ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಳಿಕ ಪಕ್ಷದಲ್ಲಿಯೇ ಆಂತರಿಕ ಕಚ್ಚಾಟ ಸುದ್ದಿಯಾಗಿತ್ತು. ಇದನ್ನು ಶಮನ ಮಾಡಿ, ಎಚ್ಚರಿಕೆ ನೀಡಿ ಕಳುಹಿಸಲು ಕರೆದಿದ್ದ ಸಭೆಯಲ್ಲಿಯೂ ವಾಕ್ಸಮರ್‌ ನಡೆದಿದೆ ಎಂದು ವರದಿಯಾಗಿದೆ. ಪ್ರಮುಖವಾಗಿ ಪ್ರತಾಪ್‌ ಸಿಂಹ ಹಾಗೂ ಬಸವನಗೌಡ ಪಾಟೀಲ್‌ ಯತ್ನಾಳ್‌, ಬೊಮ್ಮಾಯಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 

ಬೆಂಗಳೂರು (ಜು.1): ವಿಧಾನಸಭೆ ಚುನಾವಣೆ ಮುಗಿದು ಸರಿಸುಮಾರು ಎರಡು ತಿಂಗಳಾಗುವ ಸನಿಹ ಬಂದಿದೆ. ಆದರೆ, ರಾಜ್ಯ ಬಿಜೆಪಿಯಲ್ಲಿ ಸೋಲಿನ ತಾಪ ಇನ್ನೂ ಆರಿಲ್ಲ. ಹೊಂದಾಣಿಕೆ ರಾಜಕೀಯ ಸೇರಿದಂತೆ ಹಲವು ವಿಚಾರಗಳಲ್ಲಿ ಪಕ್ಷದ ಪ್ರಮುಖ ನಾಯಕರೇ ಬಹಿರಂಗವಾಗಿ ಟೀಕೆ ಮಾಡಿದ್ದರು. ಇದರಿಂದಾಗಿ ಪಕ್ಷಕ್ಕೂ ಕೂಡ ಮುಜುಗರವಾಗಿತ್ತು. ಈ ನಿಟ್ಟಿನಲ್ಲಿ ಬಹಿರಂಗ ಹೇಳಿಕೆ ನೀಡುತ್ತಿರುವ ವ್ಯಕ್ತಿಗಳನ್ನು ಕರೆಸಿ ಅವರಿಗೆ ತಿಳಿ ಹೇಳೂವ ಕಾರ್ಯಕ್ರಮವನ್ನು ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾಡಲಾಗಿತ್ತು. ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಜಿವಿ ರಾಜೇಶ್‌(ಸಂಘಟನೆ), ಎನ್‌ ರವಿಕುಮಾರ್‌, ಮಹೇಶ್‌ ಟೆಂಗಿನಕಾಯಿ, ಸಿದ್ದರಾಜು ಅವರ ನಡುವೆ ಪಕ್ಷಕ್ಕೆ ಮುಜುಗರ ತರುವಂಥ ಹೇಳಿಕೆ ನೀಡಿದ ವ್ಯಕ್ತಿಗಳ ಮಾತುಗಳನ್ನು ಆಲಿಸಿ ಅವರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಲಾಗಿತ್ತು. ಆದರೆ, ಈ ವೇದಿಕೆಯಲ್ಲೂ ಪ್ರತಾಪ್‌ ಸಿಂಹ, ಬೊಮ್ಮಾಯಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ ಸಭೆಯಲ್ಲಿ ನೇರವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಮಾತೆತ್ತಿದರೆ ಈಗ ಸಿದ್ದರಾಮಯ್ಯ ಭ್ರಷ್ಟ ಎನ್ನುತ್ತಿದ್ದೀರಿ. ನಮ್ಮದೇ ಸರ್ಕಾರವಿತ್ತು. ತನಿಖೆ ಯಾಕೆ ಮಾಡಲಿಲ್ಲ. ಈಗ ಸಿದ್ದರಾಮಯ್ಯನವರೇ ನೀವೆ ತನಿಖೆ ಮಾಡಿ ಎಂದು ಸವಾಲು ಹಾಕಿದ್ದರಲ್ಲಿ ತಪ್ಪೇನಿದೆ? ಪತ್ರಕರ್ತರು ಪ್ರಶ್ನೆ ಕೇಳಿದಾಗ ನನಗೆ ಬೇಕಿರೋದು ಹೇಳಿ ಅವರು ಕೇಳಿದ ಪ್ರಶ್ನೆಗೆ ಜಾರಿಕೊಳ್ಳೋಕೆ ಎಲ್ಲಾ ಸಮಯದಲ್ಲಿ ಆಗೋದಿಲ್ಲ. ನಾನು ಪತ್ರಕರ್ತ ಆಗಿ ಕೆಲಸ ಮಾಡಿದವನು. ನನಗೆ ಯಡಿಯೂರಪ್ಪ, ಬೊಮ್ಮಾಯಿ‌ ಇವರ ಮೇಲೆ ಗೌರವ ಇದೆ. ಬೊಮ್ಮಾಯಿ‌ ಸಾಹೇಬರು ಸಿಎಂ ಆಗಿ ಮೈಸೂರಿಗೆ ಅನೇಕ ಯೋಜನೆ , ಜಲ್ ಜೀವನ್ ಮಷಿನ್ ಗೆ ಸಹಕಾರ ಮಾಡಿದ್ದಾರೆ. ಆದರೆ ನಾನು ಮಾಧ್ಯಮದ ಮೂಲಕ ಮಾತಾಡಿದಾಗ ಅವರು ನನ್ನ ಕರೆಸಿ ಹೇಳಬಹುದಿತ್ತು. ಆದರೆ ಅವರೇ ಮಾಧ್ಯಮದ ಮೂಲಕ ನನಗೆ ಯಾಕೆ ಕೌಂಟರ್ ನೀಡಿದ್ರು? ಕಾಲ್ ಮಾಡಿ ಹೀಗೆ ಹೀಗೆ ಅಂತ ಹೇಳಿಬಹುದಿತ್ತಲ್ಲ ಎಂದು ಹೇಳಿದ್ದಾರೆ.

ಅಷ್ಟಕ್ಕೆ ನಿಲ್ಲದ ಪ್ರತಾಪ್‌ ಸಿಂಹ, ಇನ್ನು ವಿಧಾನಸಭೆ ಚುನಾವಣೆ ಬಗ್ಗೆ ಮಾತಾಡೋಣ. ನಮ್ಮ ನಮ್ಮ ಎದೆಮೇಲೆ ಕೈಇಟ್ಟು ಹೇಳೋಣ. ಯಾರು ಹೊಂದಾಣಿಕೆ ಮಾಡಿಕೊಂಡಿಲ್ವಾ?ವಿ.ಸೋಮಣ್ಣ ವರುಣಾ ಕ್ಷೇತ್ರ ಕೇಳಿರಲಿಲ್ಲ. ಆದರೂ ಪಕ್ಷದ ಮಾತಿಗೆ ಸ್ಪರ್ಧೆ ಮಾಡಿದ್ರು. ಆ ರುದ್ರೇಶ್ ಸೋಮಣ್ಣ ಮೇಲೆ ಪತ್ರಿಕಾಗೋಷ್ಠಿ ಮಾಡಿದ್ರು ಅದಕ್ಕೆ ಏನ್ ಕ್ರಮ ಕೈಗೊಂಡ್ರಿ? ಅಲ್ಲಿ ತನಕ ಮಾತಾಡದ ಯಡಿಯೂರಪ್ಪ ಬಾಯಿಬಿಟ್ಟರು. ಆತನಿಗೆ ಮಾತಾಡದಂತೆ ಸೂಚನೆ ನೀಡಿದ್ದೇವೆ. ಸೂಚನೆ ನೀಡಿದ್ರೂ ಮಾತಾಡಿದ್ರಲ್ಲ ಯಾಕೆ? ಎಂದು ನಾಯಕರಿಗೆ ಪ್ರಶ್ನೆ ಮಾಡಿದ್ದಾರೆ.

ನನ್ನನ್ನು ಲಿಂಗಾಯತ ವಿರೋಧಿ ಎಂದು ಸೋಶಿಯಲ್ ಮೀಡಿಯಾ ಮೂಲಕ ಬಿಂಬಿಸಲಾಗ್ತಿದೆ. ಹಾಗೆ ಬಿಂಬಿಸೋರು ವಿಜಯೇಂದ್ರ ಜೊತೆ ಓಡಾಡುತ್ತಾ ಇರುತ್ತಾರೆ. ಹೀಗೆ ಮಾಡಿದರೆ ಮೈಸೂರಿನಲ್ಲಿ ರಾಜಕೀಯ ಮಾಡೋದು ಹೇಗೆ? ಒಂದು ತಂಡ ನಿರಂತರವಾಗಿ ನನ್ನ ವಿರುದ್ಧ ಕೆಲಸ ಮಾಡುತ್ತಿದೆ. ಅವರು ವಿಜಯೇಂದ್ರ ಜೊತೆ ಇದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‌, ಬಿಜೆಪಿ ನಾಯಕರ ನಡುವೆ ಅಕ್ಕಿ Vs ಹಣ ಕಿತ್ತಾಟ!

ಈ ಹಂತದಲ್ಲಿ ಮಧ್ಯಪ್ರವೇಶ ಮಾಡಿದ ರಾಜೇಶ್‌.ವಿ, ನೀವು ಮಾತಾಡಿದ್ರೆ ಬಿಎಲ್ ಸಂತೋಷ ಹೇಳಿ ಮಾತಾಡಿಸಿದ್ರು ಎಂದು ಆಗುತ್ತದೆ ಎಂದರು. ಅದಕ್ಕೆ ಉತ್ತರಿಸಿದ ಪ್ರತಾಪ್‌ ಸಿಂಹ, ಸರಿ ಹಾಗಾದರೆ ನಾನು ಮಾಧ್ಯಮದ ಮುಂದೆ ಹೋಗಿ ಕ್ಷಮೆ ಕೇಳಲೆ ಎಂದು ಪ್ರಶ್ನಿಸಿದ್ದಾರೆ. ಕ್ಷಮೆ ಕೇಳೊದು ಬೇಡ. ಮಾಧ್ಯಮ ಹಾಗೆ ವಿಮರ್ಶೆ ಮಾಡುತ್ತದೆ ಎಂದು ರಾಜೇಶ್‌ ಹೇಳಿದಾಗ ಸರಿ, ಇನ್ನು ನಾನು ಏನು ಮಾತನಾಡೋದಿಲ್ಲ ಎಂದು ಪ್ರತಾಪ್‌ ಸಿಂಹ ಹೇಳಿದ್ದಾರೆ.

ಅನ್ನಭಾಗ್ಯ ಪಿತಾಮಹ ಸಿಎಂ ಸಿದ್ದರಾಮಯ್ಯ ಅಲ್ಲ, ಮಾಜಿ ಪ್ರಧಾನಿ ವಾಜಪೇಯಿ!