ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ಸಂವಿಧಾನವೇ ಧರ್ಮಗ್ರಂಥವಾಗಿರಬೇಕು. ರಾಜಕೀಯ ಧರ್ಮ ಅನುಸರಿಸುವುದೇ ನಮ್ಮ ಕರ್ತವ್ಯವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು (ಜ.01): ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ಸಂವಿಧಾನವೇ ಧರ್ಮಗ್ರಂಥವಾಗಿರಬೇಕು. ರಾಜಕೀಯ ಧರ್ಮ ಅನುಸರಿಸುವುದೇ ನಮ್ಮ ಕರ್ತವ್ಯವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಭಾನುವಾರ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಕೊಡಮಾಡುವ ‘ವರ್ಷದ ವ್ಯಕ್ತಿ, ವಿಶೇಷ ವ್ಯಕ್ತಿ ಹಾಗೂ ವಾರ್ಷಿಕ ಪ್ರಶಸ್ತಿ’ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಜನ ನಮ್ಮನ್ನು ಆಯ್ಕೆ ಮಾಡಿದ ಬಳಿಕ ನಾವು ಸಂವಿಧಾನದ ಪ್ರಕಾರ ನಡೆದುಕೊಳ್ಳಬೇಕು. ಅದೇ ನಮಗೆ ಧರ್ಮ ಗ್ರಂಥ, ಯಾವುದೇ ಪಕ್ಷ, ಪಕ್ಷದ ವ್ಯಕ್ತಿ ಆಡಳಿತಕ್ಕೆ ಬಂದರೂ ರಾಜಕೀಯ ಧರ್ಮ ಅನುಸರಿಸಿದರೆ ಮಾತ್ರ ಸಂವಿಧಾನಕ್ಕೆ ಗೌರವ ಕೊಟ್ಟಂತಾಗುತ್ತದೆ ಎಂದರು.
ಸರ್ಕಾರದ ತಪ್ಪನ್ನು ನೇರವಾಗಿ ಹೇಳುವ ಧಾರ್ಷ್ಟ್ಯವನ್ನು ಪತ್ರಕರ್ತರು ಬೆಳೆಸಿಕೊಳ್ಳಬೇಕು. ಅಸಮಾನತೆ ಹೋಗಲಾಡಿಸಲು ಸಂವಿಧಾನದ ಆಶಯ ಅನುಷ್ಠಾನವಾಗಬೇಕು. ಅದಕ್ಕಾಗಿ ಧ್ವನಿ ಇಲ್ಲದವರ ಪರ ದ್ವನಿ ಎತ್ತುವುದು, ವಸ್ತುನಿಷ್ಠ ಸುದ್ದಿ ಬಿತ್ತರಿಸುವುದು ಪತ್ರಿಕಾ ವೃತ್ತಿಯ ಮೂಲಮೌಲ್ಯವಾಗಬೇಕು. ಅದು ಬಿಟ್ಟು ಕ್ಷುಲ್ಲಕ ವಿಚಾರಕ್ಕೆ ಮಹತ್ವ ಕೊಡುವುದು, ಮೌಢ್ಯ ಹಾಗೂ ಕಂದಾಚಾರವನ್ನು ಬೆಳೆಸುವ ಕೆಲಸವನ್ನು ಪತ್ರಕರ್ತರು ಮಾಡಬಾರದು ಎಂದರು.
ಬಿಜೆಪಿಯವರ ಎಲ್ಲ ದೌರ್ಬಲ್ಯವೂ ಯತ್ನಾಳ್‌ಗೆ ಗೊತ್ತು: ಸಚಿವ ಎಂ.ಬಿ.ಪಾಟೀಲ್
ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ಪ್ರಸ್ತುತ ಕಾಲಮಾನದಲ್ಲಿ ಮಾಧ್ಯಮದ ಜವಾಬ್ದಾರಿ ದೊಡ್ಡದು. ಸೌಹಾರ್ದತೆಯ ನಾಗರಿಕ ಜನತೆ, ಸದಾ ಜಾಗೃತ ಸಮಾಜ, ಸ್ವಯಂ ಸೇವಾ ಸಂಸ್ಥೆಗಳು, ಬದ್ಧತೆಯ ಅಧಿಕಾರಿಗಳು, ಕ್ರಿಯಾಶೀಲ ನ್ಯಾಯಾಂಗ ಹಾಗೂ ಅರ್ಥಪೂರ್ಣ ಮಾಧ್ಯಮಗಳು ಇದ್ದರೆ ಸಮಾಜ ಸ್ಪಷ್ಟ, ಉತ್ತಮ ದಾರಿಯಲ್ಲಿ ಸಾಗಿ ಯಶಸ್ವಿಯಾಗಲು ಸಾಧ್ಯ ಎಂದರು. ಇದೇ ವೇಳೆ ಪಾರ್ವತೀಶ ಬಿಳಿದಾಳೆ ಅವರು ಸಂಪಾದಿಸಿದ ಜನಪ್ರಗತಿಯ ಪಂಜು ಪುಸ್ತಕ ಲೋಕಾರ್ಪಣೆ ಆಯಿತು. ಪ್ರೆಸ್‌ಕ್ಲಬ್ ಆಫ್ ಬೆಂಗಳೂರು ಅಧ್ಯಕ್ಷ ಶ್ರೀಧರ್ ಆರ್., ಪ್ರಧಾನ ಕಾರ್ಯದರ್ಶಿ ಬಿ.ಪಿ.ಮಲ್ಲಪ್ಪ ಸೇರಿ ಪದಾಧಿಕಾರಿಗಳು, ಕಾರ್ಯಕಾರಿ ಮಂಡಳಿ ಸದಸ್ಯರು ಇದ್ದರು.
ಉದ್ಯಮಿಗಳಿಂದ ಪತ್ರಿಕೋದ್ಯಮ ನಿಯಂತ್ರಣ: ಡಿಸಿಎಂ ಡಿಕೆಶಿ: ವರ್ಷದ ವ್ಯಕ್ತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪ್ರಸ್ತುತ ಉದ್ಯಮಿಗಳು ಪತ್ರಿಕೋದ್ಯಮವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಪತ್ರಕರ್ತರು ಅವರಿಗೆ ತಲೆಬಾಗಬಾರದು. ರಾಜಕೀಯವಾಗಿ ನಮ್ಮನ್ನು ತಿದ್ದಿ. ಆದರೆ, ಸತ್ಯ ಮುಚ್ಚುವ ಪರಿಸ್ಥಿತಿ ಬರಬಾರದು. ಪತ್ರಿಕೋದ್ಯಮದ ಘನತೆ ಕಾಪಾಡಿಕೊಂಡು ಆತ್ಮಸಾಕ್ಷಿಗೆ ಅನುಗುಣವಾಗಿ ಲೇಖನಿ ಬಳಸಿ ಎಂದರು.
ಕೆಪಿಸಿಸಿ ಅಧ್ಯಕ್ಷನಾದ ಬಳಿಕ ನಾನು, ಸಿದ್ದರಾಮಯ್ಯ ಅವರು ಸೇರಿ ಪಕ್ಷಕ್ಕೆ ಧಕ್ಕೆಯಾಗದಂತೆ ಸಂಘಟನೆ ಮಾಡಿದೆವು. ಚುನಾವಣೆಯಲ್ಲಿ ಅವಿತರ ಶ್ರಮ, ಆತ್ಮವಿಶ್ವಾಸದಿಂದ ಪ್ರಚಾರ, ಸಿಕ್ಕ ಜನಬೆಂಬಲದಿಂದ ಬೇರೆ ಪಕ್ಷಗಳ ಸಹಕಾರ, ಸಹಾಯವಿಲ್ಲದೆ ಸ್ವತಂತ್ರವಾಗಿ ಸರ್ಕಾರ ರಚಿಸಲು ಸಾಧ್ಯವಾಯಿತು. ಗ್ಯಾರಂಟಿ ಯೋಜನೆಗೆ ಹಲವು ಟೀಕೆ ಬಂತು. ಆದರೆ, ಜನರಿಗೆ ಕೊಟ್ಟ ಮಾತು ಉಳಿಸಿಕೊಂಡ ತೃಪ್ತಿ ನಮಗಿದೆ ಎಂದರು.
ನಮ್ಮಿಂದ ತಪ್ಪು ಆಗದಿದ್ದಾಗ ಯಾರಿಗೂ ಹೆದರುವ ಅಗತ್ಯವಿಲ್ಲ. ತಿಹಾರ್ ಜೈಲಿನಲ್ಲಿದ್ದಾಗ ನನ್ನ ಮಕ್ಕಳಿಗೆ ಅವರ ಸ್ನೇಹಿತರು ಏನೆನ್ನುತ್ತಾರೋ ಎಂಬ ಬಗ್ಗೆ ಮಾತ್ರ ಒಂದೆರಡು ದಿನ ಬೇಸರವಾಗಿತ್ತು. ಉಳಿದಂತೆ ನಾನು ಎಂದಿಗೂ ಆತ್ಮವಿಶ್ವಾಸ ಕಳೆದುಕೊಂಡಿರಲಿಲ್ಲ. ತಪ್ಪಾದಾಗ ನಮ್ಮನ್ನು ಟೀಕಿಸಿದರೆ ಅಂತಹವರ ಬಗ್ಗೆ ಹೆಚ್ಚು ವಿಶ್ವಾಸ ಇರುತ್ತದೆ. ನನಗೆ ಹೊಗಳುಭಟರ ಬಗ್ಗೆ ನಂಬಿಕೆ ಇಲ್ಲ. ಟೀಕಿಸುವವರ ಬಗ್ಗೆ ವಿಶ್ವಾಸ ಹೆಚ್ಚಿದೆ ಎಂದರು.
ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರೆ ಬಣಜಿಗರು ಸುಮ್ಮನಿರುವುದಿಲ್ಲ: ಜಗದೀಶ್ ಶೆಟ್ಟರ್
ಡಿಕೆಶಿಗೆ ಪ್ರೆಸ್‌ಕ್ಲಬ್ ವರ್ಷದ ವ್ಯಕ್ತಿ ಪ್ರಶಸ್ತಿ: ಪ್ರೆಸ್‌ಕ್ಲಬ್ ಆಫ್ ಬೆಂಗಳೂರು ಕೊಡಮಾಡುವ ‘ವರ್ಷದ ವ್ಯಕ್ತಿ’ ಪ್ರಶಸ್ತಿಯನ್ನು ಸುಪ್ರೀಂಕೋರ್ಟ್ ಮಾಜಿ ನ್ಯಾಯಮುರ್ತಿ ಶಿವರಾಜ್ ಪಾಟೀಲ್ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪ್ರದಾನ ಮಾಡಿದರು. ‘ವಿಶೇಷ ಪ್ರಶಸ್ತಿ’ಯನ್ನು ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್, ಶಾಸಕ ಶಾಮನೂರು ಶಿವಶಂಕರಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜ್ ಅವರಿಗೆ ನೀಡಲಾಯಿತು. ಜೊತೆಗೆ ‘ಕನ್ನಡಪ್ರಭ’ದ ಕಾರ್ಯನಿರ್ವಾಹಕ ಸಂಪಾದಕರಾದ ವಿಜಯ್ ಮಲಗಿಹಾಳ, ಹಿರಿಯ ಪತ್ರಕರ್ತರಾದ ಡಾ.ಕೂಡ್ಲಿ ಗುರುರಾಜ್, ಸದಾಶಿವ ಶಣೈ, ಸುಭಾಷ್ ಹೂಗಾರ್ ಸೇರಿದಂತೆ 29 ಪತ್ರಕರ್ತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರ ಗಣ್ಯರು ಜೀವಮಾನ ಸಾಧನೆಗಾಗಿ ‘ವಾರ್ಷಿಕ ಪ್ರಶಸ್ತಿ’ ನೀಡಿ ಅಭಿನಂದಿಸಿದರು.
