ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರನ್ನು ಹೈದರಾಬಾದ್‌ನ ಚಂಚಲಗುಡ ಜೈಲಿನಿಂದ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.

ಬೆಂಗಳೂರು (ಮೇ.28): ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರನ್ನು ಹೈದರಾಬಾದ್‌ನ ಚಂಚಲಗುಡ ಜೈಲಿನಿಂದ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಗಿರುವ ಕಾರಣ ಪೊಲೀಸರು ಬಾಡಿ ವಾರೆಂಟ್‌ ಮೂಲಕ ಜನಾರ್ದನ ರೆಡ್ಡಿ ಅವರನ್ನು ಹೈದರಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯದ ಅನುಮತಿ ಮೇರೆಗೆ ಕರೆತರಲಾಗಿದೆ. ರಾಜ್ಯಕ್ಕೆ ಕರೆತಂದ ಬಳಿಕ ಪೊಲೀಸರು ಕಾನೂನಿನ ಪ್ರಕಾರ ಜನಪ್ರತಿನಿಧಿ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಪರಪ್ಪನ ಆಗ್ರಹಾರ ಜೈಲಿಗೆ ಕಳುಹಿಸಿಕೊಡಲಾಗಿದೆ.

ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ಮುಂದಿನ ಜೂ.4, 5 ಮತ್ತು 6 ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಕರೆತರಲಾಗಿದ್ದು, ವಿಚಾರಣೆ ಬಳಿಕ ಪುನಃ ಹೈದರಾಬಾದ್‌ ಜೈಲಿಗೆ ಕಳುಹಿಸಿಕೊಡಲಾಗುತ್ತದೆ. ಶಾಸಕರಾಗಿದ್ದ ವೇಳೆ ಜನಾರ್ದನರೆಡ್ಡಿ ವಿಚಾರಣೆಗೆ ಹಾಜರಾಗುತ್ತಿದ್ದರು. ಇದೀಗ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಹೈದಾರಾಬಾದ್‌ ಸಿಬಿಐ ವಿಶೇಷ ನ್ಯಾಯಾಲಯ ಅಪರಾಧಿ ಎಂದು ಹೇಳಿ ಶಿಕ್ಷೆಗೊಳಪಡಿಸಿರುವ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿದ್ದಾರೆ. ಬಂಧನದಲ್ಲಿರುವ ಕಾರಣ ಬಾಡಿ ವಾರೆಂಟ್‌ ಮೂಲಕ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಗಿದೆ. ಹೀಗಾಗಿ ಬಾಡಿ ವಾರೆಂಟ್‌ ಮೂಲಕ ಕರೆತರಲಾಗಿದೆ.

ರೆಡ್ಡಿ ಅರ್ಜಿ ತಿರಸ್ಕೃತ: ಓಬಳಾಪುರಂ ಮೈನಿಂಗ್ ಕಂಪನಿಯ (ಒಎಂಸಿ) ಅಕ್ರಮ ಕಬ್ಬಿಣದ ಅದಿರು ಗಣಿಗಾರಿಕೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಜೈಲಿನಲ್ಲಿ ವಿಶೇಷ ಸೌಲಭ್ಯಗಳನ್ನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇಲ್ಲಿನ ಸಿಬಿಐ ನ್ಯಾಯಾಲಯ ತಿರಸ್ಕರಿಸಿದೆ. ಪ್ರಸ್ತುತ ತೆಲಂಗಾಣದ ಚಂಚಲಗುಡ ಜೈಲಿನಲ್ಲಿರುವ ರೆಡ್ಡಿ, ತಾವು ಮಾಜಿ ಸಚಿವರು ಮತ್ತು ತೆರಿಗೆ ಪಾವತಿದಾರರಾಗಿರುವುದರಿಂದ ಜೈಲರ್‌ಗಳ ಕಾಯ್ದೆಯಡಿಯಲ್ಲಿ ಜೈಲಿನಲ್ಲಿ ‘ಎ’ ದರ್ಜೆಯ ಸೌಲಭ್ಯಗಳನ್ನು ನೀಡುವಂತೆ ಕೋರಿದ್ದರು.

ಆದರೆ ಕೋರ್ಟ್ ಅವರ ಅರ್ಜಿಯ ವಿಚಾರಣೆ ನಡೆಸಲು ನಿರಾಕರಿಸಿದ್ದು, ಹೈಕೋರ್ಟ್‌ಗೆ ತೆರಳಲು ಸೂಚಿಸಿದೆ ಎಂದು ಕಾನೂನು ಮೂಲಗಳು ತಿಳಿಸಿವೆ.ಎ ದರ್ಜೆಯಲ್ಲಿ ಪ್ರತ್ಯೇಕ ಕೋಣೆ, ಹಾಸಿಗೆ, ದಿಂಬು, ದಿನಪತ್ರಿಕೆ, ರೇಡಿಯೋ, ಪ್ರತ್ಯೇಕ ಊಟದ ಸ್ಥಳ, ಮನರಂಜನಾ ಸೌಕರ್ಯಗಳು ಲಭ್ಯವಿರುತ್ತದೆ. ಸುಮಾರು 14 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ಮೇ 6ರಂದು ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯವು ಜನಾರ್ದನ ರೆಡ್ಡಿ ಮತ್ತು ಇತರ ಮೂವರನ್ನು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ದೋಷಿಗಳೆಂದು ತೀರ್ಪು ನೀಡಿತ್ತು.