ಬೆಂಗಳೂರು(ಜ.15): ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಸಂಪುಟಕ್ಕೆ ಸೇರಿದ ನೂತನ ಸಪ್ತ ಸಚಿವರಿಗೆ ಎರಡನೆಯ ದಿನವೂ ಖಾತೆ ಹಂಚಿಕೆ ಭಾಗ್ಯ ಸಿಕ್ಕಿಲ್ಲ. ಶುಕ್ರವಾರ ಹಂಚಿಕೆಯಾಗದಿದ್ದರೆ ಪಕ್ಷದ ವರಿಷ್ಠ ನಾಯಕರೂ ಆಗಿರುವ ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಅವರು ಎರಡು ದಿನಗಳ ಭೇಟಿಗಾಗಿ ರಾಜ್ಯಕ್ಕೆ ಬಂದು ಹೋದ ಬಳಿಕವೇ ಖಾತೆಗಳ ಹಂಚಿಕೆಯಾಗಬಹುದು ಎನ್ನಲಾಗುತ್ತಿದೆ.

ಶನಿವಾರ ರಾತ್ರಿ ಅಮಿತ್‌ ಶಾ ಅವರೊಂದಿಗೆ ರಾಜ್ಯ ಬಿಜೆಪಿಯ ಕೋರ್‌ ಕಮಿಟಿ ಸಭೆ ನಡೆಯುವ ನಿರೀಕ್ಷೆಯಿದ್ದು, ಆ ಸಭೆಯಲ್ಲಿ ಖಾತೆಗಳ ಹಂಚಿಕೆ ಬಗ್ಗೆ ಮುಖ್ಯಮಂತ್ರಿಗಳು ಪ್ರಸ್ತಾಪ ಮಾಡುವ ಸಾಧ್ಯತೆಯಿದೆ.

ಅತೃಪ್ತರು ಹೈಕಮಾಂಡ್‌ಗೆ ದೂರು ಕೊಡಿ: ಸಿಎಂ ಸವಾಲು

ಈಗ ಹೊಸದಾಗಿ ಸಂಪುಟ ಸೇರಿರುವ ಸಚಿವರ ಪೈಕಿ ಉಮೇಶ್‌ ಕತ್ತಿ, ಅರವಿಂದ್‌ ಲಿಂಬಾವಳಿ, ಮುರುಗೇಶ್‌ ನಿರಾಣಿ, ಸಿ.ಪಿ.ಯೋಗೇಶ್ವರ್‌, ಎಂ.ಟಿ.ಬಿ.ನಾಗರಾಜ್‌ ಅವರು ಹಿರಿಯರಾಗಿರುವುದರಿಂದ ಪ್ರಮುಖ ಖಾತೆಗಳನ್ನೇ ನಿರೀಕ್ಷೆ ಮಾಡುತ್ತಿದ್ದಾರೆ. ಹೀಗಾಗಿ, ಇವರಿಗೆ ಈಗ ತಮ್ಮ ಬಳಿಯಿರುವ ಖಾತೆಗಳನ್ನು ನೀಡುವುದಕ್ಕೆ ಮುಖ್ಯಮಂತ್ರಿಗಳೂ ಹಿಂದೆ ಮುಂದೆ ನೋಡುತ್ತಿದ್ದಾರೆ.

ಈಗಿರುವ ಇತರ ಸಚಿವರ ಕೆಲವು ಖಾತೆಗಳನ್ನು ಅದಲು ಬದಲು ಮಾಡುವ ಬಗ್ಗೆಯೂ ಚಿಂತನೆ ನಡೆಸಿರುವ ಯಡಿಯೂರಪ್ಪ ಅವರು, ಈ ಬಗ್ಗೆ ಅಮಿತ್‌ ಶಾ ಅವರೊಂದಿಗೆ ಸಮಾಲೋಚನೆ ನಡೆಸುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ವಿಶ್ವದ ಅತಿದೊಡ್ಡ ಲಸಿಕೆ ಆಂದೋಲನಕ್ಕೆ ಮೋದಿ ಚಾಲನೆ: 3 ಕೋಟಿ ಜನರಿಗೆ ಕೊರೋನಾ ವ್ಯಾಕ್ಸಿನ್‌

ಇದೇ ವೇಳೆ ಅಮಿತ್‌ ಶಾ ಅವರು ಬರುವ ಮೊದಲೇ ಖಾತೆಗಳ ಹಂಚಿಕೆ ಮಾಡಿದರೆ ಅದರಿಂದ ಸಚಿವರಲ್ಲಿ ಅಸಮಾಧಾನ ಹೊಗೆಯಾಡಬಹುದು. ಅದರ ಪರಿಣಾಮ ಶಾ ಅವರ ಭೇಟಿ ಮೇಲಾಗಬಹುದು ಎಂಬ ಆತಂಕವಿದೆ. ಹೀಗಾಗಿ, ಅಮಿತ್‌ ಶಾ ಅವರು ಬಂದು ಹೋದ ಮೇಲೆಯೇ ಖಾತೆಗಳ ಹಂಚಿಕೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದು ಸೂಕ್ತ ಎಂಬ ದಿಕ್ಕಿನಲ್ಲಿ ಮುಖ್ಯಮಂತ್ರಿಗಳು ಯೋಚನೆ ಮಾಡುತ್ತಿದ್ದಾರೆ.

ಸದ್ಯ ಮುಖ್ಯಮಂತ್ರಿಗಳು ತಮ್ಮ ಬಳಿಯಿರುವ ಖಾತೆಗಳನ್ನು ನೀಡಿ ಮುಂದೆ ಬಜೆಟ್‌ ಅಧಿವೇಶನದ ಬಳಿಕ ಖಾತೆಗಳ ಮರುಹಂಚಿಕೆ ಮಾಡುವ ಬಗ್ಗೆಯೂ ಚಿಂತನೆ ನಡೆಸುತ್ತಿದ್ದಾರೆ. ಎಲ್ಲದಕ್ಕೂ ಎರಡು ಅಥವಾ ಮೂರು ದಿನ ಕಾಯಬೇಕಾಗಿ ಬರಬಹುದು.