ತುಮಕೂರು[ಜ.25]: ಬಿಜೆಪಿಯಿಂದ ಆಯ್ಕೆಯಾಗಿರುವ ನೂತನ ಶಾಸಕರೆಲ್ಲಾ ಈ ಹಿಂದೆ ಸಚಿವರಾಗುವ ಕಾರಣಕ್ಕೆ ಪಕ್ಷ ಬಿಟ್ಟು ಹೋಗಿದ್ದರು. ಈಗ ಅವರಿಗೆ ಮಂತ್ರಿ ಸ್ಥಾನ ನೀಡದೇ ಇದ್ದರೆ ಜೀವ ಹೋಗಿ ಬಿಡುತ್ತದೆ. ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಗುಬ್ಬಿ ಜೆಡಿಎಸ್‌ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರನ್ನು ಹೊಗಳಿದರು. ಗೊಂದಲ ಎಲ್ಲ ಪಕ್ಷದಲ್ಲೂ ಇದ್ದಿದ್ದೇ. ಆದರೆ ಯಡಿಯೂರಪ್ಪನವರು ಕೊಟ್ಟು ಆಶ್ವಾಸನೆಯನ್ನು ಖಂಡಿತ ನೆರವೇರಿಸುತ್ತಾರೆ ಎಂದು ಹೇಳಿದರು.

ಒಂದೇ ವೇದಿಕೆಯಲ್ಲಿ ಮೂರು ಟಗರುಗಳು..!

ಕೊಟ್ಟಮಾತನ್ನು ಎಷ್ಟೇ ಕಷ್ಟಬಂದರೂ ಅದನ್ನು ಈಡೇರಿಸುವಂತಹ ದಿಟ್ಟನಾಯಕತ್ವ ಯಡಿಯೂರಪ್ಪನವರಲ್ಲಿದೆ. ಬಿಜೆಪಿ ಹೈಕಮಾಂಡ್‌ ಅವರಿಗೆ ಟೈಟ್‌ ಮಾಡಿರಬಹುದು. ಆದರೆ ಅವರು ನಂಬಿಗಸ್ತರು ಎಂದು ಪ್ರಶಂಸಿಸಿದರು.

ಇದೇವೇಳೆ ಬೆಂಗಳೂರಿನಲ್ಲಿ ನಡೆದ ಜೆಡಿಎಸ್‌ ಸಭೆಗೆ ಗೈರು ಹಾಜರಾಗಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಪಕ್ಷದ ವಿರುದ್ಧ ನನಗ್ಯಾವ ಅಸಮಾಧಾನವೂ ಇಲ್ಲ. ತಡವಾಗಿ ಹೋಗಿದ್ದೆ. ನಾನು ಹೋಗುವಷ್ಟರಲ್ಲಿ ಕಾರ್ಯಕ್ರಮ ಮುಗಿದಿತ್ತು. ಹೀಗಾಗಿ ವೇದಿಕೆಗೆ ಹೋಗಲಿಲ್ಲ ಎಂದು ಸ್ಪಷ್ಟನೆ ನೀಡಿದರು. ಕಾರ್ಯಕ್ರಮ 9.30ಕ್ಕೆ ಆರಂಭವಾಗುತ್ತದೆ ಎಂದು ಆಮಂತ್ರಣ ಪತ್ರಿಕೆಯಲ್ಲಿತ್ತು. ಸಾಮಾನ್ಯವಾಗಿ ಮುಖಂಡರು 11.30ಕ್ಕೆ ಬರುತ್ತಾರೆ. ಹೀಗಾಗಿ ಕಾರ್ಯಕ್ರಮ ತಡವಾಗಬಹುದು ಅಂತಾ ಲೇಟಾಗಿ ಹೋದೆ ಎಂದು ಸ್ಪಷ್ಟಪಡಿಸಿದರು.

17 ಜನರಿಗೂ ಸಚಿವ ಸ್ಥಾನ ಬೇಕು: ವಿಶ್ವನಾಥ್