ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಮತಾಂತರ ಹಾವಳಿ ಹೆಚ್ಚಳ: ಕೇಂದ್ರ ಸಚಿವ ಜೋಶಿ
ಆರ್‌ಟಿಒ ಕಚೇರಿ ಸೇರಿದಂತೆ ಹಲವು ಕಡೆ ಭ್ರಷ್ಟಾಚಾರ ನಡೆದಿದೆ. ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ತನ್ನ ಹಿಡಿತ ಕಳೆದುಕೊಳ್ಳುತ್ತಿದ್ದು, ಇದಕ್ಕೆಲ್ಲ ಕಾಂಗ್ರೆಸ್‌ನ ಒಳಜಗಳವೇ ಕಾರಣ ಎಂದು ಆರೋಪಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ
ಹುಬ್ಬಳ್ಳಿ(ಜ.14): ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಮತಾಂಧರ ಹಾವಳಿ ಹೆಚ್ಚಾಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಎಗ್ಗಿಲ್ಲದೇ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.
ಅವರು ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಆರ್‌ಟಿಒ ಕಚೇರಿ ಸೇರಿದಂತೆ ಹಲವು ಕಡೆ ಭ್ರಷ್ಟಾಚಾರ ನಡೆದಿದೆ. ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ತನ್ನ ಹಿಡಿತ ಕಳೆದುಕೊಳ್ಳುತ್ತಿದ್ದು, ಇದಕ್ಕೆಲ್ಲ ಕಾಂಗ್ರೆಸ್‌ನ ಒಳಜಗಳವೇ ಕಾರಣ ಎಂದು ಆರೋಪಿಸಿದರು.
ನಕ್ಸಲರನ್ನು ವಿಧಾನಸೌಧಕ್ಕೆ ಕರೆತರದಿರುವುದೇ ಪುಣ್ಯ: ಜೆಡಿಎಸ್ ನಾಯಕ ಜ್ಯೋತಿ ಪ್ರಕಾಶ ಮಿರ್ಜಿ
ಸಂಘರ್ಷ ಸರಿಯಲ್ಲ
ಸಭಾಪತಿ ಕಚೇರಿ ಹಾಗೂ ಇತರ ವಿಷಯಗಳಲ್ಲಿ ರಾಜ್ಯ ಸರ್ಕಾರ ಅನಗತ್ಯ ಸಂಘರ್ಷ ಮಾಡುವುದು ಸರಿಯಲ್ಲ. ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ನಡುವಿನ ವಾಗ್ವಾದ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವ ಮೂಲಕ ರಾಜ್ಯ ಸರ್ಕಾರ ಶಾಸಕಾಂಗದ ಮೇಲೆ ಸವಾರಿ ಮಾಡುತ್ತಿದೆ. ಈ ಸಂಘರ್ಷ ಬೆಳೆಸುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ರಾಜ್ಯ ಸರ್ಕಾರದ ನಡೆ ವಿರೋಧಿಸಿ ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ ಅವರಿಗೆ ಸಭಾಪತಿ ಬಸವರಾಜ ಹೊರಟ್ಟಿ ಪತ್ರ ಬರೆದಿದ್ದಾರೆ. ಸರ್ಕಾರ ಅವರ ಸಲಹೆ, ಸೂಚನೆ ಪಾಲಿಸುವುದು ಒಳ್ಳೆಯದು ಎಂದರು.
ಕಾಂಗ್ರೆಸ್‌ಗೆ ಬುದ್ಧಿಭ್ರಮಣೆ
ಬಿಜೆಪಿಯವರು ಸಭಾಪತಿ ಕಚೇರಿ ಹಿಡಿತಕ್ಕೆ ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ಕಾಂಗ್ರೆಸಿಗರಿಗೆ ಬುದ್ಧಿಭ್ರಮಣೆಯಾಗಿದೆ. ಬಸವರಾಜ ಹೊರಟ್ಟಿ ಅವರು ಹಿರಿಯ ರಾಜಕಾರಣಿ. ಯಾವುದೇ ಪಕ್ಷದವರು ಇರಲಿ, ತಪ್ಪು ಮಾಡಿದಾಗ ಎಚ್ಚರಿಕೆ ನೀಡಿದ್ದಾರೆ. ಆದರೆ, ಕಾಂಗ್ರೆಸಿನವರ ಈ ಆರೋಪ ಬಿಜೆಪಿಗಲ್ಲ, ಸ್ಪೀಕರ್ ಮೇಲಿನ ಆರೋಪವಾಗಿದೆ. ಇದು ಕಾಂಗ್ರೆಸ್‌ಗೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೇಲೆ ನಂಬಿಕೆ ಇಲ್ಲ ಎಂಬುದನ್ನು ತೋರಿಸುತ್ತದೆ ಎಂದರು.