ಶ್ರೀರಾಮುಲು ಸಚಿವ ಸ್ಥಾನಕ್ಕೆ ರಾಜೀನಾಮೆ ಮಾತು!
ಪಕ್ಷ ಸೂಚಿಸಿದರೆ ರಾಜೀನಾಮೆ ಕೊಡುವೆ: ರಾಮುಲು| ಪಕ್ಷದಲ್ಲಿನ ಸಣ್ಣಪುಟ್ಟಗೊಂದಲ ಸರಿಪಡಿಸುತ್ತೇವೆ| 3 ವರ್ಷ ಯಡಿಯೂರಪ್ಪ ಅವರೇ ಸಿಎಂ
ಬೆಂಗಳೂರು(ಜೂ.02): ‘ಪಕ್ಷ ನನಗೆ ರಾಜೀನಾಮೆ ಕೊಡಲು ತಿಳಿಸಿದರೆ ಖಂಡಿತವಾಗಿಯೂ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ’ ಎಂದು ಸಚಿವ ಬಿ. ಶ್ರೀರಾಮುಲು ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ನಾನು ಮೂರು ಬಾರಿ ಸಚಿವನಾಗಿದ್ದೇನೆ. ಸ್ವಾರ್ಥದಿಂದ ರಾಜಕೀಯ ಮಾಡಿದ ವ್ಯಕ್ತಿಯಲ್ಲ. ಸಮರ್ಥವಾಗಿ ಈ ಹಿಂದೆ ಆರೋಗ್ಯ ಇಲಾಖೆ ನಿರ್ವಹಿಸಿದ್ದೇನೆ. ಹೀಗಾಗಿ ಈ ಬಾರಿ ಅದೇ ಕೊಟ್ಟಿದ್ದಾರೆ. ಉಪಮುಖ್ಯಮಂತ್ರಿ ಹುದ್ದೆ ಇಲ್ಲ ಎಂದು ಎಂದಿಗೂ ನೋವು ಪಟ್ಟಿಲ್ಲ. ಪಕ್ಷ ನನಗೆ ರಾಜೀನಾಮೆ ಕೊಡಲು ತಿಳಿಸಿದರೆ ಖಂಡಿತವಾಗಿಯೂ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ’ ಎಂದರು.
‘ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಇಲ್ಲಿ ಯಾರೇ ಸಚಿವರಾಗಬೇಕಾದರೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ, ಸಣ್ಣಪುಟ್ಟಗೊಂದಲಗಳಿದ್ದರೂ, ಅದನ್ನು ಪಕ್ಷದ ಒಳಗೆ ಪರಿಹಾರ ಮಾಡಿಕೊಳ್ಳುತ್ತೇವೆ. ಸಭೆ ಸೇರಿದ ತಕ್ಷಣವೇ ಏನೋ ಆಗಿಬಿಡುತ್ತೆ ಎಂದಲ್ಲ. ಬಸನಗೌಡ ಪಾಟೀಲ್ ಯತ್ನಾಳ್, ಉಮೇಶ್ ಕತ್ತಿಯವರು ನಮ್ಮ ಹಿರಿಯ ನಾಯಕರು. ಯತ್ನಾಳ ಅವರು ಕೇಂದ್ರ ಸಂಪುಟದಲ್ಲಿ ಸಚಿವರಾಗಿದ್ದವರು. ಯಡಿಯೂರಪ್ಪ ನಮ್ಮ ನಾಯಕ ಅಲ್ಲ ಎಂದು ಹೇಳಿದ್ದು, ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳಬಾರದು. ಯಡಿಯೂರಪ್ಪ ನಾಯಕತ್ವವನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಯತ್ನಾಳ್ ಹೇಳಿಕೆ ಬೇರೆ ರೀತಿಯಲ್ಲಿ ನೋಡಬಾರದು ಎಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಾಡಿನ ಅಭಿವೃದ್ಧಿಗೆ ಪಣತೊಟ್ಟು ನಿಂತಿದ್ದು, ಪಕ್ಷ, ಸಿದ್ಧಾಂತದ ಮೂಲಕ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ನೆರೆ ಹಾವಳಿ ವಿಚಾರದಲ್ಲಿ ಯಡಿಯೂರಪ್ಪ ಉತ್ತಮ ಕೆಲಸ ಮಾಡಿದ್ದಾರೆ. ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಸೂರು ನೀಡಿದ್ದರು. ಸರ್ಕಾರ ರಚನೆಯಾದ ಹೊಸತರಲ್ಲಿ ನೆರಹಾವಳಿ ವೇಳೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ 24 ಗಂಟೆ ಕೆಲಸ ಮಾಡಿದ್ದಾರೆ. ಯಡಿಯೂರಪ್ಪ ಅವರು ಸಮರ್ಥ ನಾಯಕರು ಮತ್ತು ಮುತ್ಸದಿ ನಾಯಕರಾಗಿದ್ದಾರೆ ಎಂದು ಬಣ್ಣಿಸಿದರು.
ಕೊರೋನಾ ಸೋಂಕು ಪ್ರಾರಂಭವಾದಾಗಲೇ ಲಾಕ್‌ಡೌನ್ ಘೋಷಣೆ ಮಾಡಿ ಸಮಸ್ಯೆಗೆ ಸ್ಪಂದಿಸಿದ್ದಾರೆ. ಆಹಾರ ಪೂರೈಕೆಯಲ್ಲಿ ಕೂಡ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ನೋಡಿಕೊಂಡಿದ್ದಾರೆ. ಯಡಿಯೂರಪ್ಪ ಅವರು ಮೂರು ವರ್ಷ ಮುಂದುವರಿಯಲಿದ್ದಾರೆ ಎಂದರು
ಎಚ್.ಕೆ.ಪಾಟೀಲ್ ವಿರುದ್ಧ ರಾಮುಲು ರಾಮುಲು ಕಿಡಿ
ಕೊರೋನಾ ನಿಯಂತ್ರಣ ಸಂಬಂಧ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ನಡೆಸಿಲ್ಲ. ತನಿಖೆಗೆ ಮುಂದಾಗಿರುವ ಸಾರ್ವಜನಿಕ ಲೆಕ್ಕಪತ್ರ ಸ್ಥಿತಿಗೆ ಸರ್ಕಾರ ತಡೆವೊಡ್ಡಿಲ್ಲ ಎಂದು ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ವಿರುದ್ಧ ಆರೋಗ್ಯ ಸಚಿವ ಬಿ.ಶ್ರೀರಾಮುಲು ಕಿಡಿಕಾರಿದ್ದಾರೆ. ಸಮಿತಿಯು ಏಕಪಕ್ಷೀಯ ತೀರ್ಮಾನ ಮಾಡಬಾರದು. ಲೆಕ್ಕಪತ್ರ ಸಮಿತಿಯ ಭೇಟಿ ಸ್ಥಗಿತಗೊಳಿಸಿದ ವಿಧಾನಸಭಾಧ್ಯಕ್ಷ ಕ್ರಮ ಸರಿಯಾಗಿದೆ. ಸಭಾಧ್ಯಕ್ಷರನ್ನು ಬಳಸಿಕೊಂಡು ಆರೋಪಿಗಳ ರಕ್ಷಣೆಗೆ ನಿಂತಿಲ್ಲ. ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಅಗತ್ಯವಾದ ದಾಖಲೆಗಳನ್ನು ನಾನೇ ಸಲ್ಲಿಸುತ್ತೇನೆ ಎಂದರು.