ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಿಗೆ ಟಾರ್ಗೆಟ್ ಫಿಕ್ಸಾಗಿತ್ತು: ಸಿಎಂ ಬೊಮ್ಮಾಯಿ
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಟಾರ್ಗೆಟ್ ಫಿಕ್ಸ್ ಮಾಡಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಹುಬ್ಬಳ್ಳಿ (ಮಾ.07): ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಟಾರ್ಗೆಟ್ ಫಿಕ್ಸ್ ಮಾಡಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರವಿದ್ದಾಗ ಸಚಿವರಿಗೆಲ್ಲ ಟಾರ್ಗೆಟ್ ನೀಡಲಾಗಿತ್ತು. ಸಿದ್ದರಾಮಯ್ಯ ಎಷ್ಟೆಲ್ಲ ಟಾರ್ಗೆಟ್ ಕೊಟ್ಟಿದ್ದರು ಎಂಬುದನ್ನು ಎಂ.ಬಿ.ಪಾಟೀಲ, ಜಾಜ್‌ರ್, ಮಹಾದೇವಪ್ಪಗೆ ಕೇಳಬೇಕು. ಕಾಂಗ್ರೆಸ್‌ನವರು ಹಾಸಿಗೆ ದಿಂಬು ಬಿಟ್ಟಿಲ್ಲ. ಬಿಸ್ಕೇಟ್, ಕಾಫಿಯಲ್ಲೂ ಭ್ರಷ್ಟಾಚಾರ ನಡೆಸಿದ್ದಾರೆ. ಎಲ್ಲದರಲ್ಲೂ ಭ್ರಷ್ಟಾಚಾರ ನಡೆಸಿರುವ ಕಾಂಗ್ರೆಸ್‌ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದರು.
ಬಂದ್‌ಗೆ ಬೆಂಬಲ ಸಿಗಲ್ಲ: ಕಾಂಗ್ರೆಸ್‌ನಿಂದ ಮಾ.9ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷವೇ ಭ್ರಷ್ಟಾಚಾರದ ಕೂಪವಾಗಿದೆ. ಕಾಂಗ್ರೆಸ್‌ನ ಕೈ ಭ್ರಷ್ಟಾಚಾರದಲ್ಲಿ ಮುಳುಗಿದೆ. ಹೀಗಾಗಿ ಜನ ಈ ಬಂದ್‌ಗೆ ಬೆಂಬಲ ನೀಡುವುದಿಲ್ಲ. ಆಪಾದನೆ ಮಾಡುವವರು ಮೊದಲು ಶುದ್ಧ ಹಸ್ತರಿರಬೇಕು. ಆಗ ಅದಕ್ಕೆ ಬೆಲೆ ಬರುತ್ತದೆ. ಭ್ರಷ್ಟಾಚಾರದಲ್ಲಿ ತೊಡಗಿರುವವರು ಆಪಾದನೆ ಮಾಡಿದರೆ ನಡೆಯಲ್ಲ. ದೇಶದಲ್ಲಿ ಈಗಾಗಲೇ ಕಾಂಗ್ರೆಸ್ ಸಂಪೂರ್ಣ ಬಂದ್ ಆಗುತ್ತಿದೆ. ಹೀಗಾಗಿ ರಾಜ್ಯ ಬಂದ್ ಮಾಡುವುದರಲ್ಲಿ ಅರ್ಥವಿಲ್ಲ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಐಸಿಯೂನಲ್ಲಿದೆ: ಜಗದೀಶ್ ಶೆಟ್ಟರ್ ಲೇವಡಿ
ಬೆಳಗಾವಿಯ ರಾಜಹಂಸಗಡದಲ್ಲಿ ಕಾಂಗ್ರೆಸ್‌ನಿಂದ ಶಿವಾಜಿ ಪ್ರತಿಮೆಯ ಮರು ಉದ್ಘಾಟನೆ ಪ್ರಕರಣಕ್ಕೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಇದೊಂದು ಹಾಸ್ಯಾಸ್ಪದ ಸಂಗತಿ. ಸರ್ಕಾರವೇ ಬಂದು ಪ್ರತಿಮೆ ಉದ್ಘಾಟನೆ ಮಾಡಿದ ಮೇಲೆ ಈ ರೀತಿ ಮಾಡುವುದು ಸರಿಯಲ್ಲ. ಒಣ ಪ್ರತಿಷ್ಠೆಗಾಗಿ ಈ ರೀತಿ ಮಾಡಲಾಗುತ್ತಿದೆ. ರಾಷ್ಟ್ರನಾಯಕರ ಹೆಸರಲ್ಲಿ ಈ ರೀತಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ನುಡಿದರು.
ವಚನಾನಂದ ಶ್ರೀ ಚರ್ಚೆ: ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಕೆಲಕಾಲ ಚರ್ಚೆ ನಡೆಸಿದರು. ಮೀಸಲಾತಿ ಹೋರಾಟ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆಗಳು ನಡೆದಿವೆ. ಕೆಲ ಹೊತ್ತು ಸಭೆ ನಡೆಸಿ ಹೊರಬಂದ ವಚನಾನಂದ ಶ್ರೀಗಳು ಮಾಧ್ಯಮಗಳೊಂದಿಗೆ ಮಾತನಾಡಿ, ಸಿಎಂ ಅವರನ್ನು ಆಗಾಗ ಭೇಟಿಯಾಗುತ್ತಿರುತ್ತೇನೆ ಇದೇನು ಹೊಸದ್ದಲ್ಲ ಎಂದರು. ಮೀಸಲಾತಿ ವಿಷಯವಾಗಿಯೂ ಚರ್ಚೆ ನಡೆಸಿದ್ದೇನೆ ಎಂದರು.
ಶಿಗ್ಗಾಂವಿಯಲ್ಲಿ ಇದೇ ಮಾರ್ಚ್ 19ರಂದು ಕಲ್ಯಾಣಮಂಟಪ ಉದ್ಘಾಟನೆ ಬಗ್ಗೆ ಚರ್ಚೆ ಮಾಡುವುದಕ್ಕೆ ಬಂದಿದ್ದೆ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಕುರಿತು ಸ್ಪಷ್ಟನಿರ್ಧಾರ ಕೈಗೊಳ್ಳುವಂತೆ ಸಿಎಂ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಮುಖ್ಯಮಂತ್ರಿಗಳೂ ಈ ವಿಚಾರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಮಾಜಕ್ಕೆ ಒಳ್ಳೆಯ ದಿನಗಳು ಬರಲಿವೆ ಎಂದು ನುಡಿದರು.
ದೇಶದಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ತಬ್ಬಲಿ: ಬಿ.ಎಸ್.ಯಡಿಯೂರಪ್ಪ
ಸ್ವಾಮೀಜಿಗಳಲ್ಲಿ ಭಿನ್ನಾಭಿಪ್ರಾಯವಿಲ್ಲ. ಹೋರಾಟಕ್ಕೂ ಯಾವುದೇ ಹಿನ್ನಡೆಯಾಗಿಲ್ಲ. ಅದು ಅವರವರ ಕಲ್ಪನೆ ಅಷ್ಟೇ. ಅದರ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ. ನಮಗೆ ಸಾಮಾಜಿಕ ನ್ಯಾಯ ಸಿಗಬೇಕು ಎನ್ನುವುದೊಂದೆ ಉದ್ದೇಶ. ನಮ್ಮ ನಂಬಿಕೆ ಕಾನೂನಾತ್ಮಕ ಹಾಗೂ ಭಾವನಾತ್ಮಕವಾಗಿದೆ. ಸಂವಿಧಾನಾತ್ಮಕ ಹಾಗೂ ಕಾನೂನಾತ್ಮಕ ತೊಡಕುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ. ಸರ್ಕಾರ ಈ ವಿಚಾರದಲ್ಲಿ ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ನಾವು ಕಾಯುತ್ತಿದ್ದೇವೆ ಎಂದರು. ಮಠಾಧೀಶರನ್ನು ಚುನಾವಣಾ ಅಖಾಡಕ್ಕಿಳಿಸುವ ವಿಚಾರಕ್ಕೆ ಕೇಳಿದ ಪ್ರಶ್ನೆಗೆ ‘ನೋ ಕಮೆಂಟ್ಸ್’ ಎಂದುತ್ತರಿಸಿದರು.