ಹೊಸ​ದು​ರ್ಗ[ಡಿ.23]: ಬಿಜೆಪಿಯ ಜಿಲ್ಲಾ ಘಟಕದ ನಡೆ ವಿರುದ್ಧ ಶಾಸಕ ಗೂಳಿಹಟ್ಟಿಶೇಖರ್‌ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ಪಕ್ಷ ನನ್ನನ್ನು ಕಡೆಗಣಿಸಿದರೆ ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂಬ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಪಟ್ಟಣದ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಸ್ವಾಭಿಮಾನಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ತಾಲೂಕು ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ನನ್ನನ್ನು ಕಡೆಗಣಿಸಲಾಗಿದೆ. ಉದ್ದೇಶ ಪೂರ್ವಕವಾಗಿ ನನ್ನ ಹಾಗೂ ನಮ್ಮ ಕಾರ್ಯಕರ್ತರನ್ನು ಪಕ್ಷದ ಚಟುವಟಿಕೆಗಳಲ್ಲಿ ದೂರ ಇಡಲಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಬೇರೆಯದೇ ಹಾದಿ ತುಳಿಯಬೇಕಾಗುತ್ತದೆ. ಮುಂದಿನ ತೀರ್ಮಾನಗಳಿಗೆ ಪಕ್ಷವೇ ಜವಬ್ದಾರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಗೂಳಿಹಟ್ಟಿ ಶೇಖರ್ ಆಡಿಯೋ ಸ್ಫೋಟ; ಸಿಎಂ ಪುತ್ರನ ವಿರುದ್ಧ ಗಂಭೀರ ಆರೋಪ!

ಈ ಬಾರಿ ಬಿಜೆಪಿ ಸರ್ಕಾರ ರಚಿಸಲು ಸಹಾಯ ಮಾಡಿದ 17 ಜನ ಶಾಸಕರನ್ನು ಪಕ್ಷದಲ್ಲಿ ಯಾವ ರೀತಿ ನಡೆಸಿಕೊಳ್ಳಲಾಗಿದೆ. ಅವರಿಗೆ ಏನೆಲ್ಲಾ ಅನುಕೂಲ ಮಾಡಿದ್ದಾರೆ ಎನ್ನುವುದನ್ನು ಜನ ನೋಡಿದ್ದಾರೆ. ಆದರೆ 2008ರಲ್ಲಿ ನಾನು ಬೆಂಬಲಕೊಟ್ಟಾಗ ನನ್ನನ್ನು ಕೇವಲ ಸಚಿವರನ್ನಾಗಿ ಮಾಡಿದ್ದು ಬಿಟ್ಟರೆ ಯಾವುದೇ ಅನುದಾನವನ್ನಾಗಲಿ, ಅಧಿಕಾರವನ್ನಾಗಲಿ ನೀಡಲಿಲ್ಲ. ನನ್ನನ್ನು ತೋರಿಸಿ 3 ಮಂದಿ ಸಚಿವರಾದರು, ಪ್ರಮುಖ ಖಾತೆ ಪಡೆದರು ಎಂದರು.

ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಾಗಲೀ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಲಿ ಮಾಡಲ್ಲ. ಮುಂದಿನ 3 ವರ್ಷ ನಾನೇ ಶಾಸಕನಾಗಿರುತ್ತೇನೆ. ಆದರೆ ಮುಂದಿನ ಚುನಾವಣೆಗಳಲ್ಲಿ ಪಕ್ಷ ಟಿಕೆಟ್‌ ನೀಡಲಿ, ಬಿಡಲಿ ನಾನು ಚುನಾವಣೆಗೆ ಸ್ಫರ್ಧಿಸುವುದು ಖಚಿತ ಎಂದು ಗೂಳಿಹಟ್ಟಿಹೇಳಿದರು.

ಮೊದಲ‌ ಕುರಿಯಾಗಿ ಹಳ್ಳಕ್ಕೆ ಬಿದ್ದಿದ್ದು ನಾನೇ: ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟ ಬಿಜೆಪಿ ಶಾಸಕ