಜನೆಗೊಂಡ ನಂತರ ಒಕ್ಕಲಿಗ ಸಮುದಾಯಕ್ಕೆ ಸೇರಿದವರನ್ನು ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡುತ್ತಾ ಬರಲಾಗಿದೆ. ಇದೀಗ ಹೈಕಮಾಂಡ ಪಕ್ಷಕ್ಕಾಗಿ ದುಡಿದ ಇನ್ನಿತರ ಸಮುದಾಯದವರನ್ನೂ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸಲು ಮಾಹಿತಿ ಕಲೆ ಹಾಕುತ್ತಿದೆ ಎನ್ನಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಸಮಿತಿಯ ಮುಂದಿನ ಅಧ್ಯಕ್ಷರಾಗಲು ಸಮರ್ಥ ನಾಯಕರಿದ್ದು ಸಚಿವರಾದ ಕೃಷ್ಣ ಬೈರೇಗೌಡ, ಡಾ.ಎಂ.ಸಿ.ಸುಧಾಕರ್, ಮಾಜಿ ಸಚಿವರಾದ ವಿ.ಮುನಿಯಪ್ಪ, ಎನ್.ಎಚ್.ಶಿವಶಂಕರ ರೆಡ್ಡಿ, ಹಾಲಿ ಶಾಸಕರಾದ ಪ್ರದೀಪ್ ಈಶ್ವರ್ ಮತ್ತು ಎಸ್.ಎನ್.ಸುಬ್ಬಾರೆಡ್ಡಿ ಅವರ ಜೊತೆ ಗುರುತಿಸಿಕೊಂಡಿರುವ ಅಡ್ಡಗಲ್ ಶ್ರೀಧರ್ ಹೆಸರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕೇಳಿಬರುತ್ತಿದೆ..
ಮುಂಚೂಣಿಯಲ್ಲಿ ಅಡ್ಡಗಲ್ ಶ್ರೀಧರ್
ಅಡ್ಡಗಲ್ ಶ್ರೀಧರ್ ಒಕ್ಕಲಿಗರಾಗಿದ್ದು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಹಾಲಿ ಕೆಪಿಸಿಸಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಕಾಂಗ್ರೆಸ್‌ನ ಹಾಲಿ ಮತ್ತು ಮಾಜಿಗಳೆಲ್ಲರ ಜೊತೆ ಮಾತ್ರವಲ್ಲದೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲಾ ಪ್ರಭಾವಿ ನಾಯಕರೊಂದಿಗೂ ಉತ್ತಮ ಸಂಪರ್ಕ ಹೊಂದಿದ್ದಾರೆ.
ರಫೀವುಲ್ಲಾ ಹೆಸರು ಪ್ರಸ್ತಾಪ
ಮುಸ್ಲಿಂ ಸಮುದಾಯದ ಬಿ.ಎಸ್.ರಫೀವುಲ್ಲ ಅವರ ಹೆಸರೂ ಸಹ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಕೇಳಿಬುತ್ತಿದೆ. ಸಾಮಾಜಿಕ ಕಾರ್ಯಕರ್ತರಾಗಿ, ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾಗಿ, ವಕ್ಫಬೋರ್ಡ್ ಸಮಿತಿ ಅಧ್ಯಕ್ಷರಾಗಿ ಕ್ರಿಯಾಶೀಲವಾಗಿ ನಿರ್ವಹಿಸಿದ್ದಲ್ಲದೆ ಎಲ್ಲಾ ವರ್ಗದವರ ಜತೆ ಉತ್ತಮ ಒಡನಾಟವಿದೆ. ಕೊರೋನಾ ಸಂದರ್ಭದಲ್ಲಿ ಪಕ್ಷಾತೀತವಾಗಿ ಜಾತ್ಯತೀತವಾಗಿ ಸೇವೆ ಸಲ್ಲಿಸುವ ಮೂಲಕ ಶ್ಲಾಘನೆಗೆ ಪಾತ್ರರಾಗಿದ್ದರು.
ಇವರ ಪರವಾಗಿ ವಿವಿಧ ಸಮುದಾಯದ ಬಹುತೇಕರು ರಫಿವುಲ್ಲಾರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಬೇಕೆಂದು ಒತ್ತಡ ಹೇರುತ್ತಿರುವುದು ಒಂದೆಡೆಯಾದರೆ, ಅಲ್ಪಸಂಖ್ಯಾತರಿಗೆ ಜಿಲ್ಲೆಯಲ್ಲಿ ಒಂದು ಅವಕಾಶ ನೀಡಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಬಹುತೇಕ ಮತಗಳು ಸೇರಿದಂತೆ ವಿವಿಧ ಸಮುದಾಯದ ಮತಗಳನ್ನು ಕಾಂಗ್ರೆಸ್‌ಗೆ ಗಿಟ್ಟಿಸಿಕೊಡುವಲ್ಲಿ ರಫೀವುಲ್ಲಾ ಅವರು ಚಾಕಚಕ್ಯತೆ ಹೊಂದಿದ್ದಾರೆಯೆಂಬುದು ಹಲವು ಕಾರ್ಯಕರ್ತರ ಅನಿಸಿಕೆಯಾಗಿದೆ.
ಡಿಕೆಶಿ ಮೇಲೆ ಸಿಬಿಐ ತನಿಖೆ ರಾಜಕೀಯ ಪ್ರೇರಿತ: ವೀರಪ್ಪ ಮೊಯ್ಲಿ
ಸ್ಪರ್ಧೆಯಲ್ಲಿ ಯಲುವಹಳ್ಳಿ.ಎನ್. ರಮೇಶ್
ಇವರಿಬ್ಬರ ಜತೆಗೆ ಒಕ್ಕಲಿಗ ಸಮುದಾಯದ ಮುಖಂಡ ಹಾಗೂ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಯಲುವಹಳ್ಳಿ.ಎನ್. ರಮೇಶ್ ಹೆಸರು ಪ್ರಸ್ತಾಪವಾಗಿದೆ. ರಮೇಶ್ ಅವರು ಶಾಶ್ವತ ನೀರಾವರಿ ಹೋರಾಟ ಸೇರಿದಂತೆ ಚಿಕ್ಕಬಳ್ಳಾಪುರ ಜಿಲ್ಲೆಯಾಗಲು ಅವಿರತವಾಗಿ ಶ್ರಮಿಸಿದವರಾಗಿ ಕಾಂಗ್ರೆಸ್‌ನ ನಿಷ್ಠಾವಂತರಾಗಿಯೂ ಗುರುತಿಸಿಕೊಂಡಿದ್ದಾರೆ. ಇವರನ್ನು ಹೈಕಮಾಂಡ್ ಪರಿಗಣಿಸಿದರೂ ಅಚ್ಚರಿ ಏನಿಲ್ಲ.
ಕುರುಬ ಸಮುದಾಯಕ್ಕೆ ಸೇರಿದ ಗಂಗರೆಕಾಲುವೆ ನಾರಾಯಣಸ್ವಾಮಿ ಮತ್ತು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಚಿನ್ನಪ್ಪ ಹೆಸರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎನ್ನುವ ವದಂತಿ ಹರಿದಾಡುತ್ತಿದೆ. ಇವೆಲ್ಲದರ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆ ಗುರಿ ಇಟ್ಟುಕೊಂಡು ಸಾಮಾಜಿಕ ನ್ಯಾಯ ಕಲ್ಪಿಸುವ ಗುರುತರ ಜವಾಬ್ದಾರಿಯೊಂದಿಗೆ ಈ ಬಾರಿ ಇತರೆ ವರ್ಗದ ಅಭ್ಯರ್ಥಿ ಆಕಾಂಕ್ಷಿ ಅಧ್ಯಕ್ಷರಾಗುವರೊ ಇಲ್ಲಾ, ಈ ಬಾರಿಯೂ ಒಕ್ಕಲಿಗ ಸಮುದಾಯದವರೆಗೇ ಅಧ್ಯಕ್ಷರ ಪಟ್ಟ ಸಿಗುವುದೋ ಕಾದು ನೋಡಬೇಕು.