ಮಾಗಡಿ (ಫೆ.08):  ‘ನಮ್ಮ ಸಮಾಜದ ಜನ ಹಾಗೂ ಶ್ರೀಗಳು ತಲೆ ತಗ್ಗಿಸುವ ರೀತಿ ಎಂದು ನಾನು ಕೆಲಸ ಮಾಡುವುದಿಲ್ಲ. ನನ್ನನ್ನು ಸೂಪರ್‌ ಸಿಎಂ ಎಂದು ಕರೆಯುವುದರ ಜೊತೆಗೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದೇನೆ ಎಂದು ಆರೋಪಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ ತಂದೆ ಯಡಿಯೂರಪ್ಪನವರಿಗೆ ಚ್ಯುತಿ ಬರುವ ರೀತಿ ಯಾವುದೇ ಕೆಲಸ ಮಾಡುವುದಿಲ್ಲ’ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದಲ್ಲಿ ನಡೆದ 3ನೇ ವರ್ಷದ ಸಿದ್ದಲಿಂಗೇಶ್ವರ ಜಯಂತೋತ್ಸವ ಹಾಗೂ ಡಾ. ಶಿವಕುಮಾರ ಸ್ವಾಮೀಜಿಗಳ 2ನೇ ವರ್ಷದ ಪುಣ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸೂಪರ್‌ ಸಿಎಂ ಎಂದು ನನ್ನನ್ನು ಕರೆಯುತ್ತಿದ್ದು, ಆಡಳಿತದಲ್ಲಿ ನನ್ನ ಹಸ್ತಕ್ಷೇಪ ಇದೆ ಎಂಬ ಆರೋಪ ಮಾಡಿದ್ದಾರೆ. 2012ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ಷಡ್ಯಂತ್ರ ಮಾಡಿ ರಾಜೀನಾಮೆ ಕೊಡಿಸಿ ಕೆಲವರು ನಮ್ಮ ತಂದೆಗೆ ಕೆಟ್ಟಹೆಸರು ಬರುವ ರೀತಿ ಮಾಡಿದರು. ಯಡಿಯೂರಪ್ಪ ಅವ​ರ​ನ್ನು ಷಡ್ಯಂತ್ರದಿಂದ ಹೊರತರಲು ಅವರ ಬೆನ್ನಿಗೆ ನಿಂತಿದ್ದೆ ಎಂದು ತಿಳಿಸಿದರು.

ಹಕ್ಕಿ ಅಲ್ಲಾಡುವ ಮರಕ್ಕೆ ಹೆದರಲ್ಲ: ಸಿಎಂ ನಡೆಗೆ ವಿಜಯೇಂದ್ರ ಸಮರ್ಥನೆ

ಯಡಿಯೂರಪ್ಪ ಅವರನ್ನು 30ಕ್ಕೂ ಹೆಚ್ಚು ಕ್ರಿಮಿನಲ್‌ ಕೇಸ್‌ಗಳಲ್ಲಿ ಸಿಲುಕಿಸಿದ್ದರು. ಕೋರ್ಟ್‌ಗಳಲ್ಲಿ ಯಡಿಯೂರಪ್ಪನವರನ್ನು ಗೆಲ್ಲಿಸಿಕೊಂಡು ಬಂದಿದ್ದೇನೆ. ಶ್ರೀಗಳ ಆಶೀರ್ವಾದದಿಂದ ಯಡಿಯೂರಪ್ಪನವರ ಮೇಲಿದ್ದ ಎಲ್ಲಾ ಕೇಸ್‌ಗಳು ಖುಲಾಸೆಯಾಗಿದೆ ಎಂದು ಹೇಳಿ​ದರು.

ಬಡವರ ಪರ ಸಮಾಜಿಕ ನ್ಯಾಯವನ್ನಿಟ್ಟುಕೊಂಡು ಸಂಘಟನೆ ಮಾಡುತ್ತಿರುವ ಯಡಿಯೂರಪ್ಪನವರು ಉಪಮುಖ್ಯಮಂತ್ರಿಗಳಾಗಿದ್ದಾಗ ಭಾಗ್ಯಲಕ್ಷ್ಮಿ ಬಾಂಡ್‌ ನೀಡಿದ್ದು, ಆ ಪಕ್ಷ ಈ ಪಕ್ಷ ಎನ್ನದೆ ಪ್ರತಿಯೊಂದು ಕ್ಷೇತ್ರಕ್ಕೂ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿಗೆ ಟೊಂಕ ಕಟ್ಟಿನಿಂತಿದ್ದಾರೆ ಎಂದರು.