ಕರ್ನಾಟಕದಲ್ಲಿರುವ ನಾವೆಲ್ಲರೂ ಬಡ್ಡಿ ಮಕ್ಕಳು: ಮುಖ್ಯಮಂತ್ರಿ ಚಂದ್ರು ವ್ಯಂಗ್ಯ
ರಾಷ್ಟ್ರ ಹಾಗೂ ರಾಜ್ಯದಲ್ಲಿ ಸರ್ಕಾರ ರಚನೆಗೆ ಮತನೀಡಿದ ನಾವುಗಳೆಲ್ಲರೂ ಸಾಲಗಾರರಿಗೆ ಲಕ್ಷಾಂತರ ಕೋಟಿ ಬಡ್ಡಿ ಕಟ್ಟುತ್ತಿದ್ದೇವೆ. ಹೀಗಾಗಿ, ನಾವೆಲ್ಲರೂ ಬಡ್ಡಿ ಮಕ್ಕಳಾಗಿದ್ದೇವೆ.
ಬೆಂಗಳೂರು (ಜು.22): ಇದುವರೆಗೂ ರಾಷ್ಟ್ರ ಹಾಗೂ ರಾಜ್ಯದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್, ಬಿಜೆಪಿ ಪಕ್ಷಗಳ ಭ್ರಷ್ಟಾಚಾರ, ದುರಾಡಳಿತದಿಂದಾಗಿ ಮತನೀಡಿದ ನಾವುಗಳೆಲ್ಲರೂ ಸಾಲಗಾರರಿಗೆ ಲಕ್ಷಾಂತರ ಕೋಟಿ ಬಡ್ಡಿ ಕಟ್ಟುತ್ತಾ ಬಂದಿದ್ದೇವೆ. ಇದರಿಂದಾಗಿ ನಾವೆಲ್ಲರೂ ಬಡ್ಡಿ ಮಕ್ಕಳಾಗಿದ್ದೇವೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ವ್ಯಂಗ್ಯವಾಡಿದ್ದಾರೆ.
ನಗರದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಭಾಂಗಣದಲ್ಲಿ ನಡೆದ ಆಮ್ ಆದ್ಮಿ ಪಕ್ಷದ ಪದಗ್ರಹಣ ಸಮಾರಂಭದಲ್ಲಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು, "ರಾಷ್ಟ್ರದ ಸಾಲ 175 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ರಾಜ್ಯದ ಸಾಲ 5.5 ಲಕ್ಷ ಕೋಟಿ ಮುಟ್ಟಿದೆ. 35 ಸಾವಿರ ಕೋಟಿ ರೂಪಾಯಿಗಳಷ್ಟು ಬಡ್ಡುಯನ್ನು ಕಟ್ಟಬೇಕಾಗಿದೆ. ಹೀಗಿರುವಾಗ ನಾವೆಲ್ಲ ಬಡ್ಡಿ ಮಕ್ಕಳು ಅಲ್ಲದೆ ಮತ್ತೇನು? " ಎಂದು ಪ್ರಶ್ನಿಸಿದರು.
ಇವರೇ ನೋಡಿ ಭಾರತದ ಅತ್ಯಂತ ಶ್ರೀಮಂತ ಶಾಸಕರು, ಟಾಪ್ 10ರಲ್ಲಿ ಕರ್ನಾಟಕದವರೇ ಹೆಚ್ಚು, ಡಿಕೆಶಿ ಮೊದಲಿಗರು!
"ದೆಹಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಸರ್ಕಾರ ಅಲ್ಲಿನ ಪ್ರಜೆಗಳಿಗೆ ಉಚಿತ ವಿದ್ಯುತ್, ಉಳಿಯುವ ನೀರು, ಶಿಕ್ಷಣ, ಆರೋಗ್ಯ, ಸಾರಿಗೆ ಸೇರಿದಂತೆ ಎಲ್ಲ ಸವಲತ್ತುಗಳನ್ನು ಉಚಿತವಾಗಿ ನೀಡುತ್ತಿದ್ದರೂ ಸಹ ಸಾಲರಹಿತ ಬಜೆಟ್ ಮಂಡಿಸುತ್ತಿರುವುದು ಆಮ್ ಆದ್ಮಿ ಪಕ್ಷದ ವಿಶೇಷತೆಯಾಗಿದೆ. ಕೌಟಿಲ್ಯನ ಅರ್ಥಶಾಸ್ತ್ರ ದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು, "ಗಳಿಕೆ- ಉಳಿಕೆ - ಬಳಕೆ" ಬಜೆಟ್‌ನ ಮೂಲ ಸ್ವರೂಪವಾಗಿದೆ. ದೇಶದಲ್ಲಿ ಗಳಿಕೆ ತೆರಿಗೆ ರೂಪದಲ್ಲಿ ಅತಿ ಹೆಚ್ಚಾಗಿದ್ದರೂ ಭ್ರಷ್ಟರ ಅಕ್ರಮ, ದುರಾಡಳಿತಗಳಿಂದಾಗಿ ಅವರುಗಳ ಸ್ವಾರ್ಥ ಗಳಿಕೆ ಹೆಚ್ಚಾಗಿದ್ದು , ಉಳಿಕೆ ಶೂನ್ಯಕ್ಕೆ ತಲುಪುತ್ತಿರುವುದು ದುರಂತ" ಎಂದರು.
"ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಮ್ ಆದ್ಮಿ ಪಕ್ಷದ ಗ್ಯಾರೆಂಟಿಗಳನ್ನು ಕಾಪಿ ಮಾಡಿಲ್ಲ , ನೀಚತನದಿಂದ ಕದ್ದಿದೆ. ಇವರುಗಳ ಬಣ್ಣ ಆರು ತಿಂಗಳಲ್ಲಿ ಬಟಾ ಬಯಲಾಗಲಿದೆ. ರಾಜ್ಯದ ರೈತರಿಗೆ 24 ಗಂಟೆ ಉಚಿತ ವಿದ್ಯುತ್, ಸೂಕ್ತ ಬೆಂಬಲ ಬೆಲೆ, ಯುವಕರಿಗೆ ಉದ್ಯೋಗ, ಸಾಮಾನ್ಯ ಮಕ್ಕಳ ಭವಿಷ್ಯಗಾಗಿ ಉತ್ತಮ ಶಿಕ್ಷಣ ಹಾಗೂ ಆರೋಗ್ಯ ನೀಡಬೇಕೆ ಹೊರತು ಒಂದು ದಿವಸದ ಗ್ಯಾರಂಟಿಗಳಲ್ಲ ಎಂದು ಟೀಕೆ ಮಾಡಿದರು.
ಮಣಿಪುರ ಘಟನೆ ಯ ಬಗ್ಗೆ ಆತಂಕ ವ್ಯಕ್ತಪಡಿಸಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು " ಪ್ರಧಾನಿ ಮೋದಿ ರಾಷ್ಟ್ರದ ಜನತೆಯ ಮುಂದೆ ಕ್ಷಮೆ ಕೇಳಬೇಕು. ಸದಾ ಸಂವಿಧಾನ, ಪ್ರಜಾಪ್ರಭುತ್ವವನ್ನು ಉಳಿಸಲು ನಾವು ಮಹಾ ಮೈತ್ರಿಯಲ್ಲಿ ಜೋಡಣೆಯಾಗಿದ್ದೇವೆ. ಕರ್ನಾಟಕ ರಾಜ್ಯವನ್ನು ಭ್ರಷ್ಟರ ಕೈಯಿಂದ ಕಿತ್ತುಕೊಳ್ಳುವುದೇ ನಮ್ಮ ಹೆಗ್ಗುರಿ. ಮುಂಬರುವ ರಾಜ್ಯದ ಜಿಲ್ಲಾ - ತಾಲೂಕು ಪಂಚಾಯಿತಿ, ಬಿಬಿಎಂಪಿ ಹಾಗೂ ಲೋಕಸಭಾ ಚುನಾವಣೆಯಲ್ಲಿ ನಾವು ಸ್ಪರ್ಧೆ ಮಾಡಲಿದ್ದೇವೆ. ಪಕ್ಷದ ಕಾರ್ಯಕರ್ತರುಗಳು ಹಾಗೂ ನಾಯಕರುಗಳು ಹಗಲಿರುಳು ದುಡಿಯಬೇಕು" ಎಂದು ಕರೆ ನೀಡಿದರು.
ಜನತೆಗೆ ಹೊಸದಾಗಿ ಬೆಲೆ ಏರಿಕೆ ಗ್ಯಾರಂಟಿ, ಬೆಲೆ ಭಾಗ್ಯವನ್ನು ಸರ್ಕಾರ ಕರುಣಿಸಿದೆ: ಹೆಚ್‌ಡಿಕೆ
ಪದಗ್ರಹಣ ಸಮಾರಂಭದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಂಕಜ್ ಗುಪ್ತ, ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ , ನೂತನವಾಗಿ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾಗಿ ನೇಮಕಗೊಂಡಿರುವ ಬಿ.ಟಿ. ನಾಗಣ್ಣ , ಅರ್ಜುನ ಪರಪ್ಪ ಹಲಗಿ ಗೌಡರ ಸೇರಿದಂತೆ ನೂತನವಾಗಿ ಆಯ್ಕೆಗೊಂಡಿರುವ ಉಪಾಧ್ಯಕ್ಷರುಗಳು ಸಹ ಭಾಗವಹಿಸಿದ್ದರು.